varthabharthi

ಸಂಪಾದಕೀಯ

ಪದ್ಮಿನಿಯ ಜೊತೆಗೆ ಪ್ರಜಾಸತ್ತೆಯನ್ನು ಅಗ್ನಿ ಕುಂಡಕ್ಕೆ ನೂಕಲು ಹೊರಟವರು

ವಾರ್ತಾ ಭಾರತಿ : 23 Nov, 2017

‘ರಾಣಿ ಪದ್ಮಾವತಿ’ ಚಿತ್ರ ಎಬ್ಬಿಸಿರುವ ವಿವಾದ ಕೇವಲ ಒಂದು ಗುಂಪಿಗೆ ಸೀಮಿತವಾಗದೆ, ಇದೀಗ ವಿವಿಧ ರಾಜಕಾರಣಿಗಳು ಇದನ್ನು ಚುನಾವಣಾ ವಿಷಯವಾಗಿ ಪರಿವರ್ತಿಸಲು ಯತ್ನಿಸುತ್ತಿರುವುದು ಎದ್ದು ಕಾಣುತ್ತಿದೆ. ಈವರೆಗೆ ಈ ಸಿನೆಮಾದ ಕುರಿತಂತೆ ಕೆಲವು ಸಂಘಟನೆಗಳಷ್ಟೇ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದವು. ಅವರು ಇಡೀ ರಜಪೂತ ಸಮುದಾಯವನ್ನೇನೂ ಪ್ರತಿನಿಧಿಸಿರಲಿಲ್ಲ. ಇಷ್ಟಕ್ಕೂ ಪದ್ಮಾವತಿ ಅಥವಾ ರಾಣಿ ಪದ್ಮಿನಿಯ ಕುರಿತ ಇತಿಹಾಸವೇ ಅಸ್ಪಷ್ಟವಾಗಿದೆ. ಪ್ರತಿಭಟಿಸುವವರಿಗೆ ತಾವು ಯಾವ ಕಾರಣಕ್ಕಾಗಿ ‘ಪದ್ಮಾವತಿ’ ಚಿತ್ರವನ್ನು ವಿರೋಧಿಸುತ್ತಿದ್ದೇವೆ ಎನ್ನುವುದರ ಅರಿವೇ ಇಲ್ಲ. ಇತಿಹಾಸದ ಕುರಿತಂತೆ ಸ್ಪಷ್ಟತೆಗಳೇ ಇರದ, ಸಿನೆಮಾವನ್ನೂ ನೋಡದ ಈ ಮಂದಿ ಭಾವನಾತ್ಮಕ ನೆಲೆಯಲ್ಲಿ ಪದ್ಮಿನಿಯ ಕತೆಯನ್ನು ನೆಚ್ಚಿಕೊಂಡವರು. ಸಿನಿಮಾಗಳ ವಿರುದ್ಧ ಭಾವನಾತ್ಮಕ ನೆಲೆಯಲ್ಲಿ ವಿರೋಧಗಳು ಈ ಹಿಂದೆಯೂ ಆಗಾಗ ವ್ಯಕ್ತವಾಗುತ್ತಾ ಬಂದಿವೆ. ಆದರೆ ಅದನ್ನು ಸಿನೆಮಾ ಪ್ರಿಯರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಈ ಹಿಂದೆ ಮಣಿರತ್ನಂ ಅವರು ‘ಬಾಂಬೆ’ ಚಿತ್ರ ಮಾಡಿದಾಗ ಸಣ್ಣ ಸಣ್ಣ ಅಂಶವನ್ನು ಮುಂದಿಟ್ಟು, ಸಂಘಪರಿವಾರ ಮತ್ತು ಮುಸ್ಲಿಮರ ಒಂದು ಸಣ್ಣ ಗುಂಪು ಚಿತ್ರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಆ ಪ್ರತಿಭಟನೆ ನಿರ್ಲಕ್ಷಕ್ಕೊಳಗಾದುದು ಮಾತ್ರವಲ್ಲ, ಚಿತ್ರವನ್ನು ಹಿಂದೂ, ಮುಸ್ಲಿಮರು ಜೊತೆಗೂಡಿ ನೋಡಿ ಗೆಲ್ಲಿಸಿದರು. ಕಮಲ್ ಹಾಸನ್ ಅವರ ವಿಶ್ವರೂಪಂನಲ್ಲಿ ಮುಸ್ಲಿಮರನ್ನು ಉಗ್ರರಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿ ಕೆಲವು ಮುಸ್ಲಿಮ್ ಸಂಘಟನೆಗಳು ಆಕ್ಷೇಪ ತೆಗೆದವಾದರೂ, ಈ ದೇಶದ ಬಹುಸಂಖ್ಯಾತ ಮುಸ್ಲಿಮರು ಈ ಬಗ್ಗೆ ವೌನವಾಗಿದ್ದರು. ಸಿನೆಮಾ ಬಿಡುಗಡೆಗೆ ಯಾವುದೇ ತೊಂದರೆಯಾಗಲಿಲ್ಲ. ಅಷ್ಟೇ ಏಕೆ ‘ಬಾಜಿ ರಾವ್ ಮಸ್ತಾನಿ’ ಚಿತ್ರದ ಕುರಿತೂ ಮಹಾರಾಷ್ಟ್ರದಲ್ಲಿ ಒಂದು ಗುಂಪು ಆಕ್ಷೇಪ ವ್ಯಕ್ತಪಡಿಸಿತ್ತು. ಪೇಶ್ವೆಗಳ ಒಳಗಿರುವ ಜಾತೀಯತೆಯನ್ನು ಚಿತ್ರ ಸೂಕ್ಷ್ಮವಾಗಿ ಹೇಳುತ್ತದೆ ಎನ್ನುವುದು ಚಿತ್ರ ವಿರೋಧಿಸಲು ಕಾರಣವಾಗಿತ್ತು. ಆದರೂ ಚಿತ್ರ ಬಿಡುಗಡೆಯಾಯಿತು ಮಾತ್ರವಲ್ಲ, ಬಳಿಕ ರಾಷ್ಟ್ರಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿತು. ಪದ್ಮಿನಿಯ ಪಾಲಿಗೆ ಪ್ರತಿಭಟನೆ ಅಷ್ಟಕ್ಕೇ ಸೀಮಿತವಾಗಿಲ್ಲ.

ಇತಿಹಾಸದಲ್ಲಿ ಅಗ್ನಿ ಕುಂಡ ಹಾರಿ ಇಲ್ಲವಾದ ಪದ್ಮಿನಿ ಯಾನೆ ಪದ್ಮಾವತಿಗೆ ಹೊಸತೊಂದು ಅಗ್ನಿಕುಂಡವನ್ನು ಸಿದ್ಧಪಡಿಸುತ್ತಿದ್ದಾರೆ. ಪದ್ನಿನಿಯ ಹೆಸರಲ್ಲಿ ಈ ದೇಶದ ಪ್ರಜಾಸತ್ತೆಯನ್ನೇ ಆ ಅಗ್ನಿಕುಂಡಕ್ಕೆ ನೂಕಲು ಸಿದ್ಧತೆ ನಡೆಯುತ್ತಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಸಿನೆಮಾ ಮಾಧ್ಯಮವನ್ನು ನಿಯಂತ್ರಿಸಲು ಬಗೆ ಬಗೆಯಲ್ಲಿ ಯತ್ನಿಸುತ್ತಾ ಬಂದಿದೆ. ಸಿನೆಮಾಗಳು ಪ್ರತಿಪಾದಿಸುವ ಜಾತ್ಯತೀತತೆ, ಭ್ರಷ್ಟ ರಾಜಕಾರಣದ ಕುರಿತಂತೆ ಅದು ತಳೆಯುತ್ತಿರುವ ನಿಲುವು, ಪ್ರಜಾಸತ್ತೆಯ ಕುರಿತಂತೆ ಅದಕ್ಕಿರುವ ಒಲವು ಸರಕಾರದ ಸಿಟ್ಟಿಗೆ ಕಾರಣ ಎನ್ನುವುದನ್ನು ಇಲ್ಲಿ ಪ್ರತ್ಯೇಕ ವಿವರಿಸಬೇಕಾಗಿಲ್ಲ. ಆದುದರಿಂದಲೇ, ತನ್ನ ಮೂಗಿನ ನೇರಕ್ಕಿರುವ ಜನರನ್ನೇ ಸೆನ್ಸಾರ್ ಮಂಡಳಿಗೆ ಮುಖ್ಯಸ್ಥರನ್ನಾಗಿ ಮಾಡಿತು.

ಪರಿಣಾಮವಾಗಿ, ‘ಉಡ್ತಾ ಪಂಜಾಬ್’ ಎನ್ನುವ ಚಿತ್ರ ಅನಗತ್ಯವಾಗಿ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಚಿತ್ರ ಡ್ರಗ್ಸ್ ಗೆ ಬಲಿಯಾಗುತ್ತಿರುವ ಪಂಜಾಬ್‌ನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟದ್ದು ಸರಕಾರದ ಸಿಟ್ಟಿಗೆ ಕಾರಣವಾಯಿತು. ಅದೇ ಸಂದರ್ಭದಲ್ಲಿ ಪಂಜಾಬ್ ಚುನಾವಣೆಯೂ ಘೋಷಣೆಯಾದುದರಿಂದ, ಚಿತ್ರ ಬಿಡುಗಡೆಯಾಗದಂತೆ ನೋಡಿಕೊಳ್ಳಲು ಗರಿಷ್ಠ ಪ್ರಯತ್ನವನ್ನು ಮಾಡಿತು. ಸೆನ್ಸಾರ್ ಮಂಡಳಿಯನ್ನು ಬಳಸಿಕೊಂಡು ಚಿತ್ರದ ಭಾಗಗಳಿಗೆ ಕತ್ತರಿ ಹಾಕಲು ಯತ್ನಿಸಿತು. ಇದನ್ನು ವಿರೋಧಿಸಿ ಮಂಡಳಿಯ ಸದಸ್ಯರೇ ರಾಜೀನಾಮೆ ನೀಡಿದರು. ಕಲಾವಿದರ ಸೃಜನರ ಕೃತಿಗಳಿಗೆ ಸರಕಾರವೊಂದು ಕೈಯಾಡಿಸಲು ಮುಂದಾಗುವುದು ಅಘೋಷಿತ ತುರ್ತುಪರಿಸ್ಥಿತಿಯ ಸೂಚನೆಯಾಗಿದೆ.

ಸಿನೆಮಾ ಕಲಾವಿದರು ಎದುರಿಸುತ್ತಿರುವ ಭಯ, ಆತಂಕಗಳ ಹಿಂದೆ ಪುಂಡು ಪೋಕರಿಗಳು ಇದ್ದಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಆದರೆ ಸರಕಾರವೇ ವ್ಯವಸ್ಥಿತವಾಗಿ ಇಂತಹ ಆತಂಕ, ಬೆದರಿಕೆಗಳನ್ನು ಪೋಷಿಸಲು ಹೊರಟರೆ, ಅದನ್ನು ನಾವು ಪ್ರಜಾಸತ್ತೆಗೆ ಒದಗಿರುವ ಬೆದರಿಕೆಯೆಂದೇ ಕರೆಯಬೇಕು. ಒಂದು ಸಿನೆಮಾ ಬಂದಾಗ ಅದು ವಿವಿಧ ನೆಲೆಗಳಲ್ಲಿ ಜನರ ನಡುವೆ ಚರ್ಚೆಯಾಗುವುದು ಸಹಜ. ಆದರೆ ಇಂದು ‘ಪದ್ಮಾವತಿ’ ಚಿತ್ರದ ವಿರುದ್ಧ ಸರಕಾರಗಳೇ ನೇರವಾಗಿ ಮಾತನಾಡಲು ಶುರು ಮಾಡಿವೆ. ಈಗಾಗಲೇ ನಿರ್ದೇಶಕ, ಕಲಾವಿದರಿಗೆ ಜೀವಬೆದರಿಕೆಯೊಡ್ಡಲಾಗಿದ್ದು, ಇದರ ವಿರುದ್ಧ ಈ ದೇಶದ ಪ್ರಧಾನಿಯಾಗಲಿ, ಗೃಹ ಸಚಿವರಾಗಲಿ ತುಟಿಬಿಚ್ಚಿಲ್ಲ. ಅಷ್ಟೇ ಏಕೆ, ಅಮಿತಾಭ್ ಬಚ್ಚನ್‌ರಂತಹ ಹಿರಿಯ ಕಲಾವಿದರು ತಮ್ಮದೇ ಸಹೋದ್ಯೋಗಿಗಳ ಪರವಾಗಿ ಧ್ವನಿಯೆತ್ತಲಾಗದೆ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.

ಇಂದು ರಜಪೂತ ಸಮುದಾಯದ ಒಂದು ಗುಂಪು ‘ಪದ್ಮಾವತಿ’ ಚಿತ್ರದ ವಿರುದ್ಧ ಮಾತನಾಡುತ್ತಿದೆ ಎಂದಿದ್ದರೆ ವಿಷಯ ಇಷ್ಟು ತೀವ್ರವಾಗುತ್ತಿರಲಿಲ್ಲ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನದಂತಹ ರಾಜ್ಯಗಳ ಮುಖ್ಯಮಂತ್ರಿಗಳೇ ಈ ಚಿತ್ರಕ್ಕೆ ನಿಷೇಧ ಹೇರಲು ಹೊರಟಿರುವುದು ಹೊಸ ಬೆಳವಣಿಗೆ. ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ, ಪದ್ಮಾವತಿಯನ್ನು ಮುಂದಿಟ್ಟುಕೊಂಡು ಕೆಲವು ರಾಜಕೀಯ ನಾಯಕರು ಮತ ಯಾಚಿಸಲು ಹೊರಟಿದ್ದಾರೆ. ತಮ್ಮ ಆಡಳಿತ ವೈಪಲ್ಯವನ್ನು ಮುಚ್ಚಿಡಲು ಪದ್ಮಾವತಿ ಹೆಸರಲ್ಲಿ ಗದ್ದಲ ಸೃಷ್ಟಿಸುತ್ತಿದ್ದಾರೆ. ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಇಡೀ ಸಿನೆಮಾವನ್ನೇ ಅಪರಾಧವೆಂಬಂತೆ ನೋಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ನಿರ್ದೇಶಕ ಮತ್ತು ನಟಿ ಇಬ್ಬರೂ ಅಪರಾಧಿಗಳು ಎಂದು ಘೋಷಿಸಿದ್ದಾರೆ.

ಇತಿಹಾಸ, ಸಿನಿಮಾ ಇವುಗಳ ಬಗ್ಗೆ ಎಳ್ಳಷ್ಟು ಜ್ಞಾನವಿಲ್ಲದ ಈ ಅನಕ್ಷರಸ್ಥ ಮುಖ್ಯಮಂತ್ರಿಯೇ, ಕಲಾವಿದರನ್ನು, ನಿರ್ದೇಶಕರನ್ನು ಕ್ರಿಮಿನಲ್‌ಗಳೆಂಬಂತೆ ಬಿಂಬಿಸಿದರೆ ಉಳಿದ ಜನರ ಸ್ಥಿತಿಯೇನಾಗಬೇಕು? ಯಾವ ಆಧಾರದ ಮೇಲೆ ಪದ್ಮಾವತಿಯ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಈ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ? ರಾಜಸ್ತಾನದ ಇತಿಹಾಸ ಪಠ್ಯಪುಸ್ತಕಗಳನ್ನೊಮ್ಮೆ ಓದಿದರೂ ಸಾಕು, ಪದ್ಮಾವತಿಯ ಚಿತ್ರದ ಕುರಿತಂತೆ ರಾಜಕಾರಣಿಗಳು ಮಾತನಾಡುತ್ತಿರಲಿಲ್ಲ. ಕಾರಣವೇ ಇಲ್ಲದೆ ಒಂದು ಚಿತ್ರವನ್ನು ನಿಷೇಧಿಸುವುದು ಹೇಗೆ ಸಾಧ್ಯ? ಪದ್ಮಾವತಿ ಸಿನೆಮಾ ಬಿಡುಗಡೆಯಾಗುವುದೇ ಕಷ್ಟಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೋಟಿಗಟ್ಟಲೆೆ ಹಣವನ್ನು ಹೂಡಿ, ಅಪಾರ ಶ್ರಮವನ್ನು ವಹಿಸಿ ನಿರ್ಮಿಸಿದ ಒಂದು ಚಿತ್ರ ಹೀಗೆ ರಾಜಕಾರಣಿಗಳ ರಾಜಕಾರಣ ಮತ್ತು ಅಸಹಿಷ್ಣುತೆಗೆ ಬಲಿಯಾದರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಸಿನೆಮಾಗಳನ್ನು ನಿರ್ಮಾಣ ಮಾಡಲು ಹೆದರುವಂತಹ ಸನ್ನಿವೇಶ ಬರುವಿದಲ್ಲವೆ? ಸಂಘಪರಿವಾರದ ಸೆನ್ಸಾರ್ ಮಂಡಳಿಯ ಒಪ್ಪಿಗೆ ಪಡೆದ ಬಳಿಕವಷ್ಟೇ ಚಿತ್ರ ಮಾಡಲು ಹೊರಡಬೇಕು ಎನ್ನುವುದನ್ನು ಸರಕಾರವೇ ಘೋಷಿಸಿದಂತಾಗಲಿಲ್ಲವೆ? ಈ ದೇಶದ ಐತಿಹಾಸಿಕ ಘಟನೆಗಳನ್ನು ಬಳಸಿ ಚಿತ್ರ ಮಾಡುವುದರಿಂದ ನಿರ್ದೇಶಕರು ದೂರ ಸರಿದರೆ, ಅದರಿಂದ ನಮ್ಮ ಇತಿಹಾಸಕ್ಕೂ ನಷ್ಟವಿದೆ ಎನ್ನುವುದನ್ನು ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕು.

ಅನಾರ್ಕಲಿ ಎನ್ನುವ ಪೂರ್ಣ ಇತಿಹಾಸವಲ್ಲದ ಪಾತ್ರವನ್ನು ಇಟ್ಟು ಮಾಡಿದ ‘ಮೊಘಲ್ ಎ ಅಝಂ’ ಭಾರತದ ಚಿತ್ರೋದ್ಯಮದಲ್ಲೇ ಒಂದು ಮೈಲುಗಲ್ಲು. ಇಂದಿಗೂ ಆ ಚಿತ್ರವನ್ನು ನೋಡುವುದು ಇತಿಹಾಸದ ಕಾರಣಕ್ಕಾಗಿ ಅಲ್ಲ. ಪ್ರೇಮಿಗಳ ನೋವು ದುಮ್ಮಾನಗಳನ್ನು ಹೇಳುವ ಚಿತ್ರ ಎನ್ನುವ ಕಾರಣಕ್ಕಾಗಿ. ಅನಾರ್ಕಲಿ ಎನ್ನುವ ಪಾತ್ರ ಎಷ್ಟರ ಮಟ್ಟಿಗೆ ನಿಜ ಎನ್ನುವ ಚರ್ಚೆಯನ್ನು ಮುಂದಿಟ್ಟು ಚಿತ್ರಕ್ಕೆ ತಡೆಯೊಡ್ಡಿದ್ದರೆ ‘ಮೊಘಲ್ ಎ ಅಝಂ’ ಚಿತ್ರ ಬಿಡುಗಡೆಯೇ ಆಗುತ್ತಿರಲಿಲ್ಲ. ಅದು ಭಾರತೀಯ ಚಿತ್ರೋದ್ಯಮಕ್ಕೆ ಮಾತ್ರವಲ್ಲ, ಸಾಂಸ್ಕೃತಿಕ ಅಭಿವ್ಯಕ್ತಿಗೂ ದೊಡ್ಡ ನಷ್ಟವಾಗಿ ಬಿಡುತ್ತಿತ್ತು. ‘ಪದ್ಮಾವತಿ’ ಚಿತ್ರದ ವಿರುದ್ಧ ಮಾತನಾಡುತ್ತಿರುವ ಎಲ್ಲ ರಾಜಕೀಯ ನಾಯಕರು ಈ ದೇಶದ ಇತಿಹಾಸ ಮತ್ತು ಸೃಜನಶೀಲ ಅಭಿವ್ಯಕ್ತಿಗೆ ದ್ರೋಹವೆಸಗುತ್ತಿದ್ದಾರೆ. ಅವರು ಸಿನೆಮಾ, ಸಂಗೀತ, ಪ್ರೀತಿಯಿಲ್ಲದ ಭಾರತವೊಂದನ್ನು ಕಟ್ಟಲು ಹೊರಟಿದ್ದಾರೆ. ಪದ್ಮಿನಿಗೆ ಮತ್ತೊಂದು ಅಗ್ನಿಕುಂಡ ನಿರ್ಮಿಸಿ, ಅದರಲ್ಲಿ ಆಕೆಯ ಜೊತೆಗೆ ಈ ದೇಶದ ಪ್ರಜಾಸತ್ತೆಯನ್ನೇ ದೂಡುವುದಕ್ಕೆ ಹೊರಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)