ರಾಜಮೌಳಿ ಸಿನೆಮಾದಲ್ಲಿ ಜ್ಯೂ.ಎನ್ಟಿಆರ್-ರಾಮ್ಚರಣ್
ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದಿರುವ ಬಾಹುಬಲಿ ಚಿತ್ರದ ನಿರ್ದೇಶಕ ಎಸ್.ರಾಜಮೌಳಿಯ ಮುಂದಿನ ಚಿತ್ರ ಯಾವುದೆಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ. ಅಪ್ಪಟ ಸಾಮಾಜಿಕ ಕಥಾವಸ್ತುವನ್ನೊಳಗೊಂಡ ಚಿತ್ರವನ್ನು ಅತ್ಯಂತ ವಿಭಿನ್ನವಾಗಿ ನಿರ್ಮಿಸಲು ಅವರು ಹೊರಟಿದ್ದಾರೆ. ಟಾಲಿವುಡ್ನ ತಾರಾದಿಗ್ಗಜರಾದ ರಾಮ್ಚರಣ್ ಹಾಗೂ ಜೂ. ಎನ್ಟಿಆರ್ ಇಬ್ಬರೂ ಈ ಚಿತ್ರ ನಟಿಸಲಿರುವುದು ಪಕ್ಕಾ ಆಗಿದೆ.
ರಾಜಮೌಳಿ, ಈ ಇಬ್ಬರೂ ಸೂಪರ್ಸ್ಟಾರ್ಗಳ ಜೊತೆಗಿರುವ ಚಿತ್ರವನ್ನು ಟ್ವೀಟ್ ಮಾಡಿರುವುದು, ಸೋಶಿಯಲ್ ಮೀಡಿಯಾದಲ್ಲಿ ಕುತೂಹಲದ ಕಿಚ್ಚನ್ನು ಹೊತ್ತಿಸಿದೆ. ಟಾಲಿವುಡ್ನಲ್ಲಿ ದಟ್ಟವಾಗಿ ಕೇಳಿಬರುತ್ತಿರುವ ವದಂತಿಗಳನ್ನು ನಂಬುವುದಾದರೆ, 2018ರ ಫೆಬ್ರವರಿ ನಂತರವಷ್ಟೇ ಚಿತ್ರ ಸೆಟ್ಟೇರಲಿದೆ.
ಆದರೆ ಚಿತ್ರ ನಾಯಕಿಯರ್ಯಾರೆಂಬುದನ್ನು ಮಾತ್ರ ರಾಜಮೌಳಿ ಈತನಕ ಬಹಿರಂಗಪಡಿಸಿಲ್ಲ. ಆದಾಗ್ಯೂ ಬಾಲಿವುಡ್ ನಟಿಯೊಬ್ಬರು ನಟಿಸುವ ಸಾಧ್ಯತೆಯೂ ಇದೆಯೆಂಬ ಮಾತುಗಳು ಕೇಳಿಬರುತ್ತಿವೆ. ವಿಶ್ವಾದ್ಯಂತ 900 ಕೋಟಿ ರೂ.ಗಳಿಸಿದ ಮೊದಲ ಭಾರತೀಯ ಚಿತ್ರವೆಂಬ ಹೆಗ್ಗಳಿಕೆಯನ್ನು ಪಡೆದಿರುವ ಬಾಹುಬಲಿ-2ಗೆ ಪ್ರಶಸ್ತಿಗಳ ಸುರಿಮಳೆಯಾಗುತ್ತಿದೆ. ಆಂಧ್ರ ಸರಕಾರದ ನಂದಿ ಪುರಸ್ಕಾರಗಳು ಸೇರಿದಂತೆ ಬಾಹುಬಲಿ-2ಗೆ ಈ ತನಕ 14ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ.
ಜೂ.ಎನ್ಟಿಆರ್, ರಾಮ್ಚರಣ್ ತೇಜಾ ಕಾಂಬಿನೇಶನ್ನೊಂದಿಗೆ, ರಾಜಮೌಳಿ ಹೊಸ ಚಿತ್ರದಲ್ಲೂ ಭರ್ಜರಿ ಗೆಲುವನ್ನು ಕಾಣಲಿದ್ದರೆಯೇ ಎಂಬುದನ್ನು ಕಾದುನೋಡಬೇಕಿದೆ.