varthabharthi

ರಾಷ್ಟ್ರೀಯ

ವಾಯು ಮಾಲಿನ್ಯ “ಆತಂಕಕಾರಿ ವಿಷಯವಲ್ಲ” ಎಂದ ಕೇಂದ್ರ ಪರಿಸರ ಸಚಿವ!

ವಾರ್ತಾ ಭಾರತಿ : 14 Nov, 2017

ಹೊಸದಿಲ್ಲಿ, ನ.14 : ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಆತಂಕಕಾರಿ ವಿಷಯವೇನಲ್ಲ ಎಂದು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಹೇಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ವೈದ್ಯರು ಇದನ್ನೊಂದು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯೆಂದು ಬಣ್ಣಿಸಿದ್ದರೆ ಸಚಿವರು ಮಾತ್ರ ಈ ಸಮಸ್ಯೆಯನ್ನು ನಿಭಾಯಿಸಲು ಸಾಮಾನ್ಯ ಮುನ್ನೆಚ್ಚರಿಕಾ ಕ್ರಮಗಳಷ್ಟೇ ಸಾಕು ಎಂದಿದ್ದಾರೆ.

ಅದೇ ಸಮಯ ದಿಲ್ಲಿ ಮತ್ತು ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೂ ಕನಿಷ್ಠ 25,000 ಜನರನ್ನು ಬಲಿಪಡೆದ 1984ರ ಭೋಪಾಲ ದುರಂತದ ನಡುವಿನ ವ್ಯತ್ಯಾಸವನ್ನು ಸಚಿವರು ಸುದ್ದಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ವಿವರಿಸಿದರು.

‘‘ಭೋಪಾಲದಲ್ಲಿ ಆಗ ಒಂದು ತುರ್ತು ಸನ್ನಿವೇಶವಿತ್ತು, ಆತಂಕ ಪಡುವ ವಾತಾವರಣವಿತ್ತು ಹಾಗೂ ಯಾವ ಕ್ರಮ ಕೈಗೊಳ್ಳಬೇಕೆಂದು ನೋಡಬೇಕಿತ್ತು,’’ ಎಂದ ಸಚಿವರು ಅದೇ ಸಮಯ ದಿಲ್ಲಿಯಲ್ಲಿ ಈಗಿನ ಹೊಗೆಯಂತಹ ವಾತಾವರಣದ ಬಗ್ಗೆ ಮಾತನಾಡುತ್ತಾ, ಅದರ ಬಗ್ಗೆ ಏನೂ ಮಾಡಬಾರದೆಂದೇನೂ ಇಲ್ಲ ಆದರೆ ಜನರಲ್ಲಿ ಆತಂಕ ಸೃಷ್ಟಿಸುವ ಅಗತ್ಯವಿಲ್ಲ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತಲೂ ಹಲವಾರು ಪಟ್ಟು ಅಧಿಕ ಮಾಲಿನ್ಯಕಾರಕಗಳು ದಿಲ್ಲಿಯ ಗಾಳಿಯಲ್ಲಿ ಕಳೆದೆರಡು ವಾರಗಳಿಂದ ಇದ್ದರೂ ಅದಕ್ಕಾಗಿ ಸಾಮಾನ್ಯ ಮುನ್ನಚ್ಚೆರಿಕಾ ಕ್ರಮಗಳಷ್ಟೇ ಬೇಕಾಗಿದೆ ಎಂದು ಸಚಿವರು ಹೇಳಿದರು.

ಮಂಗಳವಾರ ದಿಲ್ಲಿಯ ವಾತಾವರಣದಲ್ಲಿ ಮಾಲಿನ್ಯಕಾರಕ ಪಿಎಂ2.5 ಅಂಶ 400ರಷ್ಟಿದ್ದು ಇದು ಅಪಾಯಕಾರಿ ಮಟ್ಟದಲ್ಲಿದೆ ಎಂದು ತಜ್ಞರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)