varthabharthi

ಸಂಪಾದಕೀಯ

ಕಳೆದುಕೊಂಡ ಮೋಡಿಯನ್ನು ಮೂಡಿಯೊಳಗೆ ಹುಡುಕುತ್ತಿರುವ ಮೋದಿ

ವಾರ್ತಾ ಭಾರತಿ : 20 Nov, 2017

ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿರುವ ಗುಜರಾತ್ ಚುನಾವಣೆಯ ಹೊತ್ತಿನಲ್ಲಿ, ಮಾನ ಮುಚ್ಚಿಕೊಳ್ಳಲು ತುಂಡು ಬಾಳೆ ಎಲೆ ಸಿಕ್ಕಿದರೂ ಅದೇ ಕರ್ಣ ಕವಚ ಎಂಬ ಸ್ಥಿತಿಯಲ್ಲಿದೆ ಮೋದಿ ನೇತೃತ್ವದ ಬಿಜೆಪಿ. ಗುಜರಾತ್‌ನಲ್ಲಿ ಬಿಜೆಪಿ ಗೆಲ್ಲುತ್ತದೆ ಎನ್ನುವಂತಹ ಸಮೀಕ್ಷೆಗಳು ಪದೇ ಪದೇ ಮಾಧ್ಯಮಗಳ ಮೂಲಕ ಹೊರ ಬೀಳುತ್ತಿರುವುದು ಇದರ ಭಾಗವಾಗಿಯೇ ಆಗಿದೆ. ಆದರೆ ನೋಟು ನಿಷೇಧ, ಜಿಎಸ್‌ಟಿಯಂತಹ ಕೇಂದ್ರದ ನಿರ್ಧಾರದಿಂದ ಅತೀ ಹೆಚ್ಚು ಸಂತ್ರಸ್ತಗೊಂಡ ರಾಜ್ಯಗಳಲ್ಲಿ ಗುಜರಾತ್ ಕೂಡ ಒಂದು. ಅಲ್ಲಿಯ ವ್ಯಾಪಾರಿ ವರ್ಗ ಕೇಂದ್ರದ ನೀತಿಯ ವಿರುದ್ಧ ತೀವ್ರ ಅಸಮಾಧಾನಗೊಂಡಿದೆ.

ಇದೇ ಹೊತ್ತಿನಲ್ಲಿ ಜಿಡಿಪಿ ಕುಸಿತವೂ ಸೇರಿದಂತೆ ಆರ್ಥಿಕ ಅವ್ಯವಸ್ಥೆ ನೋಟು ನಿಷೇಧ ಮತ್ತು ಜಿಎಸ್‌ಟಿ ಅನುಷ್ಠಾನದ ವೈಫಲ್ಯವನ್ನು ಕೂಗಿ ಕೂಗಿ ಹೇಳುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರು ನೋಟು ನಿಷೇಧದಿಂದ ಭಾರತದ ಆರ್ಥಿಕತೆಯ ಮೇಲಾಗಿರುವ ಆಘಾತದ ಕಡೆಗೆ ಬೆಟ್ಟು ಮಾಡುತ್ತಿದ್ದಾರೆ. ಹೀಗಿರುವಾಗ, ಯಾವ ರೀತಿಯಲ್ಲಾದರೂ ಮೋದಿಯ ಪರವಾಗಿ ಜನಾಭಿಪ್ರಾಯವನ್ನು ರೂಪಿಸಲೇ ಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಸರಕಾರ, ಮೂಡೀಸ್ ಎನ್ನುವ ರೇಟಿಂಗ್‌ನ್ನು ಮುಂದಿಟ್ಟುಕೊಂಡು ದೇಶದ ಜನರನ್ನು ಮೂಢರನ್ನಾಗಿಸಲು ಹೊರಟಿದೆ. ಅಮೆರಿಕ ಮೂಲದ ಮೂಡೀಸ್ ಎಂಬ ರೇಟಿಂಗ್ ಸಂಸ್ಥೆ ಭಾರತದ ರೇಟಿಂಗ್ ಅನ್ನು ಎತ್ತರಿಸಿದೆ. ಅದು ನೀಡಿರುವ ಕಾರಣ ಮೋದಿ ಸರಕಾರ ತೆಗೆದುಕೊಂಡಿರುವ ಕ್ರಮಗಳಿಂದ ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆ ಎಂಬುದು. ಈ ಸಂಸ್ಥೆಯ ಅಂಕಿ ಅಂಶಗಳನ್ನು ಇಟ್ಟುಕೊಂಡು ಬಿಜೆಪಿ ಸರಕಾರ ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ಇದುವರೆಗೆ ಸ್ವಾಯತ್ತ ಮತ್ತು ಸರಕಾರಿ ಸಂಸ್ಥೆಗಳೇ ಬಯಲು ಮಾಡಿರುವ ತನ್ನ ಹಳವಂಡಗಳನ್ನೆಲ್ಲಾ ಮರೆಮಾಚಲು ಹತಾಶ ಪ್ರಯತ್ನ ನಡೆಸುತ್ತಿದೆ.

ಅದೇ ರೀತಿ ಇದು ಎಷ್ಟರ ಮಟ್ಟಿಗೆ ವಾಸ್ತವ ಎಂದು ಅರ್ಥಮಾಡಿಕೊಳ್ಳುವ ಮುಂಚೆ ಮೂಡಿ ಸಂಸ್ಥೆಯ ಇತಿಹಾಸವನ್ನು ಒಮ್ಮೆ ನೋಡೋಣ. ಈ ಸಂಸ್ಥೆಯು 2008ರಲ್ಲಿ ಅಮೆರಿಕ ಹಾಗೂ ಆ ನಂತರ ಇಡೀ ಜಗತ್ತು ಜಾಗತಿಕ ಹಣಕಾಸು ಬಿಕ್ಕಟ್ಟು ಎದುರಿಸಬೇಕಾಗಿ ಬಂದ ಕೆಲವು ತಿಂಗಳ ಮುಂಚೆ ಅಮೆರಿಕದ ಮತ್ತು ಜಾಗತಿಕ ಹಣಕಾಸು ಪರಿಸ್ಥಿತಿ ಅತ್ಯುತ್ತಮವಾಗಿದೆಯೆಂದು ವರದಿ ಮಾಡಿತ್ತು. ಆನಂತರದಲ್ಲಿ ಮೂಡಿ ಸಂಸ್ಥೆಯು ಈ ರೀತಿ ವರದಿಯನ್ನು ನೀಡಲು ಹಲವಾರು ಬ್ಯಾಂಕುಗಳಿಂದ ಸಾಕಷ್ಟು ಹಣವನ್ನು ಪಡೆದಿತ್ತೆಂದು ಅಮೆರಿಕದ ಸರಕಾರಿ ವಕೀಲರೇ ಅದರ ಮೇಲೆ ನೇರವಾಗಿ ಆಪಾದನೆ ಹೊರಿಸಿದ್ದರು. ಅದು ನೀಡಿದ ದುರುದ್ದೇಶಪೂರಿತ ವಿಶ್ಲೇಷಣೆ ಮತ್ತು ರೇಟಿಂಗ್‌ಗಳಿಗಾಗಿ ಅಮೆರಿಕದ ಸಿಯಾಟಲ್ ಸರಕಾರ ಅದಕ್ಕೆ 864 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿತ್ತು. ಅಷ್ಟು ಮಾತ್ರವಲ್ಲ. ಇದೇ ಜೂನ್ ತಿಂಗಳಲ್ಲಿ ಜಾಗತಿಕ ಸಂಸ್ಥೆಗಳ ರೇಟಿಂಗ್ ಅನ್ನು ಹೆಚ್ಚಿಸಲು ಯಾವ ಸಕಾರಣವನ್ನೂ ನೀಡದಿದುದ್ದಕ್ಕಾಗಿ ಐರೋಪ್ಯ ಒಕ್ಕೂಟವು ಮೂಡಿ ಸಂಸ್ಥೆಗೆ 1.24 ಮಿಲಿಯನ್ ಯುರೋಗಳ ದಂಡವನ್ನು ವಿಧಿಸಿತ್ತು. ಇದು ಮೋದಿಯವರ ರೇಟಿಂಗ್ ಹೆಚ್ಚಿಸಿರುವ ಮೂಡಿ ಸಂಸ್ಥೆಯ ಇತಿಹಾಸ. ವಾಸ್ತವವಾಗಿ ಇದೇ ರೀತಿ ರೇಟಿಂಗ್ ನೀಡುವ ಇನ್ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದ ರೇಟಿಂಗ್ ಅನ್ನೂ ಹೆಚ್ಚಿಸಿಲ್ಲ.

ಬದಲಿಗೆ ನೋಟು ನಿಷೇಧ ಮತ್ತು ಜಿಎಸ್‌ಟಿ ಕ್ರಮಗಳು ಭಾರತದ ಆರ್ಥಿಕತೆಯಲ್ಲಿ ಉಂಟುಮಾಡಿರುವ ಕೋಲಾಹಲದ ಬಗ್ಗೆ ಕಳವಳಗಳನ್ನೇ ವ್ಯಕ್ತಪಡಿಸಿವೆ. ಇದೊಂದು ರೀತಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರೆಲ್ಲ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ವಿದೇಶಿ ವಿಶ್ವವಿದ್ಯಾನಿಲಯವೊಂದು ಡಾಕ್ಟರೇಟ್ ಪ್ರಶಸ್ತಿ ನೀಡಿದಂತಾಗಿದೆ. ಇಂತಹ ಡಾಕ್ಟರೇಟ್ ಪ್ರಶಸ್ತಿ ನೀಡುವುದಕ್ಕಾಗಿಯೇ ನಕಲಿ ವಿವಿಗಳು ಸಾಕಷ್ಟಿವೆ. ಇದೀಗ ಮೋದಿ ಸರಕಾರ ಕೂಡ ಮೂಡಿಯಂತಹ ರೇಟಿಂಗ್ ಸಂಸ್ಥೆಯ ಮೊರೆ ಹೋಗಿ, ಭಾರತದ ಜನರನ್ನು ತಾತ್ಕಾಲಿಕವಾಗಿ ಸಮಾಧಾನ ಪಡಿಸುವ ಪ್ರಯತ್ನದಲ್ಲಿದೆ. ಕಳೆದ ಎರಡು ತಿಂಗಳುಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಅಂಕಿಅಂಶಗಳ ಪ್ರಾಧಿಕಾರಗಳಂಥ ಸರಕಾರಿ ಸಂಸ್ಥೆಗಳೇ ಭಾರತದ ಆರ್ಥಿಕತೆ ಇಳಿಮುಖಗೊಂಡಿದೆಯೆಂದು ಮತ್ತು ಅದು ಚೇತರಿಸಿಕೊಳ್ಳಲು ಕನಿಷ್ಠ ಎರಡು ವರ್ಷಗಳಾದರೂ ಬೇಕೆಂದು ಹೇಳಿದ್ದವು. ಬಿಜೆಪಿ ತನ್ನ ಪ್ರಯತ್ನವನ್ನು ಬರೇ ಮೂಡಿಗಷ್ಟೇ ಸೀಮಿತವಾಗಿರಿಸಿಲ್ಲ. ಇನ್ನೂ ಕೆಲವು ವಿದೇಶಿ ‘ಅಧ್ಯಯನ ಸಂಸ್ಥೆಗಳು’ ಮೋದಿಯ ಜನಪ್ರಿಯತೆಯ ಬಗ್ಗೆ ಹಾಗೂ ಆರ್ಥಿಕ ಸುಸ್ಥಿತಿಯ ಬಗ್ಗೆ ಸಕಾರಾತ್ಮಕ ವರದಿಗಳನ್ನು ಪ್ರಕಟಿಸಿವೆ. ಉದಾಹರಣೆಗೆ ಪ್ಯೂ (PEW) ಎಂಬ ಸಂಸ್ಥೆ ಮೋದಿಯವರ ಜನಪ್ರಿಯತೆ ಒಂದೇ ಸಮನೆ ಏರಿಕೆಯಾಗುತ್ತಿದೆ ಎಂದೂ ಶೇ.90-95ರಷ್ಟು ಭಾರತೀಯರು ಮೋದಿಯವರನ್ನು ಬೆಂಬಲಿಸುತ್ತಿದ್ದಾರೆಂದು ತನ್ನ ಅಂಕಿಅಂಶಗಳನ್ನು ಪ್ರಕಟಿಸಿದೆ. ಆದರೆ 125 ಕೋಟಿ ಜನಸಂಖ್ಯೆಯಿರುವ ಭಾರತದಂಥ ದೇಶದಲ್ಲಿ ಅವರು ಅಭಿಪ್ರಾಯ ಸಂಗ್ರಹಿಸಿರುವುದು ಕೇವಲ 2,464 ಜನರಿಂದ ಮಾತ್ರ. ಅಂದರೆ ದೇಶದ ಜನಸಂಖ್ಯೆಯ 0.000001ರಷ್ಟು ಜನರ ಅಭಿಪ್ರಾಯವನ್ನು ಇಡೀ ದೇಶದ ಅಭಿಪ್ರಾಯವೆಂಬಂತೆ ಈ ಅಧ್ಯಯನ ಬಿಂಬಿಸುತ್ತಿದೆ.

ಈ ಅಂಕಿಅಂಶಗಳು ಎಷ್ಟು ಹಾಸ್ಯಾಸ್ಪದವಾಗಿದೆಯೆಂದರೆ ಮೋದಿಯವರನ್ನು ಶೇ.95ರಷ್ಟು ದಕ್ಷಿಣ ಭಾರತೀಯರು ಇಷ್ಟಪಡುತ್ತಾರೆಂದು ಸಹ ಅದು ಕಂಡುಕೊಂಡಿದೆ. ಆದರೆ ಕಳೆದ ವರ್ಷ ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ಮೋದಿಯವರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳೆಲ್ಲರೂ ಠೇವಣಿಯನ್ನು ಕಳೆದುಕೊಂಡಿದ್ದರು. ಇಷ್ಟಕ್ಕೂ ಈ ಸಂಸ್ಥೆಗಳು ‘ಮೋದಿಯನ್ನು ಇಷ್ಟಪಡುತ್ತಾರೆ, ಜನಪ್ರಿಯತೆ ಹೆಚ್ಚಿದೆ’’ ಎನ್ನುವುದನ್ನು ಹೇಳುತ್ತದೆಯಾದರೂ, ಮೋದಿಯ ನಿರ್ಧಾರಗಳು ಯಾವ ರೀತಿಯಲ್ಲಿ ದೇಶವನ್ನು ಮುನ್ನಡೆಗೆ ಕೊಂಡೊಯ್ಯುತ್ತಿದೆ ಎನ್ನುವುದನ್ನು ವಿವರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಸದ್ಯದ ವಾಸ್ತವ ಏನು ಎನ್ನುವುದನ್ನು ಭಾರತ ಸರಕಾರಿ ಸಂಸ್ಥೆಗಳೇ ಹೇಳುತ್ತಿವೆ. ಭಾರತದ ಆರ್ಥಿಕತೆ 2014ರ ಮಧ್ಯಭಾಗದಿಂದಲೇ ಇಳಿಮುಖಗೊಂಡಿತ್ತೆಂದು ಇತ್ತೀಚಿನ ರಿಸರ್ವ್ ಬ್ಯಾಂಕಿನ ವಾರ್ಷಿಕ ಸರ್ವೇ ವರದಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಯನ ವರದಿ ಹೇಳಿತ್ತು ಹಾಗೂ ಕೇಂದ್ರ ಸರಕಾರದ ನೋಟು ನಿಷೇಧ ಮತ್ತು ಜಿಎಸ್‌ಟಿ ಕ್ರಮಗಳು ಇಳಿಮುಖವಾಗಿದ್ದ ಭಾರತದ ಆರ್ಥಿಕತೆಯ ಮೇಲೆ ಇನ್ನೂ ದೊಡ್ಡ ಪ್ರಹಾರವನ್ನು ನೀಡಿತು ಎಂದು ಭಾರತದ ಅಂಕಿಅಂಶಗಳ ಪ್ರಾಧಿಕಾರ ಕಳೆದ ತಿಂಗಳಷ್ಟೇ ತನ್ನ ಅಂಕಿಅಂಶಗಳನ್ನು ಬಿಡುಗಡೆ ಮಾಡಿತ್ತು ಹಾಗೂ ಭಾರತದ ಹಲವಾರು ಸ್ವತಂತ್ರ ವಿಚಕ್ಷಣ ಸಂಸ್ಥೆಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ 8 ಲಕ್ಷ ಉದ್ಯೋಗಗಳು ನಾಶವಾಗಿದ್ದರೆ, ಸೃಷ್ಟಿಯಾಗಿರುವುದು ಕೇವಲ 3 ಲಕ್ಷ ಉದ್ಯೋಗಗಳು ಮಾತ್ರ. ದೇಶದ ಆರ್ಥಿಕತೆಯು ಪ್ರಗತಿ ಪಥದಲ್ಲಿರಬೇಕೆಂದರೆ ಬ್ಯಾಂಕುಗಳಿಂದ ಉದ್ಯಮಗಳು ಸಾಲ ಪಡೆದುಕೊಂಡು ಹೂಡಿಕೆ ಮಾಡಬೇಕು. ಆದರೆ ನೋಟು ನಿಷೇಧಕ್ಕೆ ಸಾಕಷ್ಟು ಹಿಂದಿನಿಂದಲೇ ಭಾರತದ ಕಂಪೆನಿಗಳು ಹೂಡಿಕೆಯಲ್ಲಿ ನಿರಾಸಕ್ತಿ ತೋರುತ್ತಿದ್ದವು. ಏಕೆಂದರೆ ಆರ್ಥಿಕ ಪರಿಸ್ಥಿತಿ ಲಾಭದಾಯಕವಾಗಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

ಹೀಗೆ ಯಾವುದೇ ಮಾನದಂಡಗಳಿಂದ ನೋಡಿದರೂ ಮೋದಿಯವರ ಸರಕಾರದ ನೀತಿಗಳು ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ದಿಕ್ಕೆಡಿಸಿವೆಂಬುದು ಕಟುಸತ್ಯ. ಅದನ್ನು ಅರ್ಥಮಾಡಿಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಿಲ್ಲದ ಸರಕಾರ ಸತ್ಯವನ್ನೇ ತನಗೆ ಬೇಕಾದಂತೆ ತಿರುಚಲು ಇಂತಹ ಅನುಮಾನಸ್ಪದ ಸಂಸ್ಥೆಗಳ ಸಹಾಯ ಪಡೆದುಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)