varthabharthi

ಕರಾವಳಿ

ಅಖಿಲ ಭಾರತ ಸಹಕಾರ ಸಪ್ತಾಹ

ಕಾರ್ಪೊರೇಟ್, ಜಾಗತೀಕರಣ ಸಹಕಾರ ಕ್ಷೇತ್ರದ ಮುಂದಿರುವ ಆತಂಕ: ಪ್ರಸಾದ್ ರಾವ್

ವಾರ್ತಾ ಭಾರತಿ : 14 Nov, 2017

ಉಡುಪಿ, ನ.14: ಇಂದಿನ ಕಾರ್ಪೊರೇಟ್ ಯುಗ ಮತ್ತು ಜಾಗತೀಕರಣ ಸಹಕಾರ ಕ್ಷೇತ್ರದ ಸ್ವಾವಲಂಬನೆ, ಆರ್ಥಿಕ ಶಕ್ತಿ ಮತ್ತು ಅಸ್ತಿತ್ವವನ್ನೇ ಪ್ರಶ್ನಿಸುವ ಸಾಧ್ಯತೆಗಳಿವೆ. ಇದು ನಮ್ಮ ಮುಂದಿರುವ ಬಹಳ ದೊಡ್ಡ ಆತಂಕ ಎಂದು ಉಡುಪಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರಸಾದ್ ರಾವ್ ಎಂ. ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿ ಯನ್ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ದಲ್ಲಿ ಆಯೋಜಿಸಲಾದ 64ನೆ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸಹಕಾರ ಕ್ಷೇತ್ರ ಗೆಲ್ಲುವ ದಾರಿಯಲ್ಲಿ ಸಾಕಷ್ಟು ವಿಪತ್ತುಗಳು, ಆತಂಕಗಳು ಎದುರಾಗುತ್ತಿವೆ. ಕಾರ್ಪೊರೇಟ್ ಹಾಗೂ ಜಾಗತೀಕರಣವು ನಮ್ಮ ಎದುರು ಇರುವ ಪ್ರಮುಖ ಸವಾಲು ಆಗಿದೆ. ಇದು ನಮ್ಮ ದೇಶದ ಆರ್ಥಿಕ ನೀತಿಗಳಿಂದ ಬಂದಿರುವುದಾಗಿದೆ. ಇದನ್ನು ಮೆಟ್ಟಿನಿಂತು ಸಹಕಾರ ಕ್ಷೇತ್ರ ಅಭಿವೃದ್ಧಿ ಕಾಣ ಬೇಕಾಗಿದೆ ಎಂದರು.

ಸಂಬಂಧ ಮತ್ತು ಸಹಕಾರವು ನಮ್ಮ ಜೀವನದ ಭಾಗ. ಇದು ಇಲ್ಲದಿದ್ದರೆ ಬದುಕು ನಡೆಸಲು ಸಾಧ್ಯವಿಲ್ಲ. ಅದುವೇ ನಿಜವಾದ ಸ್ವಾತಂತ್ರ. ಎಲ್ಲರೂ ಗೆಲ್ಲುವುದು ಸಹಕಾರ ತತ್ವದ ಮೂಲ ಉದ್ದೇಶವಾಗಿದೆ. ಸಹಕಾರ ಕ್ಷೇತ್ರ ಬಲ ಗೊಂಡರೆ ಈ ದೇಶ ರಾಮರಾಜ್ಯವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಮಾತನಾಡಿ, ಸಹಕಾರ ಎಂಬುದು ವ್ಯಕ್ತಿ ಅಲ್ಲ, ಅದು ಸಮೂಹ ಶಕ್ತಿ ಆಗಿದೆ. ಸಹಕಾರ ತತ್ವದ ಮೂಲ ಉದ್ದೇಶ ನಮ್ಮ ಬಿಗಿ ನಮ್ಮ ಕೈಯಲ್ಲಿರುವುದು. ಸಹಕಾರಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಿ ಅಭಿವೃದ್ಧಿ ಶೀಲ ಚಿಂತನೆಯ ಮೂಲಕ ಅದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ತಲು ಪಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕ ಎಂ.ಎಚ್.ವಿಠಲ ಶೇರಿಗಾರ್ ಉಪಸ್ಥಿತರಿದ್ದರು.

ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಹಕಾರಿ ಯೂನಿಯನ್‌ನ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಅಮೀನ್ ವಂದಿಸಿದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)