varthabharthi

ರಾಷ್ಟ್ರೀಯ

​ದೇಶದಲ್ಲಿ ಅತಿದೊಡ್ಡ 'ಹಂತಕ' ಯಾರು ಗೊತ್ತೇ?

ವಾರ್ತಾ ಭಾರತಿ : 15 Nov, 2017

ಹೊಸದಿಲ್ಲಿ, ನ.15: ಹಿಂದುಳಿದ ರಾಜ್ಯಗಳು ಸೇರಿದಂತೆ ಭಾರತದ ಪ್ರತೀ ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಕ್ಷಯ ಹಾಗೂ ಅತಿಸಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜೀವನಶೈಲಿ ರೋಗಗಳಾದ ಹೃದಯಾಘಾತ ಹಾಗೂ ತೀವ್ರ ಉಸಿರಾಟದ ತೊಂದರೆಯಂಥ ಸಮಸ್ಯೆಗಳು ಜನರ ಸಾವಿಗೆ ಕಾರಣವಾಗುತ್ತಿವೆ.

ಮಂಗಳವಾರ ಬಿಡುಗಡೆಯಾದ ಭಾರತದ ರಾಜ್ಯಮಟ್ಟದ ರೋಗ ಹೊರೆ ಯೋಜನೆಯ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ. ಹೀಗೆ ಎಲ್ಲ ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗಗಳಿಂದ ಜೀವನಶೈಲಿ ರೋಗಗಳು ಪ್ರಮುಖವಾಗುತ್ತಿದ್ದು, ಕೆಲ ರಾಜ್ಯಗಳಲ್ಲಿ 1986ರ ವೇಳೆಗೆ ಈ ವರ್ಗಾವಣೆಯಾಗಿದ್ದರೆ, ಕೆಲ ರಾಜ್ಯಗಳಲ್ಲಿ ತೀರಾ ಇತ್ತೀಚೆಗೆ ಅಂದರೆ 2010ರಲ್ಲಿ ಈ ಬದಲಾವಣೆ ಸಂಭವಿಸಿದೆ ಎಂದು ವರದಿ ವಿವರಿಸಿದೆ.

ಮಕ್ಕಳ ಮತ್ತು ಮಹಿಳೆಯರ ಅಪೌಷ್ಟಿಕತೆಯಿಂದಾಗುವ ರೋಗದ ಹೊರೆ 1990ರ ದಶಕದಿಂದೀಚೆಗೆ ಇಳಿಮುಖವಾಗಿದ್ದರೂ, ಪ್ರಸ್ತುತ ಕೂಡಾ ಶೇಕಡ 15ರಷ್ಟು ರೋಗದ ಹೊರೆಗೆ ಇದು ಕಾರಣವಾಗುತ್ತಿದೆ ಎಂದು ವರದಿ ಹೇಳಿದೆ. ಈ ಪ್ರಮಾಣ ಚೀನಾಕ್ಕಿಂತ 12 ಪಟ್ಟು ಭಾರತದಲ್ಲಿ ಅಧಿಕವಾಗಿದೆ. ಇಂಥ ಅಪಾಯ ಸಾಧ್ಯತೆ ಕೇರಳದಲ್ಲಿ ಕಡಿಮೆ. ಆದರೆ ಇದು ಕೂಡಾ ಚೀನಾದ 2.7 ಪಟ್ಟು ಇದೆ. 2016ರಲ್ಲಿ ಭಾರತದಲ್ಲಿ ಅತಿಹೆಚ್ಚು ಜನರ ಸಾವಿಗೆ ಕಾರಣವಾಗಿರುವುದು ತೀವ್ರ ಹೃದಯಾಘಾತ. ಹೃದಯಾಘಾತದಿಂದಾದ ಸಾವು, ಎರಡನೇ ಸ್ಥಾನದಲ್ಲಿರುವ ಮತ್ತೊಂದು ಪ್ರಮುಖ ಸಾವಿನ ಕಾರಣಕ್ಕಿಂತ ದುಪ್ಪಟ್ಟು ಆಗಿದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುವವರ ಪ್ರಮಾಣ ಒಟ್ಟು ಸಾವಿನ ಶೇಕಡ 28 ಆಗಿದ್ದು, ಅತಿಸಾರದಿಂದ ಶೇಕಡ 15.5 ಮಂದಿ, ತೀವ್ರ ಉಸಿರಾಟದ ರೋಗದಿಂದ 10.9 ಶೇಕಡ ಮಂದಿ, ಗಾಯ ಹಾಗೂ ಕ್ಯಾನ್ಸರ್‌ನಿಂದ ಕ್ರಮವಾಗಿ ಶೇಕಡ 10.7 ಹಾಗೂ 8.3ರಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ.

ಭಾರತದಲ್ಲಿ ಸಾವಿಗೆ ಕಾರಣವಾಗುವ 10 ಸಾಂಕ್ರಾಮಿಕ ರೋಗವಲ್ಲದ ಜೀವನಶೈಲಿ ರೋಗಗಳಲ್ಲಿ ಕ್ರಾನಿಕ್ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಓಪಿಡಿ), ಪಾರ್ಶ್ವವಾಯು, ಮಧುಮೇಹ, ತೀವ್ರ ಮೂತ್ರಕೋಶ ರೋಗದ ಸಮಸ್ಯೆಗಳು ಸೇರುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)