varthabharthi

ನಿಮ್ಮ ಅಂಕಣ

ನೆಹರೂ ಬಗ್ಗೆ ಸಿವಿ ರಾಮನ್ ಯಾಕೆ ಅಸಮಾಧಾನಗೊಂಡಿದ್ದರು?

ವಾರ್ತಾ ಭಾರತಿ : 14 Nov, 2017
ಕಪಿಲ್ ಸುಬ್ರಮಣಿಯನ್

ಭಾಗ-2

ಸಮಿತಿಯಿಂದ ವಿಚಾರಣೆ

ರಾಮನ್ ವಿದ್ವಾಂಸ ರಾಜೀಂದರ್ ಸಿಂಗ್ ತನ್ನ ‘ನೊಬೆಲ್ ಲಾರಿಯೆಟ್ ಸಿ.ವಿ. ರಾಮನ್ಸ್ ವರ್ಕ್ ಆನ್ ಲೈಟ್ ಸ್ಕಾಟರಿಂಗ್: ಹಿಸ್ಟಾರಿಕಲ್ ಕಾಂಟ್ರಿಬ್ಯೂಶನ್ಸ್ ಟು ಎ ಸೈಂಟಿಫಿಕ್ ಬಯಾಗ್ರಫಿ’ ಎಂಬ ಪುಸ್ತಕದಲ್ಲಿ ದಾಖಲಿಸಿರುವಂತೆ, ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಸಾಕಷ್ಟು ವಾದ ವಿವಾದ, ಗದ್ದಲ ನಡೆಯಿತು. ಇದಕ್ಕೆ ಮುಖರ್ಜಿಯವರು ಭಾಗಶಃ ಕಾರಣರಾಗಿದ್ದರೆ, ರಾಮನ್‌ರವರ ಪ್ರಸಿದ್ಧವಾದ ಮುಂಗೋಪ, ಅವರ ಒರಟು ಮನೋಧರ್ಮ ಕೂಡ ಅವರ ವಿರುದ್ಧ ವ್ಯಕ್ತವಾದ ವಿರೋಧಕ್ಕೆ ಕಾರಣವಾಗಿತ್ತು.

ಇಂತಹ ವಾತಾವರಣದಲ್ಲೇ 1936ರಲ್ಲಿ, ಐಐಎಸ್‌ಸಿಯ ಕಾರ್ಯವಿಧಾನ ಹಾಗೂ ಚಟುವಟಿಕೆಗಳ ಪರಾಮರ್ಶೆ ನಡೆಸಲು ಅಂದಿನ ವೈಸರಾಯ್‌ರಿಂದ ಒಂದು ಪಂಚವಾರ್ಷಿಕ ಸಮಿತಿ ರಚಿತವಾಯಿತು. ಪರಾಮರ್ಶೆ ಮಾಮೂಲಿಯಾದ ರೀತಿಯ ಪರಾಮರ್ಶೆಯೇ ಆಗಿದ್ದರೂ ಸಮಿತಿಯ ವರದಿ ರಾಮನ್‌ರವರು ಯಾವುದೇ ನಿರ್ದಿಷ್ಟ ತಪ್ಪು ಮಾಡಿದ್ದಾರೆಂದು ಆಪಾದಿಸದಿದ್ದರೂ, ಅದು ಹಲವು ವಿಷಯಗಳಲ್ಲಿ ಅವರ ಟೀಕಾಕಾರರ ಪರವಾಗಿಯೇ ಇತ್ತು. ಮೂಲಭೂತ ಸಂಶೋಧನೆಗಿಂತ ಹೆಚ್ಚಾಗಿ ಅನ್ವಯಿಕ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕೆಂಬ ಜಮ್ಷೆಡ್‌ಜಿ ಟಾಟಾರವರ ದರ್ಶನ(ವಿಜನ್) ದಿಂದ, ಮೂಲ ಉದ್ದೇಶದಿಂದ ಸಂಸ್ಥೆಯು ದೂರ ಸರಿಯುತ್ತಿದೆ. ತನ್ನ ಮುಖ್ಯ ಮಾರ್ಗದಿಂದ ಬೇರೆಡೆಗೆ ಸಾಗುತ್ತಿದೆ ಎಂದು ಆ ವರದಿ ವಾದಿಸಿತು.

ವರದಿಯು ರಾಮನ್‌ರ ಟೀಕಾಕಾರರಿಗೆ ಸಾಕಷ್ಟು ಗ್ರಾಸ ಒದಗಿಸಿತು. ಮುಖರ್ಜಿಯವರು ರಾಮನ್‌ರ ಸರ್ವಾಧಿಕಾರಿತನದ ವಿರುದ್ಧ ಒಂದು ಅವಿಶ್ವಾಸ ನಿಲುವಳಿಯನ್ನು ಮಂಡಿಸಿದರಾದರೂ, ‘‘ಬಲವಾದ ಅನುಮೋದನೆ ನಿರಾಕರಣೆ’’ಯನ್ನುವ್ಯಕ್ತಪಡಿಸಿ ಒಂದು ದುರ್ಬಲವಾದ ಠರಾವನ್ನಷ್ಟೆ ಅಂಗೀಕರಿಸಲಾಯಿತು. 1937ರಲ್ಲಿ ತುಂಬ ಅವಮಾನಕಾರಿಯಾದ ಸನ್ನಿವೇಶಗಳಲ್ಲಿ ರಾಮನ್‌ರವರು ಸಂಸ್ಥೆಯ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಲೇಬೇಕಾಯಿತು. ಅವರು ಭೌತವಿಜ್ಞಾನ ಪ್ರಾಧ್ಯಾಪಕರಾಗಿ ಅಲ್ಲಿ ಮುಂದುವರಿದರಾದರೂ ರಾಜೀನಾಮೆ ನೀಡದೆ ಗತ್ಯಂತರವಿಲ್ಲ ಎಂಬ ಸ್ಥಿತಿಯನ್ನು ಅವರು ಎದುರಿಸಬೇಕಾಯಿತು.

ಭೌತವಿಜ್ಞಾನಿ-ಜೀವನಚರಿತ್ರೆ ಲೇಖಕ ಗಣೇಶನ್ ವೆಂಕಟರಾಮನ್ ತನ್ನ ‘ಜರ್ನಿ ಇನ್‌ಟು ಲೈಟ್: ಲೈಫ್ ಆ್ಯಂಡ್ ಸಯನ್ಸ್ ಆಫ್ ಸಿ.ವಿ. ರಾಮನ್’ ಎಂಬ ಪುಸ್ತಕದಲ್ಲಿ ದಾಖಲಿಸಿರುವಂತೆ, ನಿಯಮ ಪ್ರಕಾರ, ಐಐಎಸ್‌ಸಿ ಶಿಫಾರಸು ಮಾಡುವ ಸದಸ್ಯರೊಬ್ಬರು ಪರಾಮರ್ಶನ ಸಮಿತಿಯಲ್ಲಿರಬೇಕಾಗಿತ್ತು. ಆದರೆ ಅಂತಹ ಯಾವ ಸದಸ್ಯರೂ ಸಮಿತಿಯಲ್ಲಿರಲಿಲ್ಲ. ಪರಿಣಾಮವಾಗಿ, ಸಮಿತಿಯ ತೀರ್ಮಾನಗಳಲ್ಲವಾದರೂ, ಅದರ ಧ್ವನಿ ಮಾತಾಡುವ ರೀತಿಯಲ್ಲಿ ಇತ್ತು. (ತರಾಟೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಇತ್ತು) ಎಂಬ ಅಭಿಪ್ರಾಯವನ್ನು ಒಪ್ಪುವಂತಾಯಿತು. ಸಂಸ್ಥೆಯ ಪ್ರಮುಖ ದಾನಿಗಳು, ಆಶ್ರಯದಾತರು ಆಗಿದ್ದ ಟಾಟಾಗಳು, ಭಾರತೀಯನೊಬ್ಬನಿಂದ ಆಜ್ಞೆಗಳನ್ನು ಪಡೆಯುವುದನ್ನು ಕೆಲವು ಮಂದಿ ಬ್ರಿಟಿಷ್ ಪ್ರಾಧ್ಯಾಪಕರು ಇಷ್ಟಪಡುತ್ತಿರಲಿಲ್ಲ ಎಂಬುದನ್ನು ತಿಳಿದಿದ್ದವರಾಗಿದ್ದರಿಂದ, ರಾಮನ್ ಪರವಾಗಿ ನಿಂತು ವಸಾಹತುಶಾಹಿ ಸರಕಾರದ ಮನಸ್ಸನ್ನು ನೋಯಿಸಲು ಇಷ್ಟಪಡಲಿಲ್ಲ.

20ನೆ ಶತಮಾನದ ಭೌತಶಾಸ್ತ್ರದ ಇತಿಹಾಸದ ನಿಗದಿತ (ಸ್ಟಾಂಡರ್ಡ್) ಕಥಾನಕಗಳಲ್ಲಿ ರಾಮನ್‌ರವರ ಬದುಕು ಸ್ವಲ್ಪ ಭಿನ್ನ ಅಥವಾ ವಿಚಿತ್ರ ಅನ್ನಿಸಬಹುದು. ಯಾಕೆಂದರೆ, ವಿಜ್ಞಾನವು (ಭಾರತದಲ್ಲಿ ಕೂಡ) ಹೆಚ್ಚು ಹೆಚ್ಚು ವೃತ್ತಿಪರಗೊಳ್ಳುತ್ತಿದ್ದ ಒಂದು ಕಾಲದಲ್ಲಿ ಅವರು ಒಬ್ಬ ಹವ್ಯಾಸಿ (ಹಾಬಿಯಿಸ್ಟ್)ಯಾಗಿ ತುಂಬ ವರ್ಷಗಳನ್ನು ಕಳೆದರು. ಪ್ರಾಯೋಗಿಕ ಭೌತಶಾಸ್ತ್ರವು ಬೃಹತ್ ವಿಜ್ಞಾನ(ಬಿಗ್ ಸಯನ್ಸ್)ವಾಗಿ ಅಥವಾ ಬೃಹತ್ ಮೊತ್ತದ ವೆಚ್ಚಗಳ ಆವಶ್ಯಕತೆಯುಳ್ಳ ವಿಜ್ಞಾನವಾಗಿ, ಯಂತ್ರಗಳು ಹಾಗೂ ತಜ್ಞರ ದೊಡ್ಡ ದೊಡ್ಡ ತಂಡಗಳ(ವ್ಯೋಮ ರಾಕೆಟ್‌ಗಳು ಮತ್ತು ಸಂಶೋಧನಾ ರಿಯಾಕ್ಟರ್‌ಗಳು ಸೇರಿ) ಸಂಸ್ಥೆಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಓರ್ವ ಕಡಿಮೆ ಬಜೆಟ್‌ನ ಪ್ರಯೋಗ ತಜ್ಞನಾಗಿ ಅವರು ದೀರ್ಘಾವಧಿಯನ್ನೇ ಕಳೆದರು.

ತನ್ನ ‘ಅಟೊಮಿಕ್ ಸ್ಟೇಟ್’ ಎಂಬ ಪುಸ್ತಕದಲ್ಲಿ ಇತಿಹಾಸಕಾರ್ತಿ ಜಾಹ್ನವಿ ಪಾಲ್ಕೆ ಹೇಳುವಂತೆ, 1940ರ ದಶಕದಲ್ಲಿ ಬೆಂಗಳೂರಿನಲ್ಲಿ ಆರ್.ಎಸ್ ಕೃಷ್ಣನ್ ಜತೆಗೂಡಿ ಒಂದು ಪರಮಾಣು ಸ್ಥಾವರವನ್ನು ನಿರ್ಮಿಸುವ ಮೂಲಕ ಬೃಹತ್ ವಿಜ್ಞಾನಕ್ಕೆ ನೆಗೆಯುವ ಅವರ ಪ್ರಯತ್ನಗಳು ಸಫಲವಾಗಲಿಲ್ಲ. ಅವರ ಈ ಯೋಜನೆ ತಿರಸ್ಕೃತವಾಗುವುದರಲ್ಲಿ ಹೋಮಿ ಜೆ ಬಾಬಾ ಇನ್ನೊಬ್ಬರ ಜತೆಗೂಡಿ ಬರೆದ ಒಂದು ವರದಿ ಪ್ರಮುಖ ಪಾತ್ರ ವಹಿಸಿತು. ಟಾಟಾ ಕುಟುಂಬದ ಜತೆ ನಿಕಟವಾಗಿದ್ದ ಯುವ ಕರ್ತೃತ್ವಶಾಲಿ ಬಾಬಾ, ರಾಮನ್ ಸೋತ ಪ್ರಯತ್ನದಲ್ಲಿ ಯಶಸ್ವಿಯಾದವರು. ಬೃಹತ್ ವಿಜ್ಞಾನ ಮತ್ತು ಮೂಲಭೂತ ಸಂಶೋಧನೆಗೆ ಭಾರೀ ಮೊತ್ತದ ಸರಕಾರಿ ಮತ್ತು ಕಾರ್ಪೊರೇಟ್ ನೆರವು ಹಾಗೂ ಆಶ್ರಯ ಪಡೆಯುವ ಪ್ರಯತ್ನದಲ್ಲಿ ರಾಮನ್ ಸೋತಿದ್ದರು.

ತನ್ನ ಹಲವಾರು ಸಮಕಾಲೀನರಂತೆ(ಮುಖ್ಯವಾಗಿ ಮೇಘನಾದ್ ಸಹಾರಂತೆ) ನೈಟ್‌ಹುಡ್ ಪ್ರಶಸ್ತಿ ಪಡೆದಿದ್ದ ರಾಮನ್, ತನ್ನ ರಾಷ್ಟ್ರೀಯ ಬದ್ಧತೆಗಳನ್ನು ಪ್ರದರ್ಶಿಸುತ್ತಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷದ ರಾಜ್‌ಯುಗದ ರಾಷ್ಟ್ರೀಯ ಯೋಜನಾ ಸಮಿತಿಯಲ್ಲಿ ಸೇವೆ ಸಲ್ಲಿಸಲು ನಿರಾಕರಿಸಿದ್ದರು. ಆದ್ಯಾಗೂ ಭಾರತದ ಹೊಸ ಸರಕಾರ 1947ರಲ್ಲಿ ಅವರಿಗೆ, ಅವರು 1948ರಲ್ಲಿ ಐಐಎಸ್‌ಸಿಯಿಂದ ನಿವೃತ್ತರಾಗುವ ಸ್ವಲ್ಪ ಮೊದಲು ರಾಷ್ಟ್ರೀಯ ಪ್ರಾಧ್ಯಾಪಕ ಎಂಬ ಗೌರವದ ಕೊಡುಗೆ ನೀಡಿತು. ಪರಿಣಾಮವಾಗಿ ಅವರ ಜೀವಿತದ ಕೊನೆಯವರೆಗೂ ಅವರು ಪೂರ್ಣ ವೇತನ ಪಡೆಯಲು ಅರ್ಹರಾದರು.

ಟ್ರಾಂಬೆಯಲ್ಲಿರುವ ಪರಮಾಣು ಸಂಶೋಧನಾ ಸಂಸ್ಥೆಯಂತಹ ವಿಶೇಷ ರೀತಿಯ ಸಂಸ್ಥೆಗಳಲ್ಲಿ ಸಂಶೋಧನೆಯನ್ನು ಕೇಂದ್ರೀಕರಿಸುವ ನೆಹರೂರವರ ನೀತಿಯನ್ನು ರಾಮನ್ ವಿರೋಧಿಸಿದರು. 1950ರ ದಶಕದಲ್ಲಿ ಅಣಬೆಗಳಂತೆ ಸ್ಥಾಪನೆಯಾಗುತ್ತಿದ್ದ ಸಿಎಸ್‌ಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ಲಾಬೋರೇಟರೀಸ್)ಗಳನ್ನು ವಿವರಿಸಲು ಅವರು ‘ನೆಹರೂ-ಭಟ್ನಾಗರ್ ಇಫೆಕ್ಟ್’ ಎಂಬ ಪದ ಪುಂಜವನ್ನು ಸೃಷ್ಟಿಸಿದರು.

ಪ್ರತಿಭಾನ್ವಿತ ರಸಾಯನ ಶಾಸ್ತ್ರಜ್ಞ ಅಧಿಕಾರಶಾಹಿ ಶಾಂತಿ ಸ್ವರೂಪ ಭಟ್ನಾಗರ್, ರಾಮನ್‌ರವರ ಪತನಕ್ಕೆ ನೆರವಾಗಿದ್ದ ಐಐಎಸ್‌ಸಿ ಪರಾಮ ರ್ಶನ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದರು. ಮೇಲೆ ಹೇಳಿದಂತಹ ಪ್ರಯೋಗಾಲಯಗಳಿಗೆ ಭಾರೀ ಮೊತ್ತದ ಹಣ ವಿನಿಯೋಗಿಸಿದರೂ ಅವುಗಳ ಸಾಧನೆ ಅಷ್ಟಕ್ಕಷ್ಟೆ ಎಂದು ಭವಿಷ್ಯ ನುಡಿದಿದ್ದ ರಾಮನ್‌ನವರ ಮಾತು, 1960ರ ದಶಕದ ಅಂತ್ಯದಲ್ಲಿ ನಿಜವಾದಾಗ, ‘‘ಷಹಜಹಾನ್‌ತನ್ನ ಹೆಂಡತಿಯನ್ನು ಹೂಳಲು ತಾಜ್‌ಮಹಲನ್ನು ಕಟ್ಟಿದಂತೆ ಭಟ್ನಾಗರ್ ವೈಜ್ಞಾನಿಕ ಉಪಕರಣಗಳನ್ನು ಹೂಳಲು ಪ್ರಯೋಗಾಲ ಯಗಳನ್ನು ಕಟ್ಟಿಸಿದರು’’ ಎಂದು ರಾಮನ್ ಲೇವಡಿ ಮಾಡಿದರು.

ಆದರೆ ನೆಹರೂರವರ ವಿಜ್ಞಾನ ನೀತಿಯ ಕುರಿತಾದ ರಾಮನ್‌ರವರ ವಿಶ್ಲೇಷಣೆ ತುಂಬಾ ಗಂಭೀರವಾಗಿತ್ತು. ‘ಉಪಯೋಗಕಾರಿಯಾದ ಅನ್ವಯಿಕ ಸಂಶೋಧನೆ’ಗೆ ನೆಹರೂ ನೀಡಿದ ಒತ್ತು ಸರಿಯಲ್ಲವೆಂದು ಅವರಿಗೆ ಅನ್ನಿಸಿತು. ನೆಹರೂರವರು ‘‘ವಿಜ್ಞಾನಿಗಳು ತಮ್ಮ ದಂತಗೋಪುರದಿಂದ ಹೊರಬರಬೇಕು’’ ಎಂದು ಕರೆ ನೀಡಿದಾಗ, ‘‘ದಂತ ಗೋಪುರದಲ್ಲಿದ್ದ ವ್ಯಕ್ತಿಗಳೇ ಅತ್ಯಂತ ಮುಖ್ಯ; ಮನುಕುಲ ತನ್ನ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಅವರಿಗೇ ಋಣಿಯಾಗಿದೆ. ಅವರೇ, ‘ಭೂಮಿಯ ಉಪ್ಪು’’ ಎಂದು ರಾಮನ್ ಮಾತಿನ ಬಾಣ ಎಸೆದರು.

ಹಂಗಿಲ್ಲದ ವಿಜ್ಞಾನ
ತನಗೆ ಸರಕಾರಿ ಸಂಸ್ಥೆಯಲ್ಲಿ ಆದ ಅನುಭವಗಳಿಂದ ಪಾಠ ಕಲಿತಿದ್ದ ರಾಮನ್, ನಿವೃತ್ತರಾದ ಬಳಿಕ ಬೆಂಗಳೂರಿನಲ್ಲಿ ಸ್ಥಾಪಿಸಿದ್ದ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಸರಕಾರ ಉದಾರ ಧನ ಸಹಾಯ ನೀಡಿ ದಾಗ, 1948ರಲ್ಲಿ, ಅವರು ಅದನ್ನು ನಿರಾಕರಿಸಿದರು ಆ ಮೊತ್ತವನ್ನು ಸ್ವೀಕರಿಸುತ್ತಿದ್ದಲ್ಲಿ ಅವರು ಪ್ರತಿವರ್ಷ ಸರಕಾರಕ್ಕೆ ಆಯವ್ಯಯ ಲೆಕ್ಕ ಕೊಡಬೇಕಾಗುತ್ತಿತ್ತು ಇದು ಅವರಿಗೆ ವಿಜ್ಞಾನಕ್ಕೆ ತೊಡಿಸುವ ಸಂಕೋಲೆ ಅನ್ನಿಸಿತು.

ಬೃಹತ್ ವಿಜ್ಞಾನದ ಟೀಕಾಕಾರರಾಗಿದ್ದ ರಾಮನ್, 1970ರಲ್ಲಿ ಅವರು ಸಾಯುವ ಕೆಲವು ತಿಂಗಳ ಮೊದಲು, ಅಪೊಲೊ॥ರ ಚಂದ್ರ ಯಾನದ ಬಗ್ಗೆ ಹೇಳಿದ ಮಾತು ಹೀಗಿದೆ: ‘‘ಚಂದ್ರನಲ್ಲಿಗೆ ಹೋಗಲು ಅವರ್ಯಾಕೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ? ಈಗಾಗಲೇ ಅವರು ಹುಚ್ಚರಾಗಿಲ್ಲವೇ?’’ ಅವರ ಪ್ರಕಾರ, ಬಡವರಾಗಿ ಹುಟ್ಟಿದವರಿಗೆ ಮಾತ್ರ ಹಣದ ವೌಲ್ಯ ಅರ್ಥವಾಗುತ್ತದೆ. ಶ್ರೀಮಂತರು ಹಣವನ್ನು ದುಂದು ವೆಚ್ಚ ಮಾಡುತ್ತಾರೆ. 

ಕೃಪೆ: scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)