varthabharthi

ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಸ್ವಾತಂತ್ರೋತ್ತರ ಸಮಕಾಲೀನ ಭಾರತದ ಕಡೆಗೆ ನೋಟ...

ವಾರ್ತಾ ಭಾರತಿ : 21 Nov, 2017
-ಕಾರುಣ್ಯ

ಭಾರತದ ಪ್ರಜಾಸತ್ತೆಯ ಸರ್ವಶ್ರೇಷ್ಠ ಇತಿಹಾಸಕಾರ ಎಂದು ವಿಶ್ವವಿಖ್ಯಾತ ಟೈಮ್ ಪತ್ರಿಕೆಯ ಪ್ರಶಂಸೆಗೆ ಭಾಜನರಾಗಿರುವ ಅಂತಾರಾಷ್ಟ್ರೀಯ ಕೀರ್ತಿಯ ಲೇಖಕ ರಾಮಚಂದ್ರ ಗುಹ ಅವರ ಮತ್ತೊಂದು ವಿಶಿಷ್ಟ ಕೃತಿ ‘ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ನಮತೀಯರು-ಡೆಮೊಕ್ರಾಟ್ಸ್ ಆ್ಯಂಡ್ ಡಿಸ್ಸೆಂಟರ್ಸ್‌’
ವಿದ್ವತ್ಪೂರ್ಣ ಅಧ್ಯಯನಕ್ಕೆ, ಶಾಸ್ತ್ರಬದ್ಧ ಸಂಶೋಧನೆಗೆ, ಎಚ್ಚರ ತಪ್ಪದ ವಿಶ್ಲೇಷಣೆಗೆ ಹೆಸರಾಗಿರುವ ರಾಮಚಂದ್ರ ಗುಹ ಅವರ ಹದಿನಾರು ಪ್ರೌಢ ಪ್ರಬಂಧಗಳ ಈ ಸಂಕಲನದ ವಸ್ತು, ವ್ಯಾಪ್ತಿ ಮತ್ತು ವಿಷಯ ವಿನ್ಯಾಸಗಳ ಹರಹು-ವಿಸ್ತಾರ ವಿವಕ್ಷೆಗಳು ಬಹುಮುಖ ಸ್ವರೂಪದವು. ಭಾರತದ ಸಾಂಸ್ಕೃತಿಕ ವೈವಿಧ್ಯತೆಯಂತೆಯೇ ಬಹುತ್ವದ ವಿವಿಧ ಆಯಾಮಗಳಿಗೆ ಅಭಿಮುಖವಾಗಿ ರೂಪುಗೊಂಡಿರುವ ಪ್ರಬುದ್ಧ ರಚನೆಗಳು. ಆಗ್ರಹಪೂರ್ವಕವಾಗಿ ನಮ್ಮನ್ನು ಒಳಗುಮಾಡಿಕೊಳ್ಳುವ ಸಮಕಾಲೀನ ಭಾರತದ ಸಂವೇದನೆಗಳು ಇಲ್ಲಿ ಗುಹ ಅವರ ವಸ್ತುನಿಷ್ಠ ವಿಚಕ್ಷಣ ವಿಮರ್ಶೆ ಮತ್ತು ಪ್ರೌಢ ನೋಟಗಳಲ್ಲಿ ಪ್ರತಿಫಲನಗೊಂಡು ಪಾರದರ್ಶಕ ವಾಗಿವೆ. ಪ್ರಚಲಿತವೂ ವಿಚಲಿತವೂ ಆಗಿದೆ.
ಇಲ್ಲಿ ಎರಡು ಮುಖ್ಯ ಭಾಗಗಳಾಗಿ ಲೇಖನಗಳನ್ನು ವಿಂಗಡಿಸಲಾಗಿದೆ. ರಾಜಕಾರಣ ಮತ್ತು ಸಮಾಜ ಅಧ್ಯಾಯದಲ್ಲಿ ಸ್ವಾತಂತ್ರೋತ್ತರ ಭಾರತದ ರಾಜಕೀಯ ಮತ್ತು ಸಾಮಾಜಿಕ ಏಳುಬೀಳುಗಳ ಕಡೆಗೆ ಕಣ್ಣು ಹೊರಳಿಸಲಾಗಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ದೀರ್ಘಾಯುತ ವಿಳಂಬಿತ ಮರಣ ಲೇಖನದಲ್ಲಿ, ಕಾಂಗ್ರೆಸ್ ಪಕ್ಷದ ಏಳು ಬೀಳುಗಳನ್ನು ಭಾರತದ ಏಳು ಬೀಳುಗಳ ಜೊತೆಗೆ ಇಟ್ಟು ಚರ್ಚಿಸ ಲಾಗಿದೆ. ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಇರುವ ಎಂಟು ಬೆದರಿಕೆಗಳು, ಚೈನಾ ಮುಖೇನ ಚಿಂತನೆ, ಭಾರತ ಮತ್ತು ಶ್ರೀಲಂಕಾಗಳಲ್ಲಿ ಪ್ರಜಾಪ್ರಭುತ್ವ ಮತ್ತು ಹಿಂಸಾಚಾರ ಮೊದಲಾದ ವಿಷಯಗಳನ್ನು ಈ ಅಧ್ಯಾಯ ಒಳಗೊಂಡಿದೆ.
ಎರಡನೆ ಅಧ್ಯಾಯವನ್ನು ತತ್ವ ಸಿದ್ಧಾಂತಗಳು ಮತ್ತು ಧೀಮಂತರು ಎಂದು ವಿಂಗಡಿಸಲಾಗಿದೆ. ಭಾರತದ ಮೇಲೂ ವಿಶ್ವದ ಮೇಲೂ ಪರಿಣಾಮ ಬೀರಿರುವ ಮಹಾನ್ ಚಿಂತಕರನ್ನು ಆಯ್ಕೆ ಮಾಡಿಕೊಂಡು, ಅವರ ಚಿಂತನೆಗಳನ್ನು ಮುಂದಿಟ್ಟು ವರ್ತಮಾನವನ್ನು ವಿಶ್ಲೇಷಿಸಲಾಗಿದೆ. ಗುಹಾ ಅವರ ಮಹತ್ವದ ಹಲವು ಕೃತಿಗಳನ್ನು ಕನ್ನಡಕ್ಕೆ ತಂದಿರುವ ಜಿ. ಎನ್ ರಂಗನಾಥರಾವ್ ಅವರೇ ಈ ಕೃತಿಯನ್ನೂ ಅನುವಾದಿಸಿದ್ದಾರೆ. ರಂಗನಾಥ್ ಅವರ ಸಮರ್ಥ ಅನುವಾದ ಗುಹ ಅವರ ಬರಹಗಳಿಗೆ ಕನ್ನಡದ ತಾಜಾತನವನ್ನು ಕೊಟ್ಟಿದೆ. 356 ಪುಟಗಳ ಈ ಬೃಹತ್ ಕೃತಿಯನ್ನು ವಸಂತ ಪ್ರಕಾಶನ ಬೆಂಗಳೂರು ಹೊರತಂದಿದ್ದಾರೆ. ಕೃತಿಯ ಮುಖಬೆಲೆ 270.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)