varthabharthi

ಸಂಪಾದಕೀಯ

ಬೆಳಗಾವಿ ಅಧಿವೇಶನದಲ್ಲಿ ಬೆಳಕಾಗಲಿ

ವಾರ್ತಾ ಭಾರತಿ : 15 Nov, 2017

ಕೋರಂ ಕೊರತೆಯೊಂದಿಗೇ ಬೆಳಗಾವಿ ಅಧಿವೇಶನ ಆರಂಭವಾಗಿದೆ. ಈ ನಾಡಿನ ಅಭಿವೃದ್ಧಿಯ ಕುರಿತಂತೆ ನಮ್ಮ ಜನಪ್ರತಿನಿಧಿಗಲು ಎಷ್ಟು ಕಾಳಜಿಯನ್ನು ಹೊಂದಿದ್ದಾರೆ ಎನ್ನುವುದರ ಸೂಚಕ ಇದು. ಹಾಗೆಂದು ಕೋರಂ ಹೊಂದಿರುವುದರಿಂದಷ್ಟೇ ಅಧಿವೇಶನ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದಿಲ್ಲ. ನೂರಕ್ಕೆ ನೂರರಷ್ಟು ಜನಪ್ರತಿನಿಧಿಗಳು ಕಲಾಪದಲ್ಲಿ ಭಾಗವಹಿಸಿದರಷ್ಟೇ ಅದನ್ನು ನಾವು ಯಶಸ್ವೀ ಅಧಿವೇಶನ ಎಂದು ಕರೆಯಬಹುದು. ಅಧಿವೇಶನದಲ್ಲಿ ಈ ನಾಡಿನ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಚರ್ಚೆಗಳು ನಡೆಯುತ್ತವೆ. ಒಬ್ಬ ಶಾಸಕ ಕಲಾಪದಲ್ಲಿ ಗೈರು ಹಾಜರಾದರೂ, ನಾಡಿನ ಒಂದು ಕ್ಷೇತ್ರ ಆ ಅಧಿವೇಶನದ ಪಾಲುದಾರಿಕೆಯನ್ನು ಪಡೆದುಕೊಳ್ಳುವುದಿಲ್ಲ. ಎಲ್ಲ ಶಾಸಕರು ಭಾಗವಹಿಸುವುದೆಂದರೆ, ನಾಡಿನ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಪಾಲುದಾರಿಕೆಯನ್ನು ಪಡೆದುಕೊಳ್ಳುವುದು ಎಂದರ್ಥ.

ಶಾಸಕ ಸ್ಥಾನ ಇರುವುದು, ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಮೋಜು ಮಸ್ತಿಯಲ್ಲಿ ಕಳೆಯುವುದಕ್ಕೆ ಅಲ್ಲ. ಇಷ್ಟಕ್ಕೂ ಅಧಿವೇಶನವೆನ್ನುವುದು ಪ್ರತೀ ದಿನ ನಡೆಯುವುದಿಲ್ಲ. ಒಬ್ಬ ಶಾಸಕನಾಗಿ ಅಧಿವೇಶನದಲ್ಲಿ ಭಾಗವಹಿಸುವುದು ಆತನ ಕರ್ತವ್ಯದ ಬಹುಮುಖ್ಯ ಭಾಗವಾಗಿದೆ. ಅಧಿವೇಶನದಲ್ಲಿ ಭಾಗವಹಿಸಿ ಅಭಿವೃದ್ಧಿಯ ಆಗು ಹೋಗುಗಳ ಚರ್ಚೆಯಲ್ಲೇ ಭಾಗವಹಿಸದ ಶಾಸಕ, ತನ್ನ ಕ್ಷೇತ್ರವನ್ನು ಹೇಗೆ ಮುನ್ನಡೆಸಬಲ್ಲ? ವಿಪರ್ಯಾಸವೆಂದರೆ, ಬರೇ ಭತ್ತೆಗಳನ್ನಷ್ಟೇ ಪಡೆಯುವುದಕ್ಕೆಂದು ಅಧಿವೇಶನಕ್ಕೆ ಬರುವ ಶಾಸಕರೂ ಇದ್ದಾರೆ. ಭತ್ತೆಗಳನ್ನೆಲ್ಲ ಪಡೆದು ಆ ಬಳಿಕ ಕಲಾಪದ ಕಡೆಗೆ ತಲೆ ಹಾಕದ ಜನಪ್ರತಿನಿಧಿಗಳೂ ಇದ್ದಾರೆ. ಯಾವುದೇ ಪೂರ್ವ ತಯಾರಿ ಇಲ್ಲದೆ, ಕಲಾಪಕ್ಕೆ ಹಾಜರಾದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾಗವಹಿಸಿ ಅಲ್ಲಿ ನಿದ್ದೆ ತೂಗುವ ಶಾಸಕರನ್ನೂ ನಾವು ನೋಡುತ್ತಿದ್ದೇವೆ. ಬಿಜೆಪಿಯ ಅಧಿಕಾರಾವಧಿಯಲ್ಲಿ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಬ್ಲೂಫಿಲಂಗಳನ್ನು ನೋಡುವ ಮೂಲಕ ಸಚಿವರು, ಶಾಸಕರು ಸದನದ ಘನತೆಯನ್ನು ನೆಲಸಮ ಮಾಡಿದ್ದರು. ಈಗಲೂ ಅಂತಹ ಶಾಸಕರು ತೆರೆಮರೆಯಲ್ಲಿ ಇದ್ದಾರೆ. ಮಾಧ್ಯಮಗಳ ಕಣ್ಣಿಗೆ ಬಿದ್ದಿಲ್ಲ ಎಂದಾಕ್ಷಣ ಅಂತಹ ಶಾಸಕರು ಇಲ್ಲ ಎಂದು ಅರ್ಥವಲ್ಲ.

ಇದೇ ಸಂದರ್ಭದಲ್ಲಿ ಕಲಾಪದಲ್ಲಿ ಹಾಜರಾಗಿರುವ ಬಿಜೆಪಿ ನಾಯಕರು, ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ಚರ್ಚಿಸುವಲ್ಲಿ ವಿಫಲರಾಗಿದ್ದಾರೆ. ಬದಲಿಗೆ, ಸಚಿವ ಜಾರ್ಜ್ ಅವರ ರಾಜೀನಾಮೆಯ ವಿಷಯವನ್ನು ಎತ್ತಿಕೊಂಡು ಸಮಯ ಕಳೆಯುತ್ತಿದ್ದಾರೆ. ಅಧಿವೇಶನದಲ್ಲಿ ಸರಕಾರವನ್ನು ಟೀಕಿಸಲು, ಪ್ರಶ್ನಿಸಲು ವಿಪಕ್ಷಗಳ ಕೈಯಲ್ಲಿ ಯಾವುದೇ ವಿಷಯಗಳಿಲ್ಲವೇ? ಎಂದು ನಾಡಿನ ಜನರು ಹುಬ್ಬೇರಿಸುವಂತಾಗಿದೆ. ಜಾರ್ಜ್ ರಾಜೀನಾಮೆ ಈ ನಾಡಿನ ಜನರ ಆಗ್ರಹವಲ್ಲ. ಅದರ ಅಗತ್ಯವಿರುವುದು ಬಿಜೆಪಿ ನಾಯಕರಿಗಷ್ಟೇ. ಇಂದು ರೈತರ ಸಮಸ್ಯೆಗಳು, ವೈದ್ಯರ ಸಮಸ್ಯೆಗಳು, ದಲಿತರ ಸಮಸ್ಯೆಗಳು ಕಣ್ಣಿಗೆ ರಾಚುವಂತೆ ಇರುವಾಗ, ಮಡಿಕೇರಿಯಲ್ಲಿ ನಡೆದಿರುವ ಒಬ್ಬ ಪೊಲೀಸ್ ಅಧಿಕಾರಿಯ ಆತ್ಮಹತ್ಯೆಯನ್ನು ಮತ್ತೆ ಮತ್ತೆ ಕೆದಕಿ, ಒಬ್ಬ ಸಚಿವನ ರಾಜೀನಾಮೆಗೆ ಒತ್ತಾಯಿಸುವುದು ಬಿಜೆಪಿ ನಾಯಕರ ಮುತ್ಸದ್ದಿರಹಿತ ರಾಜಕಾರಣವನ್ನು ಎತ್ತಿ ತೋರಿಸುತ್ತದೆ.

ಒಂದೆಡೆ ಕಲಾಪದಲ್ಲಿ ಹಾಜರಾಗದೆ ಅಧಿವೇಶನವನ್ನು ಶಾಸಕರು ವಿಫಲಗೊಳಿಸುತ್ತಿದ್ದರೆ, ಮಗದೊಂದೆಡೆ ತರ್ಕರಹಿತ ಬೇಡಿಕೆಗಳನ್ನು ಮುಂದಿಟ್ಟು ಸಭಾ ತ್ಯಾಗ ಮಾಡುತ್ತಾ ಅಧಿವೇಶನವನ್ನು ಕೆಲವರು ವಿಫಲಗೊಳಿಸುತ್ತಿದ್ದಾರೆ. ಪ್ರತಿದಿನ ಒಂದು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಡೆಯುವ ಈ ಅಧಿವೇಶನ ಪೋಲಾದಷ್ಟು ಅದರ ನಷ್ಟವನ್ನು ಶ್ರೀಸಾಮಾನ್ಯನೇ ಭರಿಸಬೇಕಾಗುತ್ತದೆ. ಆದುದರಿಂದಲೇ, ಅಧಿವೇಶನ ವಿಫಲಗೊಳಿಸಲು ಯತ್ನಿಸುವ ಎಲ್ಲ ಜನಪ್ರತಿಧಿಗಳು, ತಮ್ಮನ್ನು ಜನರು ಗಮನಿಸುತ್ತಿದ್ದಾರೆ ಎಂಬ ಎಚ್ಚರಿಕೆಯನ್ನು ಇಟ್ಟುಕೊಳ್ಳುವುದು ಅವರ ರಾಜಕೀಯ ಭವಿಷ್ಯಕ್ಕೆ ಒಳಿತು.

  ಇದೇ ಸಂದರ್ಭದಲ್ಲಿ ಅಧಿವೇಶನದ ಹೊತ್ತಿಗೆ ಎರಡು ವರ್ಗ ಸುವರ್ಣ ಸೌಧದ ಹೊರಗೆ ಪ್ರತಿಭಟನೆಗೆ ಇಳಿದಿವೆ. ಅದರಲ್ಲಿ ಒಂದು, ನಾಡಿನ ವೈದ್ಯರ ಪ್ರತಿಭಟನೆ. ಸರಕಾರ ಜಾರಿಗೆ ತರಲು ಹೊರಟಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ ಕಳೆದ ಕೆಲವು ತಿಂಗಳುಗಳಿಂದ ಚರ್ಚೆಯಲ್ಲಿದೆ. ಈ ವಿಧೇಯಕ ಸಣ್ಣ ಆಸ್ಪತ್ರೆಗಳನ್ನು ಶಾಶ್ವತವಾಗಿ ಮುಚ್ಚಿಸುತ್ತದೆ ಎನ್ನುವುದು ವೈದ್ಯರ ಆತಂಕ. ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಶೋಷಣೆಗಳಿಗೆ ಕಡಿವಾಣ ಹಾಕಲು ವಿಧೇಯಕ ತಿದ್ದುಪಡಿ ಅಗತ್ಯ ಎಂದು ಸರಕಾರ ಪಟ್ಟು ಹಿಡಿದಿದೆ. ಇದೀಗ ಅಧಿವೇಶನ ನಡೆಯುತ್ತಿರುವುದರಿಂದ ತಮ್ಮ ಪ್ರತಿಭಟನೆಯನ್ನು ವೈದ್ಯರು ತೀವ್ರಗೊಳಿಸಿದ್ದಾರೆ. ಖಾಸಗಿ ವೈದ್ಯರು ಸುವರ್ಣ ಸೌಧದ ಮುಂದೆ ನೆರೆದಿರುವುದರಿಂದ ಖಾಸಗಿ ಆಸ್ಪತ್ರೆಗಳು ಮುಚ್ಚಿವೆ. ಈ ಕಾರಣದಿಂದ ನಾಡಿನಲ್ಲಿ ಈಗಾಗಲೇ ಮೂರು ಸಾವುಗಳು ಸಂಭವಿಸಿವೆ. ಇದು ಆತಂಕಕಾರಿ ವಿಷಯವಾಗಿದೆ. ವೈದ್ಯರು ಎಂದರೆ ಶೋಷಕರು ಎನ್ನುವ ಮನೋವೃತ್ತಿ ಸಮಾಜದಲ್ಲಿದೆ. ಆದರೆ ಇದೇ ಸಂದರ್ಭದಲ್ಲಿ ಈ ವೈದ್ಯರಿಲ್ಲದೆ ಬದುಕುವುದೂ ಅಸಾಧ್ಯ ಎನ್ನುವಂತಹ ಸ್ಥಿತಿ ನಮ್ಮ ನಡುವೆ ಇದೆ.

ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಖಾಸಗಿ ಆಸ್ಪತ್ರೆಗಳು ನಿರ್ವಹಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನಾರ್ಹ. ಇಂತಹ ಸಣ್ಣ ಆಸ್ಪತ್ರೆಗಳು ರೋಗಿಗಳ ಜೊತೆಗೆ ನೇರ ಸಂಬಂಧಗಳನ್ನು ಇಟ್ಟುಕೊಳ್ಳುತ್ತದೆ. ಸರಕಾರದ ವಿಧೇಯಕ ಸಣ್ಣ ಆಸ್ಪತ್ರೆಗಳನ್ನಷ್ಟೇ ಗುರಿಯಾಗಿಸಿದೆಯಾದರೆ, ಆ ಬಗ್ಗೆ ಸಮಾಜವೂ ಗಂಭೀರವಾಗಿ ಯೋಚಿಸಬೇಕಾಗುತ್ತದೆ. ನಾಳೆ ಈ ವಿಧೇಯಕ ಜಾರಿಗೊಂಡರೆ ವೈದ್ಯರು ಆಸ್ಪತ್ರೆಯನ್ನು ನಿಭಾಯಿಸದೇ ಇರುವಂತಹ ಸನ್ನಿವೇಶ ನಿರ್ಮಾಣವಾಗಬಾರದು. ಸಣ್ಣ ಆಸ್ಪತ್ರೆಗಳ ಬಹುಮುಖ್ಯ ಆರೋಪವೆಂದರೆ, ಕಾರ್ಪೊರೇಟ್ ಆಸ್ಪತ್ರೆಗಳನ್ನು ಬೆಳೆಸುವುದಕ್ಕಾಗಿ ಸಣ್ಣ ಆಸ್ಪತ್ರೆಗಳ ಕೈಕಾಲುಗಳನ್ನು ಕಟ್ಟಿ ಹಾಕಲು ಸರಕಾರ ಹವಣಿಸುತ್ತಿದೆ ಎನ್ನುವುದು. ಇದು ಸತ್ಯವೇ ಆಗಿದ್ದರೆ ಸಮಾಜವೂ ಈ ಬಗ್ಗೆ ಜಾಗೃತವಾಗಬೇಕಾಗಿದೆ. ಹೇಗೆ, ಸಣ್ಣ ಸಣ್ಣ ಅಂಗಡಿಗಳನ್ನು ಮುಗಿಸಿ, ಅವುಗಳ ಗೋರಿಗಳ ಮೇಲೆ ಮಾಲ್‌ಗಳು ತಲೆಯೆತ್ತುತ್ತಿವೆಯೋ ಹಾಗೆಯೇ ಸಣ್ಣ ಆಸ್ಪತ್ರೆಗಳನ್ನು ಕಾರ್ಪೊರೇಟ್ ಆಸ್ಪತ್ರೆಗಳು ಆಪೋಷನ ತೆಗೆದುಕೊಳ್ಳುವಂತಾಗಬಾರದು. ಈ ಕಾರಣದಿಂದ ವೈದ್ಯರ ಜೊತೆಗೆ ಮಾತುಕತೆ ನಡೆಸಬೇಕು ಮತ್ತು ಅವರ ಆತಂಕಗಳನ್ನು ಪರಿಹರಿಸಿದ ಬಳಿಕವೇ ವಿಧೇಯಕವನ್ನು ಜಾರಿಗೊಳಿಸಬೇಕು.

ಇದೇ ಸಂದರ್ಭದಲ್ಲಿ, ಜನ ಸಾಮಾನ್ಯರನ್ನು ಒತ್ತೆಯಾಳುಗಳಾಗಿಸಿಕೊಂಡು ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು. ವೈದ್ಯರ ಮುಷ್ಕರ ಒಂದೆಡೆ ನಡೆಯುತ್ತಿದ್ದರೆ, ಭಡ್ತಿ ಮೀಸಲಾತಿ ಮುಂದುವರಿಸಲು ದಲಿತ ನೌಕರರು ಅಧಿವೇಶನದ ಹೊರಗೆ ರ್ಯಾಲಿ ನಡೆಸಿದ್ದಾರೆ. ಇದೂ ಗಂಭೀರ ವಿಷಯವಾಗಿದೆ. ದಲಿತರ ಪರವಾಗಿ ಮಾತನಾಡುವ ಸಿದ್ದರಾಮಯ್ಯ ಮತ್ತು ಬಿಜೆಪಿ ಮುಖಂಡರು ದಲಿತರ ಭಡ್ತಿ ಮೀಸಲಾತಿಯ ವಿಷಯದಲ್ಲಿ ಒಂದಾಗಿ ತೀರ್ಮಾನವನ್ನು ತೆಗೆದುಕೊಳ್ಳಬೇಕು. ಜಾರ್ಜ್ ರಾಜೀನಾಮೆಯನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸುತ್ತಾ ಸಮಯ ಕಳೆಯುವ ಬದಲು ಮೌಢ್ಯ ಪ್ರತಿಬಂಧಕ ವಿಧೇಯಕ ಮತ್ತು ಭಡ್ತಿ ಮೀಸಲಾತಿ ಪರವಾಗಿರುವ ವಿಧೇಯಕ ಜಾರಿಗೊಳಿಸುವ ಕುರಿತಂತೆ ವಿರೋಧ ಪಕ್ಷಗಳು ತಮ್ಮ ಒತ್ತಡವನ್ನು ಹೇರಬೇಕು. ಈ ಮೂಲಕ ಅಧಿವೇಶನಕ್ಕಾಗಿ ವ್ಯಯಿಸುವ ಸಮಯ ಮತ್ತು ಹಣವನ್ನು ಸಾರ್ಥಕವಾಗಿಸಬೇಕು. ತಮ್ಮನ್ನು ಆರಿಸಿ ಕಳುಹಿಸಿದ ಮತದಾರರ ಋಣವನ್ನು ತೀರಿಸುವ ದಾರಿ ನಮ್ಮ ಶಾಸಕರಿಗೆ ಇದೊಂದೇ ಆಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)