varthabharthi

ಕರಾವಳಿ

ಬಾಲಕಿಯರ ಬಾಲಮಂದಿರದಲ್ಲಿ ಮಕ್ಕಳ ಹಬ್ಬ: ‘ಮಮತೆಯ ತೊಟ್ಟಿಲು’ ಯೋಜನೆಗೆ ಚಾಲನೆ

ವಾರ್ತಾ ಭಾರತಿ : 14 Nov, 2017

ಉಡುಪಿ, ನ.14: ಮಕ್ಕಳ ದಿನಾಚರಣೆಯನ್ನು ಇಂದು ನಿಟ್ಟೂರಿನ ಬಾಲಕಿ ಯರ ಬಾಲಮಂದಿರದಲ್ಲಿ ಆಚರಿಸಲಾಯಿತು. ಬಾಲಮಂದಿರದ 9 ಮಕ್ಕಳ ತಂಡ ಕೊರಗಜ್ಜ ನೃತ್ಯವನ್ನು ಅದ್ಭುತವಾಗಿ ಪ್ರದರ್ಶಿಸುವ ಮೂಲಕ ತಮ್ಮ ದಿನವನ್ನು ಅವಿಸ್ಮರಣೀಯವಾಗಿಸಿದರು.

ಗಣೇಶ್ ಬಾರಕೂರು ಅವರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲಿ ನಿನ್ನೆ ಪ್ರದರ್ಶನ ಮುಗಿಸಿದ ಮಕ್ಕಳ ತಂಡ, ಇಂದು ನಿಟ್ಟೂರಿನ ತಮ್ಮ ಬಾಲಮಂದಿರ ದಲ್ಲಿ ನೋಡುಗರ ಕಣ್ಮನ ಸೆಳೆಯುವ ಪ್ರತಿಭಾ ಪ್ರದರ್ಶನ ವನ್ನು ನೀಡಿತು. ಕೊರಗ ಸಮುದಾಯದಲ್ಲಿ ಹೆಣ್ಣು ಮಕ್ಕಳು ಹುಟ್ಟಿದ ವೇಳೆಯ ಸಂಭ್ರಮವನ್ನು ಈ ನೃತ್ಯ ರೂಪಕದಲ್ಲಿ ಕಾಣಬಹುದಾಗಿದ್ದು, ಇವರ ಸಾಂಪ್ರಾದಾಯಿಕ ಪರಿಕರಗಳನ್ನು ಗಣೇಶ್ ಬಾರಕೂರು ಮತ್ತು ಮೂವರ ತಂಡ ಬಾರಿಸಿದರೆ, ಮಕ್ಕಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಮುಂದಿನ ದಿನಗಳಲ್ಲಿ ಸಂಗೀತ ಪರಿಕರವನ್ನು ಬಾರಿಸಲು ಇದೇ ಮಕ್ಕಳಿಗೆ ತರಬೇತಿಯನ್ನು ನೀಡುವುದಾಗಿ ಗಣೇಶ್ ಬಾರಕೂರು ಹೇಳಿದರು.

ಬಾಲಮಂದಿರದ ಎಲ್ಲ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಮಕ್ಕಳು ತಮ್ಮ ಅಮ್ಮಂದಿರ ಜೊತೆ ಕಲರ್‌ಫುಲ್ ಆಗಿ ಕಾಣಿಸಿಕೊಂಡರಲ್ಲದೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲತಾ ಅವರು ಬಾಲಮಂದಿರದ ಆವರಣದಲ್ಲಿ ‘ಮಮತೆಯ ತೊಟ್ಟಿಲಿಗೆ’ ಚಾಲನೆ ನೀಡಿ ಹಸುಗೂಸುಗಳು ಚರಂಡಿ, ರಸ್ತೆಬದಿ, ಕಸ ಎಸೆಯುವ ತೊಟ್ಟಿಗಳಲ್ಲಿ ಲಭ್ಯವಾಗದೆ ಈ ತೊಟ್ಟಿಲಿನಲ್ಲಿ ಆಶ್ರಯ ಪಡೆದು ಬೆಳೆಯಲಿ ಎಂದು ಹಾರೈಸಿದರು. ಇಲ್ಲಿನ ಬಾಲಮಂದಿರದಲ್ಲಿ ಬೆಳೆದು ಸಮಾಜಕ್ಕೆ ಉತ್ತಮ ಮಾದರಿಗಳಾದ ಮಕ್ಕಳು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರನ್ನು ಈ ಸಂದರ್ಭ ದಲ್ಲಿ ಗುರುತಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಮತೆಯ ತೊಟ್ಟಿಲು ಕಾರ್ಯಕ್ರಮದ ಉದ್ದೇಶ, ಬಾಲಮಂದಿರ ದಲ್ಲಿ ಮಕ್ಕಳು ಸುರಕ್ಷಿತವಾಗಿ ಬೆಳೆಯುವ ರೀತಿಯನ್ನು ವಿವರಿಸಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೂಪಶ್ರೀ, ಮಕ್ಕಳ ರಕ್ಷಣಾಧಿಕಾರಿ ನಾಗೇಶ್ ಶಾನ್‌ಬಾಗ್, ಉಡುಪಿ ನಗರಸಭೆಯ ಸದಸ್ಯೆ ಜಾನಕಿ ಶೆಟ್ಟಿಗಾರ, ಬಿ.ಕೆ. ನಾರಾಯಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಬಾಲಕಿ ಸಫಿಯಾ ಬೇಗಂ ಉದ್ಘಾಟಿಸಿದರು. ಬಾಲಮಂದಿರದ ಅಧೀಕ್ಷಕಿ ಹುಲಿಗೆವ್ವ ಜೋಗರ್ ಸ್ವಾಗತಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)