ಮತ್ತೆ ಜೊತೆಯಾಗಲಿದ್ದಾರೆ ರಜನಿ-ಮಮ್ಮುಟ್ಟಿ
ಬರೋಬ್ಬರಿ ಇಪ್ಪತ್ತಾರು ವರ್ಷಗಳ ಬಳಿಕ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ಗಳಾದ ರಜನಿಕಾಂತ್ ಹಾಗೂ ಮಮ್ಮುಟ್ಟಿ ಮತ್ತೊಮ್ಮೆ ಒಟ್ಟಾಗಿ ಅಭಿನಯಿಸುತ್ತಿದ್ದಾರೆ. ಆದರೆ ಈ ಸಲ ಅವರು ಜೊತೆಯಾಗಿ ನಟಿಸಲಿರುವುದು ತಮಿಳು ಅಥವಾ ಮಲಯಾಳಂ ಚಿತ್ರದಲ್ಲಲ್ಲ. ಮರಾಠಿ ಚಿತ್ರದಲ್ಲಿ ಈ ಮಹಾನ್ ತಾರೆಯರಿಬ್ಬರ ಅಭಿನಯ ಜುಗಲ್ಬಂದಿ ನಡೆಯಲಿದೆ. ಹೊಸಬರಾದ ದೀಪಕ್ ಭಾವೆ ನಿರ್ದೇಶಿಸಲಿರುವ ಈ ಚಿತ್ರಕ್ಕೆ ‘ಪಸಾಯದನ್’ ಎಂದು ಹೆಸರಿಡಲಾಗಿದೆ. ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಲಿರುವ ಈ ಚಿತ್ರಕ್ಕೆ ಮಹಾರಾಷ್ಟ್ರದ ರಾಜಕಾರಣಿ ಬಾಲಕೃಷ್ಣ ಸರ್ವೆ ನಿರ್ಮಾಪಕರು. ಇಷ್ಟಕ್ಕೂ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ವಿವರಗಳು ಲಭ್ಯವಾಗಿಲ್ಲ.
ರಜನಿ ಹಾಗೂ ಮಮ್ಮುಟ್ಟಿ ಈ ಮೊದಲು ಮಣಿರತ್ನಂ ನಿರ್ದೇಶನದ ‘ದಳಪತಿ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. 1991ರಲ್ಲಿ ತೆರೆಕಂಡ ‘ದಳಪತಿ’ ಚಿತ್ರದಲ್ಲಿ ಶೋಭನಾ, ಭಾನುಪ್ರಿಯಾ, ಶ್ರೀವಿದ್ಯಾ, ಗೀತಾ, ಅರವಿಂದ್ ಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅಂದಹಾಗೆ, ಮುಂದಿನ ವರ್ಷ ತೆರೆಕಾಣಲಿರುವ ರಜನಿ ಅಭಿನಯದ ‘ಕಾಲ’ದಲ್ಲಿ ಮುಮ್ಮುಟ್ಟಿ ಅತಿಥಿನಟನಾಗಿ ಕಾಣಿಸಿಕೊಳ್ಳಲಿದ್ದಾರೆಂದು ವದಂತಿಗಳು ಕೇಳಿಬರುತ್ತಿವೆ. ‘ಕಬಾಲಿ’ ಖ್ಯಾತಿಯ ಪಾ.ರಂಜಿತ್ ನಿರ್ದೇಶನದ ‘ಕಾಲ’ದಲ್ಲಿ ರಜನಿಕಾಂತ್, ಭೂಗತ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.