varthabharthi

ಕರಾವಳಿ

ವ್ಯವಹಾರ ನಷ್ಟ ಕಾರಣ ನೀಡಿದ ಕಂಪೆನಿ

ಪಡುಬಿದ್ರೆಯಲ್ಲಿನ ಸುಝ್ಲಾನ್ ಕಂಪೆನಿ ಲಾಕೌಟ್: 600ಕ್ಕೂ ಅಧಿಕ ಕಾರ್ಮಿಕರಿಗೆ ಗೇಟ್‌ಪಾಸ್

ವಾರ್ತಾ ಭಾರತಿ : 14 Nov, 2017

ಪಡುಬಿದ್ರೆ, ನ.14: ಸುಝ್ಲಾನ್ ಕಂಪೆನಿಯು ಲಾಕೌಟ್ ಮಾಡಿದೆ. ಕಂಪೆನಿಯ ಸುಮಾರು 600ಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ. ಲಾಕೌಟ್‌ಗೆ ವ್ಯವಹಾರ ನಷ್ಟ ಕಾರಣ ನೀಡಿದೆ. ಮಂಗಳವಾರ ಸುಮಾರು 3 ಗಂಟೆಯ ಗೇಟ್ ಮುಂದೆ ನೋಟೀಸೊಂದನ್ನು ಹಚ್ಚಲಾಗಿದ್ದು, ಲಾಕೌಟ್ ಮಾಡಲಾಗಿದೆ ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ. ಕಂಪೆನಿಯ ಈ ಹಠಾತ್ ನಿರ್ಧಾರದಿಂದ 326 ಕಂಪೆನಿ ಕಾರ್ಮಿಕರು ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿ 600ಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ.

ಲಾಕೌಟ್‌ನ ಬಗ್ಗೆ ತಿಳಿಯದ ಕಾರ್ಮಿಕರು ಬೆಳಗ್ಗೆ ಕೆಲಸಕ್ಕೆಂದು ಬಂದಾಗ ಲಾಕೌಟ್ ಆಗಿರುವುದನ್ನು ತಿಳಿದು ಆತಂಕಗೊಂಡಿದ್ದು, ಗೇಟ್ ಮುಂದೆ ಜಮಾಯಿಸಿದ್ದಾರೆ. ಆರು ತಿಂಗಳ ಹಿಂದೆ 700ಕ್ಕೂ ಅಧಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ವಜಾಗೊಳಿಸಿದ್ದು, ಆ ಬಳಿಕ ನಡೆದ ಪ್ರತಿಟನೆಯಿಂದ 200 ಮಂದಿಯನ್ನು ಮತ್ತೆ ಸೇರಿಸಲಾಯಿತು. 15 ದಿನಗಳ ಹಿಂದೆ 130 ಹಾಗೂ ಕಾರ್ಮಿಕರನ್ನು ಮತ್ತೆ ವಜಾ ಮಾಡಿರುವುದನ್ನು ನೆನಪಿಸಬಹುದು.

ಜಿಎಸ್‌ಟಿ ಬಳಿಕ ಸಮಸ್ಯೆ: ಕಂಪೆನಿಯ ಕಾರ್ಮಿಕ ಬೀದರ್‌ನ ಅನಿಲ್ ಮುದ್ದೆ ಎಂಬವರು ಪತ್ರಿಕೆಯೊಂದಿಗೆ ಮಾತನಾಡಿ, 10 ವರ್ಷಗಳಿಂದ ನಾನು ಕೆಲಸ ನಿರ್ವಹಿಸುತ್ತಿದ್ದೇನೆ. ಆರಂಭದಲ್ಲಿ ರೂ. 5,500 ಸಂಬಳ ನೀಡಲಾಗುತಿತ್ತು. ಈಗ ರೂ.15,000 ಆಗಿದೆ. ಆದರೆ ಕಳೆದ ತಿಂಗಳು ಅರ್ಧದಷ್ಟು ಕಡಿತಗೊಳಿಸಿ ರೂ.8,000 ನೀಡಿದ್ದಾರೆ. ಈಗಾಗಲೇ 500ಕ್ಕೂ ಅಧಿಕ ಬ್ಲೇಡ್‌ಗಳು ಬಾಕಿ ಇವೆ. ಆದರೆ ಕಂಪೆನಿಯು ಜಿಎಸ್‌ಟಿಯಿಂದ ಬೆಲೆ ಕಡಿಮೆಯಾಗಿದ್ದು, ಮತ್ತೆ ಜಾಸ್ತಿಯಾಗುವುದಕ್ಕಾಗಿ ಮಾರಾಟ ಮಾಡದೆ ಇಟ್ಟಿದ್ದಾರೆ ಎನ್ನುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)