varthabharthi

ಸಂಪಾದಕೀಯ

ರಾಜಸ್ಥಾನ : ನಕಲಿ ಗೋರಕ್ಷಕರಿಗೆ ಗೃಹ ಸಚಿವರ ಅಭಯ

ವಾರ್ತಾ ಭಾರತಿ : 14 Nov, 2017

ರಾಜಸ್ಥಾನದ ಆಲ್ವಾರ್‌ನಲ್ಲಿ ಜಾನುವಾರು ವ್ಯಾಪಾರಿಗಳ ಮೇಲೆ ನಡೆದಿರುವ ಬರ್ಬರ ದಾಳಿ ಮತ್ತು ಕೊಲೆ ರಾಜಸ್ತಾನದ ಆಡಳಿತ ಹೇಗೆ ಬೀದಿ ಪುಂಡರ ಕೈಯಲ್ಲಿ ನರಳುತ್ತಿವೆ ಎನ್ನುವ ಅಂಶವನ್ನು ವಿಶ್ವಕ್ಕೆ ಜಾಹೀರು ಗೊಳಿಸಿದೆ. ಈ ಬೀದಿ ಪುಂಡರ ಮುಂದೆ ಅಲ್ಲಿನ ಸರಕಾರವೂ ಅಸಹಾಯಕವಾಗಿದೆ ಎನ್ನುವುದು ಸಚಿವರೊಬ್ಬರ ಹೇಳಿಕೆಯಿಂದ ಬಹಿರಂಗವಾಗಿದೆ. ಆಲ್ವಾರ್‌ನ ಘಟನೆಯನ್ನು ತೀವ್ರವಾಗಿ ಖಂಡಿಸಿ ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಆದೇಶ ನೀಡಬೇಕಾಗಿದ್ದ ಸಚಿವರು, ಘಟನೆಯ ಕುರಿತಂತೆ ಅತ್ಯಂತ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ.

‘‘ಸರಕಾರಕ್ಕೆ ಪ್ರತಿಯೊಂದು ಘಟನೆಯನ್ನು ತಡೆಯಲು ಸಾಧ್ಯವಿಲ್ಲ’’ ಎಂದು ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಂದ್ ಕಠಾರಿಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಹಾಗಾದರೆ ಈ ಘಟನೆಗಳು ಮುಂದುವರಿಯಲಿದೆ ಎನ್ನುವ ಎಚ್ಚರಿಕೆಯನ್ನು ರಾಜಸ್ತಾನದ ಕೃಷಿಕರಿಗೆ ಗೃಹಸಚಿವರು ನೀಡಿದ್ದಾರೆಯೆ? ಅಥವಾ ಪೊಲೀಸ್ ಇಲಾಖೆಯನ್ನು ಸಮರ್ಥಿಸುವ ಮತ್ತು ಪರೋಕ್ಷವಾಗಿ ಗೋರಕ್ಷಕರನ್ನು ರಕ್ಷಿಸುವ ಭಾಗವಾಗಿ ಈ ಹೇಳಿಕೆಯನ್ನು ನೀಡಿದ್ದಾರೆಯೇ? ಎಂಬ ಶಂಕೆಯನ್ನು ವ್ಯಕ್ತಪಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಿಜ. ಯಾವುದೇ ಕೊಲೆ ಅಥವಾ ಅಪರಾಧಗಳು ನಡೆಯದಂತೆ ಪೊಲೀಸರು ಅಥವಾ ಸರಕಾರ ಸದಾ ಕಣ್ಣಿಟ್ಟು ಕಾಯುವುದಕ್ಕಾಗುವುದಿಲ್ಲ. ಎಲ್ಲೋ ಯಾವುದೋ ಒಂದು ಕೊಲೆ ನಡೆದರೆ ಅದಕ್ಕೆ ನೇರವಾಗಿ ಪೊಲೀಸ್ ಇಲಾಖೆಯನ್ನು ಹೊಣೆ ಮಾಡುವುದು ಸಮಂಜಸವೂ ಅಲ್ಲ. ಆದರೆ ಇಲ್ಲಿ ನಡೆದಿರುವ ಕೊಲೆ ಅಥವಾ ದಾಳಿ ಯಾವುದೋ ಅಪರಿಚಿತ ಕ್ರಿಮಿನಲ್‌ಗಳಿಂದ ನಡೆದಿರುವುದಲ್ಲ. ಸಂಘಟಿತವಾದ ಸಂಸ್ಥೆಯೊಂದು ಈ ಕೃತ್ಯವನ್ನು ಎಸಗಿದೆ ಮತ್ತು ಅದರ ಹಿಂದೆ ರಾಜಕೀಯದ ಭಾಗೀದಾರಿಕೆಯಿದೆ.

ಈ ಹಿಂದೆ ಹಿರಿಯ ರೈತ ಪೆಹ್ಲೂಖಾನ್‌ರನ್ನು ಕೊಂದವರೇ ಮತ್ತೆ ಇಂತಹದೊಂದು ದಾಳಿಯನ್ನು ಸಂಘಟಿಸಿದ್ದಾರೆ ಮತ್ತು ಪೆಹ್ಲೂಖಾನ್‌ರ ಕೊಲೆ ಆರೋಪಿಗಳನ್ನು ರಕ್ಷಿಸಿದವರೇ ಮತ್ತೆ ಇಂತಹ ಕೃತ್ಯಗಳು ನಡೆಯುವುದಕ್ಕೆ ಪರೋಕ್ಷ ಕಾರಣವಾಗಿದ್ದಾರೆ. ಪೆಹ್ಲೂಖಾನ್ ಎನ್ನುವ ವೃದ್ಧ ರೈತನನ್ನು ಕೊಂದ ಆರೋಪಿಗಳನ್ನು ರಕ್ಷಿಸಿರುವುದು ಯಾರು? ಎನ್ನುವುದರ ಜಾಡು ಹುಡುಕುತ್ತಾ ಹೋದಂತೆಯೇ ಅದು ಮತ್ತೆ ರಾಜಸ್ಥಾನದ ಗೃಹ ಸಚಿವರ ಪಾದಬುಡಕ್ಕೇ ಬಂದು ತಲುಪುತ್ತದೆ. ಪೆಹ್ಲೂಖಾನ್ ತನ್ನ ಮೇಲೆ ಬರ್ಬರವಾಗಿ ದಾಳಿ ನಡೆಸಿದ್ದ ಆರೋಪಿಗಳನ್ನು ಗುರುತಿಸಿ ಅದನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದರು. ಆದರೆ ಪೊಲೀಸರು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರು. ನಿಜವಾದ ಆರೋಪಿಗಳನ್ನು ಪೆಹ್ಲೂಖಾನ್ ಗುರುತಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಷರಾದೊಂದಿಗೆ ಪೆಹ್ಲೂಖಾನ್ ಪ್ರಕರಣವನ್ನು ಮುಗಿಸಲು ನೋಡಿದರು. ಈವರೆಗೂ ಪೆಹ್ಲೂಖಾನ್‌ರನ್ನು ಕೊಂದವರನ್ನು ಗುರುತಿಸಿ ಅವರ ಮೇಲೆ ಕಠಿಣ ಪ್ರಕರಣ ದಾಖಲಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.

ಪೆಹ್ಲೂಖಾನ್ ಮೇಲೆ ಹಲ್ಲೆ ನಡೆಸಿದ ಗೋರಕ್ಷಕರಿಗೆ ಬೆಂಗಾವಲಾಗಿ ರಾಜಸ್ಥಾನದ ಪೊಲೀಸರೇ ನಿಂತಿದ್ದಾರೆ ಎನ್ನುವ ಅಂಶ ಈಗಾಗಲೇ ಬಹಿರಂಗವಾಗಿದೆ. ಆರೋಪಿಗಳನ್ನು ಬಂಧಿಸಬೇಕಾಗಿದ್ದ ಪೊಲೀಸರೇ ಸಾಕ್ಷಗಳನ್ನು ದುರ್ಬಲಗೊಳಿಸಲು ಯತ್ನಿಸಿದ್ದಾರೆ. ಇದು ಗೋರಕ್ಷಕರು ಮತ್ತು ಪೊಲೀಸ್ ಇಲಾಖೆಗಳ ನಡುವೆ ಸುತ್ತಿಕೊಂಡಿರುವ ಅನೈತಿಕ ಸಂಬಂಧವೊಂದು ಎತ್ತಿ ಹಿಡಿಯುತ್ತದೆ. ಆದುದರಿಂದ ಬೀದಿಯಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುವ ದುಷ್ಕರ್ಮಿಗಳಿಗಿಂತಲೂ, ಈ ದುಷ್ಕರ್ಮಿಗಳಿಗೆ ಬೆಂಗಾವಲಾಗಿರುವ ಪೊಲೀಸ್ ಇಲಾಖೆಯ ಬಗ್ಗೆ ನಾವು ಆತಂಕ ವ್ಯಕ್ತಪಡಿಸಬೇಕಾಗಿದೆ. ಆಲ್ವಾರ್‌ನಲ್ಲಿ ನಿನ್ನೆ ನಡೆದ ಹತ್ಯೆಯಲ್ಲೂ ಮತ್ತೆ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಆರಂಭದಲ್ಲಿ ಇದು ಗೋರಕ್ಷಕರಿಂದ ನಡೆದಿರುವ ಕೃತ್ಯ ಎನ್ನುವುದನ್ನು ಮುಚ್ಚಿ ಹಾಕಲು ಪೊಲೀಸರೇ ಹವಣಿಸಿದ್ದಾರೆ.

ಗೋವನ್ನು ಸಾಗಿಸುತ್ತಿದ್ದ ಯುವಕನ ಮೃತದೇಹ ರೈಲು ಹಳಿಗಳ ಮೇಲೆ ಪತ್ತೆಯಾಗಿತ್ತು. ಹತ್ತಿರದಲ್ಲೇ ಆತ ಗೋವನ್ನು ಸಾಗಿಸುತ್ತಿದ್ದ ವಾಹನವೂ ನಿಂತಿತ್ತು. ಇನ್ನೋರ್ವ ಗೋಲಿಬಾರ್‌ನಿಂದ ಗಂಭೀರವಾಗಿ ಗಾಯಗೊಂಡಿದ್ದರು. ಇಷ್ಟೆಲ್ಲ ಆದರೂ, ಪೊಲೀಸರು ಇದು ಗೋರಕ್ಷಕರಿಂದ ನಡೆದಿರುವ ಘಟನೆ ಎಂದು ಶಂಕಿಸಲು ನಾಲ್ಕು ದಿನ ಬೇಕಾಯಿತು. ಒಲ್ಲದ ಮನಸ್ಸಿನಿಂದ ಇದೀಗ ಗೋರಕ್ಷಕರ ಮೇಲೆ ಕೇಸು ದಾಖಲಿಸಿದ್ದಾರೆ. ಆದರೆ, ಪೆಹ್ಲೂಖಾನ್ ಪ್ರಕರಣದಲ್ಲಿ ಹೇಗೆ ಆರೋಪಿಗಳನ್ನು ರಕ್ಷಿಸಲಾಯಿತೋ, ಇಲ್ಲಿಯೂ ಅದು ಮರುಕಳಿಸುವ ಎಲ್ಲ ಸಾಧ್ಯತೆಗಳಿವೆ. ‘‘ಸರಕಾರಕ್ಕೆ ಪ್ರತಿಯೊಂದು ಘಟನೆಯನ್ನು ತಡೆಯಲು ಸಾಧ್ಯವಿಲ್ಲ’’ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ ಘಟನೆ ನಡೆದ ಬಳಿಕವಾದರೂ ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ನೀಡುವಂತೆ ಮಾಡಲು ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆಗೆ ಅವರಿನ್ನೂ ಉತ್ತರವನ್ನು ನೀಡಿಲ್ಲ.

ಪೊಲೀಸರು ವೈಯಕ್ತಿಕ ಆಸಕ್ತಿಯಿಂದ ನಕಲಿ ಗೋರಕ್ಷಕರನ್ನು ರಕ್ಷಿಸುತ್ತಿದ್ದಾರೆಯೇ? ಅಥವಾ ರಾಜಕೀಯ ಒತ್ತಡಗಳು ಅವರ ಕೈಯನ್ನು ಕಟ್ಟಿ ಹಾಕಿದೆಯೇ? ಗೋರಕ್ಷಕ ಸಂಘಟನೆಗಳು ಹೈನೋದ್ಯಮವನ್ನು ನಾಶ ಮಾಡಲು ಮತ್ತು ಜನರನ್ನು ಗೋವಿನ ಹೆಸರಲ್ಲಿ ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಸೃಷ್ಟಿಯಾಗಿರುವಂಥದ್ದು. ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುವುದು, ಕೋಮುಸಂಘರ್ಷಗಳನ್ನು ಹುಟ್ಟು ಹಾಕುವುದು ಇವರ ಗುರಿ. ರಾಜಕೀಯ ನಾಯಕರೇ ಈ ಸಂಘಟನೆಗಳ ಫಲಾನುಭವಿಗಳಾಗಿದ್ದಾರೆ. ಆದುದರಿಂದಲೇ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಕಷ್ಟವಾಗುತ್ತಿದೆ. ಪೆಹ್ಲೂಖಾನ್ ಕೊಲೆ ಆರೋಪಿಗಳು ತಪ್ಪಿಸಿಕೊಳ್ಳುವುದಕ್ಕೂ ಇದೇ ಕಾರಣ.

ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದೆಂದರೆ, ಈ ಹಿಂದಿನ ಘಟನೆಗಳಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ಆರೋಪಿಗಳ ಜೊತೆಗೆ ಪೊಲೀಸರು ಕೈ ಜೋಡಿಸಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು. ಹಾಗೆಯೇ ಸ್ಥಳೀಯವಾಗಿ ಕಾರ್ಯಾಚರಿಸುತ್ತಿರುವ ನಕಲಿ ಗೋರಕ್ಷಕರನ್ನು ಗುರುತಿಸಿ ಅವರ ಮೇಲೆ ಗೂಂಡಾ ಕಾಯ್ದೆಗಳನ್ನು ಹಾಕುವುದು. ಆದರೆ ಇವಾವುದಕ್ಕೂ ಸಿದ್ಧವಿಲ್ಲದ ಸರಕಾರ ‘ಪ್ರತಿಯೊಂದು ಘಟನೆಯನ್ನು ತಡೆಯಲು ಸಾಧ್ಯವಿಲ್ಲ’ ಎನ್ನುವುದು ಗೋರಕ್ಷಕರಿಗೆ ಹಿಂಸಾಚಾರ ನಡೆಸಲು ನೀಡುವ ಪರವಾನಿಗೆಯೇ ಸರಿ. ರಾಜಸ್ಥಾನದ ಕಾನೂನಿನ ಚುಕ್ಕಾಣಿ ಬೀದಿಬದಿಯ ದುಷ್ಕರ್ಮಿಗಳ ಕೈಯಲ್ಲಿರುವುದನ್ನು ಇದು ಸ್ಪಷ್ಟಪಡಿಸಿದೆ. ನರೇಂದ್ರ ಮೋದಿ, ಈ ನಕಲಿ ಗೋರಕ್ಷಕರ ಕುರಿತಂತೆ ಮತ್ತೊಮ್ಮೆ ವೌನ ಮುರಿಯುವ ಅಗತ್ಯವನ್ನು ರಾಜಸ್ಥಾನ ಗೃಹಸಚಿವರು ತಮ್ಮ ಬೇಜವಾಬ್ದಾರಿ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)