varthabharthi

ಅನುಗಾಲ

ಸಾಹಿತ್ಯ ಸಮ್ಮೇಳನದ ಬಗ್ಗೆ ಒಂದಿಷ್ಟು...

ವಾರ್ತಾ ಭಾರತಿ : 30 Nov, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಜಾತ್ಯತೀತತೆ ಒಂದು ರಾಜಕೀಯ ಹೇಳಿಕೆಯಲ್ಲ. ಅದೊಂದು ಮೌಲ್ಯ; ಒಂದು ಸಿದ್ಧಾಂತ. ಇಷ್ಟಕ್ಕೂ ನಿಲುವಿನ ಪ್ರಶ್ನೆ ಬಂದಾಗ ಸಂವೇದನಾಶೀಲ ವ್ಯಕ್ತಿಯೊಬ್ಬ ನಿಜಕ್ಕೂ ಪ್ರಾಮಾಣಿಕನಾ ಗಿದ್ದರೆ ತನ್ನ ನಿಲುವೇ ತನ್ನ ಇರವು ಎಂಬುದನ್ನು ಸಾಬೀತುಪಡಿಸಬೇಕು ಮತ್ತು ಅಗ್ನಿದಿವ್ಯಕ್ಕೊಡ್ಡಿಕೊಳ್ಳಬೇಕು. ಈ ದೃಷ್ಟಿಯಿಂದ ಚಂಪಾ ತನ್ನ ಸತತ ದಿಟ್ಟನಿಲುವಿನ ಮೂಲಕ, ಮಾತು-ಕೃತಿಗಳ ಮೂಲಕ ಕೋಮುವಾದಕ್ಕೆ ಮಾತ್ರವಲ್ಲ ಎಲ್ಲ ಬಗೆಯ ಮೌಢ್ಯಕ್ಕೆ ಸೆಡ್ಡುಹೊಡೆದರು.


ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ 83ನೇ ಆವೃತ್ತಿಯು ವೈಭವೋಪೇತವಾಗಿ ನಡೆಯಿತು. ಈ ಸಮ್ಮೇಳನವು ಮತ್ತೊಮ್ಮೆ ಪರಿಷತ್ತಿನ ನಡವಳಿಕೆಗಳ ಸಹಜ ಕೊರತೆಯಿಂದಾಗಿ ತಪ್ಪು ಕಾರಣಗಳಿಗಾಗಿ ಸುದ್ದಿ ಮಾಡಿತೇ ವಿನಾ ಹೊಸತೇನನ್ನೂ ಹೇಳಲಿಲ್ಲ. ಹೇಳಿಕೇಳಿ ಅದು ಸಮ್ಮೇಳನ. ಅರ್ಥಾತ್ ಸಮ್ಮಿಲನ. ಅಲ್ಲಿ ಎಲ್ಲ ಬಗೆಯ ಮಂದಿ ಸೇರುತ್ತಾರೆ. ಈ ರಾಜ್ಯದ ಆರೂ ಚಿಲ್ಲರೆ ಕೋಟಿ ಜನರಿಗೆ ಹೋಲಿಸಿದರೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಜನಸಂಖ್ಯೆಯು ತೀರಾ ಕಡಿಮೆ. ಹಿಂದಿನ ಬಾರಿಯ 11,000ಕ್ಕೆ ಹೋಲಿಸಿದರೆ ಈ ಬಾರಿ ನೋಂದಣಿಯಾದ 13,500 ದಾಖಲೆಯೆಂದು ಹೇಳುವಾಗ, ಕೇಳುವಾಗ ನಗುವೂ ಬರುತ್ತದೆ. ಆದರೆ ಈ ಸಂಖ್ಯೆಯನ್ನಾದರೂ ತಲುಪಬೇಕಾದರೆ ಸಾಹಿತ್ಯ ಪರಿಷತ್ತು ಎಷ್ಟೊಂದು ಶ್ರಮ ಪಡುತ್ತದೆ ಎಂಬುದನ್ನು ಗಮನಿಸುವಾಗ ಅದರ ಬಗ್ಗೆ ಅಭಿಮಾನವೂ ಅನುಕಂಪವೂ ಏಕಕಾಲಕ್ಕೆ ಮೂಡುತ್ತದೆ. ಗಂಭೀರವಾದದ್ದೇನನ್ನಾದರೂ ಸಮ್ಮೇಳನವು ಹೇಳುತ್ತದೆಯೇ ಎಂಬ ಬಗ್ಗೆ ಬಹುಜನರಿಗೆ ಯಾವ ಭ್ರಮೆಯೂ ಇರಲಿಲ್ಲ; ಇರುವುದಿಲ್ಲ. ಅಲ್ಲಿ ಬರುವ ಜನರ ಆಸಕ್ತಿ ಹತ್ತಾರು ರೀತಿಗಳಲ್ಲಿ ಹಂಚಿಹೋಗುತ್ತದೆ.

ಕನ್ನಡವೆಂಬ ಭಾವನಾತ್ಮಕ ಹುಚ್ಚು, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಏನೋ ವಿಶೇಷವಾದದ್ದು ಘಟಿಸುತ್ತದೆಂಬ ನಿರೀಕ್ಷೆ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದರೆ ಒಂದಷ್ಟು ಮಂದಿಯ ಪರಿಚಯವಾಗುತ್ತದೆ (ಮತ್ತು ಈಚೀಚೆಗೆ ಸೆಲ್ಫಿ ಮುಂತಾದ ರೀತಿಯ ಫೋಟೋಗಳ ಖಯಾಲಿ!) ಹಾಗೂ ಇನ್ನು ಕೆಲವರಿಗೆ ಇದು ಸಾಹಿತ್ಯ ಪ್ರಸಿದ್ಧಿಯ ಮೆಟ್ಟಲುಗಳೆಂಬ ಅಹಂ, (ಅವರಲ್ಲೂ ತಾವು ಹಿರಿಯ ಸಾಹಿತಿಗಳೆಂಬ ಫೋಸು ಹಾಕಿ ಆಟೋಗ್ರಾಫಿಗಾಗಿ ಕಾಯುವ ಬರಹಗಾರರೂ ಇದ್ದಾರೆ!) -ಹೀಗೆ ನಾನಾ ಕಾರಣದಿಂದ ಸಾಹಿತ್ಯ ಸಮ್ಮೇಳನಗಳು ಪ್ರಸ್ತುತವಾಗುತ್ತವೆ. ನಾನೂ ಅನೇಕ ಸಮ್ಮೇಳನಗಳನ್ನು ಕಂಡಿದ್ದೇನೆ. ಕೊನೆಗೂ ನನಗೆ ಮುಖ್ಯ ವಾಗಿ ಕಾಣಿಸಿದ್ದು ಅಲ್ಲಿ ಭೇಟಿಯಾಗುವ ಕೆಲವು ಮಿತ್ರರು. ಸ್ಟಾಲುಗಳಲ್ಲಿ ನಡೆಯುವ ಪುಸ್ತಕ ಪ್ರದರ್ಶನ-ಮಾರಾಟ. ಕೊಳ್ಳದೇ ಇದ್ದರೂ ನೋಡುತ್ತ ನಿಲ್ಲಬಹುದು (ನಿಮ್ಮ ಅದೃಷ್ಟಕ್ಕೆ ಆಸನ ಸೌಕರ್ಯವಿದ್ದರೆ ನೋಡುತ್ತ ಕುಳಿತುಕೊಳ್ಳಬಹುದು!)

ಇನ್ನು ಗೋಷ್ಠಿಗಳಲ್ಲಿ ಪ್ರೇಕ್ಷಕರಿರುವುದಿಲ್ಲವೆಂಬ ದೂರು ಕಳೆದ ಒಂದೆರಡು ದಶಕಗಳ ಮೊದಮೊದಲಿತ್ತಾದರೂ ಈಗ ಭಾಷಣಕಾರರು ಅದಕ್ಕೆ ಹೊಂದಿಕೊಂಡಿದ್ದಾರೆ. ಯಾವ ವಿಷಯ ಕೊಟ್ಟರೂ ಮಾತನಾಡುತ್ತಾರೆ. ತಮಗೆ ಕೊಟ್ಟ ಸಮಯ ಸಾಲದೆಂಬಂತೆ ತಾವೇ ತಮ್ಮ ಸಮಯವನ್ನು ನಿಗದಿ ಪಡಿಸಿಕೊಂಡು ಮಾತನಾಡುವುದು ‘ಅನಿವಾರ್ಯ ಕರ್ಮ ನನಗೆ’ ಎಂಬಂತೆ ಮಾತನಾಡುತ್ತಾರೆ. ಕಳೆದ ದಶಕಗಳಲ್ಲಿ ಪ್ರಸಾರವಾಗುತ್ತಿದ್ದ ಟಿವಿ ಮಹಾಭಾರತ ಧಾರಾವಾಹಿಯ ಕಂತುಗಳ ಆರಂಭದಲ್ಲಿ ಮೊಳಗುತ್ತಿದ್ದ ‘ಮೈ ಸಮಯ್ ಹೂಂ’ ಎಂಬ ಅಮೂರ್ತ, ಅವ್ಯಕ್ತ ವಾಣಿಗೆ ಸಮ್ಮೇಳನದ ಭಾಷಣಗಳಲ್ಲಿ ಮೂರ್ತತೆ, ವ್ಯಕ್ತತೆ ಬರುತ್ತದೆ. ವೇದಿಕೆ ಮತ್ತು ಸಭಾಂಗಣ ಸಾಕಷ್ಟು ದೊಡ್ಡದಿರುವುದರಿಂದ ವೇದಿಕೆಯೇ ಮಾತನಾಡುವುದಕ್ಕೆ ಬೇಕಾದ ಸ್ಫೂರ್ತಿಯನ್ನು ನೀಡುವಂತಿರುತ್ತದೆ. ಸಭಾಂಗಣದಲ್ಲಿ ಹಿಮ್ಮೇಳಕ್ಕೆ, ಮಾಧ್ಯಮಕ್ಕೆ ಮತ್ತು ವಿಐಪಿಗಳಿಗಿರುವ ಖೆಡ್ಡಾದಂತಿರುವ ಆವರಣ, ವಿಶಾಲವಾದ ಒಳ ಸಭಾಂಗಣ, ನೆಲವೇ ಹಾಸಿಗೆ, ಗಗನವೇ ಸೂರಾದ ಹೊರಾಂಗಣ ಹೀಗೆ ಎಲ್ಲ ಕಡೆ ಸದ್ದು ಇರುವುದರಿಂದ ಜನರಿದ್ದಾರೋ ಇಲ್ಲವೋ ಮುಖ್ಯವಾಗುವುದಿಲ್ಲ.

ಕನ್ನಡ ಸಾಹಿತ್ಯ ಸಮ್ಮೇಳನವು ಈಗ ಕನ್ನಡದಲ್ಲೇ ನಡೆಯುವ ಸಮ್ಮೇಳನವಾದ್ದರಿಂದ ಅದನ್ನು ಕನ್ನಡ ಸಾಹಿತ್ಯ ಸಮ್ಮೇಳನವೆಂದಷ್ಟೇ ಕರೆಯಬಹುದು. ಸಾಹಿತ್ಯ ಎಂಬುದು ಎಲ್ಲ ಉಪಪದಾರ್ಥಗಳಂತೆ ಒಂದು ಪದಾರ್ಥವಾಗಿ ಉಳಿದಿದೆಯೇ ಹೊರತು ಅದೇ ಕೇಂದ್ರ ಬಿಂದುವಾಗಿ ಉಳಿದಿಲ್ಲ. ಕನ್ನಡ ನೆಲ, ಜಲ, ಗಡಿ, ಕೃಷಿ, ಚರಿತ್ರೆ, ಚಳವಳಿಗಳು ಇವನ್ನೆಲ್ಲ ಸಾಂಸ್ಕೃತಿಕ ವೈವಿಧ್ಯಗಳೆಂದು ಗುರುತಿಸಿಕೊಂಡು ಚರ್ಚಿಸುವುದರಿಂದ ಅದರ ಪರಿಧಿ, ವ್ಯಾಪ್ತಿ, ಮಿತಿ ನಗರಗಳಂತೆ ಹಿಗ್ಗಿದೆ; ಹಿಗ್ಗುತ್ತಲೇ ಇದೆ. ಅಕ್ಷರಗಳಲ್ಲಿ ಮೂಡಿಸಬಹುದಾದ ಯಾವುದೇ ವಿಚಾರವೂ ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚೆಗೆ ಅರ್ಹವೆಂಬ ವಾದವು ಸ್ವೀಕರಿಸಲ್ಪಟ್ಟಿದೆ. ಪ್ರತಿಯೊಬ್ಬ ಭಾಷಣಕಾರನೂ ಇಡೀ ಕನ್ನಡದ ಪ್ರತಿನಿಧಿಯಂತೆ ಮಾತನಾಡುತ್ತಾನೆಯೇ ಹೊರತು ಒಂದು ಗೊತ್ತಾದ ವಿಚಾರದ ಕುರಿತು ಸೂಕ್ಷ್ಮ ದೃಷ್ಟಿ ಹರಿಸುವುದಕ್ಕೆ ಸಮ್ಮೇಳನದಲ್ಲಿ ವ್ಯವಧಾನವೇ ಇಲ್ಲ.

ಉದಾಹರಣೆಗೆ ಈ ಬಾರಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಕುವೆಂಪು ಅವರ (ಅಥವಾ ಅಂತಹ ಹಿರಿಯ ಸಾಹಿತಿಯೊಬ್ಬರ) ಯಾವುದಾದರೂ ಒಂದು ಕೃತಿಯ ದರ್ಶನದ ಕುರಿತು ಒಂದು ವಿಶೇಷೋಪನ್ಯಾಸವಿದ್ದಿದ್ದರೆ, ಮತ್ತು ಅದನ್ನು ಅರ್ಹರೊಬ್ಬರು ನೀಡಿದ್ದರೆ ಪ್ರಾಯಃ ಇಡೀ ಸಮ್ಮೇಳನವೇ ಸಾರ್ಥಕ ಭಾವವನ್ನು ಹೊಂದಬಹುದಿತ್ತು ಮತ್ತು ಕೇಳಿದ ಜನರು ಪುಳಕಗೊಳ್ಳುತ್ತಿದ್ದರು. ನಿರ್ದಿಷ್ಟ ಸಾಹಿತ್ಯ ಅಥವಾ ಸಾಹಿತಿ ಕೇಂದ್ರಿತ ಉಪನ್ಯಾಸಗಳು ಜನರಿಗೆ ಒಂದಷ್ಟು ಒಳನೋಟಗಳನ್ನು ನೀಡಬಲ್ಲವು. ಆದರೆ ಹಿಂದಿನ ತಲೆಮಾರಿನ ಹಲವು ಸಾಹಿತಿಗಳು, ಹಾಗೂ ಈಚೆಗಿನ ಕುರ್ತಕೋಟಿ, ಕೀರಂ, ಅನಂತಮೂರ್ತಿ, ಕಲಬುರ್ಗಿ, (ಈ ಪಟ್ಟಿಯಲ್ಲಿ ಇನ್ನು ಕೆಲವರಿರಬಹುದು) ಮುಂತಾದ ಸಾಹಿತಿಗಳ ಬಳಿಕ ಅಂತಹ ಪರಿಣಾಮಕಾರಿ ಮಂಡನೆಯ ಪ್ರಬುದ್ಧರು ಅಪರೂಪವಾಗುತ್ತಿದ್ದಾರೆ. ಈ ಕೊರತೆಯನ್ನು ನೀಗಲೋ ಎಂಬಂತೆ ಅಸ್ಪಷ್ಟ ನಿಲುವನ್ನು ನೀಡಬಲ್ಲ ವಿಷಯಗಳನ್ನು ಆಯ್ದುಕೊಂಡು ಅದರ ಕುರಿತಂತೆ ಚರ್ಚಿಸಲು ಕೆಲವರನ್ನು ನಿಗದಿಮಾಡಿಕೊಂಡು ಕೊನೆಗೆ ಏನೂ ಹೇಳದೆ ಗೋಷ್ಠಿ ಮುಗಿಯಿತು ಎಂಬಂತಾಗುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ಮಾಧ್ಯಮ ವರದಿಗಾರರು ‘ಅವರವರ ಭಾವಕ್ಕೆ ಅವರವರ ಭಕುತಿಗೆ’ ಸರಿಯಾಗಿ ಭಾಷಣದ ತುಣುಕುಗಳನ್ನು ಅರ್ಥವಾಗದಂತೆ ಅಥವಾ ಅನರ್ಥವಾಗುವಂತೆ ನೀಡಿ ಸಮ್ಮೇಳನದಲ್ಲಿ ಭಾಗವಹಿಸದವರಿಗೆ ಗೊಂದಲವಷ್ಟೇ ನಿರ್ಮಾಣವಾಗುತ್ತದೆ.

ಎಲ್ಲದರ ಕುರಿತೂ ಚರ್ಚಿಸಬೇಕು; ನಿಜ. ಆದರೆ ನಿಜಾರ್ಥದಲ್ಲಿ ಈ ಗೋಷ್ಠಿಗಳು ಚರ್ಚೆಗೆ ಅನುವು ಮಾಡಿಕೊಡುತ್ತವೆಯೇ? ಬಹುತೇಕ ಭಾಗಿದಾರರು ಸಾಕಷ್ಟು ತಯಾರಿ ಮಾಡಿರುವುದಿಲ್ಲ. ಸ್ಪರ್ಧಾತ್ಮಕ ಸಾಹಿತ್ಯ ಜಗತ್ತಿನಲ್ಲಿ ಅವರಿಗೆ ಅಮಾನ್ಯೀಕರಣದ ಭಯವಿರುವುದರಿಂದ ವೇದಿಕೆಗಳಲ್ಲಿ ಅವಕಾಶ ಸಿಗಬೇಕಾದ್ದೇ ಮುಖ್ಯವಾಗುತ್ತದೆ; ಹೇಗಾದರೂ ಅವಕಾಶ ಸಿಕ್ಕರಾಯಿತು ಎಂಬಂತಿರುತ್ತಾರೆ. ಗೋಷ್ಠಿಗೆ ಸಂಬಂಧ ಕಲ್ಪಿಸುವುದು ಅಸಂಗತವಾಗುತ್ತದೆ. ಹೀಗಾಗಿ ಸಮ್ಮೇಳನದ ವೇದಿಕೆಗಳು ಮಲ್ಟಿಪ್ಲೆಕ್ಸ್ ಥಿಯೇಟರುಗಳಂತಾಗುತ್ತವೆ. ಅವಕಾಶನೀತಿಯು ಹಿಂದೆಲ್ಲ ಸಿನೆಮಾ ಥಿಯೇಟರ್ ಭರ್ತಿಯಾದ ಮೇಲೂ ಪರಿಚಯಸ್ಥರಿಗೆ ಕೆಲವು ಬಾರಿ ಪ್ರವೇಶ ಕೊಟ್ಟು ಅಲ್ಲಿ ಆಸನಗಳಿಲ್ಲದೆ ಹೆಚ್ಚಿನ ಕುರ್ಚಿಗಳನ್ನು ಬದಿಯಲ್ಲಿ ಹಾಕಿ ಕೂರಿಸುವಂತೆ ಇದೆ. ಈ ಬಾರಿಯೂ ಮೂರು ಕವಿಗೋಷ್ಠಿಗಳಿದ್ದವು. ಅರಸಿಕರ ಮುಂದೆ ಕವಿತೆ ಓದುವುದು ದೌರ್ಭಾಗ್ಯವೆಂದು ಹಿಂದೊಬ್ಬ ಕವಿ ಹೇಳಿದ್ದರಂತೆ. ಆ ಕವಿ ಸತ್ತಿದ್ದಾರೆಂಬ ತೃಪ್ತಿ ಈಗಿನವರಿಗೆ. 1-2-3 ಕವಿಗೋಷ್ಠಿಗಳಲ್ಲಿ ಭಾಗವಹಿಸುವುದು (ಅರೆವಾಸಿ ಕವಿಗಳು ವೇದಿಕೆಯಿಂದ ಇಳಿದಾದ ಮೇಲೆ ಉತ್ತರಾರ್ಧದ ಕವಿಗಳು ವೇದಿಕೆಯನ್ನೇರಿದರಂತೆ!) ಕವಿತ್ವಕ್ಕೆ ಅವಮಾನವೆಂದು ಯಾವ ಹಿರಿ-ಕಿರಿ ಕವಿಯೂ ಭಾವಿಸದಿದ್ದದ್ದು ಬಹುದೊಡ್ಡ ದುರಂತ. ಅದಲ್ಲದಿದ್ದರೆ ಸರಿ, ಬಂದು ಹೋಗುವ ವೆಚ್ಚ, ವಸತಿ, ಸಂಭಾವನೆ, ಸನ್ಮಾನ ಇವನ್ನಷ್ಟೇ ಭಾವಿಸಿದರೆ, ಪರಿಭಾವಿಸಿದರೆ, ಕವಿತ್ವ ಸಾರ್ಥಕ.

ಏಕಾಂತದ ಕಾವ್ಯವು ಕಡಲೆ ಪರಿಷೆಯಂತೆ ಮಾರಾಟದ ಸರಕಾಗಿರುವುದು ಸಾಹಿತ್ಯಕ್ಕೆ ಅಪಚಾರ. ಕನ್ನಡ ಸಾಹಿತ್ಯ ಪರಿಷತ್ತು ಜನರನ್ನು ಮೆಚ್ಚಿಸುವ ಸಲುವಾಗಿ ಸಮ್ಮೇಳನಗಳಲ್ಲಿ ಎಷ್ಟು ಹೆಚ್ಚು ಜನರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಯತ್ನಿಸುತ್ತದೆಯೋ ಅಷ್ಟೂ ಜಾಳಾಗುತ್ತದೆ. ಪ್ರಾಯಃ ಈ ಕವಿಗೋಷ್ಠಿಗಳಲ್ಲಿ ಅಡಿಗರ ಕೃತಿ ಕವನವನ್ನು, ಧ್ಯೇಯಗೀತವಾಗಿಟ್ಟರೆ, ಅಥವಾ ಅದರ ಮೊದಲೆರಡು ಸಾಲಿನ ‘‘ಹತ್ತು ಕೊಡದುಚ್ಚೆ ಪ್ರತಿನಿತ್ಯ ಹೊಯ್ದರು ಕೂಡ, ಮಗು ಹುಟ್ಟುವುದಿಲ್ಲ’’ ಎಂಬುದನ್ನು ಧ್ಯೇಯವಾಕ್ಯವಾಗಿಟ್ಟರೆ ಅಶ್ಲೀಲವಾಗದು; ತಪ್ಪೂಆಗದು. ಮಕ್ಕಳ ಗೋಷ್ಠಿಯಲ್ಲಿ 47 ಪ್ರೇಕ್ಷಕರಿದ್ದರೆಂದು ಕೇಳಿದೆ. ಈ ಬಗ್ಗೆ ಇದಕ್ಕಿಂತ ಹೆಚ್ಚು ಚರ್ಚೆ ಬೇಡ.

ನಮ್ಮ ಸಾಹಿತಿಗಳೂ ಅಷ್ಟೇ: ಪರಿಷತ್ತಿನ ಅಧ್ಯಕ್ಷರ ಮೂಗೊತ್ತಿ ಬಾಯಿಬಿಡಿಸುವ ಮತ್ತು ಆ ಮೂಲಕ ಹೇಗಾದರೂ ಜಾಗ ಸಿಕ್ಕಿದರೆ ಸಾಕೆಂಬ ಧೋರಣೆಯನ್ನು ಸ್ವಲ್ಪಮಟ್ಟಿಗಾದರೂ ತ್ಯಜಿಸಿ ಆತ್ಮಗೌರವವನ್ನು ಮತ್ತು ಆ ಮೂಲಕ ಕನ್ನಡದ, ಕನ್ನಡ ಸಾಹಿತ್ಯದ, ಕನ್ನಡ ಸಾಹಿತ್ಯ ಸಮ್ಮೇಳನದ ಗೌರವವನ್ನು ಕಾಪಾಡಿದರೆ ಒಳಿತು. ಹೇಗಾದರೂ ಅವಕಾಶಗಿಟ್ಟಿಸಿಕೊಂಡು ಮೆರೆಯಬೇಕೆಂದು ಸಾಹಿತ್ಯಕ್ಕೆ ಸಂಬಂಧಿಸಿದವರು ಯೋಚಿಸಿದರೆ ಮತ್ತು ಅದಕ್ಕನುಗುಣವಾಗಿ ನಡೆದುಕೊಂಡರೆ ಸಾರ್ವಜನಿಕ ಹಣವನ್ನು ಲೂಟಿಮಾಡುವ ವರ್ಗಕ್ಕೆ ಸಾಹಿತ್ಯಕ್ಷೇತ್ರವನ್ನೂ ಸೇರಿಸಿ ವಿಷಾದದ ದೃಷ್ಟಿಯನ್ನು ಬೀರಬೇಕೇ ಹೊರತು ಅನ್ಯಥಾ ದಾರಿಯಿಲ್ಲ.

ಒಒಡಿ ಎಂಬ ಸೌಲಭ್ಯದ ಬಗ್ಗೆ ಬರೆಯದಿರುವುದೇ ಸುಖ. ನಮ್ಮ ಶಿಕ್ಷಣ ಎತ್ತ ಸಾಗುತ್ತಿದೆಯೆಂಬ ಬಗ್ಗೆ ಈ ಒಒಡಿಗಳು ಮೂಕ ಸಾಕ್ಷಿಗಳು. ಒಒಡಿ ಇಲ್ಲದೆ ರಜೆ ಹಾಕಿ ಬರುವ ಸ್ವಯಂವೃತ್ತಿಪರರು, ರೈತರು, ಖಾಸಗಿ ಉದ್ಯೋಗಸ್ಥರೇ ಸಮ್ಮೇಳನದ ಜೀವಂತ ಪ್ರೇಕ್ಷಕರು. ಮೊದಲ ದಿನವೇ ಒಒಡಿ ಪತ್ರ ಲಭಿಸಬೇಕೆಂಬ ಬಗ್ಗೆ ಗಲಾಟೆಯಾಯಿತೆಂದು ಕೇಳಿದೆ. ಈ ಸೌಲಭ್ಯವನ್ನು ರದ್ದು ಮಾಡಿದರೆ ಶಾಲೆಗಳು ಆ ಮೂರು ದಿನ ಕಾರ್ಯವೆಸಗಿಯಾವಲ್ಲವೇ? ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಏನೂ ಪ್ರಯೋಜನವಿಲ್ಲದ ಇಂತಹ ಶಿಕ್ಷಕರ ಒಒಡಿ ಹಾಜರಾತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಕ್ತಗೊಳಿಸುವುದು ಅತ್ಯಂತ ತುರ್ತಿನ ಕೆಲಸ. ನಾಡುನುಡಿಯ ಕುರಿತು ನಿರ್ಣಯ ಕೈಗೊಳ್ಳುವ ಪರಿಷತ್ತು ಇಂತಹ ಒಂದು ನಿರ್ಣಯವನ್ನೂ ಕೈಗೊಂಡರೆ ನಿಜವಾಗಿಯೂ ಸಾಹಿತ್ಯ-ಸಮ್ಮೇಳನಗಳ ಕುರಿತು ಆಸಕ್ತಿ ಎಷ್ಟು ಶಿಕ್ಷಕರಿಗಿದೆಯೆಂದು ಗೊತ್ತಾದೀತು. ಕಾಗೆಯೂ ಕಪ್ಪು; ಕೋಗಿಲೆಯೂ ಕಪ್ಪು. ‘ವಸಂತಕಾಲೇ ಸಂಪ್ರಾಪ್ತೇ ಕಾಕ ಕಾಕಃ ಪಿಕ ಪಿಕಃ’ ಎಂಬುದು ಮನದಟ್ಟಾದೀತು.

ಸಮ್ಮೇಳನದಲ್ಲಿ ರಾಜಕೀಯ ಪ್ರವೇಶವಾಯಿತೆಂದು ಕೇಳಿದ್ದೇನೆ. ಆದರೆ ನಿರ್ದಿಷ್ಟವಾಗಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಯಾರೂ ಮಾತನಾಡಿದ ವರದಿಗಳಿಲ್ಲ. ಜಾತ್ಯತೀತತೆ ಒಂದು ರಾಜಕೀಯ ಹೇಳಿಕೆಯಲ್ಲ. ಅದೊಂದು ಮೌಲ್ಯ; ಒಂದು ಸಿದ್ಧಾಂತ. ಇಷ್ಟಕ್ಕೂ ನಿಲುವಿನ ಪ್ರಶ್ನೆ ಬಂದಾಗ ಸಂವೇದನಾಶೀಲ ವ್ಯಕ್ತಿಯೊಬ್ಬ ನಿಜಕ್ಕೂ ಪ್ರಾಮಾಣಿಕನಾ ಗಿದ್ದರೆ ತನ್ನ ನಿಲುವೇ ತನ್ನ ಇರವು ಎಂಬುದನ್ನು ಸಾಬೀತುಪಡಿಸಬೇಕು ಮತ್ತು ಅಗ್ನಿದಿವ್ಯಕ್ಕೊಡ್ಡಿಕೊಳ್ಳಬೇಕು. ಈ ದೃಷ್ಟಿಯಿಂದ ಚಂಪಾ ತನ್ನ ಸತತ ದಿಟ್ಟನಿಲುವಿನ ಮೂಲಕ, ಮಾತು-ಕೃತಿಗಳ ಮೂಲಕ ಕೋಮುವಾದಕ್ಕೆ ಮಾತ್ರವಲ್ಲ ಎಲ್ಲ ಬಗೆಯ ಮೌಢ್ಯಕ್ಕೆ ಸೆಡ್ಡುಹೊಡೆದರು. ಅದಲ್ಲದೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರಗತಿಪರರಂತೆ ಓಡಾಡಿ ಅಭಿಪ್ರಾಯಬದ್ಧತೆಯಿಂದ ತಪ್ಪಿಸಿಕೊಂಡು ಮಧ್ಯಮಮಾರ್ಗದ ಓಣಿಯಲ್ಲಿ ನಡೆಯುವುದು ಭೀರುತನವಾಗುತ್ತದೆಯೆಂಬುದನ್ನು ಸ್ಪಷ್ಟಗೊಳಿಸಿದರು. ಎಲ್ಲಕಡೆ ಸಲ್ಲುವವನು ಎಲ್ಲಿಯೂ ಸಲ್ಲುವುದಿಲ್ಲ ಎಂಬ ಅಂತಿಮ ತತ್ವಕ್ಕೆ ತುತ್ತಾಗುತ್ತಾನೆ. ಹೀಗಿರುವ ಅನೇಕರಿಗೆ ಚಂಪಾ ಇರಿಸುಮುರಿಸು ಉಂಟುಮಾಡಿದ್ದಂತೂ ಖಚಿತ.

ಇದೇ ಸಮಯಕ್ಕೆ ಉಡುಪಿಯಲ್ಲಿ ಧರ್ಮ ಸಂಸದ್ ನಡೆದಿದ್ದರಿಂದ ಸಾಹಿತ್ಯ ಸಮ್ಮೇಳನದಲ್ಲಿ ವಿರಾಗಿಗಳ ರಾಗದ್ವೇಷಕ್ಕೆ ಅವಕಾಶವಿರಲಿಲ್ಲ. ಆದ್ದರಿಂದ ಅಷ್ಟರ ಮಟ್ಟಿಗೆ ಅನುಗ್ರಹ ಭಾಷಣಗಳು, ಸಾನ್ನಿಧ್ಯಗಳು ಮರೆಯಾದವು. ಇಂತಹ ನೂರೆಂಟು ವಿಚಾರಗಳು ಸಾಹಿತ್ಯ ಸಮ್ಮೇಳನದ ಪೂರ್ವಾಪರದಲ್ಲಿ ಉದ್ಭವಿಸುತ್ತವೆ. ಹೀಗೆ ಬರೆಯುವುದರಿಂದ ಪರಿಷತ್ತಿಗೆ ಮತ್ತು ಅದರ ನಿಕಟವರ್ತಿಗಳಿಗೆ ಬೇಸರವಾಗುತ್ತದೆ; ಸಿಟ್ಟೂ ಬರಬಹುದು. ಆದರೆ ಹಿಂದಿನಿಂದ ಎಲ್ಲರೂ ಆಡಿಕೊಳ್ಳುವ ಅಭಿಪ್ರಾಯಗಳನ್ನು ದುರುದ್ದೇಶವಿಲ್ಲದೆ ಎದುರಿನಲ್ಲಿ ಹೇಳುವುದರಿಂದ ಕನ್ನಡ ನಾಡು-ನುಡಿಗೆ ಅನುಕೂಲವಾಗಬಹುದೆಂದು ಭಾವಿಸಿದ್ದೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)