varthabharthi

ಸಂಪಾದಕೀಯ

ಮೂರ್ಖರ ಪೆಟ್ಟಿಗೆಯೊಳಗಿನ ದೆವ್ವ ಭೂತಗಳಿಗೆ ಬೇಕಿದೆ ಒಂದು ಕಾನೂನು

ವಾರ್ತಾ ಭಾರತಿ : 1 Dec, 2017

ದಾವಣಗೆರೆಯಲ್ಲಿ ಏಳು ವರ್ಷದ ಬಾಲಕಿಯೊಬ್ಬಳು ಟಿವಿ ಸೀರಿಯಲ್ ಒಂದನ್ನು ಅನುಕರಿಸಲು ಹೋಗಿ ದಾರುಣವಾಗಿ ಮೃತಪಟ್ಟಿದ್ದಾಳೆ. ನಾಯಕಿ ಬೆಂಕಿಯಲ್ಲಿ ನರ್ತಿಸುತ್ತಿರುವುದನ್ನು ನೋಡಿ, ತಾನೂ ಅದೇ ರೀತಿ ನರ್ತಿಸಲು ಈ ಪುಟಾಣಿ ಪ್ರಯತ್ನ ಪಟ್ಟಿದೆ. ಕಾಗದದ ಚೂರುಗಳನ್ನು ರಾಶಿ ಹಾಕಿ ಅದಕ್ಕೆ ಬೆಂಕಿ ಹಚ್ಚಿ ನರ್ತಿಸಲು ಹೊರಟ ಮಗು, ಅಂತಿಮವಾಗಿ ಅದೇ ಬೆಂಕಿಗೆ ಬಲಿಯಾಗಿದೆ. ಬಾಲಕಿಯ ಸಾವಿಗೆ ಯಾರನ್ನು ಹೊಣೆ ಮಾಡಬೇಕು? ಪಾಲಕರ ಬೇಜವಾಬ್ದಾರಿಯೇ ಅಥವಾ ವೌಢ್ಯಗಳನ್ನೇ ವಸ್ತುವಾಗಿಟ್ಟುಕೊಂಡ ಕಳಪೆ ಧಾರಾವಾಹಿಗಳ ಮೂಲಕ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಲು ಹೊರಟ ಟಿವಿ ಧಾರಾವಾಹಿಯನ್ನೇ ಅಥವಾ ಇಂತಹ ಧಾರಾವಾಹಿಗಳನ್ನು ಪ್ರಸಾರ ಮಾಡುವ ಚಾನೆಲ್‌ಗಳ ಮಾಲಕರನ್ನೇ?

ಕೆಲವು ದಿನಗಳ ಹಿಂದೆ ಮೌಢ್ಯ ವಿರೋಧಿ ಕಾನೂನನ್ನು ಜಾರಿಗೊಳಿಸಲು ಸರಕಾರ ಮುಂದಾಯಿತು. ಆದರೆ ಅದರಲ್ಲಿ ವಾಸ್ತು, ಜ್ಯೋತಿಷ್ಯ ಮೊದಲಾದವುಗಳು ಕಾನೂನಿನ ವ್ಯಾಪ್ತಿಗೆ ಒಳಪಡಲೇ ಇಲ್ಲ. ಇವುಗಳನ್ನು ಮೌಢ್ಯಗಳ ಸಾಲಿಗೆ ಸೇರಿಸಬೇಕು ಎಂದು ಸಾಕಷ್ಟು ಒತ್ತಡಗಳು ಇದ್ದವಾದರೂ ವಾಸ್ತು, ಜ್ಯೋತಿಷ್ಯ ಮಾಫಿಯಾಗಳು ಅದಕ್ಕೆ ಅವಕಾಶ ನೀಡಲಿಲ್ಲ. ವಾಸ್ತು, ಜ್ಯೋತಿಷ್ಯಗಳ ಹಿಂದೆ ವಿದ್ಯಾವಂತರ ಒಂದು ದೊಡ್ಡ ದಂಡೇ ಇದೆ.

ಅಷ್ಟೇ ಅಲ್ಲ, ಒಂದು ವೇಳೆ ಇದರ ವಿರುದ್ಧ ಕಾನೂನನ್ನು ಜಾರಿಗೊಳಿಸಿದ್ದಿದ್ದರೆ, ಹಿಂದೂ ವಿರೋಧಿ ಕಾನೂನು ಎಂದು ಬಿಜೆಪಿ ರಂಪಾಟ ನಡೆಸುವ ಸಾಧ್ಯತೆಯಿತ್ತು. ಜೊತೆಗೆ ಮಾಧ್ಯಮಗಳಿಗೆ ಅದರಲ್ಲೂ ಟಿವಿ ಮಾಧ್ಯಮಗಳಿಗೆ ಇವುಗಳ ವಿರುದ್ಧ ಕಾನೂನು ಜಾರಿಗೆ ತರುವುದು ಬೇಡವಾಗಿದೆ. ಯಾಕೆಂದರೆ ಈ ಟಿವಿ ಮಾಧ್ಯಮಗಳ ಕಾರ್ಯಕ್ರಮಗಳೆಲ್ಲ ಇಂತಹ ವೌಢ್ಯ ಕಾರ್ಯಕ್ರಮಗಳನ್ನು ನೆಚ್ಚಿಕೊಂಡಿವೆ. ಆತ್ಮದ ಜೊತೆಗೆ ಸಂಭಾಷಣೆ, ವಾಸ್ತುಶಾಸ್ತ್ರ, ಜ್ಯೋತಿಷ್ಯ ಮೊದಲಾದ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಜನಪ್ರಿಯತೆಯನ್ನು ಹೆಚ್ಚಿಸಲು ಟಿವಿ ಮಾಧ್ಯಮಗಳು ಹೊರಟಿವೆ. ಹೀಗಿರುವಾಗ ಸರಕಾರವಾದರೂ, ಧೈರ್ಯದಿಂದ ಇವುಗಳ ವಿರುದ್ಧ ಕಾನೂನು ಹೇಗೆ ಜಾರಿಗೆ ತಂದೀತು?

ಆ ಬಾಲಕಿ ನೋಡಿದ ಟಿವಿ ಧಾರಾವಾಹಿಯಾದರೂ ಎಂತಹದು? ನಂದಿನಿ ಎನ್ನುವ ಹೆಸರಿನ ಧಾರಾವಾಹಿಯ ಕತೆ, ಮಾಟ, ಮಂತ್ರದಂತಹ ವೌಢ್ಯಗಳಿಂದ ಆಧರಿಸಿರುವುದು. ಇಲ್ಲಿ ಆ ದೃಶ್ಯವನ್ನು ಅನುಕರಿಸಿದ್ದು ಅಂತಿಮವಾಗಿ ದುರಂತಕ್ಕೆ ಕಾರಣವಾಗಿ ಸುದ್ದಿಯಾಯಿತು. ಆದರೆ ಅದೆಷ್ಟೋ ಮಕ್ಕಳು ಆ ಧಾರಾವಾಹಿಯನ್ನು ಒಂದು ಮಕ್ಕಳ ಕತೆಯೇನೋ ಎಂಬಂತೆ ನೋಡುತ್ತಿವೆ. ಧಾರಾವಾಹಿಯಲ್ಲಿರುವ ಮೌಢ್ಯಗಳು ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮಗಳಾದರೂ ಎಂತಹದು? ಎಳವೆಯಲ್ಲೇ ಇಂತಹ ಧಾರಾವಾಹಿಗಳನ್ನು ನೋಡುತ್ತಾ ಬೆಳೆಯುವ ಮಕ್ಕಳು ಭವಿಷ್ಯದಲ್ಲಿ ಹಲವು ವೌಢ್ಯಗಳನ್ನು ತನ್ನಷ್ಟಕ್ಕೇ ನಂಬ ತೊಡಗುತ್ತಾರೆ. ಮಾಟ ಮಂತ್ರಗಳ ಹೆಸರಲ್ಲಿ ನಡೆಯುವ ಮೋಸಕ್ಕೆ ಇಂಥವರೇ ಸುಲಭದಲ್ಲಿ ಬಲಿಯಾಗುತ್ತಾರೆ. ಇಂತಹ ಧಾರಾವಾಹಿಗಳಿಂದ ತಮ್ಮ ಮಕ್ಕಳನ್ನು ದೂರ ಇರಿಸುವುದು ಪಾಲಕರ ಕರ್ತವ್ಯವಾಗಿದೆ. ಇಲ್ಲವಾದರೆ, ತಮ್ಮ ಮಕ್ಕಳನ್ನು ಪೋಷಕರೇ ಮಾನಸಿಕ ರೋಗಿಗಳನ್ನಾಗಿ ಮಾಡಿದಂತಾಗುತ್ತದೆ.

ಟಿವಿ ಕಾರ್ಯಕ್ರಮಗಳು ಹಿಂಸೆಯಿಂದ ಅಥವಾ ಅಶ್ಲೀಲತೆಯಿಂದ ಕೂಡಿದಾಗ ಅದರ ಬಗ್ಗೆ ಜನರು ಸಣ್ಣ ಧ್ವನಿಯಲ್ಲಾದರೂ ಪ್ರತಿಭಟನೆ ಏಳುತ್ತದೆ. ಆದರೆ ಇಂತಹ ವೌಢ್ಯ ವಸ್ತುಗಳಿಂದ ತುಂಬಿರುವ ಕಾರ್ಯಕ್ರಮಗಳು ತಮ್ಮ ಮನೆ, ಕುಟುಂಬದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಯಾರೂ ಯೋಚಿಸದೇ ಇರುವುದು ದುರಂತ. ಜನರ ಈ ವೌನವನ್ನೇ ಟಿವಿ ಮಾಧ್ಯಮಗಳು ಬಳಸಿಕೊಳ್ಳುತ್ತಿವೆ. ಇಂದು ಸಮಾಜದಲ್ಲಿರುವ ಮಂತ್ರವಾದಿಗಳು, ಕಪಟ ವಾಸ್ತು ಶಾಸ್ತ್ರಜ್ಞರಿಗೆ ಕಡಿವಾಣ ಹಾಕುವ ಮೊದಲು, ಟಿವಿಗಳಲ್ಲಿ ಬರುವ ಇಂತಹ ಕಪಟ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಕುರಿತಂತೆ ಸರಕಾರ ಯೋಚಿಸಬೇಕಾಗಿದೆ. ಟಿವಿ ವಾಹಿನಿಗಳ ಹಿಂದಿರುವವರು ಜವಾಬ್ದಾರಿಯುತ ಪತ್ರಕರ್ತರು. ಸ್ವಸ್ಥ ಸಮಾಜದ ಕುರಿತಂತೆ ಅವರಿಗೂ ಬದ್ಧತೆಗಳಿವೆ.

ಟಿವಿಗಳಲ್ಲಿ ಬರುವ ಕಾರ್ಯಕ್ರಮಗಳೆಲ್ಲ ನಿಜವೆಂದು ಭಾವಿಸುವ ದೊಡ್ಡ ಸಮೂಹವೊಂದು ನಮ್ಮ ಸಮಾಜದಲ್ಲಿದೆ. ಇಲ್ಲಿನ ವಾಸ್ತುಶಾಸ್ತ್ರ, ಜ್ಯೋತಿಷ್ಯ, ಪುನರ್ಜನ್ಮದ ಕತೆ ಇವುಗಳನ್ನೆಲ್ಲ ನಿಜವೆಂದೇ ಭಾವಿಸುವವರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ ಮತ್ತು ಟಿವಿಯಲ್ಲಿ ಬರುವ ಕಾರ್ಯಕ್ರಮಗಳನ್ನು ತೋರಿಸಿಯೇ ಜನರನ್ನು ಯಾಮಾರಿಸುವ ಮಂತ್ರವಾದಿಗಳಿದ್ದಾರೆ. ಒಂದು ರೀತಿಯಲ್ಲಿ, ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ವೌಢ್ಯತೆಯ ಜಾಹೀರಾತುಗಳು. ತಮ್ಮ ಟಿವಿ ಚಾನೆಲ್‌ಗಳಿಗೆ ಲಾಭವಾಗುತ್ತದೆ ಎನ್ನುವ ಕಾರಣಕ್ಕಾಗಿ ಇವುಗಳು ಇಂತಹ ಕಾರ್ಯಕ್ರಮವನ್ನು ಪ್ರದರ್ಶಿಸಬಹುದಾದರೆ, ಸಮಾಜದಲ್ಲಿ ಹಣಕ್ಕಾಗಿ ಕಪಟ ಸನ್ಯಾಸಿಗಳು ತಮ್ಮ ವೃತ್ತಿಯನ್ನು ಯಾಕೆ ಮುಂದುವರಿಸಿಕೊಂಡು ಹೋಗಬಾರದು?

ಟಿವಿಗಳೊಳಗಿರುವ ವಿದ್ಯಾವಂತರು ಹಣಕ್ಕಾಗಿ ಜನಸಾಮಾನ್ಯರನ್ನು ಮೋಸ ಮಾಡಬಹುದಾದರೆ, ನಮ್ಮ ನಾಡಿನ ಗಲ್ಲಿಗಲ್ಲಿಗಳಲ್ಲಿರುವ ಕಪಟ ಮಂತ್ರವಾದಿಗಳು ಯಾಕೆ ಜನರನ್ನು ಮೋಸ ಮಾಡಬಾರದು? ಟಿವಿ ಧಾರಾವಾಹಿಗಳಿಗೂ ಒಂದು ಮಾನದಂಡವನ್ನು ಇಡಬೇಕಾದುದು ಅಗತ್ಯವಾಗಿದೆ. ತೀರಾ ವೌಢ್ಯಗಳನ್ನು, ಮಾಟ ಮಂತ್ರಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳಿಗೆ ಕತ್ತರಿ ಹಾಕುವ ಕಾನೂನು ಅಗತ್ಯವಾಗಿ ಬರಬೇಕಾಗಿದೆ. ಇದೇ ಸಂದರ್ಭದಲ್ಲಿ ಹಿಂದಿನ ಜನ್ಮದ ವ್ಯಕ್ತಿಯ ಜೊತೆಗೆ ಮಾತನಾಡುವುದು, ಆತ್ಮದ ಜೊತೆಗೆ ಮಾತನಾಡುವುದು, ದೆವ್ವದ ಬಗ್ಗೆ ಭಯ ಮೂಡಿಸುವುದು ಇವುಗಳು ಎಷ್ಟು ಶೇಕಡ ಸತ್ಯ ಎನ್ನುವುದನ್ನು ಒರೆಗೆ ಹಚ್ಚುವುದಕ್ಕೂ ಒಂದು ನಿಯಮವನ್ನು ತರಬೇಕಾಗಿದೆ.

ಟಿವಿಯೊಳಗೆ ಕೂತು ಆತ್ಮ, ಭೂತ, ದೆವ್ವ ಇತ್ಯಾದಿಗಳ ಬಗ್ಗೆ ಕಪಟ ಸ್ವಾಮೀಜಿಗಳು ಮಾತನಾಡಬಹುದಾದರೆ, ಹೊರಗಡೆ ಯಾಕೆ ಮಾತನಾಡಬಾರದು? ಈ ಪ್ರಶ್ನೆಗೆ ವೌಢ್ಯ ವಿರೋಧಿ ಕಾನೂನು ಉತ್ತರಿಸಬೇಕಾಗಿದೆ. ಆರೋಗ್ಯವೆನ್ನುವುದು ದೇಹಕ್ಕಷ್ಟೇ ಸಂಬಂಧಿಸಿದ್ದಲ್ಲ. ಮಾನಸಿಕವಾಗಿ ಸ್ವಸ್ಥರಾಗಿರುವುದು ಇಂದು ಅತೀ ಅಗತ್ಯವಾಗಿದೆ. ವಿಶ್ವಾದ್ಯಂತ ಮಾನಸಿಕ ಕಾಯಿಲೆಗಳು ಹೆಚ್ಚುತ್ತಿವೆ ಎಂದು ವರದಿಗಳು ಹೇಳುತ್ತವೆ. ಭಾರತದಂತಹ ದೇಶದಲ್ಲಿ ಮಾನಸಿಕ ಕಾಯಿಲೆಪೀಡಿತರು ಮಾನಸಿಕ ತಜ್ಞರ ಬಳಿಗೆ ಸಾಗುವುದಕ್ಕಿಂತ ಮಂತ್ರವಾದಿಗಳ ಬಳಿಗೆ ಸಾಗುವುದೇ ಹೆಚ್ಚು.

ಇದರಿಂದ ಇನ್ನಷ್ಟು ಅನಾಹುತಗಳು ಆಗುತ್ತವೆ. ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ಮಾನಸಿಕ ರೋಗಿಗಳನ್ನು ಹೆಚ್ಚಿಸುತ್ತಿವೆ ಮಾತ್ರವಲ್ಲ, ಚಿಕಿತ್ಸೆಯ ವಿಷಯದಲ್ಲೂ ಅಂಥವರ ದಾರಿ ತಪ್ಪಿಸುತ್ತಿವೆ. ಟಿವಿ ಕಾರ್ಯಕ್ರಮಗಳನ್ನು ನಂಬಿ ದೆವ್ವದ ಜೊತೆ ಮಾತನಾಡುವ ಮಂತ್ರವಾದಿಗಳ ಬಳಿಗೆ ಜನ ಸಾಗುತ್ತಿದ್ದಾರೆ. ಇಂಥವರನ್ನು ಶೋಷಿಸಲು ಕಪಟ ಮಂತ್ರವಾದಿಗಳು ಕಾಯುತ್ತಿರುತ್ತಾರೆ. ಆದುದರಿಂದ, ಟಿವಿ ಕಾರ್ಯಕ್ರಮಗಳಲ್ಲಿ ಬರುವ ಮಾಟ, ಮಂತ್ರ, ದೆವ್ವ, ಆತ್ಮಗಳಿಗೆ ಕೈಕೋಳ ತೊಡಿಸುವ ಕೆಲಸ ಮೊದಲು ಆಗಬೇಕು. ಮಂತ್ರವಾದಿಗಳನ್ನು ವೈಭವೀಕರಿಸುವ, ರೋಗಿಗಳನ್ನು ಸೃಷ್ಟಿಸುವ ಮೂರ್ಖರ ಪೆಟ್ಟಿಗೆಗಳಿಗೆ ಸರ್ವ ಸ್ವತಂತ್ರವನ್ನು ನೀಡಿ, ನಾವು ವೌಢ್ಯಗಳ ವಿರುದ್ಧ ಕಾನೂನು ಜಾರಿಯ ಕುರಿತಂತೆ ಮಾತನಾಡುವುದು ಮೂರ್ಖತನವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)