varthabharthi

ಕರಾವಳಿ

ವೈದ್ಯರು ಆತ್ಮಾವಲೋಕನ ಮಾಡಿಕೊಳ್ಳಲಿ

ವಾರ್ತಾ ಭಾರತಿ : 15 Nov, 2017
- ರಿಯಾಝ್ ಅಹ್ಮದ್, ರೋಣ

ಮಾನ್ಯರೆ,

ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ವೈದ್ಯರಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆಯಿಂದ ರೋಗಿಗಳು ಅಸಹಾಯಕರಾಗಿ ನರಳುವಂತಹ ಸ್ಥಿತಿ ನಿರ್ಮಾಣಗೊಂಡಿತು. ಇಷ್ಟೆ ಅಲ್ಲದೆ ಸರಿಯಾದ ಸಮಯಕ್ಕೆ ತುರ್ತು ಚಿಕಿತ್ಸೆ ಲಭಿಸದೆ ಮೂವರು ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಂತಹ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು ನಿಜಕ್ಕೂ ಬೇಸರದ ಸಂಗತಿ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರ ನಡುವೆ ಹಗ್ಗ ಜಗ್ಗಾಟದಿಂದಾಗಿ ಅಮಾಯಕ ಜನರು ಬಲಿಪಶುಗಳಾಗುತ್ತಿರುವುದಂತೂ ಸತ್ಯ. ವೈದ್ಯರು ತಮ್ಮದೇ ಆದಂತಹ ಕೊಡುಗೆ ಈ ಸಮಾಜಕ್ಕೆ ನೀಡಿದ್ದಾರೆ ಎಂಬ ಸತ್ಯವನ್ನು ಅಲ್ಲಗಳೆಯುವಂತಿಲ್ಲ, ಆದರೆ ಪ್ರತಿಭಟನೆಯ ಈ ಸಂದರ್ಭವನ್ನು ನೋಡಿದಾಗ ಇವರೆಲ್ಲ ಹಣದ ಹಿಂದೆ ಬಿದ್ದಿರುವುದು ಸರಿಯಲ್ಲ ಎನಿಸುತ್ತದೆ. ಒಂದಂತು ಸತ್ಯ ಸಾವನ್ನಪ್ಪಿದಂತಹ ರೋಗಿಗಳು ಮನುಷ್ಯರು, ದೇವರು ಒಂದು ವೇಳೆ ಪ್ರಾಣಿಗಳಿಗೆ ವಿವೇಚಿಸುವ ಬುದ್ಧಿ ನೀಡಿರುತ್ತಿದ್ದರೆ ಆ ಪ್ರಾಣಿಗಳ ಪೈಕಿ ಯಾವುದೂ ಇನ್ನೊಂದು ಪ್ರಾಣಿಯನ್ನು ರೋಗದಿಂದ ನರಳಿ ಸಾಯಲು ಬಿಡುತ್ತಿರಲಿಲ್ಲವೇನೊ. ಸಾವನ್ನಪ್ಪಿದಂತಹ ರೋಗಿಯು ಒಂದು ವೇಳೆ ವೈದ್ಯರ ತಂದೆ ತಾಯಿ ಮಡದಿ ಅಥವಾ ಮಕ್ಕಳಾಗಿರುತ್ತಿದ್ದರೇ ಆಗ ಅವರ ಕಾಳಜಿ ಹೇಗಿರುತ್ತಿತ್ತು.? ನಮ್ಮ ಸುತ್ತಮುತ್ತ ಬದುಕುತ್ತಿರುವಂತಹ ಎಲ್ಲಾ ವರ್ಗದ ಜನರು ನನ್ನವರು ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ ಮಾತ್ರ ಒಂದು ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ. ವೈದ್ಯರು ಈ ನಿಟ್ಟಿನಲ್ಲಿ ಆತ್ಮಾವಲೋಕನ ನಡೆಸಬೇಕು. 

 

Comments (Click here to Expand)