varthabharthi

ಸಂಪಾದಕೀಯ

ದೇಶವನ್ನು ಹಿಂದಕ್ಕೆ ಒಯ್ಯುತ್ತಿರುವ ಅಪರಾಧ ಪ್ರಕರಣಗಳು

ವಾರ್ತಾ ಭಾರತಿ : 2 Dec, 2017

ದೇಶದ ಅಭಿವೃದ್ಧ್ದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ನಡೆಸುವ ವಿವಿಧ ಸಮೀಕ್ಷೆಗಳ ಆಧಾರದ ಮೇಲೆ ಅಳೆಯುತ್ತಿರುವ ದಿನಗಳು ಇವು. ಇತ್ತೀಚೆಗೆ ಮೂಡಿ ಸಂಸ್ಥೆ ನಡೆಸಿದ ಅಧ್ಯಯನವೊಂದು ಮೋದಿ ಸರಕಾರಕ್ಕೆ ಶಹಭಾಶ್‌ಗಿರಿ ನೀಡಿದಾಗ, ಮಾಧ್ಯಮಗಳೆಲ್ಲ ಸಮೀಕ್ಷೆಯ ವಾಸ್ತವವನ್ನು ವಿಶ್ಲೇಷಿಸದೆಯೇ ಮೋದಿ ಸರಕಾರವನ್ನು ಕೊಂಡಾಡಿದವು. ತನ್ನ ಕಾಲ ಬುಡದಲ್ಲಿರುವ ಕತ್ತಲೆಯನ್ನು ಗುರುತಿಸುವುದಕ್ಕೆ ಮಾಧ್ಯಮಗಳಿಗೆ ಸಾಧ್ಯವಿಲ್ಲ ಎಂದಲ್ಲ. ಮಾಧ್ಯಮಗಳಿಗೆ ಅದು ಬೇಕಾಗಿಲ್ಲ. ಇಂದು ನಮ್ಮ ಹಸಿವನ್ನು, ನಮ್ಮ ಗಾಯದ ನೋವನ್ನು ದೇಶದೊಳಗಿನ ಜನರು ನಿರ್ಧರಿಸದೇ ಅಂತಾರಾಷ್ಟ್ರೀಯ ಸಂಸ್ಥೆಗಳು ಘೋಷಿಸಬೇಕಾದ ಸ್ಥಿತಿ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಉದ್ಯಮಗಳು ಸಂಪೂರ್ಣವಾಗಿ ನಾಶವಾಗಿವೆ, ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ದೇಶದ ಜನರು ಅಲವತ್ತುಕೊಂಡರೆ, ವಿದೇಶಗಳಿಂದ ವಿವಿಧ ಸಮೀಕ್ಷೆಗಳನ್ನು ತರಿಸಿ, ‘‘ನೋಡಿ ದೇಶ ಚೆನ್ನಾಗಿದೆ. ನೀವು ನಂಬಬೇಕು’’ ಎಂದು ಸರಕಾರಗಳು ಹೇಳುವಂತಹ ಸ್ಥಿತಿ.

ಅಂಬಾನಿ, ಅದಾನಿಯವರ ಹೆಚ್ಚುತ್ತಿರುವ ಸಂಪತ್ತನ್ನು ನೋಡಿ ನಾವು ಸಂತೋಷ ಪಡಬೇಕು. ಜಿಡಿಪಿಯಲ್ಲಿ ಸಣ್ಣ ಮಿಡಿತಕಂಡರೂ, ‘ನೋಡಿ ಜಿಡಿಪಿ ಚೇತರಿಸುತ್ತಿದೆ, ಇದಕ್ಕೆ ನೋಟು ನಿಷೇಧ ಕಾರಣ’ ಎನ್ನುವ ರಾಜಕಾರಣಿಗಳು, ದೇಶದ ಜಿಡಿಪಿ ಹಲವು ವರ್ಷ ಹಿಂದಕ್ಕೆ ಚಲಿಸಿರುವುದರ ಕುರಿತಂತೆ ವೌನವಾಗಿದ್ದಾರೆ. ಒಂದು ದೇಶದ ಅಭಿವೃದ್ಧಿಯನ್ನು ಅಥವಾ ಒಂದು ಸರಕಾರದ ಆಡಳಿತದ ಒಳಿತು ಕೆಡುಕುಗಳನ್ನು ಅಧ್ಯಯನ ಮಾಡಲು ಆ ದೇಶದ ಆರೋಗ್ಯ, ಶಿಕ್ಷಣದ ಮಟ್ಟವನ್ನು ಅವಲೋಕಿಸಿದರೆ ಸಾಕು. ಹಾಗೆಯೇ ಒಂದು ಸರಕಾರ ಆಡಳಿತಾತ್ಮಕವಾಗಿ ಎಷ್ಟು ಯಶಸ್ವಿಯಾಗಿದೆ ಎನ್ನುವುದನ್ನು ಆ ದೇಶದ ಕಾನೂನು ವ್ಯವಸ್ಥೆಯನ್ನು ಆಧರಿಸಿಯೂ ಹೇಳಬಹುದಾಗಿದೆ.

ಆಡಳಿತದಲ್ಲಿ ಹಿಂಸೆ, ಅಪರಾಧ ಪ್ರಕರಣಗಳು ಹೆಚ್ಚಿದಷ್ಟೂ ಅದರ ಪರಿಣಾಮ ದೇಶದ ತಳಸ್ತರದ ಬದುಕಿನ ಮೇಲೆಯೇ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ಕೆಲವು ವಾಸ್ತವಗಳನ್ನು ಈ ಬಾರಿಯ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ) ನಮ್ಮ ಮುಂದಿಟ್ಟಿದೆ. 2014-16ರ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ಅತ್ಯಂತ ಹೆಚ್ಚಿನ ಅಪರಾಧ ಪ್ರಕರಣಗಳು ನಡೆದಿರುವ ಐದು ರಾಜ್ಯಗಳನ್ನು ಈ ಘಟಕವು ಗುರುತಿಸಿದೆ. ಕಾಕತಾಳೀಯವೆಂಬಂತೆ ಈ ಐದು ರಾಜ್ಯಗಳ ಆಡಳಿತವೂ ಬಿಜೆಪಿಯ ಕೈಯಲ್ಲಿದೆ. ಇಷ್ಟೇ ಅಲ್ಲ, ತನ್ನನ್ನು ತಾನು ಸನ್ಯಾಸಿ ಎಂದು ಘೋಷಿಸಿಕೊಂಡಿರುವ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶವು ಅಪರಾಧ ಪ್ರಕರಣಗಳಲ್ಲಿ ನಂ. 1 ರಾಜ್ಯ ಎಂದು ಗುರುತಿಸಲ್ಪಟ್ಟಿದೆ. ಯಾವುದೇ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ, ಅದು ದೇಶದ ದುರ್ಬಲ ಸಮುದಾಯದ ಹಿತಾಸಕ್ತಿಯ ಕುರಿತಂತೆ ಹೆಚ್ಚು ಗಮನ ನೀಡಬೇಕು. ಅತೀ ಹೆಚ್ಚು ಬಡತನ, ಅನಕ್ಷರತೆಯುಳ್ಳ ಸಮುದಾಯಗಳು ಅವು. ಅವುಗಳು ಏಳಿಗೆಯಾಗದೆ ದೇಶದ ಸಮಗ್ರ ಅಭಿವೃದ್ಧಿಯನ್ನು ಊಹಿಸಲಾಗದು.

ಬಿಜೆಪಿಯ ಮೇಲಿನ ಅತೀ ದೊಡ್ಡ ಆರೋಪವೆಂದರೆ, ಅದು ಮೇಲ್ಜಾತಿಗಳ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಆದ್ಯತೆಯನ್ನು ನೀಡುತ್ತದೆ ಎನ್ನುವುದು. ಇದಕ್ಕೆ ಪೂರಕವಾಗಿ ಗುಜರಾತ್ ಸೇರಿದಂತೆ ಹಲವೆಡೆ ದಲಿತರ ಮೇಲೆ ವ್ಯಾಪಕ ಹಲ್ಲೆಗಳು ನಡೆಯುತ್ತಾ ಬಂದಿವೆ. ಗೋವಿನ ಚರ್ಮದ ಹೆಸರಲ್ಲಿ, ಗೋ ಸಾಗಾಟದ ಹೆಸರಲ್ಲಿ ಈ ದೇಶದಲ್ಲಿ ಹಲ್ಲೆಗೊಳಗಾಗುತ್ತಿರುವವರಲ್ಲಿ ಮುಸ್ಲಿಮರು ಮಾತ್ರವಲ್ಲ, ದಲಿತರೂ ಮುಂಚೂಣಿಯಲ್ಲಿದ್ದಾರೆ. ಇಲ್ಲಿ ದಲಿತರ ಮೇಲೆ ಎರಡು ನೆಲೆಗಳಲ್ಲಿ ಹಲ್ಲೆಗಳಾಗುತ್ತಿವೆ. ಒಂದು, ದನದ ಚರ್ಮ ಸುಲಿದರು, ಗೋಮಾಂಸ ಹೊಂದಿದ್ದರು ಎಂದು ಆರೋಪಿಸಿ ಬಹಿರಂಗ ಹಲ್ಲೆ. ಇಂತಹ ಹಲ್ಲೆಗಳು ಅಂತಿಮವಾಗಿ ಗುಜರಾತ್‌ನಲ್ಲಿ ದಲಿತರನ್ನು ಸಂಘಟಿಸಿ ಉನಾದಂತಹ ಚಳವಳಿಯನ್ನೇ ಹುಟ್ಟು ಹಾಕಿತು. ಇನ್ನೊಂದೆಡೆ, ಅವರ ಆರ್ಥಿಕ ಬದುಕಿನ ಮೇಲೂ ದಾಳಿ ನಡೆಯಿತು. ಗೋ ಉದ್ಯಮಕ್ಕೆ ಪೂರಕವಾದ ಹಲವು ಉದ್ಯೋಗಗಳಲ್ಲಿ ದಲಿತರು ತಮ್ಮನ್ನು ತೊಡಗಿಸಿಕೊಂಡಿದ್ದರು.

ಕೇಂದ್ರ ಸರಕಾರದ ಅವೈಜ್ಞಾನಿಕವಾಗಿರುವ ಗೋಮಾಂಸ ಮಾರಾಟ ನಿಷೇಧ ಕಾಯ್ದೆಯಿಂದಾಗಿ ತಳಸ್ತರದ ಬದುಕಿನ ಮೇಲೆ ಭಾರೀ ಬದಲಾವಣೆಗಳಾದವು. ಗೋವಿನ ಚರ್ಮ ಸುಳಿಯುವುದು, ಎಲುಬು ಸಂಗ್ರಹ, ಗೋಮಾಂಸ ಮಾರಾಟ, ಗೋವುಗಳ ಮಾರಾಟ ಇತ್ಯಾದಿಗಳಲ್ಲಿ ತೊಡಗಿಕೊಂಡವರೆಲ್ಲ ಅವುಗಳಿಂದ ದೂರ ಸರಿಯಬೇಕಾಯಿತು. ನೋಟು ನಿಷೇಧದ ಬಳಿಕ, ಇರುವ ಅಳಿದುಳಿದ ಉದ್ಯೋಗಗಳಿಗೂ ಕಲ್ಲು ಬಿತ್ತು. ಇವೆಲ್ಲವೂ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಇನ್ನಷ್ಟು ಹಿಂದಕ್ಕೆ ತಳ್ಳಿತು. ಈ ಆರ್ಥಿಕ ಸಾಮಾಜಿಕ ಬಿಕ್ಕಟ್ಟಿನ ಜೊತೆಗೆ ದಲಿತರ ಮೇಲೆ ನಡೆದಿರುವ ದೌರ್ಜನ್ಯ ನೇರ ಸಂಬಂಧವನ್ನು ಹೊಂದಿದೆ. ಜಾತಿ ಮತ್ತು ವರ್ಗ ಸಂಘರ್ಷದ ರೂಪದಲ್ಲಿ ನಾವಿದನ್ನು ಕಾಣಬೇಕಾಗಿದೆ. ದಲಿತರ ಮೇಲೆ ನಡೆದಿರುವ ದೌರ್ಜನ್ಯ ಕೇವಲ ಅಪರಾಧಗಳಷ್ಟೇ ಅಲ್ಲ ಎನ್ನುವುದೂ ದೇಶದ ಅಭಿವೃದ್ಧಿಯ ವಿಶ್ಲೇಷಣೆಯಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ.

 2016ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಅಪರಾಧಗಳು ನಡೆದಿವೆ ಎನ್ನುವುದನ್ನೂ ಎನ್‌ಸಿಆರ್‌ಬಿ ಹೇಳುತ್ತದೆ. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಅಪರಾಧ ಪ್ರಕರಣಗಳು ತೀವ್ರ ಏರಿಕೆಯನ್ನು ಕಂಡಿವೆ. ಸ್ವತಃ ಮೈಮೇಲೆ ಹತ್ತು ಹಲವು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಆದಿತ್ಯನಾಥ್ ಅಧಿಕಾರಕ್ಕೇರಿದ ಬೆನ್ನಿಗೇ ಅಪರಾಧಗಳು ಹೆಚ್ಚುವುದು ಆಕಸ್ಮಿಕ ಏನೂ ಅಲ್ಲ. ಈ ಅಪರಾಧಗಳಲ್ಲಿ ಹೆಚ್ಚಿನವುಗಳು ಕೋಮು ಬಣ್ಣಗಳನ್ನು ಹೊಂದಿವೆ. ಸಂಘಪರಿವಾರದ ಇವು ವಿವಿಧ ಸಂಘಟನೆಗಳು ವ್ಯವಸ್ಥಿತವಾಗಿ ಹಮ್ಮಿಕೊಳ್ಳುತ್ತಿರುವ ಅಪರಾಧ ಪ್ರಕರಣಗಳಾಗಿವೆ. ನಕಲಿ ಸಂಸ್ಕೃತಿ ರಕ್ಷಕರು, ನಕಲಿ ಗೋರಕ್ಷಕರು, ನಕಲಿ ಧರ್ಮ ರಕ್ಷಕರ ಪಾತ್ರ ಈ ಅಪರಾಧ ಪ್ರಕರಣಗಳಲ್ಲಿವೆ. ಇಂತಹ ಅಪರಾಧಗಳು ಗ್ರಾಮೀಣ ಹೈನೋದ್ಯಮ ಮತ್ತು ಕೃಷಿ ಉದ್ಯಮಗಳ ಮೇಲೂ ದುಷ್ಪರಿಣಾಮವನ್ನು ಉಂಟು ಮಾಡಿವೆ. ಮೈಮೇಲೆ ನೂರಾರು ಕ್ರಿಮಿನಲ್ ಪ್ರಕರಣಗಳನ್ನು ಅಂಟಿಸಿಕೊಂಡವರು ರಾಜಕೀಯ ಪಕ್ಷಗಳ ಮುಖಂಡರಾಗಿ ಬೀದಿಗಳಲ್ಲಿ ಮೆರೆಯುತ್ತಿರುವಾಗ, ಅಂತಹ ನೆಲದಲ್ಲಿ ಅಪರಾಧಗಳು ಹೆಚ್ಚಬಾರದು ಎನ್ನಲು ಸಾಧ್ಯವೇ? ಒಟ್ಟಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಈ ದೇಶದ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿರುವುದನ್ನು ಪರೋಕ್ಷವಾಗಿ ಬೆಟ್ಟು ಮಾಡಿದೆ.

ಯಾಕೆಂದರೆ, ಹಿಂಸೆ ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗಲಾರದು. ಗಲಭೆಗಳು, ಹಿಂಸಾಚಾರಗಳು, ಅಪರಾಧಗಳು ಸಮಾಜದ ಸ್ವಸ್ಥತೆಯ ಮೇಲೆ ಮಾತ್ರವಲ್ಲ, ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಇಂದು ದೇಶ ಹಿನ್ನಡೆ ಅನುಭವಿಸುವುದರ ಹಿಂದೆ ನೋಟು ನಿಷೇಧ ಮಾತ್ರವಲ್ಲ, ವಿಜೃಂಭಿಸುತ್ತಿರುವ ಕ್ರಿಮಿನಲ್‌ಗಳೂ ಕಾರಣ ಎನ್ನುವುದನ್ನು ಸರಕಾರ ಅರಿತು ಕೊಳ್ಳಬೇಕಾಗಿದೆ. ವಿಪರ್ಯಾಸವೆಂದರೆ ಈ ಕ್ರಿಮಿನಲ್‌ಗಳು ಧರ್ಮ, ಸಂಸ್ಕೃತಿಯ ಮುಖವಾಡದಲ್ಲಿ ಓಡಾಡಲು ಆರಂಭಿಸಿದ್ದಾರೆ. ಇವರಿಗೆ ಬೆಂಬಲವಾಗಿ ರಾಜಕೀಯ ಶಕ್ತಿಗಳಿವೆ. ಆದುದರಿಂದಲೇ ಕಾನೂನು ವ್ಯವಸ್ಥೆ ಇವರನ್ನು ಮಟ್ಟ ಹಾಕಲು ಸಾಧ್ಯವಾಗದೆ ಅಸಹಾಯಕವಾಗಿದೆ. ಆದುದರಿಂದ ನಮ್ಮ ಸರಕಾರ ನಿಜಕ್ಕೂ ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ಉದ್ದೇಶವನ್ನು ಹೊಂದಿದ್ದರೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ದಾರಿಯನ್ನು ಹುಡುಕಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)