varthabharthi

ಕರಾವಳಿ

ಅವೈಜ್ಞಾನಿಕ ತ್ಯಾಜ್ಯ ವಿಲೇಯನ್ನು ತಡೆಯಿರಿ: ದಿನಕರಬಾಬು

ವಾರ್ತಾ ಭಾರತಿ : 14 Nov, 2017

ಉಡುಪಿ, ನ.14: ತ್ಯಾಜ್ಯವನ್ನು ನೇರವಾಗಿ ತಿಂದ ಕಾರಣ ವಿಷಾಂಶ ದೇಹದಲ್ಲಿ ಸೇರಿಕೊಂಡು ಪಡುವರಿಯಲ್ಲಿ ಜಾನುವಾರುಗಳು ಸಾವನ್ನಪ್ಪಿರುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ ಸರ್ವೋತ್ತಮ ಉಡುಪ ಹೇಳಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕ್ಟೋಬರ್ ತಿಂಗಳ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಪಡುವರಿಯಲ್ಲಿ ಜಾನುವಾರುಗಳ ಮರಣ ಯಾವ ರೋಗದಿಂದ ಸಂಭವಿಸುತ್ತಿದೆ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಕೇಳಿದಾಗ, ಉತ್ತರಿಸಿದ ಉಪನಿರ್ದೇಶಕರು, ನಿರ್ಜನ ಪ್ರದೇಶದಲ್ಲಿ ಸುರಿದ ತ್ಯಾಜ್ಯದಿಂದ ವಿಷಾಂಶ ಪ್ರಾಣಿಗಳ ದೇಹದಲ್ಲಿ ಸೇರಿ ಮೃತಪಟ್ಟಿರುವುದು ಪ್ರಾಥಮಿಕ ವರದಿ ಯಿಂದ ತಿಳಿದುಬಂದಿದೆ ಎಂದರು.

ಸ್ಥಳೀಯ ಗ್ರಾಪಂಗಳು ಘನ ಮತ್ತು ದ್ರವ ತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ವಿಶೇಷ ಅಸ್ಥೆ ವಹಿಸಿ ಅನುಷ್ಠಾನಕ್ಕೆ ತರುವುದರಿಂದ ಜಾನುವಾರುಗಳನ್ನು ಸಂರಕ್ಷಿಸ ಬಹುದು ಹಾಗೂ ಸಾಂಕ್ರಾಮಿಕ ರೋಗ ಹರಡುವಿಕೆಯನ್ನೂ ತಡೆಯಬಹುದು ಎಂದ ಅವರು ಜಿಲ್ಲೆಯ ಜಾನುವಾರುಗಳಿಗೆ ಈಗಾಗಲೇ ಕಾಲು ಬಾಯಿ ಲಸಿಕೆ ಹಾಕುವ ಕಾರ್ಯಕ್ರಮ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಜಿಲ್ಲೆಯಲ್ಲಿ ತ್ಯಾಜ್ಯ ವಿಲೇಗೆ ವಿಶೇಷ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದ್ದು, ದ್ವಿತೀಯ ಹಂತದಲ್ಲಿ ಯಡ್ತರೆ, ಶೀರೂರು, ಬೈಂದೂರು, ಪಡುವರಿಯಲ್ಲಿ ತ್ಯಾಜ್ಯ ವಿಲೇ ಮಾಡೆಲ್‌ನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ವಿವರಿಸಿದರು. ಕುಂದಾಪುರ, ಕಾರ್ಕಳದಲ್ಲೂ ಗ್ರಾಪಂಗಳನ್ನು ದ್ವಿತೀಯ ಹಂತದಲ್ಲಿ ಆರಿಸಿಕೊಳ್ಳಲಾಗಿದ್ದು, ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹೆಚ್ಚಿನ ಮುತುವರ್ಜಿಯನ್ನು ತ್ಯಾಜ್ಯ ವಿಲೇಗೆ ತೋರಬೇಕಿದೆ. ಎರಡನೆ ಹಂತದ ಪ್ರಕ್ರಿಯೆಗಳು ಡಿಸೆಂಬರ್ ಅಂತ್ಯಕ್ಕೆ ಸಿದ್ಧವಾಗಲಿದೆ ಎಂದವರು ಮಾಹಿತಿ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ತ್ಯಾಜ್ಯ ವಿಲೇ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡಿ ಎಂದರು. ಉಡುಪಿ ನಗರದ ಮಹಾತ್ಮ ಗಾಂಧಿ ಶಾಲೆಗೆ ಮೂಲಸೌಕರ್ಯ ಸಂಪೂರ್ಣವಾಗಿ ಒದಗಿಸಿದ ಬಗ್ಗೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶೇಷಶಯನ ಅವರಿಂದ ಮಾಹಿತಿ ಪಡೆದರಲ್ಲದೆ ಶಾಲೆಯನ್ನು ಸ್ವಚ್ಛವಾಗಿಡಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ಸೂಚಿಸಿದರು.

ಪಡುಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಪಾಳುಬಿದ್ದಿರುವ ಬಗ್ಗೆ, ಅಲ್ಲಿ ಔಷಧಗಳನ್ನು ಸಂಗ್ರಹಿಸಿಟ್ಟು ಡಾಕ್ಟರ್‌ಗಳಾಗಲಿ, ಎಎನ್‌ಎಂಗಳಾಗಲಿ ಇಲ್ಲದಿರುವ ಬಗ್ಗೆ ದಿನಕರಬಾಬು, ಜಿಲ್ಲಾ ಆರೊೀಗ್ಯಾಧಿಕಾರಿಗಳ ಗಮನ ಸೆಳೆದರು.

ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ರಚನೆ ವೇಳೆ ಜಿಪಂ ಸದಸ್ಯರನ್ನು ಪರಿಗಣಿಸುತ್ತಿಲ್ಲ ಎಂದ ಅಧ್ಯಕ್ಷರು, ಅಭಿವೃದ್ಧಿ ಸಮಿತಿ ಗೈಡ್‌ಲೈನ್ಸ್ ಮತ್ತು ಇದುವರೆಗೆ ಜಿಲ್ಲೆಯ ಕರಾವಳಿ ತೀರದ ಪ್ರಮುಖ ಆರು ಬೀಚ್‌ಗಳ ಅಭಿವೃದ್ಧಿಗೆ ಕೈಗೊಂಡ ಕ್ರಮ ಹಾಗೂ ಅನುದಾನದ ಮಾಹಿತಿಯನ್ನು ಅಪರಾಹ್ನ ಖುದ್ದಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಮಗೆ ತಲುಪಿಸಬೇಕೆಂದು ಸೂಚನೆ ನೀಡಿದರು.

ಕೆಎಸ್ಸಾರ್ಟಿಸಿ ಬಸ್ಸುಗಳು ಪರ್ಮಿಟ್ ಪಡೆದ ಕಡೆ ಓಡಾಟ ನಡೆಸಬೇಕೆಂದು ಅವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳೊಳಗೆ ಪಡಿತರ ಕಾರ್ಡ್ ಹೆಸರು ನೋಂದಾಯಿಸಿದವರಿಗೆ ಲ್ಯವಾಗಲಿದೆ ಎಂದ ಆಹಾರ ಇಲಾಖೆ ಉಪನಿರ್ದೇಶಕ ಎಂ.ಆರ್.ಭಟ್, ಒಟ್ಟು 14,246 ಕಾರ್ಡುಗಳಿಗೆ ಅರ್ಜಿ ಸ್ವೀಕರಿಸಲಾಗಿದ್ದು, 8,112 ಅರ್ಜಿಗಳು ಸ್ವೀಕೃತಗೊಂಡಿವೆ. ಇದರಲ್ಲಿ 2800 ಕಾರ್ಡುಳು ಪ್ರಿಂಟಿಂಗ್‌ಗೆ ಹೋಗಿದೆ ಎಂದರು.

ಮಾತೃಪೂರ್ಣ ಯೋಜನೆಯ ಬಗ್ಗೆ ಇಂದೂ ಸಭೆಯಲ್ಲಿ ಚರ್ಚೆ ನಡೆಯಿತು. ಬೈಂದೂರಿನಲ್ಲಿ ಚುನಾವಣಾ ಶಾಖೆ ಇಲ್ಲದೆ ಪದವೀಧರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೆ ಸಮಸ್ಯೆ ಯಾಗಿದೆ ಎಂದ ಸ್ಥಾಯಿಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಅಲ್ಲಿನ ಕಚೇರಿಯನ್ನು ಕಾರ್ಯೋನ್ಮುಖಗೊಳಿಸಬೇಕೆಂದರು.
ಜಿಪಂ ಉಪಾಧ್ಯಕ್ಷ ಶೀಲಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಶಿಕಾಂತ ಪಡುಬಿದ್ರೆ, ಉದಯ ಕೋಟ್ಯಾನ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)