varthabharthi

ರಾಷ್ಟ್ರೀಯ

-ಮೋದಿಗೆ ಚಿದಂಬರಂ ತರಾಟೆ

"ಪ್ರಧಾನಿಯವರೇ, ಉದ್ಯೋಗ ಭರವಸೆ ಏನಾಯಿತು?''

ವಾರ್ತಾ ಭಾರತಿ : 15 Nov, 2017

ಹೊಸದಿಲ್ಲಿ, ನ.15: ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ನೀಡಿದ್ದ ಉದ್ಯೋಗ ಸೃಷ್ಟಿಯ ಭರವಸೆ ಏನಾಯಿತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಗುಜರಾತ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಅನುಷ್ಠಾನದಲ್ಲಿ ಸರ್ಕಾರ ಎಡವಿದೆ ಎಂದು ಅಭಿಪ್ರಾಯಪಟ್ಟರು.

ಎರಡೂ ಕ್ರಮಗಳು ದೇಶವನ್ನು ಆರ್ಥಿಕ ಹಿಂಜರಿತದ ಸ್ಥಿತಿಗೆ ಕೊಂಡೊಯ್ದಿವೆ. ನೋಟು ರದ್ದತಿ ಭಾರತೀಯ ಆರ್ಥಿಕತೆಗೆ ದೊಡ್ಡ ಹೊಡೆತವಾಗಿದ್ದು, ಜನಸಾಮಾನ್ಯರ ಭವಿಷ್ಯದ ಜತೆ ಸರ್ಕಾರ ಚೆಲ್ಲಾಟವಾಡಿದೆ ಎಂದು ದೂರಿದರು.

"ಕಪ್ಪು ಹಣ, ನಕಲಿನೋಟು ಅಥವಾ ಭ್ರಷ್ಟಾಚಾರವನ್ನು ತೊಡೆದುಹಾಕುವುದು ನೋಟು ರದ್ದತಿಯಿಂದ ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಈ ಯಾವ ಗುರಿಯನ್ನು ಕೂಡಾ ಸಾಧಿಸುವುದು ಸಾಧ್ಯವಾಗಿಲ್ಲ ಎಂದರು.

500 ಹಾಗೂ 1000 ರೂಪಾಯಿಯ ನೋಟುಗಳ ಚಲಾವಣೆಯನ್ನು ಸರ್ಕಾರ 2016ರ ನವೆಂಬರ್ 8ರಂದು ರದ್ದುಪಡಿಸಿದ ಬಳಿಕ, 15 ಕೋಟಿ ದಿನಗೂಲಿ ನೌಕರರು ಹಲವು ದಿನಗಳ ಕಾಲ ಉಪವಾಸ ಬೀಳಬೇಕಾಯಿತು. ಶೇಕಡ 40ರಷ್ಟು ಎಟಿಎಂಗಳು ಸ್ಥಗಿತವಾದವು ಎಂದು ವಿವರಿಸಿದರು.

ಜಿಎಸ್‌ಟಿ ಬಗ್ಗೆಯೂ ಸರ್ಕಾರದ ಮೇಲೆ ಹರಿಹಾಯ್ದ ಅವರು, "ಗುಜರಾತ್ ವಿಧಾನಸಭಾ ಚುನಾವಣೆಗೆ ನಾನು ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಇದರಿಂದಾಗಿ ಕೇಂದ್ರ ಸಕಾರ ನಾಲ್ಕನೇ ಮೂರರಷ್ಟು ಸರಕುಗಳ ಜಿಎಸ್‌ಟಿ ದರವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಹಿಮಾಚಲ ಪ್ರದೇಶ ಚುನಾವಣೆಗೆ ಇದನ್ನು ಮಾಡಲಿಲ್ಲ. ಏಕೆಂದರೆ ಗುಜರಾತ್ ಚುನಾವಣೆ ಅವರಿಗೆ ಮುಖ್ಯ" ಎಂದು ಲೇವಡಿ ಮಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)