varthabharthi

ರಾಷ್ಟ್ರೀಯ

ಮೋದಿಯಿಂದ ‘ಜಾದೂ’ ಮೂಲಕ ಗುಜರಾತ್ ಹಣ ‘ಮಾಯ': ರಾಹುಲ್ ಗಾಂಧಿ

ವಾರ್ತಾ ಭಾರತಿ : 14 Nov, 2017

ಪಟಾನ್, ನ.14: ಕಳೆದ ಎರಡು ದಶಕಗಳ ಬಿಜೆಪಿ ಆಡಳಿತದ ಅವಧಿಯಲ್ಲಿ ಗುಜರಾತ್ ನಿಂದ ಹಣವನ್ನು ‘ಜಾದೂ’ ಮೂಲಕ ನರೇಂದ್ರ ಮೋದಿ ‘ಮಾಯಗೊಳಿಸಿದ್ದಾರೆ’ ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಬಿಜೆಪಿಯನ್ನು ಕೆಣಕಿದ್ದಾರೆ.

ಹರಿಜ್ ಗ್ರಾಮದಲ್ಲಿ ಆದಿವಾಸಿಗಳನ್ನು ರಾಹುಲ್ ಅವರನ್ನು ಭೇಟಿಯಾದ ವೇಳೆ ಅವರಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ತಾನು ಹಿಂದೆ ಹಾವಾಡಿಗನಾಗಿದ್ದರೆ ಈಗ ಮ್ಯಾಜಿಕ್ ಮಾಡಿ ಜೀವನ ಸಾಗಿಸುತ್ತಿದ್ದುದಾಗಿ ತಿಳಿಸಿದ. ಕೆಲವೊಂದು ಜಾದೂ ನಮಗೂ ತೋರಿಸಿ ಎಂದಾಗ ಆತ ಜಾದೂ ಮೂಲಕ ಹಣ ಬೀಳಿಸಿದ ನಂತರ ಮಾತನಾಡಿದ ರಾಹುಲ್ ‘‘ನೀವು ಮಾಡಿದಂತೆಯೇ ನರೇಂದ್ರ ಮೋದಿ 22 ವರ್ಷಗಳ ಕಾಲ ಗುಜರಾತ್ ರಾಜ್ಯದಲ್ಲಿ ಜಾದೂ ಮಾಡಿದರು. ನಿಮ್ಮ ಮತ್ತು ಅವರ ನಡುವಿನ ವ್ಯತ್ಯಾಸವೆಂದರೆ ನೀವು ಜಾದೂ ಮೂಲಕ ಹಣ ಮಾಡಿದರೆ, ಅವರು ಹಣ ಮಾಯವಾಗಿಸಿದರು’’ ಎಂದು ಹೇಳಿದರು.

ಆದಿವಾಸಿಗಳ ಎಲ್ಲಾ ಸಮಸ್ಯೆಗಳನ್ನು ಪಕ್ಷ ಆಲಿಸಿ ಅದಕ್ಕೆ ಪರಿಹರ ಕೂಡ ಕಂಡುಹಿಡಿಯುವುದು, ಜನರನ್ನು ಸಂಪರ್ಕಿಸಿಯೇ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಿದೆ ಎಂದರು ರಾಹುಲ್.

ನಂತರ ವರನ ಎಂಬಲ್ಲಿ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್, ರಾಜ್ಯದ ಮುಖ್ಯಮಂತ್ರಿ ವಿಜಯ್ ರುಪಾನಿ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ‘‘ಶೇರು ಮಾರುಕಟ್ಟೆಯನ್ನು ನಿಯಂತ್ರಿಸುವ ಸಂಸ್ಥೆಯೇ ನಿಮ್ಮ ಮುಖ್ಯಮಂತ್ರಿ ಅಪ್ರಾಮಾಣಿಕರು ಎಂದು ಹೇಳಿ ಅವರಿಗೆ ದಂಡ ಹೇರಿದೆ’’ ಎಂದರು.

ಅಮಿತ್ ಶಾ ಪುತ್ರನ ಹಗರಣದ ಬಗ್ಗೆಯೂ ಪ್ರಸ್ತಾಪಿಸಿದ ರಾಹುಲ್ ‘‘ಯಾವುದೇ ಉದ್ಯಮಿ ಎಷ್ಟೇ ಚಾಣಾಕ್ಷನಾಗಿದ್ದರೂ ರೂ. 50,000 ಹಣದಿಂದ ಕೆಲವೇ ತಿಂಗಳುಗಳಲ್ಲಿ ರೂ.80 ಕೋಟಿ ಮಾಡಲು ಸಾಧ್ಯವಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಯ್ ಶಾ ಕಂಪೆನಿಗೆ ಇದು ಸಾಧ್ಯವಾಗಿದೆ’’ ಎಂದು ರಾಹುಲ್ ಹೇಳಿದರು.

‘‘‘ಜಯ್ ಶಾ ಹಾಗೂ ವಿಜಯ್ ರುಪಾನಿ ಪ್ರಕರಣಗಳ ಬಗ್ಗೆ ಮೋದಿ ಈಗ ಏನನ್ನು ಹೇಳಲು ಬಯಸುತ್ತಾರೆ ? ಅವರೇನೂ ಮಾತನಾಡದೇ ಇದ್ದರೆ ಅವರು ಚೌಕೀದಾರ್ ಅಲ್ಲ ಭಾಗೀದಾರ್ ಎಂದು ಜನ ತಿಳಿಯುತ್ತಾರೆ’’ ಎಂದರು ರಾಹುಲ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)