ನೋ ಎಂಟ್ರಿ 2ಗೆ ಅರ್ಜುನ್ ಹೀರೋ?
2005 ರಲ್ಲಿ ತೆರೆಕಂಡು ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ಕಾಮಿಡಿ ಚಿತ್ರ ‘ನೋ ಎಂಟ್ರಿ’ ಚಿತ್ರದ ಮುಂದುವರಿದ ಭಾಗವನ್ನು ನಿರ್ಮಿಸುವುದಾಗಿ ನಿರ್ಮಾಪಕ ಬೋನಿ ಕಪೂರ್ ಇತ್ತೀಚೆಗೆ ಅನೌನ್ಸ್ ಮಾಡಿದ ಬೆನ್ನಲ್ಲೇ ಚಿತ್ರದ ತಾರಾಬಳಗದ ಬಗ್ಗೆ ಸಾಕಷ್ಟು ಕುತೂಹಲವುಂಟಾಗಿತ್ತು. ಒಂದು ವೇಳೆ ಈಗ ತಾನೆ ಬಂದಿರುವ ವರದಿಗಳನ್ನು ನಂಬುವುದಾದರೆ, ‘ನೋ ಎಂಟ್ರಿ’ಯಲ್ಲಿ ನಾಯಕನಾಗಿದ್ದ ಸಲ್ಮಾನ್ ಖಾನ್ ಜಾಗದಲ್ಲಿ ಅರ್ಜುನ್ ಕಪೂರ್ ನಟಿಸಲಿರುವುದು ಬಹುತೇಕ ಖಚಿತವಾಗಿದೆ.
ವರುಣ್ಧವನ್ ನಟಿಸಿರುವ ಜುಡ್ವಾ 2 ಭರ್ಜರಿ ಯಶಸ್ಸು ಕಂಡಿರುವುದು, ಬೋನಿಕಪೂರ್ಗೆ ನಾಯಕ ಪಾತ್ರಕ್ಕೆ ಪುತ್ರ ಅರ್ಜುನ್ನನ್ನು ಆಯ್ಕೆ ಮಾಡುವ ಯೋಚನೆ ಹೊಳೆದಿದೆಯಂತೆ.. ಜುಡ್ವಾ 2, ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದ ಜುಡ್ವಾ ಚಿತ್ರದ ರಿಮೇಕ್ ಆಗಿದೆ. ಅಷ್ಟೇ ಅಲ್ಲ ಅರ್ಜುನ್ ಕಪೂರ್ ಹಾಗೂ ಅನಿಲ್ ಕಪೂರ್ ಜೊತೆಗಾರಿಕೆಯ, ಆನಿಸ್ ಬಾಝ್ಮಿ ನಿರ್ದೇಶನದ ಇನ್ನೊಂದು ಕಾಮಿಡಿ ಚಿತ್ರ ಮುಬಾರಕನ್, ಬಾಕ್ಸ್ ಆಫೀಸ್ನಲ್ಲಿ ಚೆನ್ನಾಗಿಯೇ ಓಡಿತ್ತು.
ಮೊದಲಿಗೆ ಸಲ್ಮಾನ್ ಖಾನ್, ‘ನೋ ಎಂಟ್ರಿ 2’ನಲ್ಲೂ ನಾಯಕನಾಗಲಿದ್ದಾರೆಂದು ವರದಿಯಾಗಿತ್ತು. ಇದೀಗ ನಿರ್ದೇಶಕ ಅನೀಸ್ ಬಾಝ್ಮಿ ಕೂಡಾ, ಅರ್ಜುನ್ ಕಪೂರ್ರನ್ನು ಗಮನದಲ್ಲಿಟ್ಟುಕೊಂಡು ಸ್ಕ್ರಿಪ್ಟ್ ಬರೆಯುವಂತೆ, ಚಿತ್ರಕಥೆ ಬರಹಗಾರರಿಗೆ ಸೂಚನೆ ನೀಡಿದ್ದಾರಂತೆ.
ಇನ್ನುಳಿದಂತೆ ಅನಿಲ್ ಕಪೂರ್ ಹಾಗೂ ಫರ್ದಿನ್ ಖಾನ್, ಮೊದಲ ಭಾಗದಲ್ಲಿ ತಾವು ನಟಿಸಿದ್ದ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಸದ್ಯಕ್ಕೆ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಚಿತ್ರದ ತಾರಾ ಬಳಗದ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಅರ್ಜುನ್ ಕಪೂರ್ ಕೂಡಾ ವೌನತಾಳಿದ್ದಾರೆ. ಒಟ್ಟಿನಲ್ಲಿ ‘ನೋ ಎಂಟ್ರಿ 2’ ಚಿತ್ರದ ನಾಯಕರ್ಯಾರೆಂಬ ಕುತೂಹಲಕ್ಕೆ ಮಾತ್ರ ಈತನಕ ತೆರೆಬಿದ್ದಿಲ್ಲ.