ಮಗು ಜನಿಸಿದ ಬಳಿಕ ಮದುವೆಯಾದ ಸೆರೆನಾ
ನ್ಯೂಯಾರ್ಕ್, ನ.18: ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೆ.1 ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ಪ್ರಿಯತಮ ರೆಡಿಟ್ ಸಹ-ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ರನ್ನು ಅಧಿಕೃತವಾಗಿ ವಿವಾಹವಾಗಿದ್ದಾರೆ.
ಸೆರೆನಾ-ಅಲೆಕ್ಸಿಸ್ ನ್ಯೂ ಒರ್ಲಿಯನ್ಸ್ನ ಕಂಟೆಂಪರರಿ ಆರ್ಟ್ಸ್ ಸೆಂಟರ್ನಲ್ಲಿ ಸತಿ-ಪತಿಯಾಗಿದ್ದು, ವಿವಾಹದ ಫೋಟೊಗಳನ್ನು ಶುಕ್ರವಾರ ರಾತ್ರಿ ವೋಗ್ ವೆಬ್ಸೈಟ್ಗೆ ಹಾಕಲಾಗಿದೆ.
36ರ ಹರೆಯದ ಸೆರೆನಾ ವೃತ್ತಿಜೀವನದಲ್ಲಿ 23 ಗ್ರಾನ್ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಇದು ವೃತ್ತಿಪರ ಟೆನಿಸ್ ಯುಗದಲ್ಲಿ ಟೆನಿಸ್ ಆಟಗಾರ್ತಿಯ ದಾಖಲೆ ಸಾಧನೆಯಾಗಿದೆ.
ಸೆರೆನಾ ಹಾಗೂ ಅಲೆಕ್ಸಿಸ್ ಡಿಸೆಂಬರ್ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೆರೆನಾ ಸೆ.1 ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಅಲೆಕ್ಸಿಸ್ ಒಲಿಂಪಿಯಾ ಜೂನಿಯರ್ ಎಂದು ಹೆಸರಿಟ್ಟಿದ್ದರು.
ಸೆರೆನಾ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಆಸ್ಟ್ರೇಲಿಯನ್ ಓಪನ್ ವೇಳೆ ಸೆರೆನಾ ಗರ್ಭಿಣಿಯಾಗಿದ್ದರು. ‘‘ಮುಂದಿನ ವರ್ಷದ ಜನವರಿಯಲ್ಲಿ ಸಕ್ರಿಯ ಟೆನಿಸ್ಗೆ ವಾಪಸಾಗುವ ಉದ್ದೇಶವಿದೆ’’ಎಂದು ಸೆರೆನಾ ಹೇಳಿದ್ದಾರೆ.