varthabharthi

ದಿಲ್ಲಿ ದರ್ಬಾರ್

ಪತ್ರಕರ್ತ

ವಾರ್ತಾ ಭಾರತಿ : 26 Nov, 2017

ಸಾವಿನಲ್ಲೂ ರಾಜಕೀಯ

ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವ ಪ್ರಿಯರಂಜನ್‌ದಾಸ್ ಮುನ್ಷಿಯವರ ಪಾರ್ಥಿವ ಶರೀರವನ್ನು ಒಯ್ಯಲು ಸೇನಾ ಹೆಲಿಕಾಪ್ಟರ್ ಬಳಸಲು ಪ್ರಧಾನಿ ಸಚಿವಾಲಯ ಅನುಮತಿ ನೀಡಿತು. ದಶಕದಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಮುನ್ಷಿಯವರು ಇತ್ತೀಚೆಗೆ ಕೊನೆಯುಸಿರೆಳೆದಾಗ, ದಿಲ್ಲಿಯಿಂದ ಪಶ್ಚಿಮ ಬಂಗಾಳದ ರಾಯಗಂಜ್‌ಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಪಾರ್ಥಿವ ಶರೀರ ಒಯ್ಯಲಾಯಿತು. ಅವರ ಸಾವಿನಲ್ಲೂ ರಾಜಕೀಯ ಹೊರತಾಗಿರಲಿಲ್ಲ. ಪಾರ್ಥಿವ ಶರೀರವನ್ನು ಪಶ್ಚಿಮ ಬಂಗಾಳ ಸರಕಾರದ ವೆಚ್ಚದಲ್ಲಿ ಒಯ್ಯಲು ಹೆಲಿಕಾಪ್ಟರ್ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದಾಗ, ಮುನ್ಷಿ ಪತ್ನಿ ದೀಪಾ ಆ ಪ್ರಸ್ತಾವ ತಿರಸ್ಕರಿಸಿದರು. ಏಕೆಂದರೆ ದೀಪಾ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಮಮತಾ ಬ್ಯಾನರ್ಜಿ ಹೊಸ ಪಕ್ಷ ಕಟ್ಟುವ ಮುನ್ನ ಕಾಂಗ್ರೆಸ್‌ನಲ್ಲಿ ದಾಸ್ ಮುನ್ಷಿಯವರ ಸಹೋದ್ಯೋಗಿಯಾಗಿದ್ದವರು. ಆದರೆ ರಾಜಕೀಯ ವೈರತ್ವದಿಂದಾಗಿ ಮಮತಾ ನೀಡಿದ ಕೊಡುಗೆಯನ್ನು ದೀಪಾ ತಿರಸ್ಕರಿಸಿದ್ದು ಕೆಲ ರಾಜಕೀಯ ವಿಶ್ಲೇಷಕರಿಗೆ ಸರಿ ಎನಿಸಲಿಲ್ಲ. ಆದರೆ ಪ್ರಧಾನಿ ಕಚೇರಿ ದೀಪಾ ನೆರವಿಗೆ ಬಂದು ಎಲ್ಲವೂ ಸುಸೂತ್ರವಾಗಿ ಮುಗಿಯಿತು.

ಗುಜರಾತ್‌ನಲ್ಲಿ ಸಿಧು ಸೂಪರ್ ಸಿಕ್ಸರ್

ಕಾಂಗ್ರೆಸ್ ನಾಯಕರಿಗೆ ಅಚ್ಚರಿಯ ಅಂಶ ಗೋಚರವಾಗಿದೆ; ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್‌ನಲ್ಲಿ ರಾಹುಲ್‌ಗಾಂಧಿಯವರನ್ನು ಹೊರತುಪಡಿಸಿದರೆ, ಅತೀ ಹೆಚ್ಚು ಜನಾಕರ್ಷಣೆಯ ಮುಖಂಡ ನವಜ್ಯೋತ್ ಸಿಂಗ್ ಸಿಧು. ಇದು ಇತ್ತೀಚೆಗೆ ಗುಜರಾತ್ ಚುನಾವಣೆಗಾಗಿ ಬಿಡುಗಡೆ ಮಾಡಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಬಿಂಬಿತವಾಗಿದೆ. ಪಟ್ಟಿಯಲ್ಲಿ ಸೋನಿಯಾಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಇದ್ದಾರೆ. ಆದರೆ ಕೆಲ ಕಾಂಗ್ರೆಸ್ ಮುಖಂಡರಿಗೆ ಇರುವ ಆತಂಕವೆಂದರೆ, ಸಿಧು ಅವರ ಅಕರ್ಷಣೆ ಅಲ್ಲಗಳೆಯುವಂತಿಲ್ಲ; ಆದರೆ ಸಮೂಹವನ್ನು ಆಕರ್ಷಿಸುವ ಕಾಂಗ್ರೆಸ್ ನಾಯಕರ ಕೊರತೆ ದೊಡ್ಡ ಸಮಸ್ಯೆ. ಪಂಜಾಬ್ ಸರಕಾರದಲ್ಲಿ ಸಚಿವ ಹುದ್ದೆ ನೀಡಿರುವುದು ಸಿಧುಗೆ ತೃಪ್ತಿ ತಂದಂತಿಲ್ಲ. ತಾನು ದೊಡ್ಡ ಪಾತ್ರ ನಿರ್ವಹಿಸಬಲ್ಲೆ ಎನ್ನುವುದು ಅವರ ಆತ್ಮವಿಶ್ವಾಸ. ಅವರು ಗುಜರಾತ್‌ನಲ್ಲಿ ಜನರನ್ನು ಆಕರ್ಷಿಸುವುದಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಹಾಗೂ ಪಕ್ಷದ ಉನ್ನತ ಮುಖಂಡರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ?

ತೇಜಸ್ವಿ ರೋಮಾಂಚನ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಜತೆಗಿನ ಅದ್ಭುತ ಭೋಜನಕೂಟ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಲಾಲೂ ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್ ಪಾಲಿಗೆ ರೋಮಾಂಚನ ತಂದಿದೆ. ರಾಷ್ಟ್ರೀಯ ಜನತಾದಳ ಮುಖಂಡ ಇದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆರ್‌ಜೆಡಿ ಸರ್ವೋಚ್ಚ ನಾಯಕನ ನಿಕಟವರ್ತಿಗಳ ಪ್ರಕಾರ, ಭಾರತದ ರಾಜಕೀಯದಲ್ಲಿ ಅದ್ಭುತವನ್ನು ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಅಖಿಲೇಶ್ ಯಾದವ್ ಸೇರಿದಂತೆ ಯುವ ಮುಖಂಡರ ನಡುವೆ ನಿಕಟ ಸಂಬಂಧ ಬೆಳೆಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವೇ ಸರ್ವೋಚ್ಚ ಎಂಬ ಮನೋಭಾವದವರಿಗೆ ರಾಹುಲ್ ಹಾಗೂ ತೇಜಸ್ವ್ವಿ ನಡುವಿನ ಈ ಭೋಜನಕೂಟ ಪಥ್ಯವಾದಂತಿಲ್ಲ. ಪಕ್ಷದ ಹಲವು ಮುಖಂಡರು ಈ ಬಗ್ಗೆ ಒಳಗೊಳಗೇ ಅಸಮಾಧಾನ ಹೊಂದಿದ್ದಾರೆ. ಬಿಹಾರದ ಕಾಂಗ್ರೆಸ್ ಮುಖಂಡರು ಮಾತ್ರವಲ್ಲದೆ ದಿಲ್ಲಿಯಲ್ಲಿರುವ ಕಾಂಗ್ರೆಸ್ ಮುಖಂಡರ ಆಕ್ಷೇಪವೆಂದರೆ, ಸಹಭೋಜನದ ಮಾತು ಹಾಗಿರಲಿ; ರಾಹುಲ್ ಅಲ್ಪಕಾಲದ ಭೇಟಿಗೂ ತಮಗೆ ಅವಕಾಶ ನೀಡುತ್ತಿಲ್ಲ ಎನ್ನುವುದು. ದೂರುಗಳ ಸರಮಾಲೆ ಹಿನ್ನೆಲೆಯಲ್ಲಿ ತೇಜಸ್ವಿ ತಮ್ಮ ಭೋಜನಕೂಟದ ಸುದ್ದಿಯನ್ನು ಮುಚ್ಚಿಹಾಕುವುದೇ ಒಳ್ಳೆಯದಿತ್ತೇನೋ?

ಮಾಕೆನ್ ಎಂಬ ಕಪ್ಪುಕುದುರೆ?

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮುಖ್ಯಸ್ಥರಾಗಲು ರಾಹುಲ್ ಸಜ್ಜಾಗಿದ್ದರೂ, ಅವರಿಗೆ ಸೂಕ್ತ ರಾಜಕೀಯ ಕಾರ್ಯದರ್ಶಿಯ ಹುಡುಕಾಟ ವ್ಯಾಪಕವಾಗಿ ನಡೆದಿದೆ. ಸೋನಿಯಾಗಾಂಧಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ರಾಹುಲ್‌ಗೆ ಇಷ್ಟವಿದ್ದಂತಿಲ್ಲ. ಆ ಸ್ಥಾನವನ್ನು ತುಂಬಲು ಯಾರು ಅರ್ಹರು? ಜೈರಾಮ್ ರಮೇಶ್ ಬಹುಶಃ ಉತ್ತಮ ಆಯ್ಕೆ. ಆದರೆ ಅವರಿಗೆ ರಾಜಕೀಯ ಘನತೆ ಸಾಲದು. ಪ್ರಸ್ತುತ ರಾಹುಲ್ ಅವರ ನಿಕಟವರ್ತಿಯಾಗಿರುವ ಕನಿಷ್ಕಾ ಸಿಂಗ್ ಇನ್ನೂ ಲಘುತೂಕದ ವ್ಯಕ್ತಿತ್ವ ಹಾಗೂ ಈ ಹುದ್ದೆಗೆ ಸೂಕ್ತರಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಅಜಯ್ ಮಾಕೆನ್ ಕಪ್ಪುಕುದುರೆಯಾಗಿ ರೂಪುಗೊಳ್ಳುತ್ತಿದ್ದಾರೆ. ಮಾಕೆನ್ ಈಗಾಗಲೇ ಅನೌಪಚಾರಿಕವಾಗಿ ರಾಹುಲ್‌ಗೆ ರಾಜಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಮಾಕೇನ್ ತನ್ನ ಉತ್ತರಾಧಿಕಾರಿಯಾಗುವುದನ್ನು ಪಟೇಲ್ ಬಹುಶಃ ಸುಲಭವಾಗಿ ಜೀರ್ಣಿಸಿಕೊಳ್ಳಲಾರರು. ಈ ವರ್ಷದ ಆರಂಭದಲ್ಲಷ್ಟೇ 1993ರಿಂದ ಸತತ ಐದನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಪಟೇಲ್, ತಮ್ಮ ಎದುರಾಳಿ ಬಿಜೆಪಿಯ ಬಲವಂತ್‌ಸಿನ್ಹ್ಹಾ ರಜಪೂತ್ ಅವರಿಗೆ ಸೋಲುಣಿಸಿದವರು. ಆದರೆ ಈ ಯಶಸ್ಸು ಪಟೇಲ್‌ಗೆ ಹೆಚ್ಚಿನ ಫಲ ನೀಡುವ ಸೂಚನೆ ಕಾಣಿಸುತ್ತಿಲ್ಲ.

ಗೆಲುವಿನ ಕನಸು ಮತ್ತು ಶುಭಶಕುನ

ಡಿಸೆಂಬರ್‌ನಲ್ಲಿ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆ ಬಗ್ಗೆ ಕಾಂಗ್ರೆಸ್ ಅತೀವ ನಿರೀಕ್ಷೆ ಇಟ್ಟುಕೊಂಡಿದೆ. ಅತ್ಯುತ್ಸಾಹದಲ್ಲಿರುವ ಕಾಂಗ್ರೆಸ್ ಮುಖಂಡರು ಹಲವು ಶುಭಶಕುನಗಳನ್ನು ಎಲ್ಲೆಡೆ ಕಾಣುತ್ತಿದ್ದಾರೆ. ಉದಾಹರಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನವೆಂಬರ್ 14ರಂದು ಆರಂಭವಾಗಿದೆ. ಅದು ಜವಾಹರಲಾಲ್ ನೆಹರೂ ಅವರ ಜನ್ಮದಿನ. ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆಯಲಿದ್ದು, ಅದು ಪಕ್ಷಾಧ್ಯಕ್ಷೆ ಸೋನಿಯಾಗಾಂಧಿಯವರ ಹುಟ್ಟುಹಬ್ಬದ ದಿನ. ಕೊನೆಯ ಹಂತದ ಮತದಾನ ಡಿಸೆಂಬರ್ 14, ಅದು ಸಂಜಯ್‌ಗಾಂಧಿ ಹುಟ್ಟಿದ ದಿನ. ಈ ಹಳೆಯ ಪಕ್ಷಕ್ಕೆ ಇವೆಲ್ಲ ಅದೃಷ್ಟ ತಂದೀತೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)