varthabharthi

ಸಂಪಾದಕೀಯ

ಲಂಗು ಲಗಾಮಿಲ್ಲದ ನಾಲಗೆ

ವಾರ್ತಾ ಭಾರತಿ : 21 Nov, 2017

ಈ ರಾಜ್ಯದ ಬಿಜೆಪಿ ನಾಯಕರಿಗೆ ಏನಾಗಿದೆ? ಅವರೇಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ? ಸದಾ ಸಂಸ್ಕೃತಿಯ ಪಾಠ ಮಾಡುವ ಸಂಘಪರಿವಾರದ ಶಾಖೆಯಲ್ಲಿ ಬೆಳೆದ ಇವರ ನಾಲಗೆಗೆ ಏನಾಗಿದೆ? ನಾಲಗೆಯನ್ನು ಏಲ್ಲೆಲ್ಲೋ ಏಕೆ ಹರಿಯಬಿಡುತ್ತಿದ್ದಾರೆ? ಇಂತಹ ನಾಲಗೆಯನ್ನು ನೋಡಿಯೇ ದಾಸರು ''ನೀಚ ಬುದ್ಧಿಯ ಬಿಡು ನಾಲಗೆ'' ಎಂದು ಹಾಡಿರಬಹುದು. ಇನ್ನು ಐದಾರು ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಬಿಜೆಪಿ ನಾಯಕರ ಬಯಕೆಗೆ ಯಾರ ಅಭ್ಯಂತರವೂ ಇಲ್ಲ. ಅದಕ್ಕಾಗಿ ಅವರು ಪರಿವರ್ತನಾ ಯಾತ್ರೆ ಕೈಗೊಂಡಿದ್ದಾರೆ. ಈ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಕೆಲ ನಾಯಕರು ಆಡುತ್ತಿರುವ ಮಾತುಗಳನ್ನು ಕೇಳಿದರೆ ಅವರ ಮಾನಸಿಕ ಆರೋಗ್ಯದ ಬಗ್ಗೆ ಆತಂಕ ಉಂಟಾಗುತ್ತದೆ. ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸ್ಥಾನಮಾನದ ಘನತೆಯನ್ನು ಮರೆತು ಈಗಿನ ಮುಖ್ಯಮಂತ್ರಿಯ ಅತ್ಯಂತ ಅಸಭ್ಯವಾಗಿ ಟೀಕಿಸುತ್ತಿದ್ದಾರೆ.

ಏಕವಚನದಲ್ಲಿ ಬೈಯ್ಯುತ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುವುದಾಗಿ ಅಬ್ಬರಿಸುತ್ತಿದ್ದಾರೆ. ಯಡಿಯೂರಪ್ಪ ಈ ರೀತಿ ಮಾತನಾಡಿದರೆ ಅವರ ವಿರುದ್ಧ ಒಳಗೊಳಗೇ ಹಲ್ಲುಕಡಿಯುತ್ತಿರುವ ಈಶ್ವರಪ್ಪನವರು ಮಂಗಳೂರಿನಲ್ಲಿ ಧಾರ್ಮಿಕ ನಂಬಿಕೆಯೊಂದರ ಬಗ್ಗೆ ಆಡಿದ ಮಾತು ವಿವಾದದ ಅಲೆ ಎಬ್ಬಿಸಿದೆ. ಇದೇ ಈಶ್ವರಪ್ಪ ಚಿತ್ರದುರ್ಗದಲ್ಲಿ ಸಿದ್ದರಾಮಯ್ಯನವರ ಗಂಡಸುತನದ ಬಗ್ಗೆ ಮಾತನಾಡಿದ್ದಾರೆ. ಅವರು ಆಡಿದ ಮಾತುಗಳನ್ನೆಲ್ಲ ಇಲ್ಲಿ ಬರೆಯಲು ಸಂಕೋಚವಾಗುತ್ತದೆ. ಇನ್ನು ಕಾರವಾರದಿಂದ ಲೋಕಸಭೆಗೆ ಚುನಾಯಿತರಾಗಿ ಬಂದಿರುವ, ಈಗ ಕೇಂದ್ರದಲ್ಲಿ ಸಚಿವರಾಗಿರುವ ಅನಂತಕುಮಾರ ಹೆಗಡೆ ಅವರು ಹೋದಲ್ಲೆಲ್ಲ ತಮ್ಮ ಭಾಷಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ವಿಷಕಾರುತ್ತಾರೆ. ಸಿದ್ದರಾಮಯ್ಯನವರು ವೋಟಿಗಾಗಿ ಯಾರದೋ ಬೂಟ್ ನೆಕ್ಕುತ್ತಾರೆಂದು ಇತ್ತೀಚೆಗೆ ಕಿತ್ತೂರಿನಲ್ಲಿ ಟೀಕಿಸಿದ್ದಾರೆ. ಇನ್ನು ಬೆಳಗಾವಿಯಲ್ಲಿ ಬಿಜೆಪಿ ಶಾಸಕರೊಬ್ಬರಿದ್ದಾರೆ. ಅವರ ಹೆಸರು ಸಂಜಯ್ ಪಾಟೀಲ್ ಇವರಿಗೆ ತಾನೇನು ಮಾತನಾಡುತ್ತಿದ್ದೇನೆ ಎಂಬ ಅರಿವು ಕೂಡಾ ಮೈಮೇಲೆ ಇಲ್ಲ. ಸೋಮವಾರ ಬೆಳಗಾವಿಯ ಪ್ರತಿಭಟನಾ ಸಭೆಯೊಂದರಲ್ಲಿ ಮುಖ್ಯಮಂತ್ರಿಯವರು ಸೆಗಣಿ ತಿಂದು ಧರ್ಮಸ್ಥಳಕ್ಕೆ ಹೋಗಿದ್ದರೆಂದು ಅತ್ಯಂತ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾರೆ.
 
ಯಡಿಯೂರಪ್ಪ ಮತ್ತು ಈಶ್ವರಪ್ಪ ಹಿಂದೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಾಗಿದ್ದವರು. ಮುಂದೆ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಇಂತಹವರು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವಾಗ ಮೈಮೇಲೆ ಎಚ್ಚರ ಇಟ್ಟುಕೊಂಡು ಮಾತನಾಡಬೇಕು. ತಮ್ಮ ಮಾತಿಗೆ ಸಭ್ಯತೆಯ ಗೆರೆಯನ್ನು ಎಳೆದುಕೊಳ್ಳಬೇಕು. ತಮ್ಮ ಮಾತು ಕೇಳಿದ ಸಭಿಕರು ಅಸಹ್ಯ ಪಡುತ್ತಾರೆ ಎಂಬ ಅರಿವು ಅವರಿಗೆ ಇರಬೇಕು. ತಮ್ಮ ನಾಯಕ ಹೀಗೆ ಮಾತನಾಡುವುದನ್ನು ಕೇಳಿ ಉತ್ತೇಜಿತರಾದ ಬೆಳಗಾವಿಯ ಬಿಜೆಪಿ ಶಾಸಕರೊಬ್ಬರು ''ಮುಖ್ಯಮಂತ್ರಿ ಸಿದ್ದರಾಮಯ್ಯನವರ ಡಿಎನ್‌ಎ ಪರೀಕ್ಷೆ ಮಾಡಿಸಿ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು'' ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಮಾತುಗಳಿಂದ ಜನ ತಮಗೆ ಮತ ಹಾಕುತ್ತಾರೆಂದು ಅವರು ಭಾವಿಸಿದ್ದರೆ ಅದು ಅವರ ಮೂರ್ಖತನವಾಗುತ್ತದೆ. ಇಂತಹ ಭಾಷಣಗಳಿಂದ ಮಾಧ್ಯಮಗಳಲ್ಲಿ ಒಂದಿಷ್ಟು ಪ್ರಚಾರ ಗಿಟ್ಟಿಸಬಹುದು. ಆದರೆ, ಜನ ಅದನ್ನು ಮೆಚ್ಚುವುದಿಲ್ಲ ಎಂಬುದನ್ನು ಇವರು ತಿಳಿದಂತಿಲ್ಲ. ಇತ್ತೀಚೆಗಂತೂ ನಾಲಗೆ ಕತ್ತರಿಸುತ್ತೇನೆ, ತಲೆ ತೆಗೆಯುತ್ತೇನೆ, ಕಾಲು ಮುರಿಯುತ್ತೇನೆ ಎಂಬ ಮಾತುಗಳು ನಮ್ಮ ರಾಜಕಾರಣಿಗಳ ಬಾಯಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತಿವೆ.

ಕರ್ನಾಟಕದಲ್ಲಿ ಹಿಂದೆ ದೇವರಾಜಅರಸು, ವೀರೇಂದ್ರ ಪಾಟೀಲ್, ಕೆ.ಎಚ್. ಪಾಟೀಲ್, ರಾಮಕೃಷ್ಣ ಹೆಗಡೆ, ಬಿ.ಡಿ.ಜತ್ತಿ ಅಂತಹ ರಾಜಕಾರಣಿಗಳನ್ನು ನೋಡಿದ್ದೇವೆ. ಅವರೆಂದೂ ಈ ರೀತಿ ನಾಲಗೆಯ ಮೇಲೆ ಹಿಡಿತ ಕಳೆದುಕೊಂಡು ಮಾತನಾಡುತ್ತಿರಲಿಲ್ಲ. ಬಿಜೆಪಿ ಪಕ್ಷದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಕೂಡಾ ಸಂಸತ್‌ನ ಒಳಗಾಗಲಿ, ಹೊರಗಾಗಲಿ ಎಂದೂ ಸಭ್ಯತೆಯ ಎಲ್ಲೆ ಮೀರಿ ಮಾತನಾಡುತ್ತಿರಲಿಲ್ಲ. ಎದುರಾಳಿಗಳನ್ನು ಅವರು ಅತ್ಯಂತ ಗೌರವದಿಂದಲೇ ಕಾಣುತ್ತಿದ್ದಾರೆ. ಆದರೆ, ನಮ್ಮ ರಾಜ್ಯದ ಬಿಜೆಪಿ ನಾಯಕರಿಗೆ ಅಧಿಕಾರಕ್ಕೆ ಬರುವ ಮುನ್ನವೇ ಅಧಿಕಾರದ ಪಿತ್ತ ನೆತ್ತಿಗೇರಿದೆ. ರಾಜ್ಯ ಚುನಾವಣಾ ಪ್ರಚಾರದಲ್ಲಿ ಆಡಳಿತ ಪಕ್ಷಕ್ಕಿಂತ ಒಂದು ಹೆಜ್ಜೆ ಮುಂದಿರುವ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ನಾಯಕರು ಅತ್ಯಂತ ಆಕ್ಷೇಪಾರ್ಹ ಭಾಷಣಗಳನ್ನು ಮಾಡುತ್ತಿದ್ದಾರೆ. ಇವರ ಭಾಷಣದಿಂದ ಪ್ರಚೋದಿತರಾದ ಕೆಲ ಕಾಂಗ್ರೆಸ್ ರಾಜಕಾರಣಿಗಳೂ ಕೂಡಾ ತಾವೇನು ಕಡಿಮೆ ಎಂಬಂತೆ ಅಷ್ಟೇ ಕೆಟ್ಟ ಭಾಷೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷದ ಪ್ರಚೋದನೆಯಿಂದ ಆಳುವ ಪಕ್ಷ ಕೆರಳಬಾರದು. ಬಿಜೆಪಿ ನಾಯಕರು ಈ ರೀತಿ ಮಾತನಾಡುವುದು ಹೊಸದೇನಲ್ಲ. ಹರ್ಯಾಣದ ಬಿಜೆಪಿ ನಾಯಕರೊಬ್ಬರು 'ಪದ್ಮಾವತಿ' ಚಿತ್ರದ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆ ಅವರ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂ. ಬಹುಮಾನ ಕೊಡುವುದಾಗಿ ಬಹಿರಂಗವಾಗಿ ಘೋಷಿಸಿದರು. ಬಿಜೆಪಿ ನಾಯಕರಿಂದ ಇಂತಹ ಮಾತುಗಳು ಆಗಾಗ ಕೇಳಿ ಬರುತ್ತಲೇ ಇವೆ. ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರು ಜನರ ಮನಸ್ಸನ್ನು ಗೆಲ್ಲುವ ಮಾತನ್ನು ಆಡಬೇಕಾಗಿತ್ತು. ರಾಜ್ಯದ ಅಧಿಕಾರಾರೂಢ ಪಕ್ಷದ ವೈಫ್ಯಲ್ಯಗಳನ್ನು ಬಿಡಿಬಿಡಿಯಾಗಿ ಜನರಿಗೆ ಬಿಡಿಸಿಹೇಳಬೇಕಾಗಿತ್ತು.

ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಬಹುದಾಗಿತ್ತು. ಆದರೆ, ಅದಕ್ಕೆ ತದ್ವಿರುದ್ಧವಾಗಿ ವೈಯಕ್ತಿಕ ನಿಂದನೆಗೆ ಇಳಿಯುವುದು ಸರಿಯಲ್ಲ. ಪದೇ ಪದೇ ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಡಿಯೂರಪ್ಪನವರು ತಾವು ಜೈಲಿಗೆ ಹೋಗಿ ಬಂದಿರುವುದನ್ನು ಮರೆತಿದ್ದಾರೆ. ಈ ಪರಿವರ್ತನಾ ಯಾತ್ರೆಯಲ್ಲಿ ಅವರು ಹೋದಲ್ಲಿ, ಬಂದಲ್ಲಿ ಅಸಭ್ಯ ಭಾಷೆಯ ಪ್ರಯೋಗ ಮಾಡುತ್ತಿರುವ ಬಗ್ಗೆ ಅವರ ಕಾರ್ಯಕರ್ತರಿಗೂ ಕೂಡಾ ರೋಸಿ ಹೋಗಿದೆ.
 ಇಂತಹ ಭಾಷೆಯಲ್ಲಿ ಮಾತನಾಡುವ ಮುನ್ನ ಬಿಜೆಪಿ ನಾಯಕರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಮ್ಮನ್ನು ಏಕೆ ತಿರಸ್ಕರಿಸಿದರು ಎಂಬುದನ್ನು ತಿಳಿದುಕೊಳ್ಳಬೇಕಾಗಿತ್ತು. ಈ ಹಿಂದೆ ಬಿಜೆಪಿಗೆ ಜನರು ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನು ನೀಡಿದ್ದರು. ಬಹುಮತಕ್ಕೆ ಕೊರತೆ ಉಂಟಾದಾಗ ಬಿಜೆಪಿ ನಾಯಕರು ನಡೆಸಿದ ಆಪರೇಶನ್ ಕಮಲಕ್ಕೆ ಜನತೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ, ಜನತೆ ನೀಡಿದ್ದ ಅಧಿಕಾರವನ್ನು ಬಿಜೆಪಿ ನಾಯಕರು ದುರುಪಯೋಗ ಪಡಿಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದ ಹಗರಣದಲ್ಲಿ ಜೈಲಿಗೆ ಹೋಗಿ ಬಂದರು. ಮುಖ್ಯಮಂತ್ರಿ ಮಾತ್ರವಲ್ಲ, ಇನ್ನೂ ಇಬ್ಬರು ಸಚಿವರೂ ಅಕ್ರಮ ಗಣಿಗಾರಿಕೆ, ರಿಯಲ್ ಎಸ್ಟೇಟ್ ಅವ್ಯವಹಾರದಲ್ಲಿ ಜೈಲು ವಾಸ ಅನುಭವಿಸಿ ಬಂದರು. ಸದನದಲ್ಲಿ ನೀಲಿ ಚಿತ್ರ ನೋಡಿದ ಮೂವರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು. ಹೀಗೆ ಹಗರಣಗಳ ಸರಮಾಲೆಯೇ ಸುತ್ತಿಕೊಂಡು ಪಕ್ಷವನ್ನು ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಿತ್ತು.

ಜನತೆ ತಿರಸ್ಕರಿಸಿದ ಆನಂತರವಾದರೂ ಬಿಜೆಪಿ ನಾಯಕರಿಗೆ ಬುದ್ಧಿ ಬರಬೇಕಾಗಿತ್ತು. ತಮ್ಮ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ತಮ್ಮ ತಪ್ಪುಗಳ ಬಗ್ಗೆ ಜನರ ಕ್ಷಮೆ ಕೋರಿ ಇನ್ನು ಮುಂದೆ ತಪ್ಪು ಮಾಡುವುದಿಲ್ಲ. ಇನ್ನೊಂದು ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿಕೊಳ್ಳಬಹುದಿತ್ತು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಜನರ ಮುಂದೆ ಅತ್ಯಂತ ಉದ್ಧಟವಾಗಿ ಅಸಭ್ಯತನದಿಂದ ಮಾತನಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಜನರಿಗೆ ''ನೀವು ಮತ ನೀಡಿದರೆ ನಾವು ಅಧಿಕಾರಕ್ಕೆ ಬರುತ್ತೇವೆ'' ಎಂದು ವಿನಯ ಪೂರ್ವಕವಾಗಿ ಹೇಳುವ ಬದಲಾಗಿ, ಐದು ತಿಂಗಳ ನಂತರ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇವೆ ಮತ್ತು ಖಾಸಗಿ ಆಸ್ಪತ್ರೆ ತಿದ್ದುಪಡಿ ಮಸೂದೆ ರದ್ದುಪಡಿಸುತ್ತೇವೆ ಎಂದೆಲ್ಲಾ ಉದ್ಧಟತನದಿಂದ ಮಾತನಾಡುವುದರಿಂದ ಇವರ ಮಾತು ಕೇಳಿ ಜನರಿಗೆ ರೋಸಿ ಹೋಗಿದೆ. ಅಂತಲೇ, ತುಮಕೂರು ಮುಂತಾದ ಕಡೆ ಇವರ ಸಭೆಗಳಲ್ಲಿ ಗಲಾಟೆಗಳು ಆಗಿವೆ. ಬಿಜೆಪಿ ನಾಯಕರು ಇನ್ನಾದರೂ ತಮ್ಮ ನಾಲಗೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಜನರ ಮುಂದೆ ಸಭ್ಯತೆಯಿಂದ ಮಾತನಾಡಬೇಕು. ಇಲ್ಲವಾದರೆ ಜನರ ತಿರಸ್ಕಾರಕ್ಕೆ ಪಾತ್ರರಾಗಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)