varthabharthi

ಕರಾವಳಿ

​ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಪ್ರಕರಣ: ಆರೋಪಿಗೆ ಜಾಮೀನು

ವಾರ್ತಾ ಭಾರತಿ : 14 Nov, 2017

ಪುತ್ತೂರು, ನ. 14: ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣದ ಆರೋಪಿ ಹನೀಫ್‌ ಎಂಬಾತನಿಗೆ ಪುತ್ತೂರಿನ ಹಿರಿಯ ವಿಭಾಗದ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಸೆಪ್ಟೆಂಬರ್ 10ರಂದು ಪುತ್ತೂರು ತಾಲೂಕಿನ ಮುಡಿಪಿನಡ್ಕದ ಔಷಧವನದ ದೇಯಿ ಬೈದ್ಯೆತಿ ಪ್ರತಿಮೆಗೆ ಆರೋಪಿ ಹನೀಫ್ ಅವಮಾನ ಮಾಡಿದ್ದ. ಮಾತ್ರವಲ್ಲ ಈ ಫೊಟೋವನ್ನು ಜಾಲತಾಣದಲ್ಲಿ ಹಾಕಲಾಗಿತ್ತು. ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಪ್ರತಿಭಟನೆಯೂ ನಡೆದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಬಂಧಿತನಾಗಿದ್ದ ಆರೋಪಿ ಜಾಮೀನು ನೀಡುವಂತೆ ವ್ಯವಹಾರಿಕ ಹಿರಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ಅರ್ಜಿ ತಿರಸ್ಕೃರಿಸಿತ್ತು. ಇದನ್ನು ಪ್ರಶ್ನಿಸಿ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅಲ್ಲಿಯೂ ತಿರಸ್ಕೃತಗೊಂಡಿತ್ತು.

ಘಟನೆ ನಡೆದು 60 ದಿನ ಕಳೆದರೂ ಪೊಲೀಸರು ಅಂತಿಮ ವರದಿ ಸಲ್ಲಿಸಿರಲಿಲ್ಲ. ಆದ್ದರಿಂದ ಆರೋಪಿ ನ್ಯಾಯಾಂಗ ಬಂಧನದಲ್ಲೇ ಕಳೆಯುವಂತಾಯಿತು. ಈ ಬಗ್ಗೆ ಪ್ರಶ್ನಿಸಿ ಹಿರಿಯ ವಿಭಾಗದ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಲಾಯಿತು. ಆರೋಪಿ ಪರ ವಕೀಲರಾದ ಅಶ್ರಫ್ ಅಗ್ನಾಡಿ, ಮಜೀದ್ ಖಾನ್ ವಾದ ಆಲಿಸಿದ, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

 

Comments (Click here to Expand)