varthabharthi

ಸಂಪಾದಕೀಯ

ನ್ಯಾಯವ್ಯವಸ್ಥೆಯೇ ಕಟಕಟೆಯಲ್ಲಿ

ವಾರ್ತಾ ಭಾರತಿ : 24 Nov, 2017

ನ್ಯಾಯ ನೀಡುವ ನ್ಯಾಯ ವ್ಯವಸ್ಥೆಯೇ ಕಟಕಟೆಯಲ್ಲಿ ನಿಂತರೆ? ಅಥವಾ ನ್ಯಾಯ ನೀಡುವ ನ್ಯಾಯಾಧೀಶರೇ ನ್ಯಾಯ ಸಿಗದೆ ಬೀದಿಗಿಳಿದರೆ? ಪ್ರಜಾಸತ್ತೆ ಹತ್ತು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ದಿನಗಳಲ್ಲಿ, ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೀಡಾಗುತ್ತಿರುವುದು ದೇಶದ ಮುಂದಿರುವ ಅತೀ ದೊಡ್ಡ ಆತಂಕವಾಗಿದೆ. ಸರಕಾರ ಸರ್ವಾಧಿಕಾರಿಯಾದರೆ ಅದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು ಎನ್ನುವ ಸಣ್ಣದೊಂದು ಬೆಳಕಿನ ಕಿರಣ ಈವರೆಗೆ, ಜನರ ಮುಂದೆಯಿತ್ತು. ಆ ಕಿರಣವನ್ನೇ ಅಳಿಸಿ ಹಾಕುವ ಸಂಚೊಂದು ನಡೆಯುತ್ತಿದೆಯೇ ಮತ್ತು ಈ ಸಂಚಿನಲ್ಲಿ ಸ್ವತಃ ನ್ಯಾಯಾಧೀಶರೂ ಭಾಗೀದಾರರಾಗಿದ್ದಾರೆಯೇ ಎಂಬ ಪ್ರಶ್ನೆ ಇದೀಗ ತಲೆಯೆತ್ತಿದೆ.

ಸೊಹ್ರಾಬುದ್ದೀನ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ನ್ಯಾ. ಬೃಜ್ ಗೋಪಾಲ್ ಹರಿಕಿಶನ್ ಲೋಯಾ ಅವರ ಸಾವಿನ ಕುರಿತಂತೆ ಎದ್ದಿರುವ ಅನುಮಾನಗಳು, ಕೇವಲ ಒಬ್ಬ ನ್ಯಾಯಾಧೀಶರ ಸಾವಿನ ಬಗ್ಗೆ ಮಾತ್ರವಲ್ಲದೆ, ಈ ದೇಶದ ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತಂತೆಯೂ ಅನುಮಾನಗಳನ್ನು ಎತ್ತಿದೆ. ನ್ಯಾ. ಬೃಜ್ ಗೋಪಾಲ್ ಹರಿಕಿಶನ್ ಲೋಯಾ ಅವರ ಸಾವಿನ ಬಗ್ಗೆ ಕುಟುಂಬ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದೆ. ಲೋಯಾ ಅವರು ಮೃತಪಟ್ಟಿರುವುದು ಹೃದಯಾಘಾತದಿಂದ ಅಲ್ಲ, ಅವರ ಸಾವು ಅನುಮಾನಾಸ್ಪದ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.

ಲೋಯಾ ಒಬ್ಬ ಸಾಮಾನ್ಯ ನ್ಯಾಯಾಧೀಶರೇ ಆಗಿದ್ದಿದ್ದರೆ ಈ ಅನುಮಾನವನ್ನು ಅಷ್ಟು ಗಂಭೀರವಾಗಿ ಸ್ವೀಕರಿಸಬೇಕಾಗಿರಲಿಲ್ಲ. ಆದರೆ ಅವರು ಸಿಬಿಐ ವಿಶೇಷ ನ್ಯಾಯಾಲಯದ ಮುಖ್ಯಸ್ಥರಾಗಿದ್ದವರು. ಜೊತೆಗೆ, ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದವರು. ಈ ಪ್ರಕರಣ ಈ ದೇಶದ ಪ್ರಮುಖ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳನ್ನು ಸುತ್ತಿಕೊಂಡಿದ್ದುದರಿಂದ ಲೋಯಾ ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ ಆತಂಕಗಳಿಗೆ ಕಿವಿಯಾಗುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಸಾವಿನ ಕುರಿತಂತೆ ಅನುಮಾನ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಕುಟುಂಬಸ್ಥರು ಇನ್ನೊಂದು ಸ್ಫೋಟಕ ಆರೋಪವನ್ನು ಮಾಡಿದ್ದಾರೆ.

ಬಾಂಬೆ ಹೈಕೋರ್ಟಿನ ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಮೋಹಿತ್ ಶಾ ಅವರು, ಲೋಯಾ ಅವರಿಗೆ ಹಣದ ಆಮಿಷ ಒಡ್ಡಿದ್ದರು ಎಂದು ಕುಟುಂಬ ಮಾಧ್ಯಮಗಳಿಗೆ ಮಾಹಿತಿ ನೀಡಿದೆ. ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಅನುಕೂಲಕರ ತೀರ್ಪು ಪ್ರಕಟಿಸಿದರೆ 100 ಕೋಟಿ ರೂಪಾಯಿ ನೀಡಲಾಗುವುದು ಎಂದು ಈ ನ್ಯಾಯಾಧೀಶರು ಲೋಯಾ ಅವರಿಗೆ ಆಮಿಷ ನೀಡಿದ್ದರಂತೆ. ಅಷ್ಟೇ ಅಲ್ಲ, ಮುಂಬೈಯಲ್ಲಿ ಮನೆಯನ್ನು ನೀಡುವ ಪ್ರಸ್ತಾಪವನ್ನು ಮಾಡಿದ್ದರಂತೆ. ಲೋಯಾ ಅವರು ಸಾವಿಗೆ ಮುನ್ನ ಇದನ್ನು ತನ್ನ ಸಹೋದರಿಯ ಮುಂದೆ ಹಂಚಿಕೊಂಡಿದ್ದಾರೆ ಎನ್ನುವುದನ್ನು ಕುಟುಂಬಸ್ಥರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇಂತಹ ಸ್ಫೋಟಕ ಆರೋಪವನ್ನು ಕುಟುಂಬಸ್ಥರು ಮಾಡಿದ ಬಳಿಕವೂ ಸರಕಾರ ಅಥವಾ ನ್ಯಾಯವ್ಯವಸ್ಥೆ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನ್ನೂ ನೀಡಿಲ್ಲ. ಯಾವ ನ್ಯಾಯಾಧೀಶರ ಮೇಲೆ ಕುಟುಂಬಸ್ಥರು ಈ ಆರೋಪವನ್ನು ಮಾಡಿದ್ದಾರೆಯೋ ಆ ನ್ಯಾಯಾಧೀಶರೂ ಈವರೆಗೆ ಸ್ಪಷ್ಟೀಕರಣವನ್ನು ಕೊಟ್ಟಿಲ್ಲ.

ಈ ಆರೋಪವನ್ನು ನಾವು ಮೂರು ನೆಲೆಗಳಲ್ಲಿ ನೋಡಬೇಕಾಗಿದೆ. ಒಂದು, ದೇಶಾದ್ಯಂತ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ನಕಲಿ ಎನ್‌ಕೌಂಟರ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಎನ್ನುವುದು ಇತರ ನ್ಯಾಯಾಧೀಶರ ನೈತಿಕ ಸ್ಥೈರ್ಯವನ್ನು ನಡುಗಿಸುವಂತಹದ್ದು. ಈ ಪ್ರಕರಣದಲ್ಲಿ ರಾಷ್ಟ್ರೀಯ ಪಕ್ಷವೊಂದರ ಅತ್ಯುನ್ನತ ಸ್ಥಾನದಲ್ಲಿರುವ ರಾಜಕೀಯ ನಾಯಕರ ಹೆಸರೂ ತಳಕುಹಾಕಿಕೊಂಡಿರುವುದರಿಂದ, ಈ ಆರೋಪವನ್ನು ತನಿಖೆಗೊಳಪಡಿಸುವುದು ಸರಕಾರಕ್ಕೆ ಅನಿವಾರ್ಯವಾಗುತ್ತದೆ. ಇಲ್ಲವಾದರೆ, ಸರಕಾರವೇ ಸಂಶಯಕ್ಕೊಳಪಡಬೇಕಾಗುತ್ತದೆ.

ಇಲ್ಲಿರುವ ಇನ್ನೊಂದು ಪ್ರಮುಖ ಅಂಶವೆಂದರೆ, ಮೃತ ನ್ಯಾಯಾಧೀಶರಿಗೆ ಹಣದ ಆಮಿಷ ನೀಡಿದವರು ಇನ್ನೊಬ್ಬ ನ್ಯಾಯಾಧೀಶರೇ ಆಗಿದ್ದಾರೆ. ಇದು ನ್ಯಾಯವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುವ ಆರೋಪವಾಗಿದೆ. ತಕ್ಷಣ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸದೇ ಇದ್ದರೆ, ನ್ಯಾಯವ್ಯವಸ್ಥೆಯು ಈ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಇಂತಹ ಕಳಂಕ, ಜನರು ಅದರ ಮೇಲೆ ಇಟ್ಟಿರುವ ನಂಬಿಕೆಗೆ ಧಕ್ಕೆ ತರಬಹುದು. ಈ ಕಳಂಕವನ್ನು ತಕ್ಷಣ ನಿವಾರಿಸಬೇಕಾದುದು ನ್ಯಾಯಾಲಯದ ಅಗತ್ಯವಾಗಿದೆ. ಇದೇ ಸಂದರ್ಭದಲ್ಲಿ ನ್ಯಾಯಾಧೀಶರನ್ನು ಕೊಂದು ಹಾಕಲಾಗಿದೆ ಎನ್ನುವ ಅನುಮಾನವನ್ನು ಕುಟುಂಬ ವ್ಯಕ್ತಪಡಿಸುತ್ತಿದೆ. ಒಬ್ಬ ನ್ಯಾಯಾಧೀಶನ ಸಾವು ಅನುಮಾನಾಸ್ಪದವಾಗಿದೆ ಎಂದು ಆತನ ಕುಟುಂಬ ಆರೋಪಿಸುವಾಗ, ಆ ಕುರಿತಂತೆ ನ್ಯಾಯವ್ಯವಸ್ಥೆ ವೌನವಾಗಿರುತ್ತದೆ ಎಂದಾದರೆ, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಕುರಿತಂತೆ ವ್ಯಕ್ತವಾಗಿರುವ ಅನುಮಾನಕ್ಕೆ ನ್ಯಾಯಾಲಯ ಎಷ್ಟರಮಟ್ಟಿಗೆ ನ್ಯಾಯವನ್ನು ನೀಡಬಹುದು? ಇಂತಹದೊಂದು ಅನುಮಾನ ವ್ಯಕ್ತವಾದ ತಕ್ಷಣ ನ್ಯಾಯಾಲಯ ಸ್ವಯಂ ದೂರು ದಾಖಲಿಸಿ, ಆ ಬಗ್ಗೆ ತನಿಖೆ ನಡೆಸಲು ಆದೇಶ ನೀಡಬೇಕಾಗಿತ್ತು. ಆದರೆ ಈವರೆಗೆ ನಮ್ಮ ಕಾನೂನು ವ್ಯವಸ್ಥೆಯಾಗಲಿ, ನ್ಯಾಯವ್ಯವಸ್ಥೆಯಾಗಲಿ ಈ ಆರೋಪಕ್ಕೆ ಸ್ಪಂದಿಸಿಲ್ಲ.

ಇಲ್ಲಿ, ಕುಟುಂಬ ಇನ್ನೊಬ್ಬ ನ್ಯಾಯಾಧೀಶನ ವಿರುದ್ಧ ಆರೋಪ ಮಾಡಿರುವುದು ಅದರ ಮುಜುಗರಕ್ಕೆ ಕಾರಣವಾಗಿರಬಹುದು. ಆದರೆ ಇದೇ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸತ್ತಿರುವುದೂ ಇನ್ನೊಬ್ಬ ನ್ಯಾಯಾಧೀಶ ಎನ್ನುವುದನ್ನು ನ್ಯಾಯವ್ಯವಸ್ಥೆ ಮರೆಯಬಾರದು. ಇದೇ ಸಂದರ್ಭದಲ್ಲಿ, ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಅನುಕೂಲಕರ ತೀರ್ಪು ಬೇಕಾಗಿರುವುದು ಯಾರಿಗೆ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಮುಂಬೈ ಹೈಕೋರ್ಟ್‌ನ ನ್ಯಾಯಾಧೀಶರು ನೂರು ಕೋಟಿ ಆಮಿಷವನ್ನು ಯಾರ ಪರವಾಗಿ ಒಡ್ಡಿದ್ದರು? ಎನ್ನುವುದೂ ತನಿಖೆಯಿಂದ ಹೊರಬೀಳುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ, ಯಾವ ನ್ಯಾಯಾಧೀಶರ ಮೇಲೆ ಕುಟುಂಬ ಆರೋಪ ಮಾಡಿದೆಯೋ ಆ ನ್ಯಾಯಾಧೀಶರನ್ನೂ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ನೂರು ಕೋಟಿ ರೂಪಾಯಿ ಆಮಿಷವೆಂದರೆ ಸಣ್ಣ ವಿಷಯವಲ್ಲ. ಅಷ್ಟೂ ಹಣವನ್ನು ಒಬ್ಬ ನ್ಯಾಯಾಧೀಶ ಇನ್ನೊಬ್ಬ ನ್ಯಾಯಾಧೀಶನಿಗೆ ನೀಡಲು ಸಾಧ್ಯವಿಲ್ಲ. ರಾಜಕಾರಣಿಗಳು ಈ ಆಮಿಶದ ಹಿಂದಿರುವುದು ಸ್ಪಷ್ಟ. ಆದುದರಿಂದ ಲೋಯಾ ಕುಟುಂಬ ಮಾಡಿರುವ ಆರೋಪವನ್ನು ಗಂಭೀರ ತನಿಖೆಗೊಳಪಡಿಸಿದರೆ, ಲೋಯಾ ಸಾವಿನ ಹಿಂದಿರುವ ಸತ್ಯಗಳು ಮಾತ್ರವಲ್ಲ, ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ನ ಹಿಂದಿರುವ ಸತ್ಯಗಳೂ ಹೊರಬರುವ ಸಾಧ್ಯತೆಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)