varthabharthi

ಕರಾವಳಿ

ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಅಗತ್ಯ: ಡಾ.ವಿವೇಕ್ ರೈ

ವಾರ್ತಾ ಭಾರತಿ : 14 Nov, 2017

ಮಂಗಳೂರು, ನ.14: ರಾಜ್ಯದಲ್ಲಿ ಮಕ್ಕಳಿಗೆ ಸಂಬಂಧಿಸಿದ ಬರವಣಿಗೆಗೆ ಭದ್ರ ಬುನಾದಿ ಸಿಕ್ಕಿದ್ದು, ದ.ಕ ಜಿಲ್ಲೆಯಿಂದ. ಆದರೆ ಇಂದು ಮಕ್ಕಳ ಸಾಹಿತ್ಯದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಹೇಳಿದರು.

ಅವರು ಮಂಗಳವಾರ ಸಾಹಿತ್ಯ ಅಕಾಡೆಮಿ ವತಿಯಿಂದ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನ.14ರಿಂದ 20ರ ವರೆಗೆ ನಡೆಯಲಿರುವ ‘ರಾಷ್ಟ್ರೀಯ ಪುಸ್ತಕ ವಾರ-ಸಾಹಿತ್ಯ ಕಾರ್ಯಕ್ರಮಗಳು ಮತ್ತು ಪುಸ್ತಕ ಪ್ರದರ್ಶನ’ವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಸಾಹಿತ್ಯದ ವಿಚಾರದಲ್ಲಿಯೂ ಪಾಶ್ಚಿಮಾತ್ಯ ಸಣ್ಣದೇಶಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತುನೀಡಲಾಗುತ್ತಿದ್ದು, ಜಾಗತಿಕ ಪುಸ್ತಕ ಮೇಳಗಳಲ್ಲಿ ಇದನ್ನು ಕಾಣಲು ಸಾಧ್ಯ ಎಂದವರು ಹೇಳಿದು.

ಕರ್ನಾಟಕ ಪ್ರಾದೇಶಿಕ ಏಕೀಕರಣವಾದರೂ, ಪುಸ್ತಕಗಳ ವಿಚಾರದಲ್ಲಿ ಇನ್ನೂ ಏಕೀರಣವಾಗಿಲ್ಲ. ಕರಾವಳಿಯ ಪುಸ್ತಕಗಳು ಉತ್ತರ ಕರ್ನಾಟಕದಲ್ಲಿ, ಮೈಸೂರಿನ ಸಾಹಿತ್ಯಗಳು ಕರಾವಳಿಯಲ್ಲಿ ಇನ್ನೂ ದೊರೆಯುತ್ತಿಲ್ಲ. ಆದ್ದರಿಂದ ಪುಸ್ತಕ ಓದುವಿಕೆಯಲ್ಲಿಯೂ ಏಕೀಕರಣವಾಗಬೇಕು ಎಂದವರು ಅಭಿಪ್ರಾಯಿಸಿದು.

ಅಂತರ್ಜಾಲದಲ್ಲಿ ಇ-ಪುಸ್ತಕಗಳನ್ನು ಓದುವುದಕ್ಕಿಂತ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವುದರಿಂದ ಆತ್ಮಿಯತೆ ಬರುತ್ತದೆ. ಪುಸ್ತಕದೊಂದಿಗೆ ಒಂದು ಅವಿನಾಭಾವ ಸಂಬಂಧ ಏರ್ಪಡುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪುಸ್ತಕ ಅಂಗಡಿಗಳೆಂದರೆ ಅಲ್ಲಿನ ವಾತಾರವಣವೇ ವಿಭಿನ್ನವಾಗಿರುವತ್ತದೆ. ಪುಸ್ತಕಗಳನ್ನು ಆಯ್ಕೆ ಮಾಡಲು ಉತ್ತಮ ಅವಕಾಶ, ಅಲ್ಲೇ ಕುಳಿತು ಓದಲೂ ವ್ಯವಸ್ಥೆ ಇರುತ್ತದೆ. ಅಂತಹ ಆರಾಮದಾಯಕ ವಾತಾವರಣದಲ್ಲಿ ಪುಸ್ತಕಗಳನ್ನು ಓದಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ ಎಂದು ಡಾ. ಬಿ.ಎ. ವಿವೇಕ ರೈ ಹೇಳಿದರು.

ಮುಖ್ಯ ಅತಿಥಿಯಾಗಿ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯ ನಾ. ದಾಮೋದರ ಶೆಟ್ಟಿ ಮಾತನಾಡಿ,  ಇಂದಿನ ಮಕ್ಕಳು ಕೇವಲ ಮೊಬೈಲ್‌ನಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ.ಓದು ನಮ್ಮನ್ನು ಬದುಕಿನ ಉದ್ದಕ್ಕೂ ಕರೆದೊಯ್ಯುತ್ತದೆ. ಮೊಬೈಲ್ ದೂರವಿಟ್ಟು ಪುಸ್ತಕವನ್ನು ಹತ್ತಿರ ತಂದಾಗ ನಿಜವಾದ ಸುಸಂಸ್ಕೃತ ಪ್ರಜೆಯಾಗಬಹುದು ಎಂದರು.

ಪ್ರಿನ್ಸಿಪಾಲ್ ರೆ.ಫಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸರಸ್ವತಿ ಕುಮಾರಿ ಕೆ. ವಂದಿಸಿದರು. ಆಯಿಷಾ ಶಾರಿಯಾ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕಗಳ ಆಯ್ಕೆಯೂ ನಮ್ಮದಾಗಿ ಉಳಿದಿಲ್ಲ!
ನಮ್ಮಲ್ಲಿ ಯಾವ ಪುಸ್ತಕಗಳನ್ನು ಓದಬೇಕು ಎಂದು ಅಂಗಡಿಯವರು ತೀರ್ಮಾನಿಸುವಂತಾಗಿದೆ. ನಮಗೆ ಬೇಕಾದ ಪುಸ್ತಗಳು ಓದಲು ಸಿಗುವುದಿಲ್ಲ. ಕೆಲವೇ ಲೇಖಕರ ಪುಸ್ತಕಗಳನ್ನು ಮಾತ್ರ ಆಯ್ದು ಮಾರಾಟಕ್ಕೆ ಇಡುವ ಪರಿಸ್ಥಿತಿ ಇದೆ. ಇದರಿಂದಾಗಿ ಸಾಹಿತ್ಯ ಸಂಕುಚಿತವಾಗುತ್ತಿದೆ ಎಂದು ಡಾ. ಬಿ.ಎ. ವಿವೇಕ ರೈ ಬೇಸರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)