varthabharthi

ಸಂಪಾದಕೀಯ

ರೋಗಿಗಳ ಆಧಾರವನ್ನು ಕಸಿಯುತ್ತಿರುವ ಆಧಾರ್

ವಾರ್ತಾ ಭಾರತಿ : 20 Nov, 2017

ಆಧಾರ್ ಗೊಂದಲಗಳು ಮುಂದುವರಿಯುತ್ತಿವೆ. ಒಂದೆಡೆ ಆಧಾರ್ ಕುರಿತಂತೆ ಸುಪ್ರೀಂಕೋರ್ಟ್ ತನ್ನ ಸ್ಪಷ್ಟ ನಿಲುವನ್ನು ಇನ್ನೂ ಹೊರಗೆಡಹಿಲ್ಲ. ಇದೇ ಸಂದರ್ಭದಲ್ಲಿ ಆಧಾರ್‌ನಲ್ಲಿ ಖಾಸಗಿ ವಿವರಗಳು ಸೋರಿಹೋಗುವ ಅಥವಾ ಬಹಿರಂಗವಾಗುವ ಬಗ್ಗೆ ದೇಶದ ವಿವಿಧ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳೂ ಆಧಾರ್ ಬಗ್ಗೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಿವೆ. ಸರಕಾರವೂ ಆಧಾರ್ ಕುರಿತಂತೆ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದೆ. ಒಮ್ಮೆ ಆಧಾರ್ ಕಡ್ಡಾಯವೇನೂ ಅಲ್ಲ ಎಂದರೆ ಮತ್ತೊಮ್ಮೆ ಎಲ್ಲ ಕ್ಷೇತ್ರಗಳಿಗೂ ಆಧಾರ್ ಕಡ್ಡಾಯ ಎನ್ನುವ ರೀತಿಯ ನಿಯಮಗಳನ್ನು ಜಾರಿಗೊಳಿಸುತ್ತಿವೆ. ಆಧಾರ್ ಕಾರ್ಡ್ ಹೊಂದುವ ಕುರಿತಂತೆ ಜನಸಾಮಾನ್ಯರು ಗೊಂದಲದಲ್ಲಿದ್ದಾರೆ. ಹಿಂಬಾಗಿಲಲ್ಲಿ ಆಧಾರ್ ಕಾರ್ಡ್ ಹೊಂದುವಂತೆ ಜನರಿಗೆ ಸರಕಾರ ಒತ್ತಡ ಹಾಕುತ್ತಿದೆ. ಬ್ಯಾಂಕ್‌ಗಳು ಈಗಾಗಲೇ ಆಧಾರ್ ಕಡ್ಡಾಯ ಎನ್ನುವಂತಹ ಸಂದೇಶಗಳನ್ನು ತಮ್ಮ ಗ್ರಾಹಕರಿಗೆ ರವಾನಿಸುತ್ತಿವೆ. ಇದೇ ಹೊತ್ತಿನಲ್ಲಿ ರೇಷನ್ ಕಾರ್ಡ್‌ಗೂ ಆಧಾರ್ ಕಡ್ಡಾಯವೆಂಬ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಸರಕಾರ ‘ರೇಷನ್ ಪಡೆಯಲು ಆಧಾರ್ ಅಗತ್ಯವಿಲ್ಲ’ ಎನ್ನುತ್ತಿದೆಯಾದರೂ ಸಿಬ್ಬಂದಿ ಆಧಾರ್‌ಕಾರ್ಡ್ ಇಲ್ಲದ ಜನರಿಗೆ ರೇಷನ್‌ಕಾರ್ಡ್ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಪರಿಣಾಮವಾಗಿ ದೇಶಾದ್ಯಂತ ಕೃತಕ ಹಸಿವು ಸೃಷ್ಟಿಯಾಗಿದೆ ಮಾತ್ರವಲ್ಲ, ಹಸಿವಿನಿಂದಲೇ ಹಲವರು ಮೃತಪಟ್ಟಂತಹ ಘಟನೆಗಳು ವರದಿಯಾದವು. ಒಂದೆಡೆ ವಿವಿಧ ಇಲಾಖೆಗಳ ಮೂಲಕ ಜನರಿಗೆ ಒತ್ತಡ ಹೇರಿ ಆಧಾರ್ ಕಾರ್ಡ್ ಹೊಂದುವಂತೆ ಮಾಡುತ್ತಿರುವ ಸರಕಾರ, ಬಹಿರಂಗವಾಗಿ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎನ್ನುತ್ತಿದೆ. ಇದೇ ಸಂದರ್ಭದಲ್ಲಿ, ಆಧಾರ್ ವಿವರಗಳು ಬಹಿರಂಗವಾಗುತ್ತಿರುವ ಆಘಾತಕಾರಿ ವರದಿಗಳ ಕುರಿತಂತೆಯೂ ಸರಕಾರ ಯಾವುದೇ ಸ್ಪಷ್ಟೀಕರಣವನ್ನು ನೀಡುತ್ತಿಲ್ಲ. ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ವೇ ತಿಳಿಸುವಂತೆ, ಕೇಂದ್ರ ಹಾಗೂ ಸರಕಾರದ 200ಕ್ಕೂ ಅಧಿಕ ವೆಬ್‌ಸೈಟ್‌ಗಳು ಕೆಲವು ಆಧಾರ್ ಫಲಾನುಭವಿಗಳ ಹೆಸರು ಹಾಗೂ ವಿಳಾಸಗಳ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿವೆ. ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸುತ್ತಾ ಈ ಮಾಹಿತಿಯನ್ನು ಅದು ನೀಡಿದೆ. ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಇಲಾಖೆಗಳ ಸರಿಸುಮಾರು 210 ವೆಬ್‌ಸೈಟ್‌ಗಳು ಸಾರ್ವಜನಿಕರಿಗೆ ಮಾಹಿತಿ ನೀಡಲು ಫಲಾನುಭವಿಗಳ ಪಟ್ಟಿಯನ್ನು ಆಧಾರ್ ಸಂಖ್ಯೆ, ಹೆಸರು ವಿಳಾಸ ಹಾಗೂ ಇತರ ವಿವರಗಳೊಂದಿಗೆ ಪ್ರದರ್ಶಿಸಿವೆ ಎಂದು ಪ್ರಾಧಿಕಾರ ತಿಳಿಸಿದೆ. ಹೀಗೆ ಖಾಸಗಿ ಮಾಹಿತಿಗಳು ಬಹಿರಂಗಗೊಳ್ಳುತ್ತವೆ ಎಂದಾದರೆ ಅದು ಸಾರ್ವಜನಿಕರ ಬದುಕಿನ ಮೇಲೆ ಪರಿಣಾಮ ಬೀರುವುದಿಲ್ಲವೇ? ಎನ್ನುವ ಪ್ರಶ್ನೆಯೊಂದು ತಲೆಯೆತ್ತಿದೆ. ಅತ್ಯಂತ ಆತಂಕಕಾರಿ ವಿಷಯವೆಂದರೆ, ಆರೋಗ್ಯ ಕ್ಷೇತ್ರಕ್ಕೂ ಈ ಆಧಾರ್ ಕಾರ್ಡ್ ವೈರಸ್ ಕಾಲಿಟ್ಟಿರುವುದು. ಸರಕಾರಿ ಸೌಲಭ್ಯಗಳನ್ನು ಪಡೆಯುವಂತಹ ರೋಗಿಗಳು ಆಧಾರ್ ಕಾರ್ಡ್ ಸಂಖ್ಯೆಯನ್ನು ಅಳವಡಿಸಬೇಕು ಎನ್ನುವಂತಹ ನಿಯಮವನ್ನು ಅಲ್ಲಲ್ಲಿ ಜಾರಿಗೊಳಿಸಲಾಗುತ್ತಿದೆ.

ಒಬ್ಬ ರೋಗಿ ತಾನು ಹೊಂದಿರುವ ರೋಗವನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತಾನೆ. ಯಾವುದೇ ವೈದ್ಯರು, ರೋಗಿಯ ಖಾಸಗಿತನವನ್ನು ಬಹಿರಂಗಪಡಿಸುವಂತಿಲ್ಲ. ಅದನ್ನು ಗುಪ್ತವಾಗಿಡುವುದು ವೈದ್ಯರ ಕರ್ತವ್ಯವಾಗಿದೆ. ಆದರೆ ಕೆಲವು ನಿಗೂಢ ರೋಗಗಳಿಗೆ ಬಲಿಯಾದ ವ್ಯಕ್ತಿ ಔಷಧಿಯನ್ನು ಪಡೆಯಲು ಆಧಾರ್ ಕಾರ್ಡ್ ಸಂಖ್ಯೆ ನೀಡುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೊಳಿಸಿದರೆ, ಆ ರೋಗಿ ಏನು ಮಾಡಬೇಕು? ಇದೀಗ ಎಚ್‌ಐವಿ ಪಾಸಿಟಿವ್ ಹೊಂದಿರುವ ರೋಗಿಗಳನ್ನು ಇಂತಹದೊಂದು ಆತಂಕ ಕಾಡುತ್ತಿದೆ. ಒಂದೆಡೆ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕಾಗಿ ರೇಷನ್ ಪಡೆಯಲು ವಿಫಲರಾಗಿ ಹಸಿವಿನಿಂದ ಸತ್ತವರು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಎಚ್‌ಐವಿ ಪಾಸಿಟಿವ್‌ನಂತಹ ಮಾರಕ ರೋಗವನ್ನು ಹೊಂದಿದವರು ತಮ್ಮ ಔಷಧಿಗಳನ್ನು ಪಡೆಯಲು ವಿಫಲರಾಗುತ್ತಿರುವುದು ಸುದ್ದಿಯಾಗುತ್ತಿದೆ. ಕೆಲವರು ಆಧಾರ್ ಕಾರ್ಡ್‌ನ್ನೇ ಹೊಂದಿಲ್ಲ. ಆ ಕಾರಣಕ್ಕಾಗಿ ಔಷಧಿ ಪಡೆಯಲಾಗದೆ ಅವರ ಸ್ಥಿತಿ ಗಂಭೀರವಾಗಿದೆ. ಇನ್ನು ಕೆಲವರು ಆಧಾರ್ ಕಾರ್ಡ್ ಇದ್ದರೂ ಸಂಖ್ಯೆ ನೀಡುವುದಕ್ಕೆ ಹಿಂಜರಿಕೆ ವ್ಯಕ್ತಪಡಿಸುತ್ತಾರೆ. ಯಾಕೆಂದರೆ ದೇಶದ ಬಹುತೇಕ ರೋಗಿಗಳು ಇಂತಹ ಕಾಯಿಲೆಗಳನ್ನು ಗುಟ್ಟಾಗಿ ಇಡುತ್ತಾರೆ. ಈ ಕಾಯಿಲೆಗಳ ಕುರಿತಂತೆ ಸಮಾಜದ ಇನ್ನೂ ಪೂರ್ವಾಗ್ರಹ ಪೀಡಿತವಾಗಿವುದರಿಂದ, ಅವರಿಗಿದು ಅನಿವಾರ್ಯವಾಗಿದೆ. ಒಂದು ವೇಳೆ ಕಾಯಿಲೆಯನ್ನು ಬಹಿರಂಗಪಡಿಸಿದರೆ ಅವರು ಸಮಾಜದಿಂದ ಪರೋಕ್ಷವಾಗಿ ಬಹಿಷ್ಕಾರಕ್ಕೆ ಒಳಗಾಗಬೇಕಾಗುತ್ತದೆ. ಆಧಾರ್ ಸಂಖ್ಯೆಯನ್ನು ಚಿಕಿತ್ಸಾ ಕೇಂದ್ರಗಳಿಗೆ ನೀಡಿದರೆ ತಮಗಿರುವ ರೋಗ ಹೊರಜಗತ್ತಿಗೆ ಬಯಲಾದರೆ? ಎನ್ನುವ ಭಯದಿಂದ ರೋಗಿಗಳು ಔಷಧಿ ಪಡೆಯುವುದಕ್ಕೇ ಹಿಂದೇಟು ಹಾಕುವಂತಹ ಸ್ಥಿತಿ ದೇಶದ ಹಲವೆಡೆ ನಿರ್ಮಾಣವಾಗಿದೆ. 2015ರಲ್ಲಿ ನ್ಯಾಶನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಶನ್ ಅಥವಾ ಎನ್‌ಸಿಒ, ಎಚ್‌ಐವಿ ಪೀಡಿತರ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸುವಂತೆ ರಾಜ್ಯ ಸರಕಾರಗಳನ್ನು ಒತ್ತಾಯಿಸಲು ಆರಂಭಿಸಿತ್ತು. ಸಾಮಾಜಿಕ ಭದ್ರತಾ ಸವಲತ್ತುಗಳನ್ನು ಪಡೆಯುವುದು ಇನ್ನಷ್ಟು ಸುಲಭವಾಗುವಂತೆ ಮಾಡುವುದು ಇದರ ಉದ್ದೇಶ ಎಂದೂ ಅದು ಹೇಳಿಕೊಂಡಿತ್ತು. ಅಲ್ಲಿಂದ ರೋಗಿಗಳಲ್ಲಿ ಒಂದು ರೀತಿಯ ಆತಂಕ ಶುರುವಾಗಿತ್ತು.

ಸದ್ಯಕ್ಕೆ ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಎಚ್‌ಐವಿ ರೋಗಿಗಳು ಅವರ ಆಧಾರ್ ಸಂಖ್ಯೆಗಳನ್ನು ನೀಡಲೇ ಬೇಕು ಎಂದು ಒತ್ತಾಯಿಸುತ್ತಿವೆ. ಇದೇ ಸಂದರ್ಭದಲ್ಲಿ ಮಗದೊಂದೆಡೆ ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯ ಅಲ್ಲ ಎಂದು ಕೇಂದ್ರ, ರಾಜ್ಯ ಸರಕಾರಗಳು ಬಹಿರಂಗವಾಗಿ ಹೇಳುಕೆ ನೀಡುತ್ತಾ ಬರುತ್ತಿವೆೆ. ಈ ಕಣ್ಣು ಮುಚ್ಚಾಲೆ ಆಟದಲ್ಲಿ ಎಚ್‌ಐವಿ ಪೀಡಿತರು ತೀವ್ರ ಅಪಾಯದ ಸ್ಥಿತಿಯನ್ನು ತಲುಪುತ್ತಿದ್ದಾರೆ ಎನ್ನುವ ವರದಿಗಳು ಈಗ ಬಹಿರಂಗವಾಗುತ್ತಿವೆ. ಒಂದು ರೀತಿಯಲ್ಲಿ ಆಧಾರ್ ಕಾರ್ಡ್ ಮಾಹಿತಿ ಕೊಡಲು ಈ ರೋಗಿಗಳನ್ನು ಸಂಸ್ಥೆಗಳು ಬ್ಲಾಕ್‌ಮೇಲ್ ಮಾಡುತ್ತಿವೆ. ಎಲ್ಲಿಯವರೆಗೆ ಎಂದರೆ, ಈ ಆಧಾರ್ ಮಾಹಿತಿ ಸಲ್ಲಿಸುವವರೆಗೆ ಚಿಕಿತ್ಸೆಯನ್ನು ನಿರಾಕರಿಸುವ ಮಟ್ಟಕ್ಕೂ ಚಿಕಿತ್ಸಾ ಕೇಂದ್ರಗಳು ಹೋಗಿವೆ. ಎಚ್‌ಐವಿ ಪೀಡಿತರಿಗಾಗಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರು ಈ ಅಂಶವನ್ನು ಹೊರಗೆಡಹಿದ್ದಾರೆ. ಚೈತನ್ಯ ಮಹಿಳಾ ಮಂಡಲದ ಕಾರ್ಯಕರ್ತೆ ಗೀತಾ ಮೂರ್ತಿ ಅವರು ಹೇಳುವಂತೆ, ಸಿಕಂದರಾಬಾದ್‌ನ ಸರಕಾರಿ ಎಚ್‌ಐವಿ ಕಾರ್ಯಕ್ರಮದಿಂದ ಏಳು ರೋಗಿಗಳು ಆಧಾರ್ ಕಾರಣಕ್ಕಾಗಿ ಹಿಂದೆ ಸರಿದಿದ್ದಾರೆ. ತನ್ನ ಆಧಾರ್ ಕಾರ್ಡ್ ಸಲ್ಲಿಸಲು ವಿಫಲವಾದ ಕಾರಣಕ್ಕೆ ಓರ್ವ ಮಹಿಳೆ ಮೃತರಾಗಿರುವುದನ್ನೂ ಇವರು ತಿಳಿಸುತ್ತಾರೆ. ‘‘ತನ್ನ ಗುರುತು ಬಯಲಾಗಿ ಬಿಡುತ್ತದೆ ಎಂಬ ಭಯದಿಂದ ಆಕೆ ಆಧಾರ್ ಸಂಖ್ಯೆ ಸಲ್ಲಿಸಲು ನಿರಾಕರಿಸಿ ಔಷಧಿ ಸೇವಿಸುವುದನ್ನು ನಿಲ್ಲಿಸಿ ಬಿಟ್ಟಳು’’ ಎಂದು ಅವರು ಹೇಳುತ್ತಾರೆ. ರೋಗಿಯ ಹಿತವನ್ನು ಮುಂದಿಟ್ಟುಕೊಂಡು ಆಧಾರ್ ಸಂಖ್ಯೆ ಸಂಗ್ರಹಿಸುತ್ತಿದ್ದೇವೆ ಎಂದು ಸಂಸ್ಥೆಗಳು ಹೇಳಿದರೂ, ಇದರಲ್ಲಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ ಆಧಾರ್ ಕಾರ್ಡ್ ಈ ದೇಶದ ಎಚ್‌ಐವಿ ಪೀಡಿತರ ಪಾಲಿಗೆ ಉರುಳಾಗಿ ಪರಿಣಮಿಸಬಹುದು. ಆರೋಗ್ಯ ಕ್ಷೇತ್ರದಲ್ಲಿ ಖಾಸಗಿತನ ಉಳಿಸಿಕೊಳ್ಳುವುದು ಎಲ್ಲಕ್ಕಿಂತ ಅಗತ್ಯವಾಗಿದೆ.

ಒಂದು ವೇಳೆ, ಇವರ ಖಾಸಗಿ ರಹಸ್ಯವನ್ನು ಜೋಪಾನ ಮಾಡಲು ಆಧಾರ್‌ಗೆ ಸಾಧ್ಯವಿಲ್ಲ ಎಂದಾದರೆ ಈ ಕ್ಷೇತ್ರಕ್ಕೆ ಆಧಾರ್ ಯಾವ ಕಾರಣಕ್ಕೂ ಕಡ್ಡಾಯ ಮಾಡಬಾರದು. ಮುಖ್ಯವಾಗಿ ಆಧಾರ್ ಇಲ್ಲವೆಂದರೆ ಔಷಧಿ ನಿರಾಕರಿಸುವುದು, ರೇಷನ್ ನಿರಾಕರಿಸಿದಷ್ಟೇ ಅಮಾನವೀಯವಾದುದು. ಇದನ್ನು ವ್ಯವಸ್ಥಿತ ಕಗ್ಗೊಲೆಗಳು ಎಂದು ಕರೆದು ಔಷಧಿ ನೀಡದ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)