varthabharthi

ರಾಷ್ಟ್ರೀಯ

ನ್ಯಾಯಾಧೀಶರಿಗೆ ಲಂಚ ಪ್ರಕರಣ

ಸಿಟ್ ತನಿಖೆ ಕೋರಿದ್ದ ಅರ್ಜಿ ಸುಪ್ರಿಂನಲ್ಲಿ ವಜಾ

ವಾರ್ತಾ ಭಾರತಿ : 14 Nov, 2017

ಹೊಸದಿಲ್ಲಿ,ನ.14: ನ್ಯಾಯಾಧೀಶರ ಹೆಸರಿನಲ್ಲಿ ಲಂಚ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ(ಸಿಟ್)ದಿಂದ ತನಿಖೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿತು. ಈ ಅರ್ಜಿಯು ನ್ಯಾಯಾಧೀಶರ ಪ್ರಾಮಾಣಿಕತೆಯ ಕುರಿತು ಅನಗತ್ಯ ಶಂಕೆಗಳನ್ನೆತ್ತಿದೆ ಎಂದು ಅದು ಹೇಳಿತು.

ನ್ಯಾಯವಾದಿ ಕಾಮಿನಿ ಜೈಸ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಸಿಬಿಐನ ಎಫ್‌ಐಆರ್ ಯಾವುದೇ ನ್ಯಾಯಾಧೀಶರ ವಿರುದ್ಧವಾಗಿಲ್ಲ ಮತ್ತು ನ್ಯಾಯಾಧೀಶರ ವಿರುದ್ಧ ಇಂತಹ ದೂರನ್ನು ಸಲ್ಲಿಸುವುದೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಆದರೆ ನ್ಯಾಯಾಲಯವು ಜೈಸ್ವಾಲ್ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸನ್ನು ಹೊರಡಿಸಲಿಲ್ಲ.

 ಈ ವಿಷಯದ ವಿಚಾರಣೆಯಿಂದ ನ್ಯಾಯಾಧೀಶರೋರ್ವರನ್ನು ದೂರವಿರಿಸುವ ಪ್ರಯತ್ನಗಳನ್ನು ಖಂಡಿಸಿದ ನ್ಯಾಯಮೂರ್ತಿಗಳಾದ ಆರ್.ಕೆ.ಅಗರವಾಲ್, ಅರುಣ್ ಮಿಶ್ರಾ ಮತ್ತು ಎ.ಎಂ.ಕನ್ವಿಲ್ಕರ್ ಅವರ ಪೀಠವು, ಇಂತಹ ಪ್ರಯತ್ನಗಳು ಸರಿಯಲ್ಲ ಮತ್ತು ಇದು ‘ಫೋರಮ್ ಶಾಪಿಂಗ್’ಗೆ ಸಮನಾಗುತ್ತದೆ ಎಂದು ಹೇಳಿತು. ಯಾವುದೇ ಪ್ರಕರಣದಲ್ಲಿ ತೀರ್ಪು ತಮ್ಮ ಪರವಾಗಿ ಬರುವಂತೆ ನ್ಯಾಯಾಧಿಶರನ್ನು ನಿಯೋಜಿಸಿಕೊಳ್ಳುವ ಪ್ರಯತ್ನಕ್ಕೆ ಫೋರಮ್ ಶಾಪಿಂಗ್ ಎನ್ನುತ್ತಾರೆ.

ಜೈಸ್ವಾಲ್ ಅವರು ವಿಷಯದ ವಿಚಾರಣೆಯಿಂದ ನ್ಯಾ.ಕನ್ವಿಲ್ಕರ್ ಅವರು ದೂರ ಉಳಿಯುವಂತೆ ಮಾಡಲು ಹಿರಿಯ ನ್ಯಾಯವಾದಿಗಳಾದ ಶಾಂತಿಭೂಷಣ ಮತ್ತು ಪ್ರಶಾಂತ್ ಭೂಷಣ್ ಅವರ ಮೂಲಕ ಪ್ರಯತ್ನಿಸಿದ್ದರು. ಈ ಕೋರಿಕೆಗೆ ನ್ಯಾ.ಕನ್ವಿಲ್ಕರ್ ಸೊಪ್ಪು ಹಾಕಿರಲಿಲ್ಲ.

ಒಡಿಶಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಇಷ್ರತ್ ಮಸ್ರೂರ್ ಖುದ್ದೂಸಿ ಅವರು ಓರ್ವ ಆರೋಪಿಯಾಗಿರುವ ವೈದ್ಯಕೀಯ ಕಾಲೇಜುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಧೀಶರಿಗೆ ಲಂಚ ನೀಡಿರುವ ಆರೋಪವನ್ನು ಹೊರಿಸಲಾಗಿದೆ ಎಂದು ಜೈಸ್ವಾಲ್ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)