varthabharthi

ಕರ್ನಾಟಕ

ಆರ್‍ಟಿಪಿಎಸ್, ವೈಟಿಪಿಎಸ್ ಭೂ ಸಂತ್ರಸ್ತರಿಗೆ ಉದ್ಯೋಗ: ಡಿ.ಕೆ.ಶಿವಕುಮಾರ್

ವಾರ್ತಾ ಭಾರತಿ : 14 Nov, 2017

ಬೆಳಗಾವಿ, ನ.14: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಅರ್ಹತೆ ಆಧಾರದ ಮೇಲೆ ತ್ವರಿತವಾಗಿ ಉದ್ಯೋಗ ಒದಗಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಅಮರನಾಥ ಪಾಟೀಲ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೆಂದ್ರಕ್ಕೆ 1,427ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ವೈಟಿಪಿಎಸ್‍ಗೆ ಭೂಮಿ ಕಳೆದುಕೊಂಡಿರುವ ಭೂಮಾಲಕರ ಪೈಕಿ ಮೊದಲ ಹಂತದಲ್ಲಿ 149 ಸಂತ್ರಸ್ತರು, 2ನೆ ಹಂತದಲ್ಲಿ 86 ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಇದುವರೆಗೆ 108 ಜನರಿಗೆ ನಿಗಮದಲ್ಲಿ ಉದ್ಯೋಗ ನೀಡಲಾಗಿದೆ. ಬಾಕಿ ಇರುವ 127 ಅರ್ಜಿಗಳಿಗೆ ಸಂಬಂಧಿಸಿದ ಅವಶ್ಯಕ ದಾಖಲೆ, ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ ಹಾಗೂ ಇತರೆ ಆಕ್ಷೇಪಣೆಗಳನ್ನು ಸರಿಪಡಿಸಲು ಸಲ್ಲಿಸಲು ತಿಳಿಸಲಾಗಿದೆ ಎಂದರು.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 462 ಭೂ ಸಂತ್ರಸ್ತ ಕುಟುಂಬಗಳ ಪೈಕಿ 2013 ರ ವರೆಗೆ ಒಟ್ಟು 327 ಕುಟುಂಬಗಳಿಗೆ ತರಬೇತಿ ಮತ್ತು ಉದ್ಯೋಗ ನೀಡಲಾಗಿದೆ. ಆರ್‍ಟಿಪಿಎಸ್‍ಗೆ ಭೂಮಿ ಕಳೆದುಕೊಂಡ ಕುಟುಂಬಗಳಿಂದ ಅರ್ಜಿ ಆಹ್ವಾನಿಸಿ 2005ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 554 ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ ನಿಯಮಾವಳಿಯಂತೆ ಅರ್ಹತೆ ಹೊಂದಿದ 75 ಭೂ ಸಂತ್ರಸ್ತ ಕುಟುಂಬಗಳಿಗೆ ನಿಗಮದಲ್ಲಿ ಉದ್ಯೋಗ ಮತ್ತು ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅಮರನಾಥ ಪಾಟೀಲ, ರಾಜ್ಯಕ್ಕೆ ಬೆಳಕು ನೀಡುವ ಆರ್‍ಟಿಪಿಎಸ್‍ನ 614 ಮತ್ತು ವೈಟಿಪಿಎಸ್‍ನ 127 ಭೂ ಸಂತ್ರಸ್ತರಿಗೆ ಶೀಘ್ರವಾಗಿ ಉದ್ಯೋಗ ಒದಗಿಸುವಂತೆ ಒತ್ತಾಯಿಸಿದಾಗ ಉತ್ತರಿಸಿದ ಶಿವಕುಮಾರ್, ರಾಜ್ಯದ ಇತರೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಹೋಲಿಕೆ ಮಾಡಿದರೆ ಆರ್‍ಟಿಪಿಎಸ್ ಮತ್ತು ವೈಟಿಪಿಎಸ್ ನಲ್ಲಿ 2037 ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ಬಾಕಿ ಇರುವ ಭೂ ಸಂತ್ರಸ್ತರ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

 

Comments (Click here to Expand)