varthabharthi

ರಾಷ್ಟ್ರೀಯ

ರಾಜೀವ್ ಗಾಂಧಿ ಹತ್ಯೆಗೆ ಸ್ಫೋಟಕಕ್ಕೆ ಬ್ಯಾಟರಿ ಪೂರೈಕೆ: ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಡಲು ಅಪರಾಧಿ ಮನವಿ

ವಾರ್ತಾ ಭಾರತಿ : 14 Nov, 2017

ಹೊಸದಿಲ್ಲಿ, ನ.14: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸ್ಫೋಟಕಕ್ಕೆ ಬ್ಯಾಟರಿಗಳನ್ನು ಪೂರೈಸಿದ್ದ ಆರೋಪದಲ್ಲಿ ಕಳೆದ 26 ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿರುವ ಎಜಿ ಪೇರರಿವಾಲನ್ ಬಹುಸಂಸ್ಥೆಗಳು ನಡೆಸುತ್ತಿರುವ ತನಿಖೆಯು ಸಂಪೂರ್ಣವಾಗುವವರೆಗೆ ತನ್ನ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. 1991ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರನ್ನು ಬಾಂಬ್ ಸ್ಫೋಟ ನಡೆಸಿ ಹತ್ಯೆ ಮಾಡಲಾಗಿತ್ತು. ಈ ವೇಳೆ ಬಳಸಿದ್ದ ಸ್ಫೋಟಕಕ್ಕೆ ಪೇರರಿವಾಲನ್ ಬ್ಯಾಟರಿಗಳನ್ನು ಪೂರೈಸಿದ್ದ.

ತನ್ನ ಕಕ್ಷೀದಾರನನ್ನು ರಾಜೀವ್ ಗಾಂಧಿ ಹತ್ಯೆಯಲ್ಲಿ ಬಳಸಲಾಗಿದ್ದ ಸ್ಫೋಟಕಕ್ಕೆ ಬಳಸಲಾಗಿದ್ದ ಎರಡು ಒಂಬತ್ತು ವೋಲ್ಟ್ ಬ್ಯಾಟರಿಗಳನ್ನು ಪೂರೈಸಿದ ಅಪರಾಧಕ್ಕಾಗಿ ಕಾರಾಗೃಹದಲ್ಲಿಡಲಾಗಿದೆ. ಆದರೆ ಆತ ಆ ಬ್ಯಾಟರಿಗಳನ್ನು ಯಾವ ಉದ್ದೇಶಕ್ಕಾಗಿ ಪೂರೈಸುತ್ತಿದ್ದಾನೆ ಎಂಬ ಬಗ್ಗೆ ಆತನಿಗೆ ಆ ಸಮಯದಲ್ಲಿ ಮಾಹಿತಿಯಿತ್ತೇ ಎಂಬುದನ್ನು ಸಿಬಿಐ ಎಂದೂ ಆತನಲ್ಲಿ ಪ್ರಶ್ನಿಸಲೇ ಇಲ್ಲ ಎಂದು ಪೇರರಿವಾಲನ್ ಪರ ವಕೀಲರಾದ ಗೋಪಾಲ್ ಶಂಕರನಾರಾಯಣನನ್ ನ್ಯಾಯಾಲಯಕ್ಕೆ ವಿವರಿಸಿದರು.

ಸಿಬಿಐನ ಹಿರಿಯ ಅಧಿಕಾರಿ ವಿ. ತ್ಯಾಗರಾಜನ್ ಸಲ್ಲಿಸಿದ್ದ ಅಫಿದಾವಿತ್‌ನಲ್ಲಿ ಸಿಬಿಐ ಈ ಬಗ್ಗೆ ಪೇರರಿವಾಲನ್ ನನ್ನು ಪ್ರಶ್ನಿಸಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಉಲ್ಲೇಖಿಸಿರುವುದನ್ನು ಗೋಪಾಲ್ ಬೆಟ್ಟು ಮಾಡಿದರು.

ಸ್ಫೋಟಕ ತಯಾರಿಸಿರುವ ವ್ಯಕ್ತಿಯು ಸದ್ಯ ಶ್ರೀಲಂಕಾದಲ್ಲಿದ್ದು ತನಿಖಾ ತಂಡವು ಆತನನ್ನು ಪ್ರಶ್ನಿಸಿಲ್ಲ ಎಂದು ಗೋಪಾಲ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)