varthabharthi

ನಿಮ್ಮ ಅಂಕಣ

‘ಕಿನಾರಾ’ ಕೆನರಾ ಆಯಿತೇ?

ವಾರ್ತಾ ಭಾರತಿ : 14 Nov, 2017
-ಪ್ರವೀಣ್ ಎಸ್. ಶೆಟ್ಟಿ, ಮಂಗಳೂರು

ಮಾನ್ಯರೆ,

ಈಗ ನಮ್ಮ ಕರಾವಳಿ ಜಿಲ್ಲೆಗೆ ದಕ್ಷಿಣ ಕನ್ನಡ ಎಂದು ಹೆಸರು ಬರಲು ಕಾರಣವೇನು ಎಂದು ಯಾರನ್ನಾದರೂ ಕೇಳಿದರೆ­ -ಮದ್ರಾಸ್‌ಪ್ರಾಂತದ ಬ್ರಿಟಿಷ್ ಆಡಳಿತದವರು ಬಹುಸಂಖ್ಯಾತ ತಮಿಳು ಪ್ರಾಂತದಲ್ಲಿರುವ ಕನ್ನಡ ಪ್ರದೇಶ ಎಂದು ಸೂಚಿಸಲು ನಮ್ಮ ಕರಾವಳಿಗೆ ಮೊದಲು ಕೆನರಾ ಎಂದು ಹೆಸರಿಟ್ಟರು, ಆನಂತರ ಈ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಭಜಿಸಿ ಸೌತ್ ಕೆನರಾ ಮತ್ತು ನಾರ್ತ್ ಕೆನರಾ ಎಂದು ಹೆಸರಿಟ್ಟರು. ಕೆನರಾ ಎಂದರೆ ಕನ್ನಡದ ಅಪಭ್ರಂಶ, ಕಾರಣ ಬ್ರಿಟಿಷರಿಗೆ ‘ಡ’ ಎನ್ನುವ ಉಚ್ಚಾರ ಸರಿಯಾಗಿ ಬರುತ್ತಿರಲಿಲ್ಲ ಅದಕ್ಕಾಗಿ ‘ಡ’ವನ್ನು ‘ರ’ ಮಾಡಿ ಕನ್ನಡವನ್ನು ಕೆನರಾ ಮಾಡಿದರು, ನಂತರ ಸ್ವತಂತ್ರ ಭಾರತದಲ್ಲಿ ಕರ್ನಾಟಕ ರಾಜ್ಯವಾದ ಬಳಿಕ ಇಂಗ್ಲಿಷ್ ಹೆಸರನ್ನು ಕನ್ನಡಕ್ಕೆ ಬದಲಾಯಿಸಿ ‘ಉತ್ತರ ಕನ್ನಡ’ ಮತ್ತು ‘ದಕ್ಷಿಣ ಕನ್ನಡ’ ಮಾಡಲಾಯಿತು ಎಂಬ ವಿವರ ಕೊಡಲಾಗುತ್ತದೆ. ಹಾಗಾದರೆ ಬ್ರಿಟಿಷರು ನಮ್ಮ ಕರಾವಳಿಯನ್ನು ಮಾತ್ರ ಕನ್ನಡ ಜಿಲ್ಲೆ ಎಂದೇಕೆ ಕರೆದರು? ಕೋಲಾರ ಸಹಿತ ಇನ್ನೂ ಕೆಲವು ಪೂರ್ವ ಭಾಗದ ಕನ್ನಡ ಪ್ರದೇಶಗಳು ಮದ್ರಾಸ್ ಪ್ರಾಂತದಲ್ಲಿದ್ದು ಅವುಗಳಿಗೆ ಕನ್ನಡ ಜಿಲ್ಲೆ ಎಂದೇಕೆ ಹೆಸರಿಡಲಿಲ್ಲ ಎಂಬ ಪ್ರಶ್ನೆ ಕೇಳಿದರೆ ಯಾರಿಂದಲೂ ಸರಿಯಾದ ಉತ್ತರ ಸಿಗಲಾರದು.

ಆದರೆ ಕೆನರಾ ಹೆಸರಿನ ಹಿಂದಿರುವ ನೈಜ ಇತಿಹಾಸವನ್ನು ಟಿಪ್ಪುಸುಲ್ತಾನನ ದ್ವೇಷಿಗಳು ಬ್ರಿಟಿಷರ ಕಾಲದಲ್ಲಿಯೇ ಬಹುಶಃ ಬೇಕೆಂದೇ ತಿರುಚಿದ್ದಾರೆ. ನಮ್ಮ ಕರಾವಳಿಗೆ ಕೆನರಾ ಎಂಬ ಹೆಸರು ಬರಲು ಕನ್ನಡ ಎಂಬ ಶಬ್ದವನ್ನು ಬ್ರಿಟಿಷರು ಅಪಭ್ರಂಶ ಮಾಡಿದ್ದು ಕಾರಣವಲ್ಲ. ಕೆನರಾ ಎಂಬುದು ಮೂಲತಃ ‘ಕಿನಾರಾ’ ಎಂಬ ಉರ್ದು/ ಪರ್ಷಿಯನ್ ಶಬ್ದದ ಅಪಭ್ರಂಶ. ‘ಕಿನಾರಾ’ ಎಂದರೆ ಸಮುದ್ರ ದಡ ಅಥವಾ ನದಿಯ ತಟ. ಟಿಪ್ಪು ಕೇರಳದ ಮಲಬಾರ್ ಪ್ರದೇಶ ಗೆದ್ದುಕೊಳ್ಳುವ ಮೊದಲು ಅವನ ರಾಜ್ಯದಲ್ಲಿ ನಮ್ಮ ಕರಾವಳಿಯೇ ಸಮುದ್ರ ತಟವನ್ನು ಹೊಂದಿದ್ದ ಏಕಮಾತ್ರ ಪ್ರದೇಶವಾಗಿದ್ದು ಆ ಕಾಲದಲ್ಲಿಯೂ ವಿದೇಶದೊಂದಿಗೆ ನಮ್ಮ ಕರಾವಳಿಯ ಬಂದರುಗಳಿಂದಲೇ ಟಿಪ್ಪುವಿನ ರಾಜ್ಯದ ವ್ಯಾಪಾರಿಗಳು ಕರಿಮೆಣಸು, ಅಕ್ಕಿ, ಬೆಲ್ಲ ಮತ್ತು ಇತರ ಮಸಾಲೆ ಪದಾರ್ಥಗಳ ಆಮದು-ರಫ್ತು ವ್ಯವಹಾರ ಮಾಡುತ್ತಿದ್ದರು. ಪರ್ಷಿಯನ್ ಭಾಷೆಯಲ್ಲಿ ಸಮುದ್ರ ದಂಡೆಗೆ ಕಿನಾರಾ ಅನ್ನುವುದರಿಂದ ಈ ಕರಾವಳಿ ಪ್ರದೇಶಕ್ಕೆ ಟಿಪ್ಪುವಿನ ರಾಜ್ಯದಲ್ಲಿ ‘ಕಿನಾರಾ’ ಎಂಬ ಅನ್ವರ್ಥಕ ಹೆಸರೇ ಬಿತ್ತು. ಈ ಕಿನಾರಾವನ್ನೇ ಬ್ರಿಟಿಷರು ‘ಕೆನರಾ’ ಮಾಡಿದ್ದು. ಹೀಗೆ ಕನ್ನಡದಿಂದ ಕೆನರಾ ಹುಟ್ಟಿರದೇ ಟಿಪ್ಪುವಿನ ಶಬ್ದ ಉತ್ಪತ್ತಿ ಆಗಿದೆಯೆಂದು ಹೇಳುವುದೇ ಸರಿ.

ಲಕ್ಷದ್ವೀಪ ಕೇರಳದ ಕಲ್ಲಿಕೋಟೆಗೆ ಹತ್ತಿರವಿದ್ದರೂ ಅದು ಕರ್ನಾಟಕದ ಮಂಗಳೂರಿನೊಂದಿಗೆ ಹೆಚ್ಚು ವ್ಯಾಪಾರ ಸಂಬಂಧ ಹೊಂದಿರಲು ಸಹ ಟಿಪ್ಪು ಕಾರಣ. ಲಕ್ಷದ್ವೀಪ ನಡುಗಡ್ಡೆ ಸಮೂಹ ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟಾಗ ಅವನು ಮಂಗಳೂರು ಬಂದರಿನ ಮುಖಾಂತರವೇ ಆ ದ್ವೀಪ ಸಮೂಹದೊಂದಿಗೆ ಆಡಳಿತ ಮತ್ತು ವ್ಯಾಪಾರ ಸಂಬಂಧವಿಟ್ಟುಕೊಂಡಿದ್ದನು ಹಾಗೂ ಅದು ಇಂದಿಗೂ ಮುಂದುವರಿದಿದೆ ಎನ್ನಲಾಗುತ್ತದೆ. ಈಗ ಲಕ್ಷದ್ವೀಪದಲ್ಲಿ ಮಲಯಾಳಂ ಭಾಷೆಯಲ್ಲಿಯೇ ಸರಕಾರಿ ಪತ್ರ ವ್ಯವಹಾರ ನಡೆಯುತ್ತಿದೆ ನಿಜ, ಆದರೆ ಟಿಪ್ಪುಕಾಲದಲ್ಲಿ ಲಕ್ಷ ದ್ವೀಪದಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತದ ಪತ್ರವ್ಯವಹಾರ ನಡೆಯುತ್ತಿತ್ತು ಎಂಬುದನ್ನು ತೋರಿಸುವ ದಾಖಲೆಗಳು ಇವೆಯಂತೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)