varthabharthi

ರಾಷ್ಟ್ರೀಯ

ಐಟಿ ದಾಳಿ: ಜಯಾ ಟಿವಿ, ಶಶಿಕಲಾ ಕುಟುಂಬಸ್ಥರ ನಿವಾಸಗಳಲ್ಲಿ ಪತ್ತೆಯಾದ ಅಕ್ರಮ ಆಸ್ತಿ ಮೌಲ್ಯ ಎಷ್ಟು ಗೊತ್ತೆ?

ವಾರ್ತಾ ಭಾರತಿ : 14 Nov, 2017

ಚೆನ್ನೈ, ನ.14: ಜಯಾ ಟಿವಿ ಕಚೇರಿ ಹಾಗೂ ಜೈಲು ಶಿಕ್ಷೆಗೊಳಗಾಗಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರ ಸೋದರ ವಿ.ಕೆ.ದಿನಕರನ್ ಸಹಿತ ಇತರ ಕುಟುಂಬ ಸದಸ್ಯರ ನಿವಾಸಗಳ ಮೇಲಿನ ದಾಳಿಗಳ ವೇಳೆ ರೂ.1,430 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.

ವಶಪಡಿಸಿಕೊಂಡ ವಸ್ತುಗಳಲ್ಲಿ ರೂ.7 ಕೋಟಿ ನಗದು, ಐದು ಕೋಟಿ ಮೌಲ್ಯದ ಚಿನ್ನ ಹಾಗೂ ಭಾರೀ ವಜ್ರಾಭರಣಗಳು ಸೇರಿವೆ. ಈ ಬೆಲೆಬಾಳುವ ವಜ್ರಾಭರಣಗಳ ಮೌಲ್ಯವನ್ನು ಅಂದಾಜಿಸುವ ಕಾರ್ಯಕ್ಕಾಗಿ ವಜ್ರ ಮೌಲ್ಯಮಾಪಕರನ್ನು ಕರೆಸಲಾಗಿದೆ.

ಒಟ್ಟು ಐದು ದಿನಗಳ ಕಾಲ ಐಟಿ ದಾಳಿಗಳು ನಡೆದಿದ್ದು, ಕುಟುಂಬದ ಸದಸ್ಯರು ದೇಶದ ಇತರ ಹಲವೆಡೆ ಭಾರೀ ಪ್ರಮಾಣದ ಹಣವನ್ನು ಸಂಗ್ರಹಿಸಿಟ್ಟಿರಬೇಕೆಂದು ಅಧಿಕಾರಿಗಳು ಶಂಕಿಸಿದ್ದಾರೆ.

ಶಶಿಕಲಾ ಕುಟುಂಬಸ್ಥರು ಆರಂಭಿಸಿರುವ ಹಲವಾರು ಬೇನಾಮಿ ಕಂಪೆನಿಗಳನ್ನೂ ಪತ್ತೆ ಹಚ್ಚಲಾಗಿದೆ ಹಾಗೂ ನೂರಾರು ಶಂಕಾಸ್ಪದ ದಾಖಲೆಗಳೂ ಐಟಿ ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ.

ಕಳೆದ ಐದು ದಿನಗಳಿಂದ ತಮಿಳುನಾಡು, ಆಂಧ್ರ ಪ್ರದೇಶ, ಪುದುಚ್ಚೇರಿ, ದಿಲ್ಲಿ ಮುಂತಾದೆಡೆ ಒಟ್ಟು 187 ಸ್ಥಳಗಳಲ್ಲಿ 10 ಸಮೂಹಗಳ ಮೇಲೆ ದಾಳಿ ನಡೆದಿತ್ತು. ಪ್ರಮುಖ ದಾಳಿ ಜಯಾ ಟಿವಿ ಮೇಲಾಗಿತ್ತಾದರೂ ಉಳಿದ 9 ಸಮೂಹಗಳು ಅದರೊಂದಿಗೆ ಆರ್ಥಿಕ ವಹಿವಾಟು ಹೊಂದಿತ್ತೆಂದು ಅಧಿಕಾರಿಗಳು ಹೇಳಿದ್ದಾರೆ

ಜಯಾ ಟಿವಿ ಆಡಳಿತ ಎಐಎಡಿಎಂಕೆಯ ಮುಖವಾಣಿ ಎಂದೇ ತಿಳಿಯಲಾಗಿತ್ತಾದರೂ ರಾಜ್ಯದಲ್ಲಿ ಇ.ಪಳನಿಸ್ವಾಮಿ ಸರಕಾರವು ಒ.ಪನ್ನೀರ್ ಸೆಲ್ವಂ ನೇತೃತ್ವದ ಬಂಡುಕೋರ ಗುಂಪಿನೊಂದಿಗೆ ಕೈಜೋಡಿಸಿ ಜಯಾ ಟಿವಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ನಿರ್ಧಾರ ಕೈಗೊಂಡಂದಿನಿಂದ ಚಾನೆಲ್ ಸರಕಾರವನ್ನು ಕಟುವಾಗಿ ಟೀಕಿಸುತ್ತಿದೆ.

ಆದರೆ ದಾಳಿಗಳ ಹಿಂದೆ ಯಾವುದೇ ರಾಜಕೀಯ ಉದ್ದೇಶವನ್ನು ನಿರಾಕರಿಸಿರುವ ಆದಾಯ ತೆರಿಗೆ ಇಲಾಖೆ, ‘‘ಕ್ಲೀನ್ ಮನಿ ಡ್ರೈವ್’ ಕಾರ್ಯಾಚರಣೆಯ ಅಂಗವಾಗಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

 

Comments (Click here to Expand)