varthabharthi

ರಾಷ್ಟ್ರೀಯ

‘ಟೈಮ್ಸ್ ನೌ’ ವಿರುದ್ಧ ಪಿಎಫ್‌ಐಯಿಂದ ಕ್ರಿಮಿನಲ್ ಮೊಕದ್ದಮೆ

ವಾರ್ತಾ ಭಾರತಿ : 14 Nov, 2017

ಹೊಸದಿಲ್ಲಿ, ನ.14: ಸಂಘಟನೆಯ ವಿರುದ್ಧ ಅವಮಾನಕಾರಿಯಾಗಿ ಸುದ್ದಿ ಪ್ರಕಟಿಸಿರುವ ಆರೋಪದಲ್ಲಿ ಟೈಮ್ಸ್ ನೌ ಸುದ್ದಿ ವಾಹಿನಿಯ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವು ಹೊಸದಿಲ್ಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ಟೈಮ್ಸ್ ನೌ ಚಾನೆಲ್‌ನಲ್ಲಿ 2017ರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 27ರಂದು ನಡೆದ ಚರ್ಚೆಯಲ್ಲಿ ಪಿಎಫ್‌ಐ ವಿರುದ್ಧ ಕೇಂದ್ರ ಗೃಹ ಸಚಿವಾಲಯದ ಅಧಿಕೃತ ರಹಸ್ಯ ದಾಖಲೆಗಳನ್ನು ಬಳಸಿಕೊಂಡು ಅವಮಾನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಿಎಫ್‌ಐ ವಿರುದ್ಧದ ಎನ್‌ಐಎ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳ ತನಿಖೆಗಳನ್ನು ಎದುರಿಸಲು ಮತ್ತು ಟೈಮ್ಸ್ ನೌ ಉಲ್ಲೇಖಿಸಿರುವ ಎಲ್ಲಾ ಸುಳ್ಳು ಆರೋಪಗಳಿಂದ ಮುಕ್ತರಾಗಲು ಕಾನೂನು ಹೋರಾಟ ನಡೆಸಲಾಗುವುದು ಎಂದು ದೂರುದಾರ, ಪಿಎಫ್‌ಐ ದಿಲ್ಲಿ ರಾಜ್ಯಾಧ್ಯಕ್ಷ ಮುಹಮ್ಮದ್ ಫರ್ವೆಝ್ ತಿಳಿಸಿದ್ದಾರೆ.

ಟೈಮ್ಸ್ ನೌ ಚಾನೆಲ್‌ನಲ್ಲಿ ಪ್ರಸಾರಗೊಂಡ ಚರ್ಚೆಯಲ್ಲಿ ಪ್ರದರ್ಶಿಸಿದ ಕಡತಗಳನ್ನು ಗಮನಿಸಿದಾಗ ಚಾನೆಲ್ ಗೃಹ ವ್ಯವಹಾರಗಳ ಸಚಿವಾಲಯದ ರಹಸ್ಯ ದಾಖಲೆಗಳನ್ನು ಕದ್ದು ಬಳಕೆ ಮಾಡಿರುವ ಅಥವಾ ಗೃಹ ಸಚಿವಾಲಯದ ಯಾರೋ ಟೈಮ್ಸ್ ನೌಗೆ ಸಚಿವಾಲಯದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ್ದಾರೆ ಎಂಬ ಶಂಕೆ ಮೂಡುತ್ತದೆ. ಈ ಎರಡೂ ಕೃತ್ಯವು ರಾಷ್ಟ್ರ ವಿರೋಧಿ ಚಟುವಟಿಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಟೈಮ್ಸ್ ನೌ ಸುದ್ದಿ ವಾಹಿನಿಯ ಹಿರಿಯ ಸಂಪಾದಕರಾದ ಅನಂದ್ ನರಸಿಂಹನ್, ರಾಹುಲ್ ಶಿವಶಂಕರ್, ನಿಕುಂಜ್ ಗಾರ್ಗ್ ವಿರುದ್ಧ ಮತ್ತು ದಾಖಲೆಗಳನ್ನು ಸೋರಿಕೆ ಮಾಡಿರುವ ಗೃಹ ಸಚಿವಾಲಯದ ಅಧಿಕಾರಿಗಳ ಹಾಗೂ ಅವರಿಗೆ ನೆರವು ನೀಡಿರುವ ಎಲ್ಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

 

Comments (Click here to Expand)