varthabharthi

ಅನುಗಾಲ

ನಹಿ (ಅ)ಜ್ಞಾನೇನ ಸದೃಶ್ಯಂ!

ವಾರ್ತಾ ಭಾರತಿ : 16 Nov, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಎರಡು ಉತ್ತಮ ಸಿನೆಮಾಗಳನ್ನು ಆಡಳಿತಯಂತ್ರದ ದುರುಪಯೋಗದಿಂದಾಗಿ ಕೈಬಿಟ್ಟ ಪ್ರಸಂಗವು ಪ್ರಜ್ಞಾವಂತರನ್ನು ಆತಂಕಕ್ಕೀಡು ಮಾಡಬಾರದು; ಬದಲಿಗೆ ಇನ್ನೂ ಇಂತಹ ಪ್ರಸಂಗಗಳು ಎದುರಾಗಬಹುದು ಎಂಬ ಸಂಶಯದಿಂದಲೇ ಈಗ ಕವಿದ ಮೋಡವನ್ನು ಸರಿಸುವ ಪ್ರಯತ್ನಗಳನ್ನು ಇನ್ನಷ್ಟು ಹರಿತಗೊಳಿಸಬೇಕು.


ನವೆಂಬರ್ 20ರಿಂದ ಗೋವಾದಲ್ಲಿ ಭಾರತದ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನಡೆಯಲಿದೆ. ಇದೇನೂ ಹೊಸದಲ್ಲ. ಇದಕ್ಕೆ ಅಂಟಿಕೊಂಡಂತಿರುವ ವಿವಾದಗಳೂ ಹೊಸದಲ್ಲ. ಇಲ್ಲಿ ಭಾರತೀಯ ಪನೋರಮಾಕ್ಕೆ ಸಿನೆಮಾಗಳನ್ನು ಆಯ್ಕೆಮಾಡಲು ಹದಿಮೂರು ಪರಿಣತರ ಸಮಿತಿಯಿದೆ. ಸುಜೊಯ್ ಘೋಷ್ ಎಂಬ ಖ್ಯಾತ ಬಂಗಾಳಿ ಚಿತ್ರ ನಿರ್ದೇಶಕರು ಈ ಜ್ಯೂರಿಗಳ ಅಧ್ಯಕ್ಷರು. ಅವರು ಆಯ್ಕೆ ಮಾಡಿದ ಚಲನಚಿತ್ರಗಳಲ್ಲಿ ಸನಲ್ ಕುಮಾರ್ ಶಶಿಧರನ್ ಅವರ ಮಲೆಯಾಳಿ ಚಲನಚಿತ್ರ ‘ಎಸ್ ದುರ್ಗಾ’ ಮತ್ತು ರವಿ ಜಾಧವ್ ಅವರ ಮರಾಠಿ ಚಲನ ಚಿತ್ರ ‘ನ್ಯೂಡ್’ ಸೇರಿವೆ. ನಾನವನ್ನು ನೋಡಿಲ್ಲ. ಆದರೆ ಕಲಾತ್ಮಕ ವೆನ್ನಬಹುದಾದ ಈ ಚಲನ ಚಿತ್ರಗಳನ್ನು ಪ್ರಾತಿನಿಧಿಕವಾಗಿ ಆಯ್ಕೆ ಮಾಡಿದ್ದರಿಂದ ಮತ್ತು ಅವು ಈಗಾಗಲೇ ಹಲವಾರು ವೇದಿಕೆಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿರುವುದರಿಂದ ಹಾಗೂ ಅವನ್ನು ಆಯ್ಕೆ ಮಾಡಿದವರು ಈಗಾಗಲೇ ಚಲನಚಿತ್ರ ಕ್ಷೇತ್ರದಲ್ಲಿ ಸಾಕಷ್ಟು ನುರಿತವರಾದ್ದರಿಂದ ಅವು ನಿಜಕ್ಕೂ ಉತ್ತಮವೇ ಇರಬೇಕೆಂದು ಊಹಿಸಬಹುದು. ಅಷ್ಟೇ ಅಲ್ಲ ಅವು ಈಗಾಗಲೇ ಚಲನಚಿತ್ರ ಸೆನ್ಸಾರ್ ಮಂಡಳಿಯಿಂದ ಅನಮೋದಿಸಲ್ಪಟ್ಟವುಗಳಾಗಿರುವುದ ರಿಂದ ಅವುಗಳಿಗೆ ಶಾಸನಾತ್ಮಕವಾಗಿಯೂ ಅರ್ಹತೆಯಿದೆ.

 ಆದರೆ ಇದ್ದಕ್ಕಿದ್ದಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಈ ಎರಡು ಚಿತ್ರಗಳನ್ನು ಪ್ರದರ್ಶನವಾಗುವ ಚಲನ ಚಿತ್ರಗಳ ಪಟ್ಟಿಯಿಂದ ಏಕಾಏಕಿ ಕೈಬಿಟ್ಟಿದೆ. ಕಾರಣಗಳೇನೂ ಬಹಿರಂಗವಾಗಿಲ್ಲ. ಆದರೆ ಈ ನಿರ್ಧಾರವನ್ನು ಪ್ರತಿಭಟಿಸಿ ಜ್ಯೂರಿ ಅಧ್ಯಕ್ಷ ಸುಜೊಯ್ ಘೋಷ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ತಮ್ಮ ನಿರ್ಧಾರದೊಂದಿಗೆ ಅವರು ಇನ್ನೇನೂ ಹೇಳಲಿಚ್ಛಿಸದಿರುವುದು ಪ್ರತಿಭಟನೆಯಲ್ಲೂ ಅವರ ಕಲಾತ್ಮಕತೆಯನ್ನು ಸಂಕೇತಿಸಿದೆ. ಮೌನವೇ ಅನೇಕ ಬಾರಿ ಮಾತಿಗಿಂತ ಶಕ್ತ. ಪರಿಣತರನ್ನು ಮೀರಿದ ಪರಿಣತರು ಸರಕಾರದಲ್ಲಿದ್ದಾರೆಂಬ ಬಗ್ಗೆ ಪುರಾವೆಯಿಲ್ಲ. ರಾಜಕೀಯ ನಾಯಕರು ಜ್ಞಾನಿಗಳು ಎಂದೇನೂ ಇಲ್ಲ. ಪ್ರಾಯಃ ಅತೀ ಹೆಚ್ಚು ಜನರನ್ನು ಮರುಳುಗೊಳಿಸುವವರಿಗೆ ರಾಜಕೀಯದಲ್ಲಿ ಹೆಚ್ಚು ಅವಕಾಶವಿದೆ. ಅದಲ್ಲದಿದ್ದರೆ ರಾಜಕೀಯ ಪಕ್ಷದ ಮುಂಚೂಣಿಯ ನಾಯಕರ ಕೃಪಾಕಟಾಕ್ಷದಲ್ಲಿರುವವರಿಗೆ ಚುನಾಯಿತ ಅಥವಾ ಚುನಾಯಿತವಲ್ಲದ ಒಂದಲ್ಲ ಒಂದು ಅಧಿಕಾರಭಾಗ್ಯ ದೊರಕುತ್ತದೆ.

ಎಂದಿಗೂ ನೇರ ಚುನಾವಣೆಗಳಲ್ಲಿ ನಿಲ್ಲದೆ ಜನರ ಮನ್ನಣೆಯನ್ನು ಪಡೆಯದೆಯೂ ರಾಜಕೀಯ ಅಧಿಕಾರವನ್ನು ಪಡೆದವರಿದ್ದಾರೆ. ಪ್ರಜಾತಂತ್ರವು ಅಂತಹ ಹಿಂಬಾಗಿಲ ಸವಾರಿಗೆ ಅವಕಾಶಕೊಟ್ಟಿದೆ. ಇಂತಹವರ ಪೈಕಿ ಒಳ್ಳೆಯವರೂ ಸಮರ್ಥರೂ ಇಲ್ಲವೆಂದಲ್ಲ. ಪ್ರಜಾತಂತ್ರದ ವ್ಯಂಗ್ಯವೆಂದರೆ ಅನೇಕ ಅರ್ಹರಿಗೆ ಜನಬೆಂಬಲವಿರುವುದಿಲ್ಲ. ಉದಾಹರಣೆಗೆ ವಿಜ್ಞಾನಿಗಳು, ಕಲಾವಿದರು ಇವರೆಲ್ಲ ಪ್ರಜ್ಞಾವಂತ ರಾಜಕಾರಣಿಗಳ ಬೆಂಬಲದಿಂದ ನಾಮಕರಣಗೊಂಡು ಇಲ್ಲವೇ ಪರೋಕ್ಷ ಆಯ್ಕೆಯ ವಿಧಾನದಲ್ಲಿ ಆಯ್ಕೆಗೊಂಡು ಆಡಳಿತದಲ್ಲಿ ಭಾಗಿಯಾಗಬೇಕೇ ವಿನಾ ಬೇರೆ ಹಾದಿಗಳಿಲ್ಲ. ಈಚೀಚೆಗೆ, ಕಲೆ, ಜ್ಞಾನ ಇವುಗಳಿಗಿಂತಲೂ ಹೆಚ್ಚಾಗಿ ಟಿಆರ್‌ಎಫ್ ಮಾದರಿಯ ಜನಪ್ರಿಯತೆಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ನೇರ ಚುನಾವಣೆಯಲ್ಲೂ ಸಿನೆಮಾ ತಾರೆಯರು ಬಹುಸಂಖ್ಯೆಯಲ್ಲಿ ಪಕ್ಷ ರಾಜಕೀಯದ ಮುಖವಾಣಿಗಳಾಗಿ ಆಯ್ಕೆಯಾಗುತ್ತಾರೆ. ಕೆಲವರನ್ನು ಹೊರತುಪಡಿಸಿದರೆ ಅವರಿಂದ ದೇಶಕ್ಕೆ, ಸಂಸತ್ತು/ಶಾಸಕಾಂಗಕ್ಕೆ ಎಷ್ಟು ಪ್ರಯೋಜನವೋ ಹೇಳುವಂತಿಲ್ಲ. ರಾಜ್ಯಸಭೆಗೆ ಆಯ್ಕೆಯಾದ ಸಚಿನ್ ತೆಂಡುಲ್ಕರ್, ರೇಖಾ ಮುಂತಾದವರು ಸಂಸತ್ತಿಗೆ ಎಂತಹ ಮೆರುಗು ತಂದರೋ ದೇವರಿಗೂ ಗೊತ್ತಿರಲಿಕ್ಕಿಲ್ಲ. ಇವರಿಗೆ ನೀಡಿದ ಸ್ಥಾನಗಳು ಸಾಂಕೇತಿಕ ಎಂಬಲ್ಲಿಗೆ ಪ್ರಜೆಗಳು ತೃಪ್ತಿಪಟ್ಟುಕೊಳ್ಳಬೇಕು.

ಯಾವುದೋ ಒಂದು ಸಾತ್ವಿಕ ಚರಿತ್ರೆಯಲ್ಲಿ ಅರಸನಾದವನು ವಿವೇಕಿಯಾಗಿದ್ದ ಅಥವಾ ವಿವೇಕಿಯಾಗಿರಬೇಕೆಂಬ ಶಾಸನವಿತ್ತು. ಕವಿಗಳು, ಪಂಡಿತರು ರಾಜನನ್ನು ಹಾಡಿ ಹೊಗಳುವಾಗ ಅದು ಪ್ರಜಾ ಪರಿಪಾಲನೆಯಲ್ಲಿ ಅರಸನ ಕೈಗಳನ್ನು ಬಲಪಡಿಸುವ ಉದ್ದೇಶದಿಂದಲೇ ಆಗಿತ್ತು. ಪಂಪನ ಅರಿಕೇಸರಿ ಅಮರನಾಗಿ ಉಳಿಯಬೇಕಾದರೆ ಅದು ಕೆಡುಕುಗಳನ್ನು ಹೊಂದಿರದ ಮತ್ತು ಪ್ರತಿಭೆ-ಪಾಂಡಿತ್ಯಗಳನ್ನು ಪೋಷಿಸುವ, ಆತನ ವ್ಯಕ್ತಿತ್ವದಿಂದಲೇ ಹೊರತು ಶಸ್ತ್ರಶಕ್ತಿಸಂಪನ್ನನೆಂಬ ಕಾರಣದಿಂದಲ್ಲ. ವಿಜಯನಗರದ ಇತಿಹಾಸವನ್ನು ನೋಡಿದರೂ ಅಲ್ಲಿದ್ದ ಕುಶಾಗ್ರಮತಿಗಳು ಪೋಷಿಸಲ್ಪಟ್ಟರೆಂಬುದನ್ನು ಕಾಣುತ್ತೇವೆ. ರಾಜಾಶ್ರಯ, ರಾಜಾತಿಥ್ಯ ಇವು ಯೋಗ್ಯತೆಯ ಮೇಲೆ ನಿರ್ಧರಿತವಾಗುತ್ತಿದ್ದವು. ಚಾಣಕ್ಯನಾಗಲೀ ವಿದ್ಯಾರಣ್ಯ ರಾಗಲೀ ಮನಸ್ಸು ಮಾಡಿದ್ದರೆ ಸಿಂಹಾಸನವನ್ನೇರಬಹುದಿತ್ತೇನೋ? ಆದರೆ ಹಾಗಾಗಲಿಲ್ಲ. ಏಕೆಂದರೆ ಅವರ ಬದುಕಿನ ಉದ್ದೇಶ ಬೇರೆಯೇ ಇತ್ತು. ಅದು ಸಮರ್ಥನಾದ ವ್ಯಕ್ತಿಗಳ ಆಳ್ವಿಕೆಯಿಂದ ರಾಜ್ಯ/ದೇಶಕ್ಕೆ ಸುಭಿಕ್ಷೆಯನ್ನು ತರುವುದಾಗಿತ್ತು. ಪ್ರಾಯಃ ಅದು ಕಲೆ ಮತ್ತು ರಾಜಕಾರಣ ಪರಸ್ಪರ ದೂರವಿದ್ದ ಕಾಲವಾಗಿತ್ತು. ಇದರಿಂದಾಗಿ ಕಲಾವಿದರ ಮತ್ತು ಅಂತಹ ಸಂಕೀರ್ಣ ಕ್ಷೇತ್ರಗಳ ಎಲ್ಲರ ಗೌರವವೂ ಹೆಚ್ಚುತ್ತಿತ್ತು. ಧಾರ್ಮಿಕ ನಾಯಕರೂ ಹೀಗೆಯೇ. ಪುರಾಣ ಕಾಲದಿಂದಲೂ ರಾಜಪುರೋಹಿತರಿದ್ದಾಗಲೂ ಅವರು ಆಳುವ ದೊರೆಗೆ ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬ ಹಿತವನ್ನು ಹೇಳುವವ ರಾಗಿದ್ದರೇ ವಿನಾ ಆಡಳಿತದಲ್ಲಿ ನೇರ ಮೂಗು ತೂರಿಸುತ್ತಿರಲಿಲ್ಲ. ಏಕೆಂದರೆ ಜ್ಞಾನಕ್ಕೆ ಸಮನಾದದ್ದು ಯಾವುದೂ ಇಲ್ಲ; ಅಧಿಕಾರವಂತೂ ಅಲ್ಲವೇ ಅಲ್ಲ.

ಆದರೆ ಆಧುನಿಕ ಭಾರತದಲ್ಲಿ ಎಲ್ಲವೂ ನಾವಿನ್ಯವನ್ನು ಪಡೆದುಕೊಳ್ಳುವ ಹೊತ್ತಿಗೆ ಧಾರ್ಮಿಕ ನಾಯಕರು, ಸನ್ಯಾಸಿಗಳು ಲೌಕಿಕ ರಾಜಕಾರಣಿಗಳಿಗಿಂತಲೂ ಹೆಚ್ಚು ರಾಜಕಾರಣ ಮಾಡುವುದನ್ನು ಕಾಣುತ್ತೇವೆ. ದಿಲ್ಲಿಯ ಶಾಹಿ ಇಮಾಮ್‌ರನ್ನು ಒಬ್ಬ ರಾಜಕೀಯ ಶಕ್ತಿಯೆಂದು ಕಾಣಲಾಗುತ್ತದೆಯೇ ವಿನಾ ಅವರ ಧಾರ್ಮಿಕ ಶಕ್ತಿಯೆಷ್ಟು ಎಂಬ ಬಗ್ಗೆ ಮೌಲ್ಯವಿವೇಚನೆಯಾಗುವುದಿಲ್ಲ. ಮಠಮಾನ್ಯಗಳು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಸಂಸ್ಥೆಗಳಂತೆ ಹಣಸಂಪಾದಿಸುತ್ತವೆಯೇ ಹೊರತು ಇತರರಿಗಿಂತ ಭಿನ್ನವಾಗುವುದು ಹೇಗೆ ಎಂಬ ಬಗ್ಗೆ ಚಿಂತಿಸುವುದೇ ಇಲ್ಲ. ರವಿಶಂಕರ ಗುರೂಜಿಯಂಥವರು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ವಿಧಿಸಿದ ದಂಡವನ್ನು ಪಾವತಿಸದೆಯೇ ಕಾಲ ತಳ್ಳುತ್ತ ಅಯೋಧ್ಯೆಯ ವಿವಾದದ ಪಂಚಾಯತಿಕೆಯನ್ನು ಮಾಡಲು ಉತ್ಸಾಹ ತೋರುತ್ತಾರೆ. ಭೂವಿವಾದಗಳಿರುವ ಸದ್ಗುರು ವಾಸುದೇವರು ದೇಶದ ನದಿಗಳ ಉಳಿವಿಗೆ ಯಾತ್ರೆ ಹೊರಡುತ್ತಾರೆ. ಇವರು ಸ್ಯಾಂಪಲುಗಳು.

ಸದಾ ಸುದ್ದಿಯಲ್ಲಿರುವ ಇಂತಹ ಸನ್ಯಾಸಿಗಳು ಅನೇಕರಿದ್ದಾರೆ. ಈ ದೇಶದ ಎಲ್ಲ ಪಾರಂಪರಿಕ ಜ್ಞಾನದ ವಾರಸುದಾರರು ತಾವೇ ಎಂಬಂತೆ ಬಿಂಬಿಸುತ್ತ ಅದಕ್ಕೆ ಹಲವು ನಾಮಧೇಯಗಳನ್ನು ನೀಡುತ್ತ ತಮ್ಮ ಲೌಕಿಕ ಆಸ್ತಿಗಳನ್ನು ಕೋಟಿಕೋಟಿ(ವರ)ಮಾನದಲ್ಲಿ ಹೆಚ್ಚಿಸಿಕೊಳ್ಳುತ್ತಿದ್ದಾರೆಯೇ ವಿನಾ ರಾಮಕೃಷ್ಣ ಪರಮಹಂಸ, ವಿವೇಕಾನಂದರಂತೆ ಭಗವಂತನನ್ನು ಸೇರಲು ಇರುವ ಅಧ್ಯಾತ್ಮದ ಮಾರ್ಗವನ್ನು ಬಯಸುವ, ಅರಸುವವರಿಗೆ ಪ್ರೇರಕ ಶಕ್ತಿಯಾಗುವುದಿಲ್ಲ. ಬಾಬಾ ಗುರು ರಾಮದೇವ್ ಯೋಗದ ಹೆಸರಿನಲ್ಲಿ ವಿಶ್ವದ ಒಬ್ಬ ಶ್ರೀಮಂತರಾಗಿದ್ದಾರೆ; ಬಹುರಾಷ್ಟ್ರೀಯ ವ್ಯಾಪಾರಿ ಉದ್ದಿಮೆಗಳಿಗೆ ಸ್ಪರ್ಧೆ ನೀಡುವ ಅವರ ಬುದ್ಧಿವಂತಿಕೆಯನ್ನು ಮೆಚ್ಚುವ ಯಾರೂ ಅವರ ಯೋಗದ ಮೂಲಾಧಾರವನ್ನು ಪ್ರಶ್ನಿಸುವುದಿಲ್ಲ. ಹೀಗಾಗಿ ಜ್ಞಾನವೇ ನೈಜ ಶಕ್ತಿ ಎಂಬ ಅರ್ಥ ನಷ್ಟವಾಗಿ ಅಧಿಕಾರವೇ ಜ್ಞಾನ ಎಂಬ ಹೊಸ ತರ್ಕ ಮೂಡಿದೆ.
 
ಕಲೆಯ ಮೇಲೆ ಅಧಿಕಾರಶಾಹಿ ಮತ್ತು ರಾಜಕೀಯ ದರ್ಪ ಸವಾರಿ ಮಾಡುತ್ತಿರುವುದು ಇದೇ ಮೊದಲೇನಲ್ಲ. 1970ರ ದಶಕದ ತುರ್ತುಪರಿಸ್ಥಿತಿಯಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ‘ಕಿಸ್ಸಾ ಕುರ್ಸೀಕಾ’ ಸಿನೆಮಾ ದಬ್ಬಾಳಿಕೆಯ ಚಿತ್ರಣದ ಸಂಕೇತವಾಗಿ ಉಳಿದಿದೆ. ಕತ್ತಲು ಕಳೆದು ಹೊಸ ಹಗಲು ಬಂದಾಗ ಇನ್ನು ಮುಂದೆ ಎಲ್ಲವೂ ಸುಸೂತ್ರವಾಗುತ್ತದೆಂದು ಯಾರೂ ಭ್ರಮಿಸದಿದ್ದರೂ ಯಾವುದೇ ಸರ್ವಾಧಿಕಾರ ಅಥವಾ ಕೆಲವರ ಸಂವಿಧಾನೇತರ ಚಟುವಟಿಕೆಯನ್ನು ನಾಶಮಾಡುವ ಶಕ್ತಿಯು ಈ ದೇಶಕ್ಕೆ ಇದೆಯೆಂಬ ವಿಶ್ವಾಸವಂತೂ ಹೊರಹೊಮ್ಮಿತು. ವಿಶೇಷವೆಂದರೆ ಇಂದಿರಾಗಾಂಧಿ ಪ್ರಜಾಪ್ರಭುತ್ವದ ಮೂಲ ನಂಬಿಕೆಗಳನ್ನೇ ಅಲ್ಲಾಡಿಸಿದರೆಂದು ಪ್ರತಿಭಟಿಸಿ ಸ್ವಾತಂತ್ರ್ಯ ಕಹಳೆ ಕೂಗಿದ ಜನರೇ ತಾವು ಅಧಿಕಾರಕ್ಕೇರಿದಾಗ ಅವನ್ನೆಲ್ಲ ಮರೆತು ತಮ್ಮ ಇಷ್ಟಾನುಸಾರ ನಡೆದುಕೊಳ್ಳುವುದು. ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಯಾವಾಗ ಪರಿಣತರನ್ನು ಅಲಕ್ಷಿಸಿ ತಾವೇ ಎಲ್ಲವನ್ನೂ ನಿರ್ಧರಿಸುತ್ತಾರೋ ಆಗ ಸಮಾಜದಲ್ಲಿ ಸಲ್ಲದ ಉದ್ಧಟತನ ಮೊಳೆತು ಯಾರು ಏನು ಬೇಕಾದರೂ ಮಾಡಬಹುದು ಹೇಗೆ ಬೇಕಾದರೂ ವರ್ತಿಸಬಹುದು ಎಂಬ ಧೋರಣೆಯು ಬೆಳೆದು ಅಧಿಕಾರದ ಅಮಲಿನಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಎಲ್ಲರೂ ಏನು ಬೇಕಾದರೂ ಮಾತನಾಡುವ ಪರಿಪಾಠ ವಿಪರೀತವಾಗಿ ಬೆಳೆದಿದೆ. ಭ್ರಷ್ಟಾಚಾರದ ವಿರುದ್ಧ ಜನತೆ ಸೆಡ್ಡು ಹೊಡೆದು ನಿಂತು ನಿರ್ಣಾಯಕವಾಗಿ ಮೋದಿ ಸರಕಾರವನ್ನು ಅಧಿಕಾರಕ್ಕೆ ತಂದಾಗ ಮತಾಂಧತೆಯ ಹೊರತಾಗಿ ಎಲ್ಲವೂ ಸರಿಯಿರಬಹುದು ಎಂದು ನಂಬುವುದಕ್ಕೆ ಕಾರಣಗಳಿದ್ದವು. ಆದರೆ ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ದೇಶ ಚಲಿಸುತ್ತಿದೆ. ವಿಷಯ ನೈಪುಣ್ಯಕ್ಕಿಂತಲೂ ಭಾಷಣ ನೈಪುಣ್ಯದಿಂದ ಕಾರ್ಯವೈಖರಿಯ ಲೋಪದೋಷಗಳನ್ನು ಮುಚ್ಚಬಹುದೆಂಬ ನಂಬಿಕೆ ಬಹಳಷ್ಟು ರಾಜಕಾರಣಿಗಳಿಗಿವೆ. ಹಾಗೂ ತಾವು ಅಧಿಕಾರಸ್ಥರಾಗಿರುವುದರಿಂದ ತಮಗೆ ಎಲ್ಲವೂ ತಿಳಿದಿದೆ ಮತ್ತು ತಾವು ಇತರರಿಗಿಂತ ಮೇಧಾವಿಗಳು, ತಾವು ಕಲಿಯಬೇಕಾದ್ದೇನೂ ಇಲ್ಲ ಎಂಬ ಅಹಂ(ಕಾರ) ಮೂಡಿದೆ.

ರಾಜಕಾರಣಿಗಳು ಟೀಕೆಗಳನ್ನು ಸಹಿಸಬೇಕು. ತಮ್ಮ ಬಗ್ಗೆ ಯಾರಾದರೂ ಆಕ್ಷೇಪಿಸಿದರೆ ತಾನು ತಿದ್ದಿಕೊಳ್ಳುವ ಮಾರ್ಗೋಪಾಯಗಳೇನೆಂದು ತಿಳಿಯಲು ಯತ್ನಿಸಬೇಕು. ಆದರೆ ಈಗಿನ ಠೀವಿಯನ್ನು ಗಮನಿಸಿ: ಒಬ್ಬ ರಾಜಕಾರಣಿಯನ್ನು ಟೀಕಿಸಿದರೆ ತಕ್ಷಣ ಆತ ಟೀಕಾಕಾರನನ್ನು ಬೆದರಿಸುವಷ್ಟು ತೀವ್ರವಾಗಿ ಪ್ರತಿಕ್ರಿಯಿಸುತ್ತಾನೆ. ಕಲೆ, ಸಾಹಿತ್ಯ, ಸಂಗೀತ ಇಂತಹ ಅಥವಾ ಇತರ ಯಾವ ಕ್ಷೇತ್ರದಲ್ಲಿದ್ದವರು ಟೀಕಿಸಿದರೂ ಅವರನ್ನು ರಾಜಕೀಯದ ಆಖಾಡಕ್ಕೆ ಬನ್ನಿ ಎಂದು ಆಹ್ವಾನಿಸುವಷ್ಟು ಮೂರ್ಖತನದ ವಾದ ಬೆಳೆಯುತ್ತಿದೆ. ಚುನಾವಣೆಯಲ್ಲಿ ಗೆಲ್ಲುವುದು ತನ್ನ ಬಲದಿಂದಲೋ ಅಥವಾ ಪಕ್ಷದ ಬಲದಿಂದಲೋ ಅಥವಾ ಜನರ ಮೌಢ್ಯದಿಂದಲೋ ಎಂದು ತಿಳಿದುಕೊಳ್ಳುವ ಕನಿಷ್ಠ ಅರಿವೂ ಅನೇಕರಿಗಿಲ್ಲ. ಮೊನ್ನೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಜಾತ್ಯತೀತತೆಯ ಕುರಿತು ತಮ್ಮ ಅಮೋಘ ಅಜ್ಞಾನವನ್ನು ಪ್ರದರ್ಶಿಸಿದರು.

ಈ ದೇಶವು ಜಾತ್ಯತೀತತೆಯನ್ನು ಸ್ವಲ್ಪಪಳಗಿಸಿ ಧರ್ಮ ನಿರಪೇಕ್ಷತೆ ಮತ್ತು ಸರ್ವಧರ್ಮ ಸಮಭಾವ ಎಂಬಷ್ಟರ ಮಟ್ಟಿಗೆ ಸರ್ವೇಸಾಮಾನ್ಯವಾಗಿ ಸ್ವೀಕರಿಸಿದೆ. ಆದರೆ ಇದು ಸಲ್ಲದು, ಇಲ್ಲಿ ಎಲ್ಲರೂ ತಮ್ಮ ಕೃಪಾಛತ್ರದಡಿಯೇ ಬದುಕಬೇಕು ಎಂಬಂತಹ ಪ್ರವೃತ್ತಿಯನ್ನು ಆಡಳಿತದ ಚುಕ್ಕಾಣಿ ಹಿಡಿದವರು (ನಿ)ರೂಪಿಸಹೊರಟರೆ ಅಂತಹ ಸಮಾಜಕ್ಕೆ ಕೇಡು ತಪ್ಪದು. ಶಾಂತಿಯೆಂಬುದು ನಮಗೆ ಒಂದು ಶಬ್ದ ಮಾತ್ರವಲ್ಲ, ಅದು ನಮ್ಮ ನರನಾಡಿಗಳಲ್ಲಿದೆ ಎಂದು ಹೇಳಿದರೆ ಸಾಲದು, ಅದು ನಿಜಕ್ಕೂ ಅಲ್ಲಿ ಇರಬೇಕು. ಅಹಿಂಸೆಯೆಂಬುದು ಒಂದು ಪದ ಮಾತ್ರವಲ್ಲ; ಅದರ ಹಿಂದೆ ಹೋದ ಗಾಂಧಿ ಹಿಂಸೆಗೆ ತುತ್ತಾದರೂ ಅಹಿಂಸೆ ಎಂಬ ಪದವ್ಯಾಪ್ತಿಯನ್ನು ಹಿಗ್ಗಿಸಿ ಹೋದರೇ ವಿನಾ ಅವರ ಮೇಲೆ ನಡೆದ ಹಿಂಸೆಯು ಅಹಿಂಸೆಯನ್ನು ಅಪ್ರಸ್ತುತಗೊಳಿಸಲು ಶಕ್ತವಾಗಲಿಲ್ಲ.

ಎರಡು ಉತ್ತಮ ಸಿನೆಮಾಗಳನ್ನು ಆಡಳಿತಯಂತ್ರದ ದುರುಪಯೋಗದಿಂದಾಗಿ ಕೈಬಿಟ್ಟ ಪ್ರಸಂಗವು ಪ್ರಜ್ಞಾವಂತರನ್ನು ಆತಂಕಕ್ಕೀಡುಮಾಡಬಾರದು; ಬದಲಿಗೆ ಇನ್ನೂ ಇಂತಹ ಪ್ರಸಂಗಗಳು ಎದುರಾಗಬಹುದು ಎಂಬ ಸಂಶಯದಿಂದಲೇ ಈಗ ಕವಿದ ಮೋಡವನ್ನು ಸರಿಸುವ ಪ್ರಯತ್ನಗಳನ್ನು ಇನ್ನಷ್ಟು ಹರಿತಗೊಳಿಸಬೇಕು. ಚರಿತ್ರೆಯನ್ನು ಮರೆತು ದುಸ್ಸಾಹಸಗಳಿಗೆ ಮನಮಾಡಿ ಇಂದ್ರಪದವಿ ಶಾಶ್ವತವೆಂದು ತಿಳಿದ ನಹುಷನೂ ಶಾಪ ಪಡೆದು ಗೊಂಡಾರಣ್ಯಕ್ಕೆ ಬಿದ್ದ ಕಥೆ ಕಥೆಯಷ್ಟೇ ಅಲ್ಲ, ವರ್ತಮಾನಕ್ಕೆ ಸಂದ ಸಂಕೇತವೂ ಹೌದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)