varthabharthi

ಬೆಂಗಳೂರು

ಜೀವ ಬಲಿ ಪಡೆದ ವೈದ್ಯರ ಮುಷ್ಕರ: 2 ದಿನಗಳಲ್ಲಿ 7 ಮಂದಿ ಮೃತ್ಯು

ವಾರ್ತಾ ಭಾರತಿ : 15 Nov, 2017

ಬೆಂಗಳೂರು, ನ.14: ರಾಜ್ಯ ಸರಕಾರದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನಡೆಸಿರುವ ಮುಷ್ಕರ ಎರಡನೇ ದಿನಕ್ಕೆ ತಲುಪಿರುವಂತೆಯೇ, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಮಂಗಳವಾರ ಮೂವರು ಮಕ್ಕಳು ಸಹಿತ ಕಳೆದ 48 ತಾಸುಗಳಲ್ಲಿ ರಾಜ್ಯದ ವಿವಿಧೆಡೆ ಕನಿಷ್ಠ ಏಳು ಮಂದಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ಯಾನಪ್ಪ ಬದ್ನಾಳ್(56) ಹೃದಯಾಘಾತಕ್ಕೀಡಾಗಿದ್ದು, ತಕ್ಷಣವೇ ಗಂಗಾವತಿಗೆ ಕರೆದುಕೊಂಡು ಬರಲಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಮುಷ್ಕರವಿದ್ದುದರಿಂದ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಭಾರೀ ರಶ್ ಇದ್ದುದರಿಂದ ಸಮರ್ಪಕ ಚಿಕಿತ್ಸೆ ದೊರೆಯದೆ ಅವರು ಮೃತಪಟ್ಟಿದ್ದಾರೆ.

ಹಾಸನದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮೂರು ತಿಂಗಳ ಗಂಡುಮಗು ಇಬ್ರಾಹೀಂ, ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ದೊರೆಯದಿದ್ದುದರಿಂದ ಕೊನೆಯುಸಿರೆಳೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಎಪಿಎಂಸಿ ವ್ಯಾಪಾರಿ ಶೇಖಪ್ಪ ಗ್ಯಾನಪ್ಪ ಜಕ್ಕಳಿ (60) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ 12 ವರ್ಷದ ಬಾಲಕಿ ಕಲ್ಲವ್ವ ಶ್ರೀಶೈಲ ಅಂಬಿ, ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಳು. ಮಧುಮೇಹ ರೋಗಿಯಾಗಿದ್ದ ಆಕೆಗೆ ಮುಷ್ಕರದ ಹಿನ್ನೆಲೆಯಲ್ಲಿ ವೈದ್ಯರ ಚಿಕಿತ್ಸೆ ದೊರೆಯದಿದ್ದುದರಿಂದ ಅಸುನೀಗಿದ್ದಾಳೆ.

ಹುಬ್ಬಳ್ಳಿಯಲ್ಲಿ ಡೆಂಗ್ ಜ್ವರದಿಂದ ಪೀಡಿತಳಾಗಿದ್ದ 9 ವರ್ಷದ ಬಾಲಕಿ ವೈಷ್ಣವಿ ಜಾಧವ್ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಷ್ಟು ಹೊತ್ತಿಗೆ ಬಾಲಕಿಯ ಪರಿಸ್ಥಿತಿ ವಿಷಮಾವಸ್ಥೆಗೆ ತಲುಪಿ ಆಕೆ ಕೊನೆಯುಸಿರೆಳೆದಳೆಂದು ವರದಿಗಳು ತಿಳಿಸಿವೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ 25 ವರ್ಷದ ಯುವಕ ಮಹೇಶ್ ವಾಗ್ಮೋರ್ ಸಾವನ್ನಪ್ಪಿದರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಅಸುನೀಗಿದ್ದಾರೆ.

 

Comments (Click here to Expand)