varthabharthi

ಬುಡಬುಡಿಕೆ

ಬೀಸುವ ಒನಕೆಯಿಂದ ತಪ್ಪಿಸಿಕೊಂಡರೆ.....

ವಾರ್ತಾ ಭಾರತಿ : 3 Dec, 2017
-ಚೇಳಯ್ಯ chelayya@gmail.com

ನೀವು ಪದ್ಮಾವತಿಯನ್ನು ನಿಂದಿಸಿದರೆ, ನಾವು ಬೆಳವಡಿ ಮಲ್ಲಮ್ಮನನ್ನು, ಕಿತ್ತೂರು ಚೆನ್ನಮ್ಮನನ್ನು ನಿಂದಿಸುತ್ತೇವೆ ಎಂದು ‘ಪದ್ಮಾವತಿ’ ಚಿತ್ರದ ವಿರುದ್ಧ ಯುದ್ಧಕ್ಕೆ ಹೊರಟ ಪ್ರಲಾಪ ತಿಮ್ಮ, ತನಗೆದುರಾಗಿ ನಿಂತ ಇಡೀ ಕನ್ನಡ ಸೇನೆಯನ್ನು ಕಂಡು ಬೆಚ್ಚಿ ಬಿದ್ದು, ಅದೆಲ್ಲೋ ಉಚ್ಚೆಯ ವಾಸನೆ ಬರುತ್ತಿದೆಯಲ್ಲ ಎಂದು ನೋಡಿದರೆ ಅವನಿಗೆ ತನ್ನ ಪ್ಯಾಂಟು ಒದ್ದೆಯಾಗಿರುವುದು ಗಮನಕ್ಕೆ ಬಂತು. ಆವರೆಗೆ ಚಂಪಾ ಅವರ ಬಾಯಿಯಿಂದಲೇ ಈ ವಾಸನೆ ಬರುತ್ತಿದೆ ಎಂದು ತಪ್ಪು ತಿಳಿದಿದ್ದ ಪ್ರಲಾಪ ತಿಮ್ಮ ಇದೀಗ ತನ್ನ ಒದ್ದೆ ಬಟ್ಟೆಯನ್ನು ಸರಿಪಡಿಸುತ್ತಾ, ಕಣ್ಣಲ್ಲಿಯೂ ಧಾರಾಕಾರವಾಗಿ ಅದನ್ನು ಸುರಿಸುತ್ತಾ ‘‘ಮಾಧ್ಯಮಗಳು, ಟಿವಿಗಳು ನನ್ನ ಸ್ಪಷ್ಟೀಕರಣವನ್ನೇ ಕೇಳುತ್ತಿಲ್ಲ. ಇದು ಯಾವ ಪತ್ರಿಕೋದ್ಯಮ? ಇದು ಪತ್ರಿಕಾಧರ್ಮಕ್ಕೆ ವಿರುದ್ಧವಲ್ಲವೇ?’’ ಎಂದು ಪೋಸ್ಟ್‌ಕಾರ್ಡ್‌ನಿಂದ ಕಣ್ಣೀರು ಒರೆಸುತ್ತಿರುವಲ್ಲಿಗೆ ಪತ್ರಕರ್ತ ಎಂಜಲು ಕಾಸಿ ಹಾಜರಾದ.
 ‘‘ಸಾರ್...ನಿಮ್ಮ ಅಭಿಮಾನಿಗಳು ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ ಅವರ ಬಗ್ಗೆ ಅಶ್ಲೀಲವಾಗಿ ಬರೆದಿರುವುದು ...’’ ಎಂದು ಬಾಯಿ ತೆರೆಯುತ್ತಿದ್ದಂತೆಯೇ ತಿಮ್ಮ ರೊಚ್ಚುಗೆದ್ದು ‘‘ಪತ್ರಿಕಾ ಧರ್ಮ ಪಾಲಿಸಿ...ನನ್ನ ಹೇಳಿಕೆಯನ್ನೇ ತೆಗೆದುಕೊಳ್ಳದೆ ಸುದ್ದಿಗಳನ್ನು ಟಿವಿಗಳು ಪ್ರಕಟಿಸುವುದು ನ್ಯಾಯವೇ? ಇದು ಪತ್ರಿಕಾ ಧರ್ಮವೇ?’’ ಕೇಳಿದ.
‘‘ಸಾರ್...ಇದು ನೀವೇ ಪತ್ರಕರ್ತರಿಗೆ ಕಲಿಸಿದ ಪತ್ರಿಕಾಧರ್ಮ ಸಾರ್. ನಿಮ್ಮ ಶಿಷ್ಯರು ನಿಮ್ಮ ಪತ್ರಿಕಾಧರ್ಮವನ್ನು ಯಥಾವತ್ ಪಾಲಿಸುತ್ತಿದ್ದಾರೆ ಸಾರ್..’’ ಎಂದು ಹಲ್ಲು ಕಿರಿಯುತ್ತಾ ಉತ್ತರಿಸಿದ.
‘‘ನೋಡ್ರಿ, ಮದಕರಿ ನಾಯಕನ ವಿರುದ್ಧ ಟಿಪ್ಪು ಸುಲ್ತಾನ್ ಯುದ್ಧ ಮಾಡುವಾಗ ನಾನು ಮದಕರಿ ನಾಯಕನಿಗೆ ಸಹಾಯ ಮಾಡಿದ್ದೆ...ಹೀಗಿರುವಾಗ ನಾನು ಒನಕೆ ಓಬವ್ವನ ಬಗ್ಗೆ ಅಶ್ಲೀಲವಾಗಿ ಬರೆಯುವುದು ಸಾಧ್ಯವೆ?’’ ಪ್ರಲಾಪ ತಿಮ್ಮ ದೀನವಾಗಿ ಕೇಳಿಕೊಂಡ.
‘‘ಸಾರ್ ಟಿಪ್ಪು ಸುಲ್ತಾನ್ ದಾಳಿ ಮಾಡಿದಾಗ ನೀವು ಮದಕರಿ ನಾಯಕನ ಸೇನೆಯಲ್ಲಿ ಕೆಲಸ ಮಾಡುತ್ತಾ ಇದ್ದಿರಾ?’’
‘‘ಹಾಗಲ್ಲರೀ...ಟಿಪ್ಪುವನ್ನು ದೇಶದ್ರೋಹಿ ಎಂದು ಬಿಂಬಿಸುವಲ್ಲಿ ನಾನು ನನ್ನ ಪತ್ರಿಕೋದ್ಯಮವನ್ನೇ ಬಲಿ ಕೊಟ್ಟಿದ್ದೇನೆ. ಮದಕರಿ ನಾಯಕರಿಗೆ ನಾನು ಸಹಾಯ ಮಾಡಿದಂತೆ ಆಯಿತಲ್ಲವೇ?’’
‘‘ಆದರೆ ಇದೀಗ ನಾಡಿನ ಓಬವ್ವರೆಲ್ಲ ಒನಕೆ ಹಿಡಿದು ನಿಮ್ಮನ್ನು ಹುಡುಕುತ್ತಿದ್ದಾರಲ್ಲ ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ಇಡೀ ಮಾಧ್ಯಮಗಳು ನನ್ನ ವಿರುದ್ಧ ಮೀರ್ ಸಾದಿಕ್ ಕೆಲಸವನ್ನು ಮಾಡುತ್ತಿದೆ ಕಣ್ರೀ...’’ ತಿಮ್ಮ ಗೋಳು ತೋಡಿಕೊಂಡ.
‘‘ಹಾಗಾದ್ರೆ ನಿಮ್ಮನ್ನು ಟಿಪ್ಪುಸುಲ್ತಾನ್ ಎಂದು ಕರೆಸಿಕೊಳ್ಳುತ್ತಿದ್ದೀರಾ?’’ ಕಾಸಿ ಅರ್ಥವಾಗದೆ ವಿವರಿಸಿದ.

‘‘ಅಯ್ಯಯ್ಯೋ ಹೇಗೆ ವಿವರಿಸಿದರೂ ನೀವು ಅಪಾರ್ಥ ಮಾಡಿಕೊಳ್ಳುತ್ತೀರಲ್ಲ....ಒನಕೆ ಓಬವ್ವನ ಕಿಂಡಿಯನ್ನು ಕಂಡು ಹಿಡಿದದ್ದೇ ನಾನು ಕಣ್ರೀ...ಇದೀಗ ಅದೇ ಒನಕೆಯನ್ನು ನನ್ನ ವಿರುದ್ಧ ಬಳಸುವುದಕ್ಕೆ ಹೊರಟಿದ್ದಾರೆ. ಆದರೆ ನನಗೆ ಬೇಜಾರಾಗುವುದು...ಒಂದು ಕಾಲದಲ್ಲಿ ಇಂತಹ ಪತ್ರಿಕೋದ್ಯಮವನ್ನು ಕಲಿಸಿದ ಗುರುಗಳಿಗೆ ಅದನ್ನು ಪ್ರಯೋಗ ಮಾಡುತ್ತಿದ್ದಾರಲ್ಲ...ಎಲ್ಲರೂ ಗುರುದ್ರೋಹಿಗಳು ಕಣ್ರೀ...’’
‘‘ಹಾಗಾದರೆ ನೀವು ಹುಟ್ಟುವ ಮೊದಲು ಓಬವ್ವನ ಕಿಂಡಿ ಇರಲೇ ಇಲ್ಲವೇ?’’ ಕಾಸಿ ಅಚ್ಚರಿಯಿಂದ ಕೇಳಿದ.
 ‘‘ಇತ್ತೂರಿ. ಆದರೆ ಟಿಪ್ಪು ಸುಲ್ತಾನ ಅದನ್ನು ತನ್ನ ಕಾಲಾಳುಗಳ ಮೂಲಕ ಮುಚ್ಚಿ ಹಾಕಿದ್ದ. ನಾನು ಅದನ್ನು ಹುಡುಕಿ ಇಡೀ ನಾಡಿಗೆ ಪರಿಚಯಿಸಿದೆ. ಟಿಪ್ಪುವಿನ ವಿರುದ್ಧ ಓಬವ್ವಳನ್ನು ಎತ್ತಿ ಕಟ್ಟಿದ್ದೇ ನಾನು. ಇಂತಹ ನಾನು ಓಬವ್ವಳ ಬಗ್ಗೆ ಅಶ್ಲೀಲವಾಗಿ ಬರೀತೇನಾ? ನೀವೇ ಹೇಳ್ರಿ...?’’ ಎಂದು ತಿಮ್ಮ ಹಿಂದಿನಿಂದ ತನ್ನಕಡೆಗೆ ಧಾವಿಸಿ ಬರುತ್ತಿರುವ ಓಬ್ಬವ್ವ, ಚೆನ್ನಮ್ಮರ ಸೇನೆಯನ್ನು ನೋಡಿ ಕಂಗಾಲಾಗಿ ಹೇಳಿದ.
‘‘ಸಾರ್...ಆದ್ರೂ ಓಬವ್ವ ಹೈದರಲಿ ನಡುವೆ ಸಂಬಂಧ ಇದೆ...ಚೆನ್ನಮ್ಮ ಬ್ರಿಟಿಷರ ನಡುವೆ ಸಂಬಂಧ ಇದೆ...ಎಂದೆಲ್ಲ ಹೇಳುವುದು, ಅದನ್ನು ಫೇಸ್‌ಬುಕ್‌ನಲ್ಲಿ ಬರೆಸುವುದು ಯಾವ ರೀತಿಯ ಪತ್ರಿಕೋದ್ಯಮ ಸಾರ್...ತಪ್ಪಲ್ವಾ?’’
‘‘ನೋಡ್ರೀ...ನಾನು ಪದ್ಮಾವತಿಯ ವಿಷಯದಲ್ಲಿ ನಾಡಿನ ಜನರ ಶೂರತ್ವವನ್ನು, ವೀರತ್ವವನ್ನು ಬಡಿದೆಬ್ಬಿಸಲು ಹಾಗೆ ಬರೆಸಿದೆ’’
‘‘ಹೌದು...ಸಾರ್. ನೀವು ಅದರಲ್ಲಿ ಯಶಸ್ವಿಯಾಗಿದ್ದೀರಿ. ನಾಡಿನ ಜನರು ಒಮ್ಮೆಲೆ ಎಚ್ಚೆತ್ತು, ಕತ್ತಿ, ಒನಕೆಗಳ ಜೊತೆಗೆ ಬರುತ್ತಿದ್ದಾರೆ ಸಾರ್...’’
‘‘ಆದರೆ ಅವರು ನನ್ನ ವಿರುದ್ಧ ಅದನ್ನು ಪ್ರಯೋಗಿಸುತ್ತಿದ್ದಾರೆ. ಅವರೆಲ್ಲ ಸಿದ್ದರಾಮಯ್ಯ ಕಡೆಗೆ ತಿರುಗುವ ಹಾಗೆ ಏನಾದರೂ ಮಾಡ್ರೀ...’’ ಕಾಸಿಯ ಬಳಿ ಅಂಗಲಾಚತೊಡಗಿದ.
ತಿಮ್ಮನ ಸ್ಥಿತಿ ನೋಡಿ ಕಂಗಾಲಾದ ಕಾಸಿ ‘‘ಸಾರ್...ಸಿದ್ದರಾಮಯ್ಯ ಆಧುನಿಕ ಮದಕರಿ ನಾಯಕ ಎಂದು ಎಲ್ಲರೂ ಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯರ ಕುರಿತಂತೆ ಏನಾದರೂ ಅಶ್ಲೀಲವಾದದ್ದನ್ನು ಬರೆದು ಪೋಸ್ಟ್‌ಕಾರ್ಡ್‌ನಲ್ಲಿ ಹಾಕಿ ಬಿಡಿ ’’ ಪರಿಹಾರ ಸೂಚಿಸಿದ.
‘‘ಏನು ಬರೆದು ಹಾಕಿದರೂ ನನಗೇ ತಿರುಗಿ ಹೊಡೆಯುತ್ತಿದೆ ಕಣ್ರೀ...ಬೀಸುವ ಒನಕೆಯಿಂದ ಪಾರಾದರೆ ನೂರು ವರ್ಷ ಆಯಸ್ಸು...ಇದರಿಂದ ಪಾರಾಗುವುದು ಹೇಗೆ ಹೇಳ್ರೀ...?’’ ತಿಮ್ಮ ಮತ್ತೆ ಗೋಗರೆದ.
‘‘ಸಾರ್...ನಿಮ್ಮ ಬಿಜೆಪಿ ನಾಯಕರ ಸಹಾಯ ಪಡೆಯಿರಿ....ಕರಂದ್ಲಾಜೆ, ಯಡಿಯೂರಪ್ಪ, ಈಶ್ವರಪ್ಪರನ್ನು ಸಹಾಯಕ್ಕಾಗಿ ಕರೆಯಿರಿ’’ ಕಾಸಿ ಪರಿಹಾರ ಹೇಳಿದ.
‘‘ಅಯ್ಯೋ, ಅದು ಟಿಪ್ಪು ಸುಲ್ತಾನ್ ಸಹಾಯಕ್ಕಾಗಿ ಮರಾಠರನ್ನು ಕರೆದಂತಾಗುತ್ತದೆ. ಅವರೆಲ್ಲ ನಾನು ಎಕ್ಕುಟ್ಟಿ ಹೋಗೋದನ್ನು ಕಾಯ್ತಿ ಇದ್ದಾರೆ...’’ ತಿಮ್ಮ ಅವುಡುಗಚ್ಚಿ ಹೇಳಿದ.
 ‘‘ಸಾರ್...ಹಾಗಾದರೆ ಓಬವ್ವ, ಚೆನ್ನಮ್ಮರ ಬಗ್ಗೆ ಅಶ್ಲೀಲವಾಗಿ ಬರೆದಿದ್ದು ನಾನಲ್ಲ. ಅದು ಬ್ರಿಟಿಷರು ಬರೆದಿರುವುದು. ಅವರ ಕೈಯಲ್ಲಿ ಟಿಪ್ಪು ಸುಲ್ತಾನ್ ಬರೆಸಿರುವುದು. ಆದುದರಿಂದ ನಾವೆಲ್ಲರು ಟಿಪ್ಪುವಿನ ವಿರುದ್ಧ ಹೋರಾಡೋಣ ಎಂದು ನಿಮ್ಮ ಅಂಕಣದಲ್ಲಿ ಬರೆಯಿರಿ ಸಾರ್....’’ ಕಾಸಿ ಸಲಹೆ ನೀಡಿದ.
‘‘ಜನರು ನಂಬ್ತಾರೇನ್ರೀ...?’’ ತಿಮ್ಮ ಅನುಮಾನದಿಂದ ಕೇಳಿದ.
 ‘‘ನೂರು ಸಾರಿ ಹೇಳಿದರೆ ಜನರು ನಂಬ್ತಾರೆ ಸಾರ್....ಮೋದಿಯ ಫೋಟೋದ ಮುಂದೆ ನಿಂತು ಇದನ್ನು ಹೇಳಿದರೆ ಖಂಡಿತಾ ನಂಬ್ತಾರೆ ಸಾರ್’’ ಕಾಸಿ ಭರವಸೆ ನೀಡಿದ.
‘‘ಈಗ ಮೋದಿ ಹೇಳೋದನ್ನೇ ಜನ ನಂಬಲ್ಲ...ನಾನು ಹೇಳಿದ್ದನ್ನು ನಂಬ್ತಾರಾ?’’ ತಿಮ್ಮ ಅನುಮಾನದಿಂದ ಕೇಳಿದ.
‘‘ಅಮೆರಿಕದ ಟ್ರಂಪ್ ಹೇಳಿದ ಅಂತ ಹೇಳಿ ಸಾರ್...ಅಮೆರಿಕಕ್ಕೆ ಬೆಲೆಕೊಟ್ಟಾದರೂ ನಿಮ್ಮ ಮಾತನ್ನು ನಂಬ್ತಾರೆ...’’ ಎಂದವನೇ ‘‘ಸಾರ್...ಅವರ ಸೇನೆ ಹತ್ತಿರ ಬರುತ್ತಿದೆ...ನಾನು ಬಂದೆ...ಹೇಗಾದರೂ ಸರಿ, ಬೀಸುವ ಒನಕೆಯಿಂದ ತಪ್ಪಿಸಿಕೊಳ್ಳಿ...’’ ಎಂದು ಅಲ್ಲಿಂದ ಪಲಾಯನ ಮಾಡಿದ.
ಅಷ್ಟರಲ್ಲಿ ದೂರದಿಂದ ದತ್ತ ಮಾಲಾಧಾರಿಗಳನ್ನು ಕಂಡದ್ದೇ ತಕ್ಷಣ ಪ್ಯಾಂಟ್, ಬಟ್ಟೆ ಬಿಚ್ಚಿ ಕಾವಿಧಾರಿಯಾಗಿ ತಿಮ್ಮ ಗುಂಪಿನಲ್ಲಿ ಸೇರಿಕೊಂಡು ‘‘ದತ್ತ ಪೀಠ ನಮ್ಮದು ’’ ಎಂದು ಕೀರಲು ಧ್ವನಿಯಲ್ಲಿ ಕಿರುಚಾಡತೊಡಗಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)