varthabharthi

ಕ್ರೀಡೆ

ಪಾಟ್ನಾ ಪೈರೇಟ್ಸ್ ಗೆ ತವರಿನಲ್ಲಿ ಭವ್ಯ ಸ್ವಾಗತ

ವಾರ್ತಾ ಭಾರತಿ : 13 Nov, 2017

ಚೆನ್ನೈ, ನ.13: ಇತ್ತೀಚೆಗೆ ಕೊನೆಗೊಂಡ ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದ ಪಾಟ್ನಾ ಪೈರೇಟ್ಸ್ ತಂಡ ಸೋಮವಾರ ತವರಿಗೆ ವಾಪಸಾಗಿದ್ದು, ತವರುಪಟ್ಟಣದ ರಸ್ತೆಯಲ್ಲಿ ನಡೆದ ವಿಜಯೋತ್ಸವದ ವೇಳೆ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು.

ವಿಜಯೋತ್ಸವದ ರ್ಯಾಲಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಟಗಾರರು ತಮಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ರ್ಯಾಲಿಯು ರಾಜ್‌ಭವನದಲ್ಲಿ ಕೊನೆಗೊಂಡಿದ್ದು, ಬಿಹಾರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಪ್ರೊ ಕಬಡ್ಡಿ ವಿಜೇತ ತಂಡವನ್ನು ಸನ್ಮಾನಿಸಿದರು.

 ‘‘ನಮ್ಮ ಪ್ರತಿಭಾವಂತ ಆಟಗಾರರು ಪ್ರತಿಯೊಂದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ನಾವು ಚಾಂಪಿಯನ್‌ಶಿಪ್ ಗೆಲ್ಲಲು ಸಾಧ್ಯವಾಯಿತು. ನಮ್ಮ ಟೀಮ್ ಕೋಚ್ ರಾಮ್ ಮೆಹೆರ್ ಸಿಂಗ್ ಕಠಿಣ ಶ್ರಮ ಪಟ್ಟಿದ್ದರು. ನಾಯಕ ಪ್ರದೀಪ್ ನರ್ವಾಲ್ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು. ಸತತ ಮೂರು ಪ್ರಶಸ್ತಿಗಳನ್ನು ಜಯಿಸಿ ಇತಿಹಾಸ ಬರೆದಿರುವ ನಮ್ಮ ತಂಡದ ಬಗ್ಗೆ ಹೆಮ್ಮೆಯಾಗುತ್ತಿದೆ’’ ಎಂದು ಪಾಟ್ನಾ ಪೈರೇಟ್ಸ್ ತಂಡದ ನಾಯಕ ರಾಜೇಶ್ ವಿ. ಶಾ ಹೇಳಿದ್ದಾರೆ.

ಐದನೆ ಆವೃತ್ತಿಯ ಕಬಡ್ಡಿ ಲೀಗ್‌ನಲ್ಲಿ ನಾಲ್ಕು ಹೊಸ ಫ್ರಾಂಚೈಸಿಗಳು ಸೇರ್ಪಡೆಯಾಗಿದ್ದವು. ಆಟಗಾರರ ವೇತನ ಕೂಡ ಏರಿಕೆ ಮಾಡಲಾಗಿದ್ದು, ಟೂರ್ನಿಯು 13 ವಾರಗಳ ಕಾಲ ನಡೆದಿತ್ತು.

ಪಾಟ್ನಾ ಹಾಗೂ ಗುಜರಾತ್ ಫೋರ್ಚುನ್‌ಜೈಂಟ್ಸ್ ತಂಡಗಳ ನಡುವೆ ನಡೆದಿದ್ದ ಫೈನಲ್ ಪಂದ್ಯ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಕರನ್ನು ಸೆಳೆದ ಕ್ರಿಕೆಟೇತರ ಪಂದ್ಯ ಎನಿಸಿಕೊಂಡಿತು. ಈ ಪಂದ್ಯದಲ್ಲಿ ಪಾಟ್ನಾ ತಂಡ ಗುಜರಾತ್‌ನ್ನು 55-38 ಅಂಕಗಳ ಅಂತರದಿಂದ ಮಣಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)