varthabharthi


ಕರ್ನಾಟಕ

'ಕೋಟಿ' ಕಳಕೊಂಡ ಕನ್ನಡ ಪತ್ರಿಕೋದ್ಯಮ

'ಆಂದೋಲನ'ದ ರೂವಾರಿ ರಾಜಶೇಖರ ಕೋಟಿ ಇನ್ನಿಲ್ಲ

ವಾರ್ತಾ ಭಾರತಿ : 23 Nov, 2017

ಮೈಸೂರು,ನ.23: ಪ್ರಗತಿಪರ ಚಿಂತಕ ಹೋರಾಟಗಾರ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ “ಆಂದೋಲನ” ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ (71) ಗುರುವಾರ ಬೆಳಗಿನ ಜಾವ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ರಾಜಶೇಖರ ಕೋಟಿ ಪತ್ನಿ ನಿರ್ಮಲಕೋಟಿ, ಪುತ್ರ ರವಿಕೋಟಿ ಪುತ್ರಿಯರಾದ ರಷ್ಮಿಕೋಟಿ ಹಾಗೂ ರಮ್ಯಕೋಟಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ರಾಜಶೇಖರ ಕೋಟಿಯವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ತೆರಳಿದ್ದರು. ಮಾರ್ಗ ಮಧ್ಯೆ ಅವರಿಗೆ ಎದೆ ನೋವು ಕಾಣಿಸಿಕೊಂಡು ತಕ್ಷಣ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಲ್ಲಿನ ವೈದ್ಯರು ಅಂತಹ ಗಂಭೀರ ತೊಂದರೆ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಬಳಿಕ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಟೇಲ್‍ವೊಂದರಲ್ಲಿ ಉಳಿದುಕೊಂಡಿದ್ದಾರೆ. ತಡರಾತ್ರಿ 3.30ರ ಸಮಯದಲ್ಲಿ ಮತ್ತೆ ಎದೆನೋವು ಜಾಸ್ತಿಯಾದ ತಕ್ಷಣ ಬೆಂಗಳೂರಿನಲ್ಲೇ ಇರುವ ಅವರ ಸಂಬಂಧಿಕರಿಗೆ ದೂರವಾಣಿ ಮೂಲಕ ಫೋನ್ ಮಾಡಿ ತಕ್ಷಣ ಬರುವಂತೆ ಕೋರಿಕೊಂಡಿದ್ದಾರೆ. ಅವರು ಹೊಟೇಲ್ ಗೆ ಬಂದು ತಲುಪುವಷ್ಟರಲ್ಲಿ ಕೋಟಿ ಅವರು ಮೃತಪಟ್ಟಿದ್ದಾರೆ.

ನಂತರ ಬೆಂಗಳೂರಿನಿಂದ ಬೆಳಗ್ಗೆ 8.30ರ ಸಮಯಕ್ಕೆ ಪಾರ್ಥಿವ ಶರೀರವನ್ನು ಅವರ ಮೈಸೂರಿನ ರಾಮಾನುಜ ರಸ್ತೆಯಲ್ಲಿನ ಸ್ವಗೃಹಕ್ಕೆ ಕರೆತರಲಾಯಿತು. ಈ ವೇಳೆ ಅಪಾರ ಅಭಿಮಾನಿಗಳು ಸ್ನೇಹಿತರು, ಪ್ರಗತಿಪರ ಚಿಂತಕರು, ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾರ್ವಜನಿಕರು  ಆಗಮಿಸಿ ಅವರ ಅಂತಿಮ ದರ್ಶನ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸರಕಾರದ ಪರವಾಗಿ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಕೋಟಿ ಅವರ ಪಾರ್ಥೀವ ಶರೀರವನ್ನು ಅವರ ಮನೆಯ ಪಕ್ಕದಲ್ಲೇ ಇರುವ ಆಂದೋಲನ ಕಚೇರಿ ಎದುರು ಅರ್ಧ ಗಂಟೆಗಳ ಕಾಲ ಇರಿಸಲಾಗಿತ್ತು. ಇದೇ ವೇಳೆ ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸು ಮೂಲಕ ಅವರಿಗೆ ಗೌರವ ವಂದನೆ ಸಲ್ಲಿಸಿದರು.

ನಂತರ ಅವರ ಪಾರ್ಥಿವ ಶರೀರವನ್ನು ಅಂಬುಲೆನ್ಸ್ ಮೂಲಕ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚರಂದ್ರ ಘಾಟ್‍ಗೆ ಕೊಂಡಯ್ಯಲಾಯಿತು. ಯಾವುದೇ ಪೂಜೆ ಪುನಸ್ಕಾರಗಳಲ್ಲಿದೆ, ಸಂಪ್ರದಾಯಗಳಿಲ್ಲದೆ ವಿದ್ಯುತ್ ಚಿತಾಗಾರದಲ್ಲಿ ಅವರ ಮೃತ ದೇಹವನ್ನು ಅರ್ಪಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಸಮದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ವಿ.ಶ್ರೀನಿವಾಸಪ್ರಸಾದ್, ಸಿ.ಎಚ್.ವಿಜಯಶಂಕರ್, ಎಸ್.ಎ.ರಾಮದಾಸ್, ಶಾಸಕಾರದ ಜಿ.ಟಿ.ದೇವೇಗೌಡ, ವಾಸು, ಎಂ.ಕೆ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಮೇಯರ್ ಎಂ.ಜೆ.ರವಿಕುಮಾರ್, ಜಿ.ಪಂ.ಅಧ್ಯಕ್ಷೆ ನಯಿಮಾ ಸುಲ್ತಾನ್ ನಝೀರ್ ಅಹ್ಮದ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಸಾಹಿತಿಗಳಾದ ಪ್ರೊ.ಚಂಪಾ, ಪ್ರೊ.ಕೆ.ಎಸ್.ಭಗವಾನ್, ಸಮಾಜವಾದಿ ಪ.ಮಲ್ಲೇಶ್, ತುಕಾರಾಂ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಸಿದ್ದಸ್ವಾಮಿ, ಬಸವರಾಜು, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಚುಂಚನಹಳ್ಳಿ ಮಲ್ಲೇಶ್, ಮಾಜಿ ಮೇಯರ್ ಪುರಷೋತ್ತಮ್, ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ಹರಿಹರ ಆನಂದಸ್ವಾಮಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಗಣ್ಯರು, ಸಾರ್ವಜನಿಕರು ಸೇರಿದಂತೆ ಹಲವಾರು ರಾಜಕಾರಣಿಗಳು ಅಂತಿಮ ದರ್ಶನ ಪಡೆದರು.

ಜಿಲ್ಲಾಧಿಕಾರಿ ಡಿ.ರಂದೀಪ್, ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರರಾವ್, ಡಿಸಿಪಿ ಗಳಾದ ವಿಷ್ಣುವರ್ಧನ್, ವಿಕ್ರಂ ಆಮ್ಟೆ, ಸೇರಿದಂತೆ ಅನೇಕರು ಹಾಜರಿದ್ದು ಗೌರವ ಸಲ್ಲಿಸಿದರು.

ರಾಜಶೇಖರ ಕೋಟಿ ಅವರ ಹಿನ್ನೆಲೆ: ರಾಜಶೇಖರ ಕೋಟಿಯವರು ಗದಗ್ ಜಿಲ್ಲಯ ಹುಯಿಲಗೋಳದವರು. ಗದಗ್ ನಲ್ಲಿ ವಿದ್ಯಾಭ್ಯಾಸ ಮಾಡಿರುವ ಕೋಟಿಯವರು ಶಾಲಾ ದಿನದಿಂದಲೇ ಪತ್ರಿಕೆ ಬಗ್ಗೆ ಆಸಕ್ತಿ ಹೊಂದಿದ್ದರು. ಅಚ್ಚು ಮೊಳೆ ಸಹಾಯಕರಾಗಿ ಕೆಲಸ ಆರಂಭಿಸಿದ ಕೋಟಿಯವರು ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ 2 ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಕಾದಂಬರಿಕಾರ ಬಸವರಾಜ ಕಟ್ಟಿಮನಿ, ಕೋಟಿ ಅವರ ಕೆಲಸ ಮೆಚ್ಚಿ ಅವಕಾಶ ನೀಡಿದ್ದರು. ಈ ವೃತ್ತಿಯಲ್ಲಿ ಅವರು ಸಂಬಳ ಪಡೆಯದೆ ಕೆಲಸ ಮಾಡಿದ್ದರು.

ಧಾರವಾಡಕ್ಕೆ ಬರುತ್ತಿದ್ದ ಸಮಾಜವಾದಿಗಳಿಂದ ಪ್ರಭಾವಿತರಾಗಿದ್ದ ಕೋಟಿಯವರು ಪೂರ್ಣ ಚಂದ್ರ ತೇಜಸ್ವಿ, ಶಾಂತವೇರಿ ಗೋಪಾಲಕೃಷ್ಣ ಜೆ.ಎಚ್.ಪಟೇಲ್, ಪ್ರೊ.ಎಂ.ಡಿ ನಂಜುಂಡಸ್ವಾಮಿ, ಎಂ.ಡಿ ಸುಂದರೇಶ್, ಪ್ರೊ.ರಾಮದಾಸ್, ಕಡಿದಾಳ ಶಾಮಣ್ಣ ಅವರಿಂದ ಪ್ರಭಾವಿತರಾಗಿದ್ದು, ಅವರ ಸಿದ್ಧಾಂತದ ಬಗ್ಗೆ ಒಲವು ಹೊಂದಿದ್ದರು. ಸಮಾಜವಾದಿ ಯೋಜನ್ ಸಭಾದ ಸಕ್ರಿಯ ಸದಸ್ಯರಾದ ಕೋಟಿಯವರಿಗೆ ಧಾರವಾಡದಿಂದ ಮೈಸೂರಿಗೆ ಬರಲು ಅವಕಾಶ ಸಿಕ್ಕಿತು. ಆದರೆ ಧಾರವಾಡದಿಂದ ಮೈಸೂರಿಗೆ ಬರಲು ಕೋಟಿ ಮನೆಯವರು ಒಪ್ಪಿರಲಿಲ್ಲ. ಮನೆಯವರಿಗೆ ಸುಳ್ಳು ಹೇಳಿ ಮೈಸೂರಿಗೆ ಬಂದಿದ್ದರು.

ಮನೆಯವರಿಗೆ ವಾಪಸ್ ಬರುವುದಾಗಿ ಸುಳ್ಳು ಹೇಳಿ ಒಂದು ಚೀಲ, ಉಟ್ಟ ಬಟ್ಟೆ ಪತ್ರಿಕೆಯ ಕೆಲ ವಸ್ತುಗಳೊಡನೆ ಮೈಸೂರಿಗೆ ಬಂದರು. ಗೆಳೆಯರಾದ ನೆಲೆಮನೆ ದೇವೇಗೌಡರು, ದೇವನೂರು ಮಹದೇವ್, ಪ್ರೊ.ರಾಮದಾಸ್, ಪ.ಮಲ್ಲೇಶ್, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಇವರಿಗೆ ಸಹಕಾರ ನೀಡಿದ್ದರು. ಪತ್ರಿಕೆಗಾಗಿ ಪ್ರಕಾಶಕರಾದ ನೆಲೆ ಮನೆ ದೇವೇಗೌಡರು ಹಾಗೂ ಸ್ನೇಹಿತರ ಸಹಾಯದಿಂದ ಜಾದುಗಾರ ಮೈಸೂರು ನಾಗೇಶ್ ಬಳಿ ಅಚ್ಚುಮೊಳೆ ಜೋಡಿಸುವ ಸಾಧನ, ಮುದ್ರಣ ಯಂತ್ರವನ್ನು 1850ರೂ.ಗೆ ಖರೀದಿಸಿದ್ದರು.

ಹಿರಿಯ ಪತ್ರಕರ್ತ ರಾಮದೇವರು ರಾಕಿ ಜತೆಗೆ ಕೆಲಸ ಆರಂಭಿಸಿ ಸುಧಾ ಮಾದರಿಯ ವಾರಪತ್ರಿಕೆ ಹೊರ ತಂದರು. ಪ್ರಸಾರ ಹೆಚ್ಚಾದಂತೆ ಬೇರೆ ಪ್ರೆಸ್‍ನಲ್ಲಿ ಮುದ್ರಣ ಆರಂಭಿಸಿದರು. ಜೆ.ಪಿ ಚಳವಳಿಯ ಸಮಯದಲ್ಲಿ ಅದರ ಮುಖವಾಣಿಯಂತೆ ಪತ್ರಿಕೆ ಕೆಲಸ ಮಾಡಿತ್ತು. ತುರ್ತು ಪರಿಸ್ಥಿತಿ ಘೋಷಣೆಯಾದ ಸಮಯದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಪತ್ರಿಕೆಯ ಬರಹಗಳ ಮೂಲಕ ಹೋರಾಟ ಮಾಡಿದರೂ ಅನಿವಾರ್ಯವಾಗಿ ಪತ್ರಿಕೆಯನ್ನು ನಿಲ್ಲಿಸಿದ್ದರು.

ಮೈಸೂರಿನಲ್ಲಿ ಮಯೂರ ಮುದ್ರಣದಲ್ಲಿ ಪತ್ರಿಕೆಯ ಮುದ್ರಣವಾಗುತ್ತಿತ್ತು. ವೀರಪ್ಪನ್ ಪ್ರಕರಣದಲ್ಲಿ ನಂಬರ್ ಒನ್ ಆದ ಆಂದೋಲನ ಪತ್ರಿಕೆ ಪೊಲೀಸರ ಕಾರ್ಯಾಚರಣೆ ನಿಖರವಾಗಿ ಪ್ರಕಟಿಸಿದ ಹೆಗ್ಗಳಿಕೆ ಪಡೆದುಕೊಂಡಿದೆ.

ನಗರದ ಲಲಿತ್‍ಮಹಲ್ ಈಜು ಕೊಳದಲ್ಲಿ ಡಿಸಿಪಿ ಸೋಮಶೇಖರ್ ಕಾಲದ ಸತ್ಯದೇವ್ ಕೊಲೆ ಪ್ರಕರಣದ ಬಗ್ಗೆ ಪತ್ರಿಕೆಯಲ್ಲಿ ತನಿಖಾ ವರದಿ ಪ್ರಕಟಿಸಿತ್ತು. ಆಂದೋಲನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ತನಿಖಾ ವರದಿ ಮಾಡಿದ್ದರು. ಸತ್ಯದೇವ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಂಶಿ ಪ್ರಸನ್ನ ಕುಮಾರ್ ಮಾಡಿದ್ದ ಯಾವುದೇ ಅಂಜಿಕೆ ಅಳುಕಿಲ್ಲದೆ ಕೋಟಿಯವರು ವರದಿಯನ್ನು ಪ್ರಕಟಿಸಿದ್ದರು.

ಕೋಟಿಯವರು ಸಮಾಜವಾದಿ ಚಳವಳಿಯಿಂದ ಪ್ರಭಾವಿತರಾಗಿ 1972ರಲ್ಲಿ “ಆಂದೋಲನ” ಪತ್ರಿಕೆಯನ್ನು ಯುವಜನರ ವಾರಪತ್ರಿಕೆಯಾಗಿ ಆಂದೋಲನವನ್ನು ಆರಂಭಿಸಿದ್ದರು. ಕನ್ನಡಪರ ಹೆಸರು ಇಡಲು ಚಿಂತನೆ ನಡೆಸಿದ್ದ ಕೋಟಿಯವರು ಕನ್ನಡದ ಸಾಕಷ್ಟು ಹೆಸರುಗಳನ್ನು ನೋಂದಣಿಗೆ ಕಳುಹಿಸಿದ್ದರು. ಆದರೆ ಅಂತಿಮವಾಗಿ ಆಂದೋಲನ ಹೆಸರು ನೋಂದಣಿಯಾಯಿತು.

ಸುಮಾರು 42 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ರಾಜಶೇಖರ ಕೋಟಿ ಜಿಲ್ಲಾ ಹಾಗೂ ಪ್ರಾದೇಶಿಕ ಮಟ್ಟದ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ಅದ್ವೀತಿಯವಾದುದು. ಇಡೀ ರಾಜ್ಯದಲ್ಲೇ ಅತ್ಯಂತ ಯಶಸ್ವಿ ಪ್ರಾದೇಶಿಕ ದಿನಪತ್ರಿಕೆಯಾದ “ಆಂದೋಲನ”  ವನ್ನು ಕಟ್ಟಿ ಬೆಳೆಸಿದ ಹಿರಿಮೆ ಅವರದ್ದು. ಯಾವುದೇ ರಾಜ್ಯಮಟ್ಟದ ಪತ್ರಿಕೆಗೂ ಸಾಟಿ ಎನ್ನುವ ರೀತಿಯಲ್ಲಿ ಅತ್ಯಾಧುನಿಕ ಮುದ್ರಣ ವ್ಯವಸ್ಥೆ, ಸುದ್ದಿಗಳ ವೈವಿಧ್ಯತೆ ಹಾಗೂ ವಿಶಿಷ್ಟತೆಯೊಂದಿಗೆ ಆಂದೋಲನ ದಿನಪತ್ರಿಕೆಯನ್ನು ಹೊರುತರುತ್ತಿದ್ದರು.

ತಮ್ಮ “ಇದ್ದದ್ದು ಇದ್ಹಾಂಗ” ಅಂಕಣದ ಮೂಲಕ ನೇರ-ಸತ್ಯ-ನಿಷ್ಠುರ ಬರಹಗಳಿಗೆ ಹೆಸರಾಗಿದ್ದ ಕೋಟಿಯವರು ಬರವಣಿಗೆಯಂತೆಯೇ ಜನರಲ್ಲಿ ಜಾಗೃತಿ ಹಾಗೂ ತಿಳುವಳಿಕೆ ಮೂಡಿಸುವಂತಹ ಭಾಷಣಗಳಿಗೂ ಖ್ಯಾತರಾಗಿದ್ದರು. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳ ಜನರಲ್ಲಿ ಅವರು ತಮ್ಮ ಬರವಣಿಗೆ-ಭಾಷಣಗಳಿಂದ ಚಿರಪರಿಚಿತರು.

ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಕೋಟಿಯವರ ಕೊಡುಗೆ ಅಪಾರವಾದುದು. ಪ್ರಖ್ಯಾತ ಪತ್ರಿಕೋದ್ಯಮಿ ಪಾಟೀಲ ಪುಟ್ಟಪ್ಪನವರ ಪ್ರಪಂಚ ಹಾಗೂ ವಿಶ್ವವಾಣಿ ಪತ್ರಿಕೆಗಳನ್ನು ಓದುತ್ತಿರುವಾಗಲೇ ಕಾರ್ಯ ನಿರ್ವಹಿಸಿ ಅವರ ಗರಡಿಯಲ್ಲಿ ತಯಾರಾಗಿರುವ ಕೋಟಿಯವರು, ಅವರ ಹಾಗೆಯೇ ಅಪಾರವಾದ ಶಿಷ್ಯಕೋಟಿಯನ್ನು ಹೊಂದಿದವರಾಗಿದ್ದಾರೆ. ಕೋಟಿಯವರ ಗರಡಿಯಲ್ಲಿ ತಯಾರಾದ ಐವತ್ತಕ್ಕೂ ಹೆಚ್ಚು ಪತ್ರಕರ್ತರು ಇಂದು ದೊಡ್ಡ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ತಮ್ಮ ಪತ್ರಿಕೆಗಳ ಹಾಗೆಯೇ ಎಲ್ಲ ಜಿಲ್ಲೆಗಳಲ್ಲೂ ಒಳ್ಳೆಯ ಪತ್ರಿಕೆಗಳು ಅಭಿವೃದ್ಧಿ ಹೊಂದಲೆಂಬ ಕಾಳಜಿಯುಳ್ಳವರಾಗಿದ್ದರು. ಈ ಉದ್ದೇಶದಿಂದಲೇ ಕರ್ನಾಟಕ ಮಾಧ್ಯಮ ಅಕಾಡಮಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟು ಪ್ರತಿವರ್ಷ ಜಿಲ್ಲಾಮಟ್ಟದ ಅತ್ಯುತ್ತಮ ಪತ್ರಿಕೆಗೆ ಪುರಸ್ಕಾರ ನೀಡುವ ಪರಿಪಾಠ ಆರಂಭಿಸಿದ ಮೊದಲಿಗರಾಗಿದ್ದಾರೆ.

ತಮ್ಮ ಪತ್ರಿಕೆಯ ಆದಾಯದಲ್ಲಿ ಬಹುಪಾಲನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದ ಹಿರಿಮೆ ಕೋಟಿಯವರಿಗೆ ಸಲ್ಲುತ್ತದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ 21 ಬಸ್ ತಂಗುದಾಣಗಳನ್ನು ಕಟ್ಟಿಸಿರುವ ಇವರು, ಗ್ರಾಮಾಂತರ ಪ್ರದೇಶದ ಹಲವಾರು ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ನೀಡಿದ್ದಾರೆ.

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರಾಯೋಜಿಸಿದ್ದರು. ಮೈಸೂರಿನ ರೋಟರಿ ಪಶ್ಚಿಮ ಹಾಗೂ ಲಯನ್ಸ್ ಐಕಾನ್ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಗೌರದ ಸದಸ್ಯರಾಗಿ ಸೇವಾ ಕಾರ್ಯಗಳಲ್ಲಿ ಅವುಗಳೊಂದಿಗೆ ಸಹಕರಿಸುತ್ತಿದ್ದರು. ಮೈಸೂರಿನ ಎಂ.ಜಿ.ರಸ್ತೆಯ ತರಕಾರಿ ಬೆಳೆಯುವ ಸಣ್ಣ ರೈತರು ಹಾಗೂ ಮಾರುವವರಿಗೆ ನೀರಿನ ಸೌಲಭ್ಯ ಒದಗಿಸಿದ್ದಲ್ಲದೆ, ಅವರ ಶಾಶ್ವತ ನೆಲೆಗಾಗಿ ಶ್ರಮಿಸಿದ್ದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸತತ ಎರಡು ಅವಧಿಗಳಲ್ಲಿ ಕಾರ್ಯ ನಿರ್ವಹಿಸಿರುವ ಕೋಟಿಯವರು ಮೈಸೂರು ಕಾರ್ಯ ಪಡೆದು ಸದಸ್ಯರಾಗಿ ಮೈಸೂರಿನ ವ್ಯವಸ್ಥಿತ ಬೆಳವಣಿಗೆಗೆ ನೆರವಾಗಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡಮಿಯಲ್ಲಿ ನಾಲ್ಕು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಕರ್ನಾಟಕ ಸರ್ಕಾರದ ಪತ್ರಕರ್ತರ ಮಾನ್ಯತಾ ಸಮಿತಿಯಲ್ಲಿ ಎರಡು ಅವಧಿಗೆ ಸದಸ್ಯರಾಗಿ ಕೋಟಿಯವರು ಕಾರ್ಯನಿರ್ವಹಿಸಿದ್ದಾರೆ.

ಕೋಟಿಯವರಿಗೆ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ರೋಟರಿ ಸುಪ್ರೀಂ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಜನಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಟಿಎಸ್ ಆರ್ ಪ್ರಶಸ್ತಿಗಳಲ್ಲದೆ, ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಅಭ್ಯುದಯ ಪತ್ರಿಕೋದ್ಯಮ ಪ್ರೋತ್ಸಾಹಕ (ಮೆಂಟರ್) ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿಯಲ್ಲಿ ಪತ್ರಿಕೆಯ ಶಾಖಾ ಕಚೇರಿಗಳನ್ನು ಹೊಂದಿರುವ ಕೋಟಿಯವರು 80ಕ್ಕೂ ಹೆಚ್ಚು ಸಿಬ್ಬಂದಿಗೆ ನೇರವಾಗಿ ಉದ್ಯೋಗ ಒದಗಿಸಿದ್ದಾರೆ. ಜಪಾನ್, ಸಿಂಗಪೂರ್, ಹಾಂಕಾಂಗ್, ಥೈಲ್ಯಾಂಡ್, ಮಲೇಷಿಯಾ, ನೇಪಾಳ್, ದುಬೈ ಅಬುದಾಬಿ ಹಾಗೂ ಶ್ರೀಲಂಕಾ ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಪತ್ರಿಕೆಗಳ ಕಾರ್ಯ ವಿಧಾನವನ್ನು ಸ್ವತಃ ವೀಕ್ಷಿಸಿ ಅನುಭವ ಪಡೆದು ಬಂದವರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)