varthabharthi

ಮಾಹಿತಿ - ಮಾರ್ಗದರ್ಶನ

ಅಲ್ಪಸಂಖ್ಯಾತರ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 1 Dec, 2017

ಮಂಗಳೂರು, ನ.30: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2017-18ರ ಸಾಲಿನಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗಾಗಿ ಕೃಷಿ ಯಂತ್ರೋಪಕರಣ ಖರೀದಿಸಲು, ಅಟೋಮೊಬೈಲ್ ಸರ್ವೀಸ್ ಹಾಗೂ ಮನೆ ಮಳಿಗೆ ಯೋಜನೆ ನೆರವು ಪಡೆಯಲು ಅಲ್ಪಸಂಖ್ಯಾತ ಜನಾಂಗದವರಿಂದ ಅರ್ಜಿ ಆಹ್ವಾನಿಸಿದೆ.

ಈ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ ರೈತರು ಸಣ್ಣ ಟ್ರಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ಧತೆ ಉಪಕರಣ, ನಾಟಿ/ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣ, ಡೀಸೆಲ್ ಪಂಪ್‌ಸೆಟ್ ಟ್ಯಾಕ್ಟರ್/ಟಿಲ್ಲರ್/ಇಂಜಿನ್ ಚಾಲಿತ ಸಸ್ಯ ಸಂರಕ್ಷಣ ಉಪಕರಣ ಇತ್ಯಾದಿಗಳನ್ನು 1 ಲಕ್ಷ ರೂ.ಗಳ ಘಟಕ ವೆಚ್ಚದಲ್ಲಿ ಖರೀದಿಸಲು ಶೇ.50ರಷ್ಟು ಸಹಾಯಧನದೊಂದಿಗೆ ಸಾಲವನ್ನು ನೀಡಲಾಗುವುದು. ಸಾಲದ ಮೊತ್ತವನ್ನು ರೈತರು 36 ಕಂತುಗಳಲ್ಲಿ ಶೇ.3ರ ಬಡ್ಡಿ ದರದಲ್ಲಿ ಮರುಪಾವತಿಸಬೇಕು. ಆಗ ಮಾತ್ರ 50,000 ರೂ.ಗಳ ಬ್ಯಾಕ್‌ಆ್ಯಂಡ್ ಸಬ್ಸಿಡಿ ನೀಡಲಾಗುವುದು.

ಅಟೋ ಮೊಬೈಲ್ ಸರ್ವಿಸ್: ರಾಜ್ಯದಲ್ಲಿನ ಮತೀಯ ಅಲ್ಪಸಂಖ್ಯಾತ ಅಶಿಕ್ಷಿತ ನಿರುದ್ಯೋಗ ಯುವಕ/ಯುವತಿಯರಿಗೆ ಆಟೋ ಮೊಬೈಲ್ ಸರ್ವಿಸ್‌ನಲ್ಲಿ ತರಬೇತಿಯನ್ನು ಹಾಗೂ ತರಬೇತಿಯ ನಂತರ ಸ್ವಂತ ಉದ್ಯೋಗ ಕಲ್ಪಿಸಲು ಬ್ಯಾಂಕುಗಳಿಂದ 2 ಲಕ್ಷದಿಂದ 5 ಲಕ್ಷ ರೂ.ವರೆಗೆ ನೀಡಲಾಗುವ ಸಾಲಕ್ಕೆ ನಿಗಮದಿಂದ ಶೇ.35ರಷ್ಟು ಅಂದರೆ ಕನಿಷ್ಠ 70,000 ರೂ.ಗಳಿಂದ ಗರಿಷ್ಟ 1.25 ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು.

ಮನೆ ಮಳಿಗೆ ಯೋಜನೆ: ಈ ಯೋಜನೆಯಡಿ ಕೋಮುಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿ ಜೀವನೋಪಾಯವನ್ನು ಸಾಧಿಸಲು ಸಾಧ್ಯವಾಗದ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ಪ್ರಾರಂಭಿಸಲು ಸಾಲ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ.

ಸನ್ನಡತೆ ಆಧಾರದ ಮೇಲೆ ಕಾರಾಗೃಹ ವಾಸದಿಂದ ಬಿಡುಗಡೆಯಾದ ಕೈದಿಗಳಿಗೆ, ಭಯೋತ್ಪಾದನಾ ವಿರೋಧಿ ಚಟುವಟಿಕೆ, ಗೂಂಡಾ ಕಾಯ್ದೆಯಡಿ ಬಂಧಿತರಾಗಿ ಪ್ರಕರಣಗಳು ಸಾಬೀತಾಗದೆ ನ್ಯಾಯಾಲಯದಿಂದ ಬಿಡುಗಡೆಯಾದ ನಿರಪರಾಧಿಗಳಿಗೆ ಹಾಗೂ ವಿವಿಧ ಸುರಕ್ಷರತೆ ಕಾಯ್ದೆಯಡಿ ಬಂಧಿತರಾಗಿ ಹಲವು ವರ್ಷಗಳ ನಂತರ ನ್ಯಾಯಾಲಯದಿಂದ ಬಿಡುಗಡೆಯಾದ ನಿರಪರಾಧಿಗಳಿಗೆ ಜೀವನೋಪಾಯ ಕಲ್ಪಿಸಲು ಇಂತಹ ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿ ಸಾಲ ಸೌಲಭ್ಯವನ್ನು ನೀಡಿ ಅವರ ಜೀವನವನ್ನು ಉತ್ತಮಪಡಿಸಲು ಉದ್ದೇಶಿಸಲಾಗಿದೆ.

ಕೃಷಿ ಯಂತ್ರೋಪಕರಣ ಖರೀದಿಸುವ ಯೋಜನೆಗೆ ಆದಾಯ ಮಿತಿ 4.50 ಲಕ್ಷ ರೂ., ಆಟೊ ಮೊಬೈಲ್ ಸರ್ವಿಸ್ ಮತ್ತು ಮನೆ ಮಳಿಗೆ ಯೋಜನೆಗೆ ಆದಾಯ ಮಿತಿ 6 ಲಕ್ಷ ರೂ. ಒಳಗಿರಬೇಕು. ಅರ್ಜಿದಾರರ ವಯೋಮಿತಿ 18ರಿಂದ 45 ವರ್ಷದೊಳಗಿರಬೇಕು.

ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಝಾದ್ ಭವನ, ಓಲ್ಡ್ ಕೆಂಟ್ ರಸ್ತೆ, ಪಾಂಡೇಶ್ವರ ಮಂಗಳೂರು ಹಾಗೂ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಎ ಬ್ಲಾಕ್ 1ನೆ ಮಹಡಿ, ಕೊಠಡಿ ಸಂಖ್ಯೆ ಎ 207, ರಜತಾದ್ರಿ ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ, ಉಡುಪಿ ಜಿಲ್ಲೆ ಇಲ್ಲಿಂದ ಅರ್ಜಿ ಪಡೆದು. ಡಿ.15ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)