varthabharthi

ಅನುಗಾಲ

ಕಟಕಟೆಯಲ್ಲಿ ಖಾಸಗಿ ವೈದ್ಯಕೀಯ

ವಾರ್ತಾ ಭಾರತಿ : 23 Nov, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಭಾವನೆಗಳನ್ನು ಮಾತ್ರ ಬಿತ್ತಿ ವಿಚಾರಗಳನ್ನು ಸ್ಪರ್ಶಿಸದಿದ್ದರೆ ಅವು ಫಲ ಕೊಡದೆ ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನೇ ಉಂಟು ಮಾಡುತ್ತವೆ. ವ್ಯವಸ್ಥೆಯ ಲೋಪದೋಷಗಳು ಹೊರಗೆ ಬರುವುದೇ ಇಲ್ಲ. ಯಾವುದೇ ಚರ್ಚೆ, ಅಭಿವ್ಯಕ್ತಿ ಆಯಾಯ ವಿವಾದಾಂಶವನ್ನು ಆಧರಿಸಿರಬೇಕೇ ಹೊರತು ರಾಜಕೀಯ ನಿಲುವನ್ನಲ್ಲ.


2017ರ ಬೆಳಗಾವಿ ಅಧಿವೇಶನದಲ್ಲಿ ಮೌಢ್ಯಗಳನ್ನು ನಿಷೇಧಿಸುವ ಕ್ರಾಂತಿಕಾರಿ ಕಾಯ್ದೆಯು ಅಂಗೀಕರಿಸಲ್ಪಟ್ಟರೂ ಅದಕ್ಕಿಂತಲೂ ಹೆಚ್ಚು ಪ್ರಚಾರ ಪಡೆದುಕೊಂಡದ್ದು ಖಾಸಗಿ ವೈದ್ಯಕೀಯ ಸಂಸ್ಥೆ ಮತ್ತು ವೃತ್ತಿನಿರತ ಖಾಸಗಿ ವೈದ್ಯರುಗಳ ಕುರಿತಂತೆ ಬರಲಿರುವ ತಿದ್ದುಪಡಿ. 2007ರ ಈ ಕಾಯ್ದೆಗೆ 2017ರಲ್ಲಿ ತರಲಿರುವ ತಿದ್ದುಪಡಿಯ ಕುರಿತು ಕರ್ನಾಟಕದಾದ್ಯಂತ ವಿವಿಧ ಸಂಘ ಸಂಸ್ಥೆಗಳ ವೈದ್ಯರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಸರಕಾರ ಅದರಲ್ಲೂ ಆರೋಗ್ಯ ಸಚಿವರು ಶತಾಯ ಗತಾಯ ಈ ತಿದ್ದುಪಡಿಯನ್ನು ತಂದೇ ತರುತ್ತೇವೆಂದು ಹಠ ಮತ್ತು ಪಣ ತೊಟ್ಟರು. ಇನ್ನು ಕೆಲವರು ರಾಜಕೀಯ ಕಾರಣಗಳಿಗಾಗಿ ಸರಕಾರ ಮನಸ್ಸುಮಾಡಿದ ಈ ತಿದ್ದುಪಡಿಯನ್ನು ಬೆಂಬಲಿಸಿದರು. ಈ ಪರಿಸ್ಥಿತಿ ಉಲ್ಬಣವಾಗುತ್ತದೆಂಬ ನಿರೀಕ್ಷೆಯಲ್ಲಿ ಭಾರತೀಯ ಜನತಾ ಪಾರ್ಟಿಯು ತಾವು ಅಧಿಕಾರಕ್ಕೆ ಬಂದರೆ 24 ಗಂಟೆಗಳೊಳಗೆ ಈ ಕಾಯ್ದೆಯನ್ನು ರದ್ದುಪಡಿಸುತ್ತೇವೆಂದು ಹೇಳಿದರು. ಇವೆಲ್ಲ ಚುನಾವಣಾ ಗಿಮಿಕ್‌ಗಳೆಂದು ಬೇರೆ ಹೇಳಬೇಕಾಗಿಲ್ಲ.

ಕೊನೆಗೂ ಮಂಡಿಸಲಿರುವ ತಿದ್ದುಪಡಿಯು ಇಕ್ಕಡೆಯವರನ್ನು ಸಮಾಧಾನ ಪಡಿಸುವಂತಿದೆ. ಖಾಸಗಿಯ ವೆಚ್ಚಕ್ಕೆ ಕಡಿವಾಣವನ್ನು ಸರಕಾರ ಸಡಿಲಿಸಿದೆ. ವಿಚಾರಣಾ ಪ್ರಾಧಿಕಾರದ ಸ್ಥಾನಮಾನ ಬದಲಾಗಲಿದೆ. ವೈದ್ಯರ ಗೌರವಕ್ಕೆ ಅಪಚಾರವಾಗುವುದನ್ನು ಸಾಕಷ್ಟು ಶಮನಗೊಳಿಸಲಾಗಿದೆ. (ಈ ವಿವರಗಳು ಇಲ್ಲಿ ಗೌಣ.) ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಿರುವ ಈ ತಿದ್ದುಪಡಿಯಿಂದಾಗಿ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ತೃಪ್ತಿಪಟ್ಟರೆ ಸರಕಾರವು ತಾನೂ ಗೆದ್ದಿದ್ದೇನೆಂದು ಬಿಂಕಪಟ್ಟಿತು. ಎಲ್ಲರೂ ಸಂತೋಷಿಗಳೇ.

ಆದರೆ ಹುತ್ತವ ಬಡಿದರೆ ಹಾವು ಸಾಯದು. ಬಹುತೇಕ ಇಂತಹ ಪ್ರಸಂಗಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ಉದ್ದೇಶಗಳು ಗೆಲ್ಲುವುದಿಲ್ಲ. ಏಕೆಂದರೆ ಮುಂದೆ ನಡೆಯಲಿರುವ ಚುನಾವಣೆ ಎಲ್ಲ ಪರಿಕರಗಳಿಂದ ಹೆಚ್ಚು ಪ್ರಭಾವ ಬೀರುತ್ತದೆ. ಯಾವುದನ್ನು ಮಾಡಿದರೆ ಅಥವಾ ಮಾಡದಿದ್ದರೆ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು/ಸ್ಥಾನಗಳನ್ನು ಗೆಲ್ಲಬಹುದು ಎಂಬುದರ ಮೇಲೆಯೇ ಈ ದೇಶದ, ರಾಜ್ಯಗಳ ಎಲ್ಲ ಸಾರ್ವಜನಿಕ ಚಿಂತೆಯೂ ಕಾರ್ಯವೆಸಗುತ್ತದೆ. (ಈ ಚಿಂತೆಯನ್ನು ಬಹುತೇಕ ಮಂದಿ ‘ಚಿಂತನೆ’ ಎಂದು ತಪ್ಪುಪ್ರಯೋಗ ಮಾಡುತ್ತಾರೆ! ಇಲ್ಲಿ ಚಿಂತನೆಯೂ ಇಲ್ಲ; ಮಣ್ಣೂ ಇಲ್ಲ!) ನನಗೆ ಇದೆಲ್ಲದಕ್ಕಿಂತ ಹೆಚ್ಚು ಅಚ್ಚರಿಯನ್ನುಂಟುಮಾಡಿದ್ದು ನಮ್ಮ ಜನತೆಯ ಪ್ರತಿಕ್ರಿಯೆ. ಕಳೆದ ಕೆಲವು ವರ್ಷಗಳಲ್ಲಿ ಕಂಡುಬಂದ ಬೆಳವಣಿಗೆಯೆಂದರೆ ಸಮಾಜವು ಯಾವ ವಿಚಾರದಲ್ಲೂ ಅದರ ಮೂಲಭೂತ ಲಕ್ಷಣಗಳ, ಗುಣಾವಗುಣಗಳ ಕುರಿತು ಚಿಂತಿಸದೆ ಕೇವಲ ಭಾವನೆಗಳನ್ನು ಹರಿಯಬಿಡುತ್ತಾರೆ; ಚೆಲ್ಲಿಬಿಡುತ್ತಾರೆ. ಅಷ್ಟೇ ಅಲ್ಲ, ಇತರರನ್ನು ಉದ್ರೇಕಿಸುವ ಕೆಲಸವನ್ನೂ ಮಾಡುತ್ತಾರೆ. ತಮ್ಮ ಧೋರಣೆಯನ್ನು ಹೇಳುವುದಿಲ್ಲ.

ಕೋಮುವಾದವನ್ನು ವಿರೋಧಿಸುವುದೆಂದರೆ ಕಾಂಗ್ರೆಸ್ ಸರಕಾರದ ನಿಲುವನ್ನು ಅಷ್ಟೇ ಕುರುಡಾಗಿ ಬೆಂಬಲಿಸುವುದಲ್ಲ. ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದವರಲ್ಲಿ ಸರಕಾರಿ ಆಸ್ಪತ್ರೆಗಳನ್ನು ಬೆಂಬಲಿಸುತ್ತ ಅಲ್ಲಿಗೆ ಹೋಗದ ಸಾಮಾಜಿಕರೇ ಹೆಚ್ಚು. ಫಲಾಫಲಗಳ ವಿವೇಚನೆ ಪರಿಣಾಮದಿಂದ, ಫಲಿತಾಂಶದಿಂದ ಸೃಷ್ಟಿಯಾಗಬಾರದು. ಮಹಾಭಾರತದ ಕೊನೆಗೆ ಪಾಂಡವರು ಗೆದ್ದರು, ಧರ್ಮಕ್ಕೆ ಜಯ ಸಿಕ್ಕಿತು ಎಂದು ಮಾತ್ರ ಯೋಚಿಸಿದವರಿಗೆ ಯುದ್ಧದ ಭಯಾನಕ ಹಿಂಸೆ, ಕೊನೆಗೂ ಉಳಿದದ್ದೇನು ಮುಂತಾದವುಗಳ ಬಗ್ಗೆ ಗಮನ ಹರಿಯುವುದೇ ಇಲ್ಲ. ಯುಗಾಂತ್ಯದಲ್ಲಿ ಬದುಕಿ ಉಳಿದ ಚಿರಂಜೀವಿಗಳು ಮಾತ್ರ ಈ ದುರಂತವನ್ನು ಹೆಗಲಿನಲ್ಲಿ ಒಯ್ಯುತ್ತಾರೆ. ಮಹಾಭಾರತದ ಕರ್ತೃ ವ್ಯಾಸರಿಗೆ, ವರವೇ ಶಾಪವಾದ ಅಶ್ವತ್ಥಾಮರಿಗೆ ಈ ಭಾರದ ಅರಿವಿದ್ದಿರಬಹುದು. ವಾಸ್ತವವಾದಿ ಧರ್ಮರಾಜನಿಗೆ ಸ್ವಲ್ಪಅರಿವಿತ್ತು ಎಂಬುದು ಸ್ವರ್ಗಾರೋಹಣ ಪರ್ವದಲ್ಲಿ ವ್ಯಕ್ತವಾಗುತ್ತದೆ.

ಒಂದೇ ಬಾರಿ ಜನರು ಖಾಸಗಿ ವೈದ್ಯರ ವಿರುದ್ಧ ತಮ್ಮ ಎಲ್ಲ ಅಸಮಾಧಾನ ವನ್ನು ಪ್ರದರ್ಶಿಸಿದರು. ಮೊನ್ನೆ ನಡೆದ ಪ್ರತಿಭಟನೆಯಿಂದಾಗಿ ಅನೇಕರು ಚಿಕಿತ್ಸೆ ದಕ್ಕದೆ ಸತ್ತರೆಂಬ ಆಕ್ರೋಶವಿದೆ; ಮಾಧ್ಯಮಗಳಲ್ಲಿ ವರದಿಯಿದೆ. ಆದರೆ ಇಂತಹ ಪ್ರತಿಭಟನೆಯ ಹೊತ್ತಿನಲ್ಲೂ ಸರಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಿದ್ದುವಲ್ಲ? ಅಲ್ಲಿಗೇಕೆ ರೋಗಿಗಳು ಹೋಗಲಿಲ್ಲವೆಂಬುದಕ್ಕೆ ಯಾರೂ ಸಕಾರಣವನ್ನು ನೀಡದೆ ‘‘ಅಲ್ಲಿ ಚಿಕಿತ್ಸೆ ಚೆನ್ನಾಗಿರುವುದಿಲ್ಲ’’ ಎಂದಷ್ಟೇ ಹೇಳಿ ಜಾರಿಕೊಂಡಿದ್ದಾರೆ. ವೈದ್ಯರೆಂದರೆ ಖಾಸಗಿ ವೈದ್ಯರಯ್ಯ ಎಂಬ ಭಾವನೆಯು ‘ದಾಸರೆಂದರೆ ಪುರಂದರದಾಸರಯ್ಯ’ ಎಂಬ ದಾಸವಾಣಿಯ ಹಾಗೆ ಖಾಸಗಿ ವೈದ್ಯರನ್ನು ಹೊಗಳಿದ್ದೇ ಆಗಿದೆ.

ಏತನ್ಮಧ್ಯೆ ಸಾರ್ವಜನಿಕರು ವೈದ್ಯಕೀಯ ರಂಗ ಮತ್ತು ವ್ಯವಸ್ಥೆಯ ಬಹುಮುಖಗಳನ್ನು ಮರೆತರು. ಭಾವನೆಗಳನ್ನು ಮಾತ್ರ ಬಿತ್ತಿ ವಿಚಾರಗಳನ್ನು ಸ್ಪರ್ಶಿಸದಿದ್ದರೆ ಅವು ಫಲ ಕೊಡದೆ ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನೇ ಉಂಟು ಮಾಡುತ್ತವೆ. ವ್ಯವಸ್ಥೆಯ ಲೋಪದೋಷಗಳು ಹೊರಗೆ ಬರುವುದೇ ಇಲ್ಲ. ಯಾವುದೇ ಚರ್ಚೆ, ಅಭಿವ್ಯಕ್ತಿ ಆಯಾಯ ವಿವಾದಾಂಶವನ್ನು ಆಧರಿಸಿರಬೇಕೇ ಹೊರತು ರಾಜಕೀಯ ನಿಲುವನ್ನಲ್ಲ. ಹಾಗಿದ್ದರೆ ಬಹುಮತದ ಆಧಾರದಲ್ಲಿ ಮೋದಿ ಕೈಗೊಳ್ಳುವ ತಪ್ಪುನಿರ್ಧಾರಗಳನ್ನು ವಿರೋಧಿಸಬೇಕೇಕೆ?

ವೈದ್ಯಕೀಯ ಸಮಸ್ಯೆಯ ಬಗ್ಗೆ ಮತ್ತೆ ಬಂದರೆ- ಸಮಾಜಕ್ಕೆ ವೈದ್ಯರ ಅಗತ್ಯದ ಬಗ್ಗೆ ತಿಳಿವಳಿಕೆಯನ್ನು ಹೇಳಬೇಕಾದ್ದಿಲ್ಲ. ಇದೊಂದು ಅಗತ್ಯ ಸೇವೆಯೆಂಬ ಕಾರಣದಿಂದಲೇ ವ್ಯವಸ್ಥೆಯು ಆಡಳಿತವನ್ನು ಅಂದರೆ ಸರಕಾರವನ್ನು ಜನಾರೋಗ್ಯ ಅಥವಾ ಸಾರ್ವಜನಿಕ ಆರೋಗ್ಯದ ವಿಶ್ವಸ್ಥರೆಂದು ಬಗೆೆಯುತ್ತದೆ. ಹಾಗಿರುವಾಗ ಖಾಸಗಿ ವೈದ್ಯರಿಗೆ, ಖಾಸಗಿ ಆಸ್ಪತ್ರೆಗಳಿಗೆ ಅವಕಾಶವಾದದ್ದಾದರೂ ಹೇಗೆ ಎಂಬ ಮೂಲಭೂತ ಪ್ರಶ್ನೆಯನ್ನು ಉತ್ತರಿಸಬೇಕಾಗುತ್ತದೆ.

ವೈದ್ಯಕೀಯ ರಂಗ ಇಂದು ತನ್ನ ವಿಶ್ವಸನೀಯತೆಯನ್ನು ಸ್ವಲ್ಪಮಟ್ಟಿಗಾ ದರೂ ಕಳೆದುಕೊಂಡಿದೆ. ಜನರು ವೈದ್ಯರನ್ನು ಕಂಡರೆ ದೇವರನ್ನು ನೆನಪಿ ಸುವ ಕಾಲ ಒಂದಿತ್ತು; ಈಗಿಲ್ಲ. ರೋಗಿಗಳಿಗೆ ತಾವು ರೋಗಿಗಳು ಮಾತ್ರವಲ್ಲ-ಗ್ರಾಹಕರು, ಚಿಕಿತ್ಸೆಯೆಂದರೆ ಉಚಿತವೇನಲ್ಲ-ಹಣ ಪಾವತಿಸಿ ಕೊಳ್ಳುವ ಸರಕು ಎಂಬ ಧೋರಣೆ ಸಹಜ ಜನರಿಗಿದೆ. ಇಂತಹ ಟೀಕೆಗಳು ಶಿಕ್ಷಣ, ಕಾನೂನು ಈ ಮತ್ತು ಇಂತಹ ಎಲ್ಲ ಕ್ಷೇತ್ರಗಳ ಕುರಿತೂ ಇವೆ. ಅವನ್ನು ಇದಕ್ಕಿಂತ ಹೆಚ್ಚು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ.

ಆದರೆ ಸರಕಾರ ತನ್ನ ಆಸ್ಪತ್ರೆಗಳನ್ನು ಆಳುವ ರೀತಿಯಿಂದಾಗಿ ಒಟ್ಟಾರೆ ವೈದ್ಯಕೀಯ ವ್ಯವಸ್ಥೆಯೇ ಶಸ್ತ್ರಚಿಕಿತ್ಸೆಯನ್ನು ಬಯಸುವಷ್ಟು ರೋಗಗ್ರಸ್ತವಾಗಿದೆ. ವೈದ್ಯರ ಆಯ್ಕೆಯಿಂದ ಹಿಡಿದು ಚಿಕಿತ್ಸೆಯ, ಔಷಧ ಪೂರೈಕೆಯ ಮತ್ತು ಔಷಧೋಪಚಾರದ ವ್ಯವಸ್ಥೆಯಲ್ಲಿ ಒಂದು ರೀತಿಯ ನಿರಾಸಕ್ತಿ, ಅಪ್ರಾಮಾಣಿಕತೆ, ಭ್ರಷ್ಟತನ, ಕ್ರೌರ್ಯ ಹಾಗೂ ದುರಾಸೆಗೆ ಕಾರಣವಾಗಬಲ್ಲ ಪರಿಸ್ಥಿತಿಯಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಚಿಕಿತ್ಸೆಗಿಂತ ಹೆಚ್ಚಾಗಿ ಅಧಿಕಾರಶಾಹಿಗಳ ಮತ್ತು ರಾಜಕಾರಣಿಗಳ ದಯೆಯಿಂದ ಬದುಕುವ ವಾತಾವರಣವಿದೆ. ಜ್ಞಾನ-ವಿಜ್ಞಾನ ಕೇಂದ್ರಗಳಲ್ಲಿ ತಜ್ಞರ ಮೇಲೆ ಅಧಿಕಾರಶಾಹಿ ಮತ್ತು ರಾಜಕಾರಣ ನಿಯಂತ್ರಣ ಹೊಂದಬೇಕಾದ ಕ್ಷೇತ್ರಗಳು ಸೀಮಿತವಾಗಿರಬೇಕು. ಆದರೆ ಸರಕಾರಿ ವೈದ್ಯಕೀಯ ಒಂದು ವೃತ್ತಿಯಾಗಿರುವುದರ ಬದಲು ಜೋಳವಾಳಿಗೆಯ ಉದ್ಯೋಗವಾಗಿದೆ.

ಭಡ್ತಿ, ವರ್ಗಾವಣೆ ಇಲ್ಲೆಲ್ಲ ಭ್ರಷ್ಟ ರಾಜಕೀಯದ ದುರ್ವಾಸನೆಯಿಂದ ಸರಕಾರಿ ವೈದ್ಯರು ಬಳಲುತ್ತಾರೆ. ಇತರರಿಗೆ ಪರಿಶುದ್ಧತೆ, ಸ್ವಚ್ಛತೆಯ ಪಾಠ ಹೇಳಬೇಕಾದ ಸರಕಾರಿ ವೈದ್ಯರು ಜೈಲುಕೊಠಡಿಯಂತಹ ಪರಿಸರದಲ್ಲಿ ಯಾವ ಸೌಕರ್ಯಗಳೂ ಇಲ್ಲದೆ ದಣಿಯುತ್ತಾರೆ. ಮೇಲಾಗಿ ಒಬ್ಬರೋ ಇಬ್ಬರೋ ಪಟ್ಟಭದ್ರ ಹಿತಾಸಕ್ತಿಯ ವೈದ್ಯರಿದ್ದರೆ ಸಾಕು ಇಡೀ ಸರಕಾರಿ ಆಸ್ಪತ್ರೆ ಕೆಟ್ಟ ವ್ಯವಸ್ಥೆಯಿಂದ ನಾರುತ್ತದೆ. ಅಷ್ಟೇ ಅಲ್ಲ, ಸರಕಾರಿ ವೈದ್ಯರಿಗೆ ಖಾಸಗಿ ವೃತ್ತಿಗೂ ಅವಕಾಶ ನೀಡಿರುವುದರಿಂದ ವೈದ್ಯರೂ ಅಷ್ಟೇ: ರೋಗಿಗಳನ್ನು ಪ್ರತ್ಯೇಕವಾಗಿ ಖಾಸಗಿಯಾಗಿ ಶುಶ್ರೂಷೆ ಮಾಡಲು ತಮ್ಮ ಅಥವಾ ತಾವು ಪ್ರತ್ಯಕ್ಷ-ಪರೋಕ್ಷವಾಗಿ ಪಾಲುದಾರರಾದ ಇಲ್ಲವೆ ತಮ್ಮ ಆಪ್ತರ, ತಮ್ಮ ಪ್ರಭಾವಿ ವಲಯದ ಖಾಸಗಿ ಚಿಕಿತ್ಸಾಲಯಗಳಿಗೆ ಬರಹೇಳುತ್ತಾರೆ. ಹೀಗಾಗಿ ಎಷ್ಟೇ ಮಹತ್ತರವಾದ ಒಳ್ಳೆಯ ಉದ್ದೇಶ, ಆಶಯ, ಆಕಾಂಕ್ಷೆಗಳೊಂದಿಗೆ ಸೇರಿದ ವೈದ್ಯರೂ ಭ್ರಷ್ಟರಾಗುತ್ತಾರೆ. ಇಂತಹ ವಿಷವರ್ತುಲದ ನಡುವೆ ಇರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಉತ್ಸುಕವಾಗಿರುವ ಸರಕಾರ ಖಾಸಗಿಯವರ ಮೇಲೆ ನಿಯಂತ್ರಣ ಹೊಂದಬಯಸುವುದು ವಿಚಿತ್ರ. (ಸರಕಾರಿ ವಕೀಲರಿದ್ದರೂ ಕಾವೇರಿ ವಿವಾದಕ್ಕೆ ನರಿಮನ್ ಮುಂತಾದ ಖಾಸಗಿ ವಕೀಲರನ್ನು ನೇಮಿಸಿ ಸರಕಾರವು ಸುಮಾರು 120 ಕೋಟಿಗೂ ಮಿಕ್ಕಿ ಶುಲ್ಕ ಪಾವತಿಸಿದಾಗ ಯಾರೂ ಸರಕಾರವನ್ನು ಟೀಕಿಸಲಿಲ್ಲ!)

ವೈದ್ಯಕೀಯವೇ ವೃತ್ತಿ. ಸರಕಾರಿ ವೈದ್ಯಕೀಯ ಬರುವ ಮೊದಲೇ ಖಾಸಗಿ ವೈದ್ಯವೃತ್ತಿಯಿತ್ತು. ಈಗಂತೂ ಕಲುಷಿತ ಸರಕಾರಿ ವಾತಾವರಣದಿಂದಾಗಿ ಸ್ವತಂತ್ರವಾಗಿ ನಡೆಸುವ ಖಾಸಗಿ ವೈದ್ಯವೃತ್ತಿಯು ತಾನಾಗಿಯೇ ಅರಳಿದೆ. ಬಂಡವಾಳ ಹಾಕಿ ವೃತ್ತಿಯನ್ನು ನಡೆಸುವ ಯಾರೇ ಆಗಲಿ, ಆರ್ಥಿ ಕತೆಯ ಮೂಲ ತತ್ವಗಳಾದ ಪೂರೈಕೆ-ಬೇಡಿಕೆಗಳನ್ನವಲಂಬಿಸಿ ಬದುಕುತ್ತಾರೆ. ಹೆಚ್ಚು ಬೇಡಿಕೆಗಳಿರುವ ವೃತ್ತಿಪರರು ಹೆಚ್ಚು ಸಂಪಾದಿಸಲು ಪ್ರಯತ್ನಿಸುತ್ತಾರೆ. ಸಹಜವಾಗಿಯೇ ಅವರ ಶುಲ್ಕ ಹೆಚ್ಚಿರುತ್ತದೆ. ಇದಕ್ಕೆ ಕಾರಣಗಳು ಹಲವಾರು: ಖಾಸಗಿ ವೃತ್ತಿಯಲ್ಲಿ ಭಡ್ತಿಯಿಲ್ಲ; ನಿಗದಿತ ಆದಾಯವಿಲ್ಲ; ಭದ್ರತೆಯಿಲ್ಲ; ಸವಲತ್ತುಗಳಿಲ್ಲ; ಪದ ನಿಮಿತ್ತ ಶಾಸನಾತ್ಮಕ ಸ್ಥಾನಮಾನಗಳಿಲ್ಲ. ಆದ್ದರಿಂದ ಯಾವಾಗ ಬೇಡಿಕೆಯಿರುತ್ತದೆಯೋ ಆಗ ವೈದ್ಯರು ತಮ್ಮ ಪರಿಣತಿಗೆ ಮತ್ತು ಬೇಡಿಕೆಗನುಗುಣವಾಗಿ ಸಂಪಾದಿಸುತ್ತಾರೆ. ಹೀಗಲ್ಲದಿದ್ದರೆ ಎಲ್ಲ ವೈದ್ಯರಿಗೂ ಸಮಾನ ಸಂಪಾದನೆಯಾಗಬೇಕಿತ್ತು; ಸಮಾನ ಸಂಖ್ಯೆಯ ರೋಗಿಗಳಿರಬೇಕಾಗಿತ್ತು. ಆದ್ದರಿಂದ ಖಾಸಗಿತನ ಅನಿಶ್ಚಿತ; ಆದರೆ ರೋಚಕ. ಅದೃಷ್ಟವಿದ್ದರೆ ಆಕಾಶವೇ ಮಿತಿ.

ಸರಕಾರವು ತನ್ನ ವ್ಯವಸ್ಥೆಯನ್ನು ಸರಿಪಡಿಸದೆ ಖಾಸಗಿಯವರ ಮನೆಯನ್ನು ಸರಿಪಡಿಸಲು ಹೊರಡುವುದು ವಿರೋಧಾಭಾಸ. ಸರಕಾರಿ ಆಸ್ಪತ್ರೆಗಳು ಸರಿಯಿದ್ದರೆ ಖಾಸಗಿ ವೈದ್ಯರಲ್ಲಿಗೆ, ಖಾಸಗಿ ಆಸ್ಪತ್ರೆಗಳಿಗೆ ಯಾರು ಹೋಗಲು ಇಷ್ಟಪಡುತ್ತಾರೆ? ಈ ಮನಸ್ಥಿತಿಯನ್ನು ಸರಿಪಡಿಸುವುದರ ಬದಲು ಸರಕಾರವು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಎಗ್ಗಿಲ್ಲದೆ ಅನುಮತಿ ನೀಡುತ್ತದೆ. ಸರಕಾರದ ವೆಚ್ಚದಲ್ಲಿ ನಮ್ಮ ರಾಜಕಾರಣಿಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ತಾವು ನಡೆಸುವ, ತಾವು ಹೊಣೆಗಾರರಾಗಬೇಕಾದ ಆಸ್ಪತ್ರೆಗಳ, ವೈದ್ಯರ ಮೇಲೆ ಸರಕಾರಕ್ಕೂ ಅದನ್ನು ನಡೆಸುವವರಿಗೂ ನಂಬಿಕೆಯಿಲ್ಲದ ಮೇಲೆ ಜನರಿಗೆ ನಂಬಿಕೆ ಹೇಗೆ ಬರಬೇಕು?

ಖಾಸಗೀಕರಣವು ಆರ್ಥಿಕತೆಯ ಉದಾರೀಕರಣವೆಂದು ಬಗೆದರೂ ಅಲ್ಲಿ ಸಾಂಸ್ಥಿಕ ವಾತಾವರಣ ಹೇಗಿದೆಯೆಂದು ಯಾರೂ ಮತ್ತು ಮುಖ್ಯವಾಗಿ ವ್ಯವಸ್ಥೆಯ ಒಡೆತನದ ಸರಕಾರ ಪರಿಶೀಲಿಸುವುದಿಲ್ಲ. ಬಹುತೇಕ ಆಸ್ಪತ್ರೆಗಳು ರಾಜಕಾರಣಿಗಳ ಇಲ್ಲವೆ ಉದ್ಯಮಿಗಳ ಒಡೆತನದಲ್ಲಿದೆ. ಇದರಿಂದಾಗಿ ಆರೋಗ್ಯಸೇವೆಯು ಸೇವೋದ್ಯಮವಾಗಿ ಪರಿಣಮಿಸಿದೆ. ವಿಮೆಯಿದೆಯೆಂದು ಗೊತ್ತಾದರೆ ಚಿಕಿತ್ಸೆಯನ್ನು ವಿಮಾ ಕಂಪೆನಿಗಳು ಪಾವತಿಸುತ್ತವೆಂಬ ಕಾರಣಕ್ಕೆ ಈ ಆಸ್ಪತ್ರೆಗಳು ನೂರೆಂಟು ಪರೀಕ್ಷೆಗಳು, ಚಿಕಿತ್ಸೆಗಳು ಮತ್ತು ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ಮಾಡುವುದು ಇಂದು ಗುಟ್ಟಾಗಿ ಉಳಿದಿಲ್ಲ. ಅಲ್ಲಿ ಕೆಲಸ ಮಾಡುವ ವೈದ್ಯರಿಗೆ ಈ ಆರ್ಥಿಕ ಗುರಿಯನ್ನು ಮುಟ್ಟುವುದೇ ಗುರಿಯಾಗುತ್ತದೆ. ಬಹುತೇಕ ಆಸ್ಪತ್ರೆಗಳು ವಿಮಾನ ನಿಲ್ದಾಣಗಳಂತೆ ನಗರಕೇಂದ್ರಿತವಾಗಿವೆ ಹಾಗೂ ವಿಮೆಯನ್ನು ಹೊಂದಿದ (ಮತ್ತು ಹೊಂದದ ಶ್ರೀಮಂತ) ರೋಗಿಗಳನ್ನು ಅವಲಂಬಿಸಿವೆ. ಇದರಿಂದಾಗಿ ಆರೋಗ್ಯಸೇವೆಯು ತನ್ನ ಸೇವಾ ಮನೋಭಾವವನ್ನು ಬಲಿ ಕೊಡಬೇಕಾಗುತ್ತದೆ.

ಒಂದು ರೀತಿಯಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ವೃತ್ತಿಜೀವನ ನಡೆಸುವ ವೈದ್ಯರೇ ವಾಸಿ. ಇದೂ ಸಾಂದರ್ಭಿಕವೆಂಬುದನ್ನು ನೆನಪಿಡಬೇಕು. ತಾನು ನೀಡುವ ಚಿಕಿತ್ಸೆಯು ಚೆನ್ನಾಗಿದ್ದರೆ ಮಾತ್ರ ರೋಗಿ ಮತ್ತೊಮ್ಮೆ ಬರುತ್ತಾನೆ ಮತ್ತು ಇತರರಿಗೂ ಹೇಳುತ್ತಾನೆ ಎಂಬ ಅರಿವು ಯಾವುದೇ ವ್ಯಾಪಾರದಂತೆ ಇಲ್ಲೂ ಮೂಲಸೂತ್ರವಾಗಿರುತ್ತದೆಯಾದರೂ ನೋವಿನ ಶಮನತೆಯಲ್ಲಿ, ಕಾಯಿಲೆಯ ಗುಣಮುಖ ಯಾತ್ರೆಯಲ್ಲಿ ನೇರ ಭಾಗವಹಿಸುವಿಕೆ ಮತ್ತು ರೋಗಿ ಉಳಿದರೆ ತಾನುಳಿದೇನು ಎಂಬ ತತ್ವವು ಮುಖ್ಯಪಾತ್ರ ವಹಿಸುತ್ತದೆ. ಕೆಟ್ಟ ಖಾಸಗಿ ವೈದ್ಯರಲ್ಲಿಗೆ ಬಡವನೂ ಹೋಗುವುದಿಲ್ಲ.
ಆದ್ದರಿಂದ ಕಾಯಿಲೆಯ ಮೂಲವನ್ನು ಗುಣಪಡಿಸದಿದ್ದರೆ ಈ ಹೋರಾಟ, ಗೋಳು, ತಂತ್ರ ಇವೆಲ್ಲವೂ ಕಣ್ಣೊರೆಸುವ ತಂತ್ರವಾಗುತ್ತವೆಯೇ ವಿನಾ ಸಂಕಟದ ಪರಿಹಾರವಾಗುವುದಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)