varthabharthi

ಅಂತಾರಾಷ್ಟ್ರೀಯ

ಭಾರತ, ಅಮೆರಿಕಕ್ಕೆ ಶ್ರೇಷ್ಠ ಸೇನೆಗಳ ಅಗತ್ಯ: ಮೋದಿ, ಟ್ರಂಪ್ ಪ್ರತಿಪಾದನೆ

ವಾರ್ತಾ ಭಾರತಿ : 14 Nov, 2017

ಮನಿಲಾ, ನ. 14: ಅಮೆರಿಕ ಮತ್ತು ಭಾರತಗಳ ನಡುವೆ ಭವಿಷ್ಯದಲ್ಲಿ ಗಾಢ ಸೇನಾ ಸಹಕಾರ ಏರ್ಪಡುತ್ತದೆ ಎಂಬ ಇಂಗಿತವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ. ಜಗತ್ತಿನ ಎರಡು ಶ್ರೇಷ್ಠ ಪ್ರಜಾಪ್ರಭುತ್ವಗಳು ‘ಜಗತ್ತಿನ ಅತ್ಯಂತ ಶ್ರೇಷ್ಠ ಸೇನೆಗಳನ್ನೂ ಹೊಂದಿರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ಪ್ರಧಾನ ರಕ್ಷಣಾ ಭಾಗೀದಾರರಾಗಿ ತಮ್ಮ ನಡುವಿನ ಸಹಕಾರವನ್ನು ವೃದ್ಧಿಸಲು ಅವರು (ಮೋದಿ ಮತ್ತು ಟ್ರಂಪ್) ನಿರ್ಧರಿಸಿದ್ದಾರೆ. ಜಗತ್ತಿನ ಎರಡು ಶ್ರೇಷ್ಠ ಪ್ರಜಾಪ್ರಭುತ್ವಗಳು ಜಗತ್ತಿನ ಶ್ರೇಷ್ಠ ಸೇನೆಗಳನ್ನೂ ಹೊಂದಿರಬೇಕು ಎಂಬ ಬಗ್ಗೆ ಅವರು ಒಮ್ಮತ ಹೊಂದಿದ್ದಾರೆ’’ ಎಂದು ಶ್ವೇತಭವನ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.

ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಸೋಮವಾರ ನಡೆದ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಟ್ರಂಪ್ ಮತ್ತು ಮೋದಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

ಉಭಯ ನಾಯಕರ ನಡುವೆ ನಡೆದ 45 ನಿಮಿಷಗಳ ಮಾತುಕತೆ ‘ಹಾರ್ದಿಕ, ರಚನಾತ್ಮಕ ಮತ್ತು ಸುಲಲಿತವಾಗಿತ್ತು’ ಎಂದು ಭಾರತದ ವಿದೇಶ ಕಾರ್ಯದರ್ಶಿ ಎಸ್. ಜೈಶಂಕರ್ ಬಣ್ಣಿಸಿದ್ದಾರೆ.

 

Comments (Click here to Expand)