varthabharthi

ಸಂಪಾದಕೀಯ

ಮಹಿಳೆಯರಲ್ಲಿ ಹೆಚ್ಚುತ್ತಿರುವ ರಕ್ತಹೀನತೆ

ವಾರ್ತಾ ಭಾರತಿ : 30 Nov, 2017

ರಕ್ತ ಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಜಗತ್ತಿನಲ್ಲೇ ಭಾರತದಲ್ಲಿ ಅತ್ಯಧಿಕ. ಸಂತಾನೋತ್ಪತ್ತಿ ವಯೋಮಾನದ (15ರಿಂದ 49 ವರ್ಷ) ಗುಂಪಿಗೆ ಸೇರಿದ ಶೇ.51ರಷ್ಟು ಮಹಿಳೆಯರು ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ವಯೋಮಾನದ ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆಗೆ ರಕ್ತ ಹೀನತೆ ಇದ್ದೇ ಇರುತ್ತದೆ ಎಂಬುದು ಗಂಭೀರ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಬಳಲುವ ತಾಯಿ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಾಳೆ. ಅನೇಕ ಕಡೆ ಸತ್ತ ಮಗುವಿಗೆ ಜನ್ಮ ನೀಡಿದ ಉದಾಹರಣೆಗಳೂ ಇವೆ. ಹೆರಿಗೆಯಲ್ಲಿ ಸಾಯುವ ತಾಯಂದಿರ ಪ್ರಮಾಣ ಭಾರತದಲ್ಲಿ ಈಗಲೂ ಹೆಚ್ಚಾಗಿದೆ.

ಕರ್ನಾಟಕದ ಹೈದರಾಬಾದ್ ಕರ್ನಾಟಕದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಸಾಕಷ್ಟಿದೆ. ಭಾರತವನ್ನು ವಿಶ್ವದ ಗುರುವನ್ನಾಗಿ ಮಾಡುವುದಾಗಿ ನಮ್ಮ ಪ್ರಧಾನಮಂತ್ರಿಯವರು ಆಗಾಗ ಹೇಳುತ್ತಲೇ ಇರುತ್ತಾರೆ. ಇದನ್ನೇ ನಂಬಿದ ಅವರ ಭಕ್ತ ಸಮುದಾಯ ಭಾರತ ಈಗಾಗಲೇ ವಿಶ್ವದ ಗುರುವಾಗಿದೆ ಎಂದು ಪ್ರಚಾರ ಮಾಡುತ್ತಿದೆ. ವಿಶ್ವದ ಗುರುವಾಗಲು ಹೊರಟ ಭಾರತದ ಆಂತರಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಇವರು ಯೋಚಿಸುತ್ತಿಲ್ಲ. ಇಲ್ಲವೇ, ಬೇಕಂತಲೇ ಕಂಡೂಕಾಣದಂತೆ ಇದ್ದಾರೆ. ವಿಶ್ವದ ಗುರುವಾಗಲು ಹೊರಟ ಭಾರತದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಜನರ ಸಂಖ್ಯೆ ಸಾಕಷ್ಟಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಅಪೌಷ್ಟಿಕತೆಯಿಂದ ನರಳುತ್ತಿರುವ ದೇಶಗಳ ಸಾಲಿನಲ್ಲಿ ಭಾರತ ಈಗ ಮುಂಚೂಣಿಯಲ್ಲಿದೆ. ಅಂತಾರಾಷ್ಟ್ರೀಯ ಆಹಾರ ನೀತಿಗಳ ಸಂಶೋಧನಾ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಿಂದ ಈ ಅಂಶ ಬಹಿರಂಗವಾಗಿದೆ. ಜಗತ್ತಿನ ಆಹಾರ ಸಮಸ್ಯೆ ಹಾಗೂ ಪೌಷ್ಟಿಕಾಂಶಗಳ ಲಭ್ಯತೆಯ ಕುರಿತು ಆಳವಾದ ಅಧ್ಯಯನ ನಡೆಸಿರುವ ಸಂಸ್ಥೆ ಈ ಸ್ಫೋಟಕ ವರದಿಯನ್ನು ನೀಡಿದೆ.

ಜಗತ್ತಿನ ಸೂಪರ್ ಪವರ್ ಆಗಲು ಹೊರಟಿರುವ ಈ ದೇಶದಲ್ಲಿ ಪ್ರತೀ ಐದು ಮಕ್ಕಳಲ್ಲಿ ಒಂದು ಮಗು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕುರಿತು ಅಧ್ಯಯನ ನಡೆಸಿದ ಸಂಸ್ಥೆಗಳು ಇದನ್ನು ಹಸಿವಿನ ಸೂಚ್ಯಂಕ ಎಂದು ಕರೆಯುತ್ತಿವೆ. ಜಗತ್ತಿನ 119 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬಹಿರಂಗವಾಗಿದೆ. ಕಳೆದ ವರ್ಷ ಭಾರತ ಈ ಸೂಚ್ಯಂಕದಲ್ಲಿ 97ನೇ ಸ್ಥಾನದಲ್ಲಿತ್ತು. ಈ ವರ್ಷ ನೂರನೇ ಸ್ಥಾನಕ್ಕೆ ಹೋಗಿದೆ. ಚೀನಾ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶಗಳಿಗಿಂತ ನಮ್ಮ ದೇಶದಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ನಮಗಿಂತ ಕಳಪೆ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಿವೆ. ದಕ್ಷಿಣ ಏಶ್ಯಾದ ಹಿರಿಯಣ್ಣ ಎಂದು ಕರೆದುಕೊಳ್ಳುತ್ತಿರುವ ನಮ್ಮ ದೇಶ ಹಸಿವಿನ ಸೂಚ್ಯಂಕದಲ್ಲಿ ದಕ್ಷಿಣ ಏಶ್ಯಾದ ದೊಡ್ಡಣ್ಣ ಆಗಿದೆ ಅಂದರೆ ಅತಿಶಯೋಕ್ತಿ ಅಲ್ಲ.

ರಕ್ತಹೀನತೆಗೆ ಕಾರಣವಾಗುವ ಅಂಶಗಳಲ್ಲಿ ಪೌಷ್ಟಿಕಾಂಶದ ಕೊರತೆಯೂ ಒಂದಾಗಿದೆ. ಈ ಪೌಷ್ಟಿಕಾಂಶದ ಕೊರತೆಗೆ ಆಹಾರ ಅಭಾವ ಕಾರಣವಲ್ಲ. ಆಹಾರ ಉತ್ಪಾದನೆಯಲ್ಲಿ ನಮ್ಮ ದೇಶ ಸಾಕಷ್ಟು ಮುಂದಿದೆ. ಕಳೆದ 70 ವರ್ಷಗಳಲ್ಲಿ ಈ ದೇಶದಲ್ಲಿ ಏನಾಗಿದೆ ಎಂದು ಮೋದಿ ಭಕ್ತರು ಆಗಾಗ ಕೇಳುತ್ತಿರುತ್ತಾರೆ. ಆದರೆ, ಈ ಏಳು ದಶಕಗಳಲ್ಲೇ ಭಾರತ ದೇಶ ಆಹಾರ ಉತ್ಪಾದನೆಯಲ್ಲಿ ದಾಖಲೆ ಸ್ಥಾಪಿಸಿದೆ. ದೇಶದ 130 ಕೋಟಿ ಜನರಿಗೆ ಸಾಕಾಗುವಷ್ಟು ಆಹಾರ ಉತ್ಪಾದನೆ ಈ ದೇಶದಲ್ಲಿ ಆಗುತ್ತಿದೆ. ಅಷ್ಟೇ ಅಲ್ಲದೇ, ನಮ್ಮ ದೇಶ ಆಹಾರ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ಇದೆಲ್ಲದರ ಜೊತೆಗೆ ಆಪತ್ಕಾಲಕ್ಕೆ ಇರಲಿ ಎಂದು ಸರಕಾರ ಲಕ್ಷಾಂತರ ಟನ್ ಆಹಾರಧಾನ್ಯವನ್ನು ಸಂಗ್ರಹಿಸುತ್ತಿದೆ. ಆದರೂ ಹಸಿವಿನಿಂದ ಬಳಲುವವರ ಸಂಖ್ಯೆ ಈ ದೇಶದಲ್ಲಿ ಹೆಚ್ಚಾಗಿದೆ ಅಂದರೆ ಏನು ಅರ್ಥ?

ಪ್ರತೀ ವರ್ಷ ನಮ್ಮ ದೇಶದಲ್ಲಿ ಇಡೀ ಬ್ರಿಟನ್ ದೇಶಕ್ಕೆ ಒಂದು ವರ್ಷ ಊಟ ಹಾಕುವಷ್ಟು ಆಹಾರ ಧಾನ್ಯ ಗೋದಾಮುಗಳಲ್ಲಿ ಹಾಳಾಗಿ ಹೋಗುತ್ತದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸುತ್ತದೆ. ಗೋದಾಮುಗಳಲ್ಲಿ ಇಟ್ಟ ಆಹಾರ ಸಾಮಗ್ರಿಗಳನ್ನು ಇಲಿ, ಹೆಗ್ಗಣಗಳು ತಿನ್ನುತ್ತವೆ. ಸಂಗ್ರಹಿಸಿ ಇಡಲಾದ ಆಹಾರ ಧಾನ್ಯ ಹಾಳಾಗಿ ಅನೇಕ ಬಾರಿ ಸಮುದ್ರಕ್ಕೆ ಎಸೆಯಲಾಗುತ್ತಿದೆ. ದೇಶದ ಪ್ರಜೆಗಳು ಹಸಿವಿನಿಂದ ನರಳಬಾರದೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆಹಾರ ಭದ್ರತಾ ಕಾಯ್ದೆಯ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಕನಿಷ್ಠ ಪೌಷ್ಟಿಕಾಂಶ ಇರುವ ಆಹಾರವನ್ನು ಪೂರೈಸುತ್ತಿದೆ. ಆದರೆ, ನಮ್ಮ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಲೋಪದೋಷಗಳಿಂದಾಗಿ ಪೌಷ್ಟಿಕಾಂಶವಿರುವ ಈ ಆಹಾರ ಸಾಮಗ್ರಿಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಹೀಗಾಗಿ ಪೌಷ್ಟಿಕಾಂಶದ ಕೊರತೆ ಹಾಗೂ ರಕ್ತಹೀನತೆ ಕಂಡುಬರುತ್ತಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಹಮ್ಮಿಕೊಂಡ ಅನ್ನಭಾಗ್ಯ ಯೋಜನೆಯ ಮೂಲಕ 4 ಕೋಟಿ ಜನರ ಹಸಿವನ್ನು ನೀಗಿಸುವ ಯೋಜನೆಯನ್ನು ರೂಪಿಸಲಾಗಿದೆ. ನಮ್ಮ ದೇಶದ ತಲಾ ಆದಾಯ ವರ್ಷದಿಂದ ವರ್ಷಕ್ಕೆ ಶೇ.10ರಷ್ಟು ಹೆಚ್ಚುತ್ತಿದೆ. 2015-16ರಲ್ಲಿ ವ್ಯಕ್ತಿಯ ತಲಾ ಆದಾಯ 93 ಸಾವಿರ ರೂ.ಯಷ್ಟಿತ್ತು. 2016-17ರಲ್ಲಿ ಇದು 1 ಲಕ್ಷ ರೂ.ಗೆ ತಲುಪಿದೆ. ಇದಕ್ಕೆ ತಕ್ಕಂತೆ ಜಿಡಿಪಿ ಕೂಡಾ ಬೆಳೆಯುತ್ತಿದೆ. ಆದರೆ, ಕೇಂದ್ರದ ಮೋದಿ ಸರಕಾರ ನೋಟು ನಿಷೇಧ ಮಾಡಿದ ಪರಿಣಾಮವಾಗಿ ಹಾಗೂ ಜಿಎಸ್‌ಟಿಯಿಂದ ಈ ವರ್ಷ ಜಿಡಿಪಿಗೆ ಕೊಂಚ ಪೆಟ್ಟು ಬಿದ್ದಿದೆ. ಆದರೂ ದೇಶದಲ್ಲಿ ಹಸಿವಿನ ಹಾಹಾಕಾರ ಕಡಿಮೆಯಾಗಿಲ್ಲ. ಇದಕ್ಕೆ ಸಂಪತ್ತಿನ ಅಸಮಾನ ಹಂಚಿಕೆ ಮುಖ್ಯ ಕಾರಣವಾಗಿದೆ. ಈ ಸಂಪತ್ತಿನ ಅಸಮಾನತೆ ಕಡಿಮೆಯಾಗುವ ವರೆಗೆ ಜಿಡಿಪಿ ಎಷ್ಟು ಹೆಚ್ಚಾದರೂ ಪ್ರಯೋಜನವಿಲ್ಲ. ಅಪೌಷ್ಟಿಕತೆ ಎಂಬುದು ಆಹಾರದ ಲಭ್ಯತೆಯ ಸಮಸ್ಯೆಯಲ್ಲ. ಜನರು ಎಷ್ಟು ಪೋಷಕಾಂಶ ಸೇವಿಸುತ್ತಾರೆ ಎಂಬುದು ಇಲ್ಲಿ ಮುಖ್ಯವಾಗಿದೆ. ಅದೇ ರೀತಿ ನಮ್ಮ ದೇಶದಲ್ಲಿ ಮಾಲಿನ್ಯ ಹಾಗೂ ಆರೋಗ್ಯ ಸೇವೆ ಕೊರತೆಯಿಂದಾಗಿ ಜನರು ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ.

ಸರಕಾರ ಪಡಿತರ ವ್ಯವಸ್ಥೆಯ ಮೂಲಕ ಆಹಾರ ಧಾನ್ಯ ವಿತರಿಸಿದರೆ ಸಾಲದು. ಜನರಿಗೆ ಗುಣಮಟ್ಟದ ಆಹಾರ ಧಾನ್ಯವನ್ನು ಪೂರೈಸುವುದು ಅಗತ್ಯವಾಗಿದೆ. ಕಳಪೆ ಹಾಗೂ ದುರ್ಮಿಶ್ರಣ ಆಹಾರ ಧಾನ್ಯಗಳ ಹಾವಳಿ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಸರಕಾರ ಕೊಡುವ ಅಕ್ಕಿಯಲ್ಲೂ ಪೌಷ್ಟಿಕಾಂಶದ ಕೊರತೆ ಎದ್ದುಕಾಣುತ್ತಿದೆ. ಆದ್ದರಿಂದ ಸರಕಾರ ಪೌಷ್ಟಿಕಾಂಶವುಳ್ಳ ಆಹಾರಧಾನ್ಯವನ್ನು ಪೂರೈಸಲು ಕ್ರಮಕೈಗೊಳ್ಳಬೇಕಾಗಿದೆ. ಅಪೌಷ್ಟಿಕತೆ ಎಂಬುದು ರಾಷ್ಟ್ರೀಯ ಅವಮಾನ ಎಂದು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಹೇಳುತ್ತಿದ್ದರು. ಅಪೌಷ್ಟಿಕತೆಯ ಸಮಸ್ಯೆಗೆ ಆಹಾರ ಆಧರಿತ ಕಾರ್ಯಕ್ರಮಗಳ ಮೂಲಕವಷ್ಟೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ರಕ್ತಹೀನತೆಯ ಸಮಸ್ಯೆಗೆ ಕಬ್ಬಿಣಾಂಶವಿರುವ ಆಹಾರ ಪೂರೈಸಿದರಷ್ಟೇ ಸಾಕಾಗುವುದಿಲ್ಲ. ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಈ ಸಮಸ್ಯೆಗಳು ಆಳವಾಗಿ ಬೇರೂರಿವೆ. ರಕ್ತ ಹೀನತೆ ಎಂಬುದನ್ನು ಸರಕಾರ ಗಂಭೀರ ಸಮಸ್ಯೆ ಎಂದು ಪರಿಗಣಿಸಬೇಕು. ಅಪೌಷ್ಟಿಕತೆಯನ್ನು ಅದರ ಎಲ್ಲಾ ಸ್ವರೂಪಗಳಲ್ಲಿ ತುರ್ತಾಗಿ ಎದುರಿಸಬೇಕು.

ಅಪೌಷ್ಟಿಕತೆ ನಿವಾರಣೆಗೆ ಸರಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ 2030ರ ವರೆಗೆ ಸುಸ್ಥಿರವಾದ ಅಭಿವೃದ್ಧಿಯ ಜಾಗತಿಕ ಗುರಿಯನ್ನು ತಲುಪುವುದು ಅಸಾಧ್ಯ. ಹೀಗಾಗಿ ಬಡತನ ನಿವಾರಣೆ, ರೋಗ ರುಜಿನಗಳ ನಿವಾರಣೆ, ಶಿಕ್ಷಣ ಮಟ್ಟ ಹೆಚ್ಚಳ ಹಾಗೂ ಹವಾಮಾನ ಬದಲಾವಣೆ ವಿರುದ್ಧ ಹೋರಾಟಗಳಲ್ಲಿ ಸರಕಾರ ಪ್ರಮುಖಪಾತ್ರ ವಹಿಸಬೇಕಾಗಿದೆ. ರಾಷ್ಟ್ರದ ನಮ್ಮ ನೀತಿ ನಿರೂಪಕರು ಜಾತಿ ಹಾಗೂ ಧರ್ಮ ರಾಜಕಾರಣದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಆದರೆ, ಪೌಷ್ಟಿಕಾಂಶದ ಕೊರತೆಯಿಂದ, ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ನೋವು ಸಂಕಟಗಳಿಗೆ ಸ್ಪಂದಿಸುವುದಿಲ್ಲ. ನಮ್ಮ ಸಮಾಜದಲ್ಲಿ ಹೆಣ್ಣಿನ ಬಗ್ಗೆ ಇಂದಿಗೂ ತಾರತಮ್ಯ ಮನೋಭಾವವಿದೆ. ಗಂಡು ಮಗು ಜನಿಸಿದಾಗ ಪಡುವ ಸಂಭ್ರಮವನ್ನು ಹೆಣ್ಣು ಮಗು ಜನಿಸಿದಾಗ ಪಡುವುದಿಲ್ಲ. ಹೀಗಾಗಿ ಹೆಣ್ಣುಮಕ್ಕಳಿಗೆ ಕುಟುಂಬಗಳಲ್ಲಿ ಸರಿಯಾದ ಪೋಷಣೆ ಸಿಗುವುದಿಲ್ಲ. ಈ ಅಂಶವೂ ಮಹಿಳೆಯರ ರಕ್ತ ಹೀನತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮಲ್ಲಿ ಮಹಿಳೆಯರ ಕುರಿತಾದ ಯೋಜನೆಗಳು ಸಾಕಷ್ಟು ಇವೆ. ಮಹಿಳಾ ಆರೋಗ್ಯ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳು ಜಾರಿಯಲ್ಲಿವೆ.

ಹೀಗಿದ್ದರೂ ಮಕ್ಕಳನ್ನು ಹೆರುವಂತಹ ವಯೋಮಾನದ ವರ್ಗದಲ್ಲಿರುವ ಅರ್ಧದಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಅಂದರೆ ಅದರ ಅರ್ಥವೇನು? ಸರಕಾರದ ಯೋಜನೆಗಳು, ಆರ್ಥಿಕ ಪ್ರಗತಿ ಹಾಗೂ ಸರಕಾರೇತರ ಸಂಸ್ಥೆಗಳ ಜಾಗೃತಿ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮ ಬೀರಿದಂತೆ ಕಾಣುವುದಿಲ್ಲ. ಈ ಕಾರ್ಯಕ್ರಮಗಳು ಹಾಗೂ ಕಾರ್ಯಕ್ರಮದಲ್ಲಿರಬಹುದಾದ ದೋಷಗಳು ಏನು ಎಂಬ ಬಗ್ಗೆ ನಾವು ಉತ್ತರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಅದೇನೇ ಇರಲಿ, ರಕ್ತಹೀನ ಮಹಿಳೆಯರ ಸಮಸ್ಯೆಯನ್ನು ನಿರ್ವಹಿಸುವಲ್ಲಿ ಭಾರತ ಈಗಲೂ ಹಿಂದೆ ಉಳಿದಿದೆ ಎಂದು ಹೇಳಿದರೆ ಅಚ್ಚರಿಪಡಬೇಕಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)