varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 3 Dec, 2017

ಬಾದಲ್‌ರ ಮಾಸ್ಟರ್‌ಸ್ಟ್ರೋಕ್?
ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿಕೂಟ ಈಗ ಪಂಜಾಬ್‌ನಲ್ಲಿ ಅಧಿಕಾರದಲ್ಲಿಲ್ಲ. ಈ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಕಾಣಲಾರಂಭಿಸಿವೆ. ದಿಲ್ಲಿ ವಿಶ್ವವಿದ್ಯಾನಿಲಯದ ದ್ಯಾಲ್ ಸಿಂಗ್ ಸಂಧ್ಯಾ ಕಾಲೇಜ್‌ನ್ನು ವಂದೇ ಮಾತರಂ ಮಹಾವಿದ್ಯಾಲಯವಾಗಿ ಮರುನಾಮಕರಣ ಮಾಡುವ ಕೇಂದ್ರದ ಬಿಜೆಪಿ ಸರಕಾರದ ನಿರ್ಧಾರದ ಬಗ್ಗೆ ಶಿರೋಮಣಿ ಅಕಾಲಿದಳ ಬಲವಾದ ವಿರೋಧ ವ್ಯಕ್ತಪಡಿಸಿದೆ.

ವಿವಿಯ ಪುನರ್‌ ನಾಮಕರಣವನ್ನು ವಿರೋಧಿಸಿ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ನಡೆಯುವ ಪ್ರತಿಭಟನೆಯ ನೇತೃತ್ವ ವಹಿಸುವುದಾಗಿ ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ ಪುತ್ರ ನರೇಶ್ ಗುಜ್ರಾಲ್ ಪ್ರತಿಜ್ಞೆಗೈದಿದ್ದಾರೆ. ‘ದಿ ಟ್ರಿಬ್ಯೂನ್’ ಆಂಗ್ಲ ದಿನಪತ್ರಿಕೆ ಹಾಗೂ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಸ್ಥಾಪಕ ಹಾಗೂ ಸಮಾಜಸೇವಕರಾದ ದ್ಯಾಲ್ ಸಿಂಗ್ ಮಜಿಥಿಯಾ ಸ್ಮರಣಾರ್ಥವಾಗಿ, ದಿಲ್ಲಿ ವಿವಿಯ ಸಂಧ್ಯಾ ಕಾಲೇಜ್‌ಗೆ ಅವರ ಹೆಸರಿಡಲಾಗಿತ್ತು. ಈ ಕಾಲೇಜ್‌ಗೆ ಪುನರ್‌ನಾಮಕರಣ ಮಾಡುವ ಪ್ರಯತ್ನವು ಸಮಸ್ತ ಸಿಖ್ ಸಮುದಾಯದ ಭಾವನೆಗೆ ಧಕ್ಕೆಯುಂಟು ಮಾಡಿದೆಯೆಂದು ನರೇಶ್ ಗುಜ್ರಾಲ್ ಹೇಳುತ್ತಾರೆ. ಪಂಜಾಬ್ ವಿಧಾನಸಭಾ ಚುನಾವಣೆಯ ಬಳಿಕ ಕಳೆಗುಂದಿರುವ ಎಸ್‌ಎಡಿಗೆ ಈ ನಡೆಯು ಪಕ್ಷದ ವರಿಷ್ಠ ಹಾಗೂ ನಿಷ್ಣಾತ ರಾಜಕೀಯ ಪಟು ಪ್ರಕಾಶ್ ಸಿಂಗ್ ಬಾದಲ್ ಅವರ ಮಾಸ್ಟರ್‌ಸ್ಟ್ರೋಕ್ ಎಂದೇ ಭಾವಿಸಲಾಗುತ್ತಿದೆ. ಇದರೊಂದಿಗೆ ಬಿಜೆಪಿಯ ಮೇಲೆ ಒತ್ತಡಹೇರುವ ಜೊತೆಗೆ ಸಿಕ್ಖ್ಖರ ಹಿತಾಸಕ್ತಿಳ ರಕ್ಷಣೆಯೇ ಮುಖ್ಯ ವಿಚಾರಧಾರೆಯಾಗಿ ಹೊಂದಿರುವ ಪಂಜಾಬ್‌ನ ಪಕ್ಷವೆಂಬ ತನ್ನ ಸ್ಥಾನಮಾನವನ್ನು ಮರಳಿ ಪಡೆಯಬಹುದೆಂಬ ಯೋಚನೆ ಎಸ್‌ಎಡಿಯದು. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿಯು ತನ್ನ ನಡೆಯನ್ನು ಇಡಬೇಕಾಗಿದೆ. ಒಟ್ಟಾರೆ ಇವೆಲ್ಲದಕ್ಕೂ ದ್ಯಾಲ್‌ಸಿಂಗ್ ಒಂದು ಮಾದರಿ ನೆಪವಾಗಿಬಿಟ್ಟಿದೆ.


ರಾಹುಲ್‌ಗೆ ಪಟ್ಟಾಭಿಷೇಕಕ್ಕೆ ಬಿಜೆಪಿ ತೊಡರುಗಾಲು?
ರಾಹುಲ್‌ಗೆ ಕಾಂಗ್ರೆಸ್‌ನ ಸಾರಥ್ಯವನ್ನು ವಹಿಸಿಕೊಳ್ಳುವುದಕ್ಕೆ ಪಕ್ಷದ ಪ್ರಧಾನ ಕಾರ್ಯಾಲಯವಿರುವ 24 ಅಕ್ಬರ್ ರಸ್ತೆಯಲ್ಲಿ ವೇದಿಕೆ ಸಿದ್ಧವಾಗಿದೆ. ಆದರೆ ಇದನ್ನು ಸಂಭ್ರಮಿಸುವ ಬದಲು, ಆ ಪಕ್ಷದ ಎಲ್ಲಾ ರಾಜ್ಯ ಘಟಕಗಳ ಮುಖ್ಯಸ್ಥರು ಚಿಂತಾಕ್ರಾಂತರಾಗಿದ್ದಾರೆ. ಸಾಂಸ್ಥಿಕ ಚುನಾವಣೆಗೆ ಮುನ್ನ ಪಕ್ಷದೊಳಗಿನ ಚಟುವಟಿಕೆಗಳ ಬಗ್ಗೆ ಎಂದಿಗಿಂತಲೂ ಹೆಚ್ಚು ನಿಗಾವಹಿಸುವಂತೆ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಕಾಂಗ್ರೆಸ್‌ನ ನಿಯಮಾವಳಿಗಳ ಪ್ರಕಾರ. ರಾಜ್ಯ ಮಟ್ಟದ ಯಾವುದೇ 10 ಮಂದಿ ಕಾಂಗ್ರೆಸ್ ಪ್ರತಿನಿಧಿಗಳು, ಪಕ್ಷದ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯ ಹೆಸರನ್ನು ಜಂಟಿಯಾಗಿ ಪ್ರಸ್ತಾಪಿಸಬಹುದಾಗಿದೆ. ಇದನ್ನು ಬಳಸಿಕೊಂಡು ಎದುರಾಳಿ ಬಿಜೆಪಿಯು ತಂತ್ರಗಾರಿಕೆ ನಡೆಸಿ ರಾಹುಲ್‌ಗೆ ತೊಡಕುಗಳನ್ನು ಸೃಷ್ಟಿಸಬಹುದೆಂಬ ಚಿಂತೆ ಕಾಂಗ್ರೆಸ್ ವರಿಷ್ಠರನ್ನು ಕಾಡುತ್ತಿದೆ. ಆದರೆ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ರಾಹುಲ್ ಆತಂಕಪಡಬೇಕಾದ ಕಾರಣಗಳಿಲ್ಲ.

ಕಾಂಗ್ರೆಸ್‌ನ ಇಲೆಕ್ಟೋರಲ್ ಕಾಲೇಜ್‌ನ ಸಂರಚನೆ ಹೇಗಿದೆಯೆಂದರೆ, ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಇತರ ಅಭ್ಯರ್ಥಿಗಳು ಸ್ಪರ್ಧಿಸಿದರೂ ರಾಹುಲ್ ನಿರಾಯಾಸವಾಗಿ ವಿಜಯ ಸಾಧಿಸಬಹುದಾಗಿದೆ. ಆದರೆ ಗುಜರಾತ್ ವಿಧಾನಸಭಾ ಚುನಾವಣೆ ಕಾವೇರಿರುವ ಈ ಸಮಯದಲ್ಲಿ ಗಾಂಧಿ ಮನೆತನದ ಉತ್ತರಾಧಿಕಾರಿಯು ಒಂದಿಷ್ಟೂ ವಿಚಲಿತರಾಗುವುದನ್ನು ಕಾಂಗ್ರೆಸ್ ಹೈಕಮಾಂಡ್ ಬಯಸುತ್ತಿಲ್ಲ. ರಾಹುಲ್‌ರನ್ನು ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಭಡ್ತಿಗೊಳಿಸುವುದಕ್ಕಾಗಿ ಪಕ್ಷದ ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ವಂಚನೆ ನಡೆಸಲಾಗುತ್ತಿದೆಯೆಂಬ ಪಕ್ಷದ ಪದಾಧಿಕಾರಿ ಶೆಹಝಾದ್ ಪೂನಾವಾಲಾ ಹೇಳಿರುವುದು, ಇಡೀ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಲು ಬಿಜೆಪಿ ನಡೆಸಿದ ತಂತ್ರಗಾರಿಕೆಯೆಂದು ಭಾವಿಸಲಾಗಿದೆ. ಆದರೆ, ಪೂನಾವಾಲಾ ಕೇವಲ ರಸ್ತೆಯಲ್ಲಿನ ಉಬ್ಬು ಇದ್ದ ಹಾಗೆ, ಆ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲವೆಂದು ಕಾಂಗ್ರೆಸ್ ನಾಯಕತ್ವ ಆತ್ಮವಿಶ್ವಾಸದಿಂದಿದೆ.


ಹಿಮಂತ್ ಆರೆಸ್ಸೆಸ್ ಪ್ರೇಮ
 ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಕಾರ್ಯಾಲಯಕ್ಕೆ ಒಂದೇ ಒಂದು ಭೇಟಿ ನೀಡಿದರೂ ‘ಜ್ಞಾನೋದಯ’ವಾಗಲು ಸಾಕಾಗುತ್ತದೆಯೆಂದು ಈಗ ಭಾವಿಸಬಹುದಾಗಿದೆ. ಈಶಾನ್ಯ ಭಾರತದಲ್ಲಿ ಬಿಜೆಪಿಯ ಯಶಸ್ಸಿನ ರೂವಾರಿಯಾದ ಹಿಮಂತ್ ಬಿಶ್ವಾಸ್, ಕೆಲವು ದಿನಗಳ ಹಿಂದೆ ನಾಗ್ಪುರದ ಆರೆಸ್ಸೆಸ್‌ನ ಮುಖ್ಯ ನೆಲೆಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಈ ಕೇಸರಿ ಸಂಘಟನೆಯಿಂದ ನಡೆಸಲ್ಪಡುವ ರಾಷ್ಟ್ರೀಯ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲೂ ಸಮಯ ಕಳೆದಿದ್ದರು. ಪ್ರಾಯಶಃ ಅಲ್ಲಿ ಅವರಿಗೆ ಪೂರ್ವ ಜನ್ಮದಲ್ಲಿ ಎಸಗಿದ ಪಾಪ ಕೃತ್ಯಗಳಿಂದಾಗಿ ಈ ಜನ್ಮದಲ್ಲಿ ಕ್ಯಾನ್ಸರ್ ರೋಗವು ಉಂಟಾಗುತ್ತದೆ ಹಾಗೂ ಇದೊಂದು ದೈವಿಕ ನ್ಯಾಯದಾನವಾಗಿದೆಯೆಂಬ ಚಿಂತನೆಯು ಅವರಿಗೆ ಮೊದಲ ಬಾರಿಗೆ ಉಂಟಾಗಿರಬೇಕು. ಆದರೆ ಈ ಕಿತ್ತಳೆ ನಗರಿಯಲ್ಲಿ ಅವರಿಗೆ ಸಾಕ್ಷಾತ್ಕಾರವಾದುದು ಅದೊಂದು ಮಾತ್ರವೇ ಅಲ್ಲ.

ಕಾಂಗ್ರೆಸ್‌ನಲ್ಲಿದ್ದು ತನ್ನ ಅಮೂಲ್ಯ 23 ವರ್ಷಗಳನ್ನು ವ್ಯರ್ಥಗೊಳಿಸಿದ್ದೇನೆಂಬುದು ಕೂಡಾ ಅವರಿಗೆ ಅರಿವಾಗಿದೆ. ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಸಂದರ್ಭದಲ್ಲಿ ಅವರು ನಾಗಪುರದಲ್ಲಿ ಆರೆಸ್ಸೆಸ್ ನಾಯಕರು ಹಾಗೂ ಪದಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ ಬಳಿಕ ಈ ಕೇಸರಿ ಸಂಘಟನೆಯು ಅಸ್ಸಾಂ ಮಾತ್ರವಲ್ಲ ಸಮಗ್ರ ಈಶಾನ್ಯ ಭಾರತದ ಬಗ್ಗೆ ಎಷ್ಟು ಆಳವಾದ ತಿಳುವಳಿಕೆ ಹೊಂದಿದೆಯೆಂಬುದನ್ನು ತನಗೆ ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ. ಇದಕ್ಕೆ ಹೋಲಿಸಿದರೆ, ಕಾಂಗ್ರೆಸ್‌ನ ಉನ್ನತ ನಾಯಕರ ಜ್ಞಾನ ಏನೇನೂ ಸಾಲದು ಎಂದು ತೀರ್ಪು ಕೂಡಾ ನೀಡಿದ್ದಾರೆ. ಅಸ್ಸಾಂ ಹಾಗೂ ಈಶಾನ್ಯ ಭಾರತದ ಇತರ ಆರು ರಾಜ್ಯಗಳ ಕುರಿತ ಅವರ ಜ್ಞಾನವು ಕೇವಲ ಬದ್ರುದ್ದೀನ್ ಅಜ್ಮಲ್ (ಕಾಂಗ್ರೆಸ್ ಸಂಸದ) ಬಗೆಗಷ್ಟೇ ಸೀಮಿತವಾಗಿದೆ ಎಂದವರು ವ್ಯಂಗ್ಯವಾಡಿದ್ದರು. ಶರ್ಮಾರ ಈ ನಿರರ್ಗಳವಾದ ಬಣ್ಣನೆಗಳು ಆರೆಸ್ಸೆಸ್ ನಾಯಕತ್ವದ ನಂಬಿಕೆಗೆ ಪಾತ್ರವಾಗಲು ನಡೆಸಲಾದ ಪ್ರಯತ್ನವೆಂದು ರಾಜಕೀಯ ಟೀಕಾಕಾರರು ಭಾವಿಸಿದ್ದಾರೆ. ಒಂದಲ್ಲ ಒಂದು ದಿನ ತಾನು ಅಸ್ಸಾಂನ ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಶರ್ಮಾ ಈಗ ಗುಟ್ಟಾಗಿಟ್ಟಿಲ್ಲವೆಂಬುದು ಕೂಡಾ ಸತ್ಯಕ್ಕೆ ತುಂಬಾ ಹತ್ತಿರವಾದ ವಿಷಯವೆಂಬುದನ್ನು ಇದು ಸಾಬೀತುಪಡಿಸುತ್ತದೆ.


ಚೌಹಾಣ್‌ರ ಸಿನೆಮಾ ರಾಜಕಾರಣ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ದೇಶದ ವಿವಿಧ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ಪದ್ಮಾವತಿ ಚಿತ್ರದ ವಿರುದ್ಧ ಸಮರಕ್ಕಿಳಿದಿದ್ದಾರೆ.ಚೌಹಾಣ್ ಅವರು ರಜಪೂತ ಸಮುದಾಯಕ್ಕೆ ಸೇರಿಲ್ಲದವರಾಗಿರಬಹುದು. ಆದರೆ ಅವರು ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವಂತೆ ಭಾಸವಾಗುತ್ತಿದೆ. ‘ಪದ್ಮಾವತಿ’ ಚಿತ್ರದ ಪ್ರದರ್ಶನಕ್ಕೆ ಚೌಹಾಣ್ ಅವರು ತನ್ನ ರಾಜ್ಯದಲ್ಲಿ ನಿಷೇಧ ಘೋಷಿಸಿದ್ದಾರೆ ಮಾತ್ರವಲ್ಲ, ಸರಕಾರಿ ಶಾಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಆ ಚಿತ್ರದ ಹಾಡುಗಳನ್ನು ಬಳಸಿಕೊಳ್ಳದಂತೆ ತಾಕೀತು ಕೂಡಾ ಮಾಡಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಾಲ್ಪನಿಕವೆಂದು ಹೇಳಲಾಗುತ್ತಿರುವ ಈ ರಾಣಿಯ ಕುರಿತ ಅಧ್ಯಾಯವೊಂದನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಬೇಕೆಂದು ಆದೇಶ ಕೂಡಾ ಹೊರಡಿಸಿದ್ದಾರೆ. ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಸಿನೆಮಾಪ್ರಿಯರಾದ ಮುಖ್ಯಮಂತ್ರಿ ಚೌಹಾಣ್ ಅವರ ಮೆಚ್ಚಿನ ನಟಿಯಲ್ಲವೆಂಬುದು ಕೂಡಾ ಈಗ ಸ್ಪಷ್ಟವಾಗಿದೆ.

ಚಲನಚಿತ್ರಗಳ ಬಗ್ಗೆ ಚೌಹಾಣ್‌ಗಿರುವ ವ್ಯಾಮೋಹದಿಂದ ಪ್ರಯೋಜನ ಪಡೆದವರಲ್ಲಿ ‘ದಂಗಲ್’ ನಟ ಆಮಿರ್ ಖಾನ್ ಕೂಡಾ ಒಬ್ಬರು. ಆಮಿರ್ ಖಾನ್‌ರ ಚಿತ್ರದ ಯಶಸ್ಸಿಗೆ ವಿಘ್ನ ತಂದೊಡ್ಡಲು ಕಂಕಣಬದ್ಧರಾಗಿರುವಂತೆ ವರ್ತಿಸುತ್ತಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗಿಯ ಅವರ ವಿರೋಧದ ನಡುವೆಯೂ ಚೌಹಾಣ್ ಅವರು, ದಂಗಲ್ ಚಿತ್ರಕ್ಕೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಚೌಹಾಣ್‌ರ ಇಂತಹ ಉದಾರತೆಯ ಫಲಾನುಭವಿ ಆಮಿರ್ ಮಾತ್ರವೇ ಅಲ್ಲ. ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ಪಡೆದ ಇತರ ಚಿತ್ರಗಳಲ್ಲಿ ಇರ್ಫಾನ್ ಖಾನ್ ಹಾಗೂ ಪಾಕ್ ನಟಿ ಸಬಾ ಖಮರ್ ನಟಿಸಿರುವ ‘ಹಿಂದಿ ಮೀಡಿಯಂ’ ಕೂಡಾ ಸೇರಿದೆ. ಪ್ರಾಯಶಃ ಕಾಲ್ಪನಿಕವೆನ್ನಲಾದ ರಾಣಿಯೊಬ್ಬಳ ವಿಷಯವಾಗಿ ಇಷ್ಟೊಂದು ದ್ವೇಷದ ವಾತಾವರಣವೇಕೇ?. ಬಹುಶಃ ನಿಮಗೆ ಎಂದೂ ತಿಳಿಯಲಾರದು. ನೀವು ರಾಜಕೀಯವಾಗಿ ದುರ್ಬಲರಾಗುತ್ತಿದ್ದರೆ, ಆಗ ನೀವು ಏನೂ ಕೂಡಾ ಮಾಡಬಹುದಾಗಿದೆ. ಇದಕ್ಕೆ ಚೌಹಾಣ್ ಕೂಡಾ ಹೊರತಲ್ಲ.


ಗುಜರಾತ್ ಚುನಾವಣೆ: ಇಕ್ಕಟ್ಟಿನಲ್ಲಿ ಮೋದಿ
 ಕೆಲವೊಮ್ಮೆ ದಿಲ್ಲಿಯ ಪ್ರಗತಿಪರ ಪತ್ರಕರ್ತರು ತಮ್ಮ ಸ್ನೇಹಿತರೊಂದಿಗೆ ‘‘ಕೆಲವು ವರ್ಷಗಳವರೆಗೂ ಇದ್ದ ಈ ನೂರಾರು ಬಲಪಂಥೀಯ ಪತ್ರಕರ್ತರು ಈಗ ಎಲ್ಲಿದ್ದಾರೆ?’’ ಎಂದು ತಮ್ಮ ಸ್ನೇಹಿತರೊಂದಿಗೆ ಕೇಳುತ್ತಿರುತ್ತಾರೆ. ಇದೊಂದು ಉತ್ತರಿಸಲು ಕಷ್ಟವಾದ ಪ್ರಶ್ನೆಯಾಗಿದೆ. ‘ಭಕ್ತ’ ಪತ್ರಕರ್ತರು ಈಗ ರಕ್ಷಣಾತ್ಮಕವಾದ ನಿಲುವನ್ನು ತಾಳಿದ್ದಾರೆಂಬುದು ಸ್ಪಷ್ಟ. ಅವರು ಡಿಸೆಂಬರ್ 18ರಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ಮತಎಣಿಕೆ ನಡೆದು, ಚುನಾವಣಾ ಫಲಿತಾಂಶ ಹೊರಬರುವುದನ್ನೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಗುಜರಾತ್ ಚುನಾವಣಾ ಪ್ರಚಾರದಲ್ಲಿರುವ ಮೋದಿ ಇಕ್ಕಟ್ಟಿಗೆ ಸಿಲುಕಿಕೊಂಡಿರುವುದು ಬಲಪಂಥೀಯ ಪತ್ರಕರ್ತರಿಗೆ ಈಗ ಸ್ಪಷ್ಟವಾಗಿ ಅರಿವಾಗಿದೆ ಎಂಬ ವಿಷಯವನ್ನು ಈಗ ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಇತ್ತೀಚೆಗೆ ದಿಲ್ಲಿಯಲ್ಲಿನ ಇಂಡಿಯನ್ ಪ್ರೆಸ್ ಕ್ಲಬ್‌ನಲ್ಲಿ ಕೆಲವು ಪತ್ರಕರ್ತರು, ಆರೆಸ್ಸೆಸ್ ಚಿಂತಕರ ಜೊತೆ ಗುಜರಾತ್‌ನಲ್ಲಿ ಬಿಜೆಪಿಯ ಚುನಾವಣಾ ಸಾಧನೆಯ ಕುರಿತಾಗಿ ಪ್ರಶ್ನಿಸಿದ್ದರು. ಅದಕ್ಕೆ ಅವರ ವಿವರಣೆ ತುಂಬಾ ಸರಳವಾಗಿತ್ತು. ಗುಜರಾತ್‌ನಲ್ಲಿ ಬದಲಾದ ರಾಜಕೀಯ ವಾತಾವರಣದ ಬಗ್ಗೆ ಅವರಿಗೆ ಯಾವುದೇ ಸ್ಪಷ್ಟವಾದ ಕಲ್ಪನೆಯಿಲ್ಲವಂತೆ. ಮೋದಿ ಹಲವಾರು ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಗುಜರಾತ್‌ನುದ್ದಕ್ಕೂ ಸಂಚರಿಸುತ್ತಿರಬಹುದು. ಆದರೆ ಎಲ್ಲೆಡೆ ಅವರನ್ನು ಹಿಂಬಾಲಿಸುತ್ತಿರುವ ಪತ್ರಕರ್ತರು, ರಾಜ್ಯದ ವಾತಾವರಣದಲ್ಲಿ ಬೇರೇನೋ ಇದೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವುದನ್ನು ಗುಜರಾತ್ ಮುಂದುವರಿಸುವುದೇ ಅಥವಾ ಅದು ಬದಲಾವಣೆಯ ಪರವಾಗಿ ಮತ ಚಲಾಯಿಸಲಿದೆಯೇ?. ಏನೇ ಇರಲಿ, ತನ್ನ ಪಕ್ಷದ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಮೋದಿ ಭಾವಿಸಿದಂತೆ ಕಾಣುತ್ತಿದೆ. ಹೀಗಾಗಿ ಇಷ್ಟೊಂದು ರ್ಯಾಲಿಗಳು!.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)