varthabharthi

ಕರ್ನಾಟಕ

ಪರಿಶಿಷ್ಟರ ಭಡ್ತಿ ಮೀಸಲಾತಿ ಮುಂದುವರಿಸಲು ಆಗ್ರಹಿಸಿ ಎಸ್ಸಿ-ಎಸ್ಟಿ ನೌಕರರ ರ‍್ಯಾಲಿ

ವಾರ್ತಾ ಭಾರತಿ : 15 Nov, 2017

ಬೆಳಗಾವಿ, ನ.14: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರ ಭಡ್ತಿ ಮೀಸಲಾತಿ ಮುಂದುವರೆಸುವ ಕರ್ನಾಟಕ ಮೀಸಲಾತಿ ವಿಧೇಯಕವನ್ನು ಸರ್ವಾಮತದಿಂದ ಅಂಗೀಕರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಮಂಗಳವಾರ ಇಲ್ಲಿನ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಉದ್ಯಾನವನದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಜಿ, ಚಿತ್ರದುರ್ಗ ಮುರುಘ ಮಠದ ಬಸವನಾಗಿ ದೇವ ಸ್ವಾಮಿ ನೇತೃತ್ವದಲ್ಲಿ ಸಮನ್ವಯ ಸಮಿತಿ ಕೇಂದ್ರ ಸಮಿತಿ ಹಾಗೂ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.  ಬಳಿಕ ಅಲ್ಲಿಂದ ರ್ಯಾಲಿ ಆರಂಭಿಸಿದ ನೂರಾರು ನೌಕರರು ಚೆನ್ನಮ್ಮ ವೃತ್ತದವರೆಗೂ ಬೃಹತ್ ರ್ಯಾಲಿ ನಡೆಸಿದರು.

ನಂತರ ಅಲ್ಲಿಂದ ಇಲ್ಲಿನ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಬಸ್ ಗಳಲ್ಲಿ ಆಗಮಿಸಿದ ಪರಿಶಿಷ್ಟ ನೌಕರರು ವಿಧಾನಸೌಧದ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಧರಣಿ ಸತ್ಯಾಗ್ರಹನಿರತರನ್ನು ಉದ್ದೇಶಿಸಿ ಮಾತನಾಡಿದ ಸಮನ್ವಯ ಸಮಿತಿ ಉಪಾಧ್ಯಕ್ಷ ಆರ್. ಮೋಹನ್, ಪರಿಶಿಷ್ಟ ನೌಕರರ ಹಿತರಕ್ಷಣೆ ದೃಷ್ಟಿಯಿಂದ ರಾಜ್ಯ ಸರಕಾರ ವಿಧಾನ ಮಂಡಲದಲ್ಲಿ ಭಡ್ತಿ ಮೀಸಲಾತಿ ವಿಧೇಯಕ ಮಂಡಿಸಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ನೌಕರರು ಯಾವುದೇ ವಿಶೇಷ ಮೀಸಲಾತಿ ಕೇಳುತ್ತಿಲ್ಲ, ಬದಲಿಗೆ ಸಂವಿಧಾನಾತ್ಮಕವಾಗಿ ಕಲ್ಪಿಸಿರುವ ಮೀಸಲಾತಿ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಪರಿಶಿಷ್ಟ ಭಡ್ತಿ ಮೀಸಲಾತಿ ವಿಧೇಯಕಕ್ಕೆ ಆಡಳಿತ- ವಿಪಕ್ಷ ಸದಸ್ಯರು ಸೇರಿದಂತೆ ಎಲ್ಲರೂ ಬೆಂಬಲಿಸಬೇಕು. ಆ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು.

ಧರಣಿಯಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿ, ಚಿತ್ರದುರ್ಗ ಮುರುಘ ಮಠದ ಬಸವನಾಗಿ ದೇವ ಸ್ವಾಮಿ,  ನೇತೃತ್ವದಲ್ಲಿ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಖಜಾಂಚಿ ಡಾ.ಎಸ್.ವಿಜಯಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಗೋಪಾಲ ಕೃಷ್ಣ, ಜಿಲ್ಲಾಧ್ಯಕ್ಷ ರಾಹುಲ್ ಮೈತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)