varthabharthi

ಅಂತಾರಾಷ್ಟ್ರೀಯ

ಜಗತ್ತಿನ ಅತ್ಯಂತ ಹಳೆಯ ದ್ರಾಕ್ಷಾರಸ ಜಾರ್ಜಿಯದಲ್ಲಿ ಪತ್ತೆ

ವಾರ್ತಾ ಭಾರತಿ : 14 Nov, 2017

ಲಂಡನ್, ನ. 14: 8,000 ವರ್ಷಗಳ ಹಿಂದೆಯೇ ದ್ರಾಕ್ಷಾರಸ (ವೈನ್) ತಯಾರಿಸುವುದು ಹೇಗೆಂದು ಜನರಿಗೆ ತಿಳಿದಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆ ಕಾಲದ ಮಡಕೆಯ ಚೂರುಗಳಿಂದ ಇದು ಸಾಬೀತಾಗಿದೆ ಎಂದಿದ್ದಾರೆ.

ಏಶ್ಯ ಮತ್ತು ಯುರೋಪ್‌ಗಳ ಗಡಿಯಲ್ಲಿರುವ ಜಾರ್ಜಿಯ ದೇಶದ ರಾಜಧಾನಿ ಟಿಬಿಲಿಸಿಯಿಂದ ದಕ್ಷಿಣಕ್ಕೆ 50 ಕಿ.ಮೀ. ದೂರದಲ್ಲಿರುವ ಗಡಕ್ರಿಲಿ ಗೊರ ಮತ್ತು ಶುಲವೆರಿಸ್ ಗೊರ ಎಂಬ ಹೊಸ ಶಿಲಾಯುಗ ಕಾಲದ ಗ್ರಾಮಗಳಲ್ಲಿ ಪತ್ತೆಯಾದ ಮಣ್ಣಿನ ಪಾತ್ರೆಗಳಲ್ಲಿ ದ್ರಾಕ್ಷಾರಸದ ತುಣುಕುಗಳು ಪತ್ತೆಯಾಗಿವೆ ಎಂದು ವಿಜ್ಞಾನಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಕೆಲವು ಪಾತ್ರೆಗಳಲ್ಲಿ ದ್ರಾಕ್ಷಿ ಗೊಂಚಲುಗಳು ಮತ್ತು ಓರ್ವ ವ್ಯಕ್ತಿ ನರ್ತಿಸುವ ಚಿತ್ರಗಳಿವೆ.

 ಎಂಟು ಮಡಿಕೆಗಳಲ್ಲಿ ದ್ರಾಕ್ಷಾರಸದ ರಾಸಾಯನಿಕ ಚಿಹ್ನೆಗಳು ಪತ್ತೆಯಾಗಿವೆ. ಈ ಪೈಕಿ ಒಂದು ಮಡಿಕೆಯ ಕಾಲ ಕ್ರಿಸ್ತಪೂರ್ವ 5,980 ಎಂದು ಅಂದಾಜಿಸಲಾಗಿದೆ.

ಇದಕ್ಕೂ ಮುಂಚೆ, ಅತ್ಯಂತ ಹಿಂದಿನ ದ್ರಾಕ್ಷಾರಸ ತಯಾರಿಕೆ ಕುರುಹು ಝಾಗ್ರೊಸ್ ಪರ್ವತಶ್ರೇಣಿಯಲ್ಲಿ ಪತ್ತೆಯಾಗಿತ್ತು ಹಾಗೂ ಅದರ ಕಾಲವನ್ನು ಕ್ರಿಸ್ತಪೂರ್ವ 5,400-5,000 ಎಂದು ನಿರ್ಧರಿಸಲಾಗಿತ್ತು.

 

Comments (Click here to Expand)