varthabharthi

ರಾಷ್ಟ್ರೀಯ

ಮೂತ್ರಬ್ಯಾಂಕ್ ಸ್ಥಾಪಿಸಿ,ಯೂರಿಯಾ ಉತ್ಪಾದಿಸಿ:ಗಡ್ಕರಿ

ವಾರ್ತಾ ಭಾರತಿ : 15 Nov, 2017

ನಾಗ್ಪುರ,ನ.14: ಪ್ರತಿಯೊಂದು ತಾಲೂಕು ಸ್ಥಳದಲ್ಲಿ ಮೂತ್ರಬ್ಯಾಂಕ್‌ಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಇದರಿಂದ ಯೂರಿಯಾವನ್ನು ಉತ್ಪಾದಿಸಿ, ಅದನ್ನು ರಸಗೊಬ್ಬರವನ್ನಾಗಿ ಬಳಸಲು ರೈತರಿಗೆ ವಿತರಿಸಬಹುದಾಗಿದೆ. ಇದು ಯೂರಿಯಾ ಆಮದನ್ನು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗುತ್ತದೆ ಎಂದು ಹೇಳಿದ್ದಾರೆ.

ಸೋಮವಾರ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು, ಈ ಪರಿಕಲ್ಪನೆ ಇನ್ನೂ ಅತ್ಯಂತ ಪ್ರಾಥಮಿಕ ಹಂತದಲ್ಲಿದೆಯಾದರೂ, ಕೆಲವು ಸ್ವೀಡಿಷ್ ವಿಜ್ಞಾನಿಗಳೊಂದಿಗೆ ಸೇರಿಕೊಂಡು ಇದನ್ನು ವಾಸ್ತವವಾಗಿಸಲು ತಾನು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.

‘‘ಮಾನವನ ಮೂತ್ರವು ಹೇರಳ ಸಾರಜನಕವನ್ನು ಒಳಗೊಂಡಿದೆ. ಆದರೆ ಇದು ವ್ಯರ್ಥವಾಗುತ್ತಿದೆ. ಕಸವನ್ನು ರಸವನ್ನಾಗಿಸುವದು ನನ್ನ ಹವ್ಯಾಸವಾಗಿರುವುದರಿಂದ ಈ ವಿಚಾರವನ್ನು ಪ್ರಯತ್ನಿಸುವಲ್ಲಿ ಯಾವುದೇ ಹಾನಿಯಿಲ್ಲ ಎಂದು ನಾನು ಭಾವಿಸಿದ್ದೇನೆ. ಈಗಾಗಲೇ ರಂಜಕ ಮತ್ತು ಪೊಟ್ಯಾಷಿಯಮ್‌ಗಳಿಗೆ ಜೈವಿಕ ಪರ್ಯಾಯಗಳನ್ನು ನಾವು ಹೊಂದಿದ್ದೇವೆ. ಸಾರಜನಕವನ್ನು ಸೇರಿಸಬಹುದಾದರೆ ಅದು ಸಸ್ಯಗಳಿಗೆ ಉತ್ತಮ ಗೊಬ್ಬರವಾಗುತ್ತದೆ ’’ಎಂದರು.

ರೈತರು 10 ಲೀ.ನ ಪ್ಲಾಸಿಕ್ ಕ್ಯಾನ್‌ಗಳಲ್ಲಿ ಮೂತ್ರವನ್ನು ಸಂಗ್ರಹಿಸಿ ತಾಲೂಕು ಕೇಂದ್ರಕ್ಕೆ ತರಬೇಕಾಗುತ್ತದೆ. ಸರಕಾರವು ಕ್ಯಾನ್‌ಗಳನ್ನು ಅವರಿಗೆ ಒದಗಿಸಬೇಕು ಮತ್ತು ಪ್ರತಿ ಲೀ.ಮೂತ್ರಕ್ಕೆ ಅವರಿಗೆ ಒಂದು ರೂ.ದೊರೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮೂತ್ರವು ಟಾಯ್ಲೆಟ್ ನೀರಿನೊಂದಿಗೆ ಸೇರಿ ದುರ್ಬಲಗೊಳ್ಳುವುದಿಲ್ಲ, ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಮೂತ್ರವನ್ನು ಕರಗಬಲ್ಲ ಜೈವಿಕ ರಸಗೊಬ್ಬರವನ್ನಾಗಿಸಲು ಅದನ್ನು ಸಂಸ್ಕರಿಸಿ ಶುದ್ಧಗೊಳಿಸಬಹುದಾಗಿದೆ ಎಂದು ಗಡ್ಕರಿ ಹೇಳಿದರಾದರೂ ಈ ಯೋಜನೆಯ ಆರ್ಥಿಕತೆ ಮತ್ತು ಸಾಧ್ಯಾಸಾಧ್ಯತೆಯ ಬಗ್ಗೆ ತನಗೆ ಖಚಿತವಿಲ್ಲ ಎಂದು ಒಪ್ಪಿಕೊಂಡರು. ಆರಂಭಿಕ ಪರೀಕ್ಷೆಗಳನ್ನು ನಾಗ್ಪುರ ಸಮೀಪದ ತನ್ನ ಸ್ವಗ್ರಾಮ ಧಾಪೆವಾಡಾ ಗ್ರಾಮದ ಪ್ರಯೋಗಶಾಲೆಯಲ್ಲಿ ನಡೆಸಲಾಗುವುದು ಎಂದರು.

 

Comments (Click here to Expand)