200 ಮೀ. ಓಟದಲ್ಲಿ ನಾಸಿರ್ ಅಹ್ಮದ್ಗೆ ಚಿನ್ನ
ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ವಿಜಯವಾಡ, ನ.21: ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 200 ಮೀ. ಓಟದಲ್ಲಿ ನಾಸಿರ್ ಅಹ್ಮದ್ ಚಿನ್ನದ ಪದಕ ಜಯಿಸಿದರು. ಈ ಮೂಲಕ ಟೂರ್ನಿಯಲ್ಲಿ ಅವಳಿ ಚಿನ್ನ ಜಯಿಸಿದ್ದಾರೆ. ದಿಲ್ಲಿಯ ಓಟಗಾರ ಅಹ್ಮದ್ 21.73 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಮಹಾರಾಷ್ಟ್ರದ ಕರಣ್(21.99 ಸೆ.) ಹಾಗೂ ಕರ್ನಾಟಕದ ಶಶಿಕಾಂತ್(22.00) ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ರಿಕ್ಷಾ ಚಾಲಕನ ಮಗನಾಗಿರುವ ನಾಸಿರ್ ಸೆಪ್ಟಂಬರ್ನಲ್ಲಿ ದಿಲ್ಲಿ ರಾಜ್ಯ ಅಥ್ಲೆಟಿಕ್ಸ್ ಕೂಟದಲ್ಲಿ ಡಬಲ್ ಪ್ರಶಸ್ತಿ ಜಯಿಸಿದ್ದರು. ನಾಸಿರ್ ಇದೇ ಟೂರ್ನಿಯಲ್ಲಿ ಶನಿವಾರ ನಡೆದ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಮುರಿದಿದ್ದರು. 10.85 ಸೆಕೆಂಡ್ನಲ್ಲಿ ಗುರಿ ತಲುಪಿದ್ದ ನಾಸಿರ್ ತಮಿಳುನಾಡಿನ ಎ.ಎಸ್. ಅರುಣ್ ಅವರ ದಾಖಲೆಯನ್ನು (11.1 ಸೆ.)ಮುರಿದಿದ್ದರು. ಬಾಲಕರ ಅಂಡರ್-18 ಟ್ರಿಪಲ್ ಜಂಪ್ನಲ್ಲಿ ತಮಿಳುನಾಡಿನ ಮಣಿ ರಾಜ್ 15.83 ಮೀ.ದೂರ ಜಿಗಿಯುವ ಮೂಲಕ ಚಿನ್ನದ ಪದಕ ಜಯಿಸಿದ್ದಾರೆ. ಕೇರಳದ ಪ್ರಣವ್ ನಿರ್ಮಿಸಿದ್ದ ಹಳೆಯ ದಾಖಲೆ(15.63 ಮೀ.)ಯನ್ನು ಮುರಿದಿದ್ದಾರೆ.