ಗುಜರಾತ್ ಚುನಾವಣಾ ಪ್ರಚಾರಕ್ಕೆ 'ಕೋಮುದ್ವೇಷ'ದ ಬಳಕೆ
ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸುವ ವಿಡಿಯೋ ವೈರಲ್
ಅಹ್ಮದಾಬಾದ್ನ.18,: ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಗುಜರಾತ್ ರಾಜ್ಯದಲ್ಲಿ ಆಡಳಿತ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಎರಡೂ ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಲು ನಾಮುಂದು ತಾಮುಂದು ಎನ್ನುತ್ತಿವೆ. ಚುನಾವಣಾ ಪ್ರಚಾರದಲ್ಲಿ ಕೋಮುದ್ವೇಷ ಹರಡುವ ಸಾಧ್ಯತೆಯಿರುವಂತಹ ಹಾಗೂ ಮುಸ್ಲಿಮರನ್ನು ಕೆಟ್ಟದ್ದಾಗಿ ಬಿಂಬಿಸುವಂತಹ ಪ್ರಚಾರ ವೀಡಿಯೋವೊಂದು ಇದೀಗ ವೈರಲ್ ಆಗಿದೆ.
ಈ ವೀಡಿಯೋ ಬಿಡುಗಡೆಗೊಳಿಸಿದವರ್ಯಾರೆಂದು ತಿಳಿಯದೇ ಇದ್ದರೂ ಮಾನವ ಹಕ್ಕು ಹೋರಾಟಗಾರ ಹಾಗೂ ವಕೀಲ, ಹ್ಯೂಮನ್ ರೈಟ್ಸ್ ಲಾ ನೆಟ್ವರ್ಕ್ ಇದರ ಪ್ರತಿನಿಧಿ ಗೋವಿಂದ ಪರ್ಮಾರ್ ಅವರು ಚುನಾವಣಾ ಆಯೋಗ ಹಾಗೂ ಗುಜರಾತ್ ಪೊಲೀಸರಿಗೆ ದೂರು ನೀಡಿ ಈ ವೀಡಿಯೋ ಪ್ರಸಾರವನ್ನು ನಿಲ್ಲಿಸಬೇಕೆಂದು ಕೋರಿದ್ದಾರಲ್ಲದೆ ಮುಸ್ಲಿಮರ ವಿರುದ್ಧ ದ್ವೇಷ ಭಾವನೆ ಬೆಳೆಸುವ ಯತ್ನ ಇದಾಗಿದೆ ಎಂದು ಹೇಳಿದ್ದಾರೆ.
ಒಟ್ಟು 1.15 ನಿಮಿಷ ಅವಧಿಯ ಈ ವೀಡಿಯೋ “ಇದು ಗುಜರಾತ್ ನಲ್ಲಿ ಸಂಜೆ 7ರ ನಂತರ ನಡೆಯಬಹುದು” ಎಂಬ ಬರಹದೊಂದಿಗೆ ಆರಂಭಗೊಳ್ಳುತ್ತದೆ. ಹಿನ್ನೆಲೆಯಲ್ಲಿ ಆಝಾನ್ ಸದ್ದು ಕೇಳುತ್ತಿರುವಂತೆಯೇ ಯುವತಿಯೊಬ್ಬಳು ರಸ್ತೆಯಲ್ಲಿ ಅವಸವಸರವಾಗಿ ಭಯದಿಂದ ಹೋಗುತ್ತಿರುವುದು ಕಾಣಿಸುತ್ತದೆ. ಮನೆಯಲ್ಲಿ ಆಕೆಯ ಹೆತ್ತವರು ಆಕೆಗಾಗಿ ಆತಂಕದಿಂದ ಕಾಯುತ್ತಿರುತ್ತಾರ. ಹಿನ್ನೆಲೆಯಲ್ಲಿ ಶೀ ಕೃಷ್ಣನ ವಿಗ್ರಹ ತೋರಿಸಲಾಗಿದೆ. ಮನೆ ತಲುಪಿದ ಯುವತಿ ಆತುರಾತುರವಾಗಿ ಡೋರ್ ಬೆಲ್ ಒತ್ತುತ್ತಾಳೆ. ಬಾಗಿಲು ತೆರೆದ ಆಕೆಯ ತಾಯಿ ಆಕೆಯನ್ನು ಆಲಂಗಿಸಿದರೆ ತಂದೆ ತಲೆ ನೇವರಿಸುತ್ತಾನೆ.
ಯುವತಿಯ ತಾಯಿ ನಂತರ ಕ್ಯಾಮರಾಗೆ ಮುಖ ಮಾಡಿ “ಒಂದು ನಿಮಿಷ, ಗುಜರಾತ್ ನಲ್ಲಿ ಹೀಗೇಕೆ ಆಗುತ್ತಿದೆಯೆಂದು ನಿಮಗೆ ಅಚ್ಚರಿಯಾಗುತ್ತಿದೆಯೇ ?'' ಎಂದು ಕೇಳುತ್ತಾಳೆ. ಆಗ ತಂದೆ “ಇಪ್ಪತ್ತು ವರ್ಷಗಳ ಹಿಂದೆ ಹೀಗಾಗುತ್ತಿತ್ತು, ಆ ಜನರು ಬಂದರೆ ಈಗಲೂ ಹಾಗೆಯೇ ಆಗಬಹುದು,'' ಎಂದು ಹೇಳುತ್ತಾನೆ.
ಆಗ ಯುವತಿ “ಭಯ ಬೇಡ, ಯಾರೂ ಬರುವುದಿಲ್ಲ. ಮೋದಿ ಇದ್ದಾರೆ” ಎನ್ನುತ್ತಾಳೆ. “ಅಪ್ನೊ ವೋಟ್, ಅಪ್ನಿ ಸುರಕ್ಷಾ” (ನಮ್ಮ ಮತ, ನಮ್ಮ ಭದ್ರತೆ) ಎಂಬ ವಾಕ್ಯದೊಂದಿಗೆ ವೀಡಿಯೋ ಅಂತ್ಯವಾಗುತ್ತದೆ.
ವೀಡಿಯೋ ವಿರುದ್ಧ ದೂರು ದಾಖಲಿಸಿರುವ ಪರ್ಮಾರ್ ಅದನ್ನು ನಿರ್ಮಿಸಿರುವುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗುಜರಾತ್ ಬಿಜೆಪಿ ಐಟಿ ಘಟಕ ಮಾತ್ರ ಪಕ್ಷಕ್ಕೂ ಈ ವೀಡಿಯೋಗೂ ಸಂಬಂಧವಿಲ್ಲ ಎಂದು ಹೇಳಿದರೆ ಈ ವೀಡಿಯೋದಿಂದ ಯಾರಾದರೂ ಲಾಭ ಗಳಿಸುವುದಾದರೆ ಅದು ಬಿಜೆಪಿ ಮಾತ್ರ ಎಂದು ಗುಜರಾತ್ ಕಾಂಗ್ರೆಸ್ ಐಟಿ ವಿಭಾಗದ ಮುಖ್ಯಸ್ಥ ರೋಹನ್ ಗುಪ್ತಾ ಹೇಳಿದ್ದಾರೆ.