varthabharthi

ನೇಸರ ನೋಡು

ವಿಷಾದನೀಯ ವಿದ್ಯಮಾನಗಳು

ವಾರ್ತಾ ಭಾರತಿ : 3 Dec, 2017
ಜಿ.ಎನ್.ರಂಗನಾಥ್ ರಾವ್

ಆದರೆ ಸಾಹಿತ್ಯ ವೇದಿಕೆಯಲ್ಲಿ ರಾಜಕೀಯ ಚರ್ಚಿಸಿದಾಕ್ಷಣ ಅದು ರಾಜಕೀಯ ವೇದಿಕೆಯಾಗುವುದಿಲ್ಲ. ಸಮ್ಮೇಳನಾಧ್ಯಕ್ಷರು ರಾಜಕೀಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತನಾಡುವುದರಿಂದ ಅದು ರಾಜಕೀಯ ವೇದಿಕೆಯಾಗುವುದಿಲ್ಲ. ಹಾಗೆ ಬಗೆದಲ್ಲಿ ನೆಲ, ಜಲ, ಶಿಕ್ಷಣ ಮಾಧ್ಯಮ ಈ ಯಾವ ಸಮಸ್ಯೆಯನ್ನೂ ಸಮ್ಮೇಳನದಲ್ಲಿ ಚರ್ಚಿಸುವುದೂ ರಾಜಕೀಯವಾಗುತ್ತದೆ. ಏಕೆಂದರೆ ರಾಜಕೀಯ ವ್ಯವಸ್ಥೆಯನ್ನು ದೂರವಿರಿಸಿ ಈ ಯಾವ ಸಮಸ್ಯೆಗಳನ್ನೂ ಚರ್ಚಿಸಲಾಗದು.


ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮಗಳಿಂದ ಆರಂಭವಾದ ನವೆಂಬರ್ ತಿಂಗಳು ಕನ್ನಡ ಸಾಹಿತ್ಯ ಸಮ್ಮೇಳನದ ಸಡಗರ-ಸಂಭ್ರಮ-ವಿಚಾರ-ವಿವಾದಗಳ ಅಬ್ಬರ ಆರ್ಭಟಗಳೊಂದಿಗೆ ಕನ್ನಡದ ‘ಜೀವಂತಿಕೆ’ಗೆ ಸಾಕ್ಷಿಯಾಗಿ ಮುಕ್ತಾಯಗೊಂಡಿತು. ಮೈಸೂರಿನಲ್ಲಿ ಎಂಬತ್ಮೂರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 24ರಿಂದ ಮೂರು ದಿನಗಳ ಕಾಲ ನಡೆಯಿತು. ಅದರ ಜೊತೆಗೇ, ಇದೇ ಅವಧಿಯಲ್ಲಿ ನಾಡಿನ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಇನ್ನೆರಡು ಮಹತ್ವದ ಘಟನೆಗಳು ಜರುಗಿ ರಾಷ್ಟ್ರ ವಿವೇಕವನ್ನು ಚಿಂತನಮಂಥನಕ್ಕೆ ಹಚ್ಚಿದ್ದು ಮತ್ತೊಂದು ವಿಶೇಷ. ಅತ್ತ ಉಡುಪಿಯಲ್ಲಿ 24ರಂದು ಪ್ರಾರಂಭಗೊಂಡ ಧಾರ್ಮಿಕ ಸಂಸದ್-2017, ಮೂರು ದಿನಗಳು ನಡೆದು ರಾಷ್ಟ್ರವ್ಯಾಪಿ ಸುದ್ದಿ ಮಾಡಿತು.ಮತ್ತೊಂದು 24ರಂದು ಸಂವಿಧಾನ ದಿನಾಚರಣೆ ಅಂಗವಾಗಿ ದೇಶದ ಸರ್ವೋಚ್ಚ ನ್ಯಾಯಾಲಯ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮತ್ತು ಕೇಂದ್ರ ಕಾನೂನು ಸಚಿವರು ಮಾಡಿದ ಭಾಷಣಗಳು ರಾಷ್ಟ್ರದ ನ್ಯಾಯಾಂಗ-ಶಾಸಕಾಂಗ- ಕಾರ್ಯಾಂಗಗಳಲ್ಲಿ ಸಂಚಲನ ಉಂಟುಮಾಡಿದವು.

ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೊ.ಚಂದ್ರಶೇಖರ ಪಾಟೀಲರ ಆಯ್ಕೆಯಾದಾಗಲೇ ಅವರ ಭಾಷಣ ಮಾಮೂಲಿನಂತೆ ನಾಡುನುಡಿಗಳ ಸಾಧನೆಯ ಖಾನೇಶುಮಾರಿಯಾಗಿರುವುದಿಲ್ಲ, ಅದರಲ್ಲಿ ಚಂಪಾ ಛಾಪುಘಾಟುಗಳು ಇದ್ದೇ ಇರುತ್ತವೆ ಎಂಬ ಕುತೂಹಲ ಹುಟ್ಟಿತ್ತು. ಅಧ್ಯಕ್ಷ ಭಾಷಣದಲ್ಲಿ ಚಂಪಾ ಜಾಗೃತರಾಗಿರುವಂತೆ ಕನ್ನಡಿಗರಿಗೆ ಚಾಟಿ ಬೀಸಿದ್ದಾರೆ. ವಿವಾದವನ್ನೂ ಹುಟ್ಟುಹಾಕಿದ್ದಾರೆ.

ಕನ್ನಡಿಗರ ಪುನುರುಜ್ಜೀವನ, ಕನ್ನಡ ನಾಡಿನ ಮುನ್ನಡೆಗಾಗಿ ಕೆಲಸ ಮಾಡುವುದು ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ಧ್ಯೇಯವೆಂದು ಪರಿಷತ್ತಿನ ಆರಂಭಿಕ ಅಧ್ಯಕ್ಷರುಗಳಲ್ಲಿ ಒಬ್ಬರಾದ ಆಚಾರ್ಯ ಬಿ.ಎಂ.ಶ್ರೀಯವರು 1938ರಷ್ಟು ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಎಂದೇ ಸಾಹಿತ್ಯ ಸಾಧನೆಗಳ ಚರ್ವಿತಚರ್ವಣಗಳ ಮಧ್ಯೆಯೂ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡಿಗರ ಬದುಕನ್ನು ಬಾಧಿಸುತ್ತಿರುವ ನೆಲ, ಜಲ, ಶಿಕ್ಷಣ ಮೊದಲಾದ ಸಮಸ್ಯೆಗಳನ್ನು ಚರ್ಚಿಸಿದ್ದಿದೆ. ಅಧ್ಯಕ್ಷ ಪೀಠದಿಂದ ಸಾಹಿತಿ ಮಹೋದಯರು ಇವುಗಳ ಬಗ್ಗೆ ಮಾತನಾಡಿರುವುದು ಸಮ್ಮೇಳನಾಧ್ಯಕ್ಷರುಗಳ ಭಾಷಣಗಳ ಸಂಪುಟದಲ್ಲಿ ಲಭ್ಯ. ಹೀಗಿರುವಾಗ ಕನ್ನಡಿಗರ ನೆಲ, ಜಲ, ಕೃಷಿ ಮೊದಲಾದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿರುವ ಈ ಸಲದ ಸಮ್ಮೇಳನದಲ್ಲಿ ಅಧ್ಯಕ್ಷ ಪ್ರೊ.ಚಂಪಾ ಭಾಷಣದಲ್ಲಿ ಹೇಳಿದ, ಜನತಾ ಪ್ರತಿನಿಧಿಗಳ ಆಯ್ಕೆಗೆ ಸಂಬಂಧಿಸಿದ ಅಂಶ ಭಾವವಿಕಾರಗಳಿಗೆ, ರಾಜಕೀಯ ರಾಗದ್ವೇಷಗಳ ರೋಷಾವೇಷಗಳಿಗೆ ಎಡೆಮಾಡಿಕೊಟ್ಟದ್ದು ವಿಷಾದನೀಯ.

ಇಷ್ಟಾಗಿ ಚಂಪಾ ಹೇಳಿದ್ದಾದರೂ ಏನು? ರಾಜಕೀಯವಾಗಿ ನಾವು ಸಶಕ್ತರಾಗದೆ ಕನ್ನಡದ ಮತ್ತು ಕನ್ನಡಿಗರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಈಗ ನಮಗೆ ಅನುಭವಜನ್ಯವಾದ ಮಾತು. ನೆರೆಯ ದ್ರಾವಿಡ ರಾಜ್ಯಗಳು ಪ್ರಾದೇಶಿಕ ಪಕ್ಷಕಟ್ಟಿ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಂಡು, ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷದ ಅಗತ್ಯವನ್ನು ಮನಗಾಣುವಂತಾಯಿತು. ಇದು ಹಳೆಯ ಸಂಗತಿ. ಆದರೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಚಂಪಾ ಅಧ್ಯಕ್ಷ ಭಾಷಣದಲ್ಲಿ ಆಡಿರುವ ಮಾತುಗಳು ಹೀಗಿವೆ:
‘‘ಕನ್ನಡ-ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷವೊಂದರ ಅಗತ್ಯವಿದೆ. ಆದರೆ, ಸದ್ಯಕ್ಕೆ ಹೊಸ ಪಕ್ಷದ ಸಾಧ್ಯತೆ ಕಾಣುತ್ತಿಲ್ಲವಾದ್ದರಿಂದ ಜಾತ್ಯತೀತವಾದ ರಾಷ್ಟ್ರೀಯ ಪಕ್ಷವೊಂದನ್ನು ಬೆಂಬಲಿಸುವುದು ಅಗತ್ಯ.’’

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಹಿರಿತನದಿಂದ ಕನ್ನಡಿಗರಿಗೆ ಸಲಹಾರೂಪದ ಮಾರ್ಗದರ್ಶನ ಮಾಡುವಂಥ ಈ ಮಾತುಗಳನ್ನಾ ಡಿರುವುದರಲ್ಲಿ ತಪ್ಪೇನು? ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಇದರಲ್ಲಿ ರಾಜಕೀಯ ವಾಸನೆ ಕಂಡುಬಂದಿದೆ. ಕೆಲವರಿಗೆ ಇದು ಅಕ್ಷಮ್ಯವೆನಿಸಿದೆ. ಇನ್ನು ಕೆಲವರಿಗೆ ಸಾಹಿತ್ಯ ವೇದಿಕೆಯನ್ನು ರಾಜಕೀಯ ವೇದಿಕೆಯನ್ನಾಗಿಸಿ ಅಪವಿತ್ರಗೊಳಿಸಿದ್ದಾರೆ ಎನ್ನಿಸಿದೆ. ಮತ್ತೆ ಕೆಲವರಿಗೆ ಈ ಮಾತುಗಳಿಂದ ಚಂಪಾ ಕಾಂಗ್ರೆಸ್ ಪಕ್ಷದ ಚಮಚಾದಂತೆ ಕಂಡಿದ್ದಾರೆ. ಇವೆಲ್ಲದರ ಹಿಂದೆ ರಾಗದ್ವೇಷಗಳು, ವೈಯಕ್ತಿಕ ಪೂರ್ವಾಗ್ರಹಗಳು ಇಲ್ಲದೇ ಇಲ್ಲ.ಆದರೆ ಸಾಹಿತ್ಯ ವೇದಿಕೆಯಲ್ಲಿ ರಾಜಕೀಯ ಚರ್ಚಿಸಿದಾಕ್ಷಣ ಅದು ರಾಜಕೀಯ ವೇದಿಕೆಯಾಗುವುದಿಲ್ಲ.

ಸಮ್ಮೇಳನಾಧ್ಯಕ್ಷರು ರಾಜಕೀಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತನಾಡುವುದರಿಂದ ಅದು ರಾಜಕೀಯ ವೇದಿಕೆಯಾಗುವುದಿಲ್ಲ. ಹಾಗೆ ಬಗೆದಲ್ಲಿ ನೆಲ, ಜಲ, ಶಿಕ್ಷಣ ಮಾಧ್ಯಮ ಈ ಯಾವ ಸಮಸ್ಯೆಯನ್ನೂ ಸಮ್ಮೇಳನದಲ್ಲಿ ಚರ್ಚಿಸುವುದೂ ರಾಜಕೀಯವಾಗುತ್ತದೆ. ಏಕೆಂದರೆ ರಾಜಕೀಯ ವ್ಯವಸ್ಥೆಯನ್ನು ದೂರವಿರಿಸಿ ಈ ಯಾವ ಸಮಸ್ಯೆಗಳನ್ನೂ ಚರ್ಚಿಸಲಾಗದು. ಕನ್ನಡ ಸಾಹಿತ್ಯ ಪರಿಷತ್ತೂ ಕೂಡ ಪ್ರಜಾಸತ್ತಾತ್ಮಕ ಸಂಸ್ಥೆಯೇ ಆಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರಕಾರದ ಧನ ಸಹಾಯದಿಂದ ಬೆಳೆಯುತ್ತಿರುವ ಪರಿಷತ್ತು, ಆರೋಗ್ಯಕರವಾಗಿ ಸಂಸದೀಯ ಪ್ರಜಾಸತ್ತೆಯನ್ನು ಬೆಳೆಸುವ ನಿಟ್ಟಿನಲ್ಲಿ ನಾಡಿನ ಸಾಂಸ್ಕೃತಿಕ ಭಾಗವಾಗಿಯೇ ಕಾರ್ಯಪ್ರವೃತ್ತವಾಗುವುದರಲ್ಲಿ ತಪ್ಪೇನಿಲ್ಲ.

ಮಹಾರಾಷ್ಟ್ರದಲ್ಲಿ ಸಾಹಿತಿಗಳನ್ನು ಸಮ್ಮೇಳನದ ವೇದಿಕೆಗೆ ಆಹ್ವಾನಿಸದಿರಲು ಮುಖ್ಯ ಕಾರಣ ರಾಜಕಾರಣಿಗಳು ಸಾಹಿತ್ಯ ವೇದಿಕೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳದಿರಲಿ ಎನ್ನುವುದೇ ಹೊರತು ರಾಜಕೀಯ ವ್ಯವಸ್ಥೆಯನ್ನೇ ದೂರವಿಡುವ ದೃಷ್ಟಿಯಿಂದಲ್ಲ. ‘‘ಸಮ್ಮೇಳನಾಧ್ಯಕ್ಷರ ಮಾತು ಕನ್ನಡ ಸಾಹಿತ್ಯ ಪರಿಷತ್ತಿನದಲ್ಲ’’ ಎಂದು ಅಧ್ಯಕ್ಷ ಮನು ಬಳಿಗಾರ್ ಅವರು ಕೈತೊಳೆದುಕೊಳ್ಳಬೇಕಾಗಿರಲಿಲ್ಲ.ಜಾತ್ಯತೀತ ರಾಷ್ಟ್ರೀಯ ಪಕ್ಷವೊಂದನ್ನು ಬೆಂಬಲಿಸಿ ಎನ್ನುವ ಮಾತು ಕಾಂಗ್ರೆಸನ್ನು ಗುರಿಯಾಗಿಟ್ಟುಕೊಂಡೇ ಆಡಿರುವ ಮಾತೆಂದು ವ್ಯಾಖ್ಯಾನಿಸುವ ಮೂಲಕ ಭಾರತೀಯ ಜನತಾ ಪಕ್ಷ ತಾನು ಕೋಮುವಾದಿ ಪಕ್ಷವೆಂದು ಪರೋಕ್ಷವಾಗಿ ಒಪ್ಪಿಕೊಂಡು ನಗೆಪಾಟಲಿಗಿಡಾಗಿದೆ. ಇನ್ನು ಕೇಂದ್ರ ಸಚಿವ ಅನಂತ ಕುಮಾರ್ ಅವರು ಚಂಪಾ ಅವರಿಗೆ ಉತ್ತರ ಕೊಡಲು ಸಾಹಿತ್ಯ ವೇದಿಕೆಯನ್ನೇ ರಾಜಕೀಯವಾಗಿ ಬಳಸಿ ಕೊಂಡರು. ಒಂದೆರಡು ವರ್ಷಗಳಷ್ಟು ಹಿಂದೆಯಷ್ಟೇ ಚಂಪಾರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದ ಯಡಿಯೂರಪ್ಪನವರಿಗೆ ಚಂಪಾ ಜಾತ್ಯತೀತ ಮಾತುಗಳನ್ನಾಡಿದ್ದು ಅಕ್ಷಮ್ಯವೆನಿಸಿರುವುದು, ಇನ್ನು ಕೆಲವರಿಗೆ ಸಿಟ್ಟು-ಅಸಮಾಧಾನಗಳನ್ನುಂಟು ಮಾಡಿರುವುದು ರಾಜಕೀಯದಲ್ಲಿ ಸೋಜಿಗಪಡುವಂಥದ್ದೇನಲ್ಲ.

 ಒಟ್ಟಿನಲ್ಲಿ ಚಂಪಾ ಅವರ ಅಧ್ಯಕ್ಷ ಭಾಷಣವನ್ನು ರಾಜಕೀಯ ಪಕ್ಷಗಳು ತಮ್ಮ ತಮ್ಮ ಮನೋಭಿಲಾಷೆಗನುಗುಣವಾಗಿ ಅರ್ಥೈಸಿಕೊಂಡಿವೆ. ಬಿಜೆಪಿ ನಾಯಕರು ವಿರೋಧಿಸುವ ಉತ್ಸಾಹದಲ್ಲಿ ತಮಗರಿವಿಲ್ಲದಂತೆಯೇ ತಮ್ಮ ಅಂತರಂಗದ ಆಸೆಯನ್ನು ಹರಿಬಿಟ್ಟಿದ್ದಾರೆ. ಇನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳೂ ಬಿಜೆಪಿ ‘ತಾನೇ ಕುಂಬಳಕಾಯಿ ಕಳ್ಳ’ಎಂದು ಹೆಗಲು ಮುಟ್ಟಿನೋಡಿಕೊಂಡು ತನ್ನ ನಿಜವಾದ ಬಣ್ಣವನ್ನು ತೋರಿಸಿದೆ ಎಂದು ಹಿಗ್ಗುತ್ತಿವೆ. ಇನ್ನು ಈ ಬಣ್ಣಗಳನ್ನು ಬಯಲುಗೊಳಿಸಬೇಕಾದ ಮಾಧ್ಯಮಗಳೂ ಚಂಪಾ ಕರೆಯಲ್ಲಿ ರಾಜಕೀಯವನ್ನು ಮೂಸುತ್ತಾ ‘ಸಿದ್ದರಾಮಯ್ಯ ಪರ, ಬಿಜೆಪಿ ವಿರೋಧ’ ಎಂದು ಉಗ್ಗಡಿಸುತ್ತಾ ತಮ್ಮ ನಿಜವಾದ ಬಣ್ಣವನ್ನು ಜಗಜ್ಜಾಹೀರುಗೊಳಿಸಿವೆ. ಲೌಕಿಕ ಮೋಹ-ವ್ಯಾಮೋಹಗಳಿಂದ ಮುಕ್ತರಾದ ಸಾಧು ಸಂತರು ಸಾತ್ವಿಕರು, ಚಿತ್ತಸಮಾಧಾನ ಉಳ್ಳವರು ಎಂಬುದು ಸಮಾಜದ ಭಾವನೆ.ಜನಸಾಮಾನ್ಯರನ್ನು ಮೋಕ್ಷಸಾಧನವಾದ ದೈವ ಭಕ್ತಿ, ಆಧ್ಯಾತ್ಮಿಕತೆಗಳತ್ತ ಮುನ್ನಡೆಸುವುದು ಮಠಗಳು, ಸ್ವಾಮಿಗಳು ಮಾಡುತ್ತಿರುವ ಜ್ಞಾನದಾಸೋಹ ಎಂಬುದು ಚಾಲ್ತಿಯಲ್ಲಿರುವ ನಂಬಿಕೆ.

ಆದರೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಇಂಥ ನಂಬಿಕೆಯನ್ನು ಹುಸಿಗೊಳಿಸುವಂತಿತ್ತು; ರಾಜಕೀಯದ ವಾಸನೆಯಿಂದ ಅಶುದ್ಧವಾಗಿತ್ತು ಎನ್ನಿಸುತ್ತದೆ. ಅದರ ಕಾರ್ಯಕಲಾಪಗಳ ಧ್ವನಿಯನ್ನು ಗಮನಿಸಿದಾಗ. ಧರ್ಮ ಸಂಸದ್‌ನಲ್ಲಿ ಭಾಷಣ ಮಾಡಿದವರೆಲ್ಲರ ಮಾತುಗಳೂ ಪ್ರಚೋದನಾಕಾರಿಯಾಗಿದ್ದವು. ಧ್ವನಿಯಲ್ಲಿ ಸಾತ್ವಿಕ ಕೋಪಕ್ಕಿಂತ ರಜೋಪ್ರಧಾನವಾದ ಕೋಪದ ಆರ್ಭಟವೇ ಹೆಚ್ಚಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸುವಾಗ ಇಂಥ ಪ್ರಚೋದನೀಯ ದನಿ ಅಗತ್ಯವಿತ್ತೇ? ದೇವರು ಸರ್ವಾಂತರ್ಯಾಮಿ, ರಾಮ ನಮ್ಮ ಮನೆ-ಮನಗಳಲ್ಲೂ ಇದ್ದಾನೆ ಎಂಬ ನಂಬಿಕೆಯ ರಾಮಭಕ್ತ ಹಿಂದೂಗಳು ದೇಶದಲ್ಲಿ ಕೋಟ್ಯಂತರ ಜನರಿದ್ದಾರೆ. ಇವರು ಅಯೋಧ್ಯೆಯ ಕನಸು ಕಂಡವರೂ ಅಲ್ಲ. ಆದರೆ ಅಯೋಧ್ಯೆ ಜನರ ಅಪೇಕ್ಷಾನುಸಾರ ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವರ ವಿರೋಧವೂ ಇಲ್ಲ.

ವಿವಾದ ನ್ಯಾಯಾಲಯದ ಮುಂದಿರುವಾಗ ತೀರ್ಪಿಗೆ ಕಾಯುವುದು ಉಚಿತ ಎಂಬುದು ಜನತಾ ವಿವೇಕ. ಇಂಥ ವಿವೇಕ-ತಾಳ್ಮೆ ಧರ್ಮ ಸಂಸದ್‌ನಲ್ಲಿ ಕಂಡುಬರಲಿಲ್ಲ. ಧರ್ಮ ಸಂಸದ್ ಅಧ್ವರ್ಯುಗಳಾದ ಪೇಜಾವರ ಶ್ರೀಗಳೇ, ‘‘...ಭವ್ಯವಾದ ರಾಮ ಮಂದಿರ ನಿರ್ಮಾಣ ಆಗುವವರೆಗೆ ಯುವಕರು ವಿಶ್ರಾಂತಿ ಪಡೆಯಬೇಡಿ’’ ಎಂದು ಕರೆ ನೀಡಿದ್ದರೆ, ಉಳಿದ ಮಠಾಧೀಶರು ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡರು ‘‘ತೋಳಿನ ಶಕ್ತಿಯ ಮೇಲೆ ಮಂದಿರ ಕಟ್ಟುತ್ತೇವೆ’’ ಎಂದು ಘೋಷಿಸಿದ್ದಾರೆ. ಧರ್ಮ ಸಂಸದ್‌ನಲ್ಲಿ ಮಂದಿರ ನಿರ್ಮಾಣದಂಥ ಪ್ರಮುಖ ವಿಚಾರದೊಂದಿಗೆ ಅಸ್ಪಶ್ಯತೆ ನಿವಾರಣೆ, ಘರ್‌ವಾಪಸಿ, ಗೋಹತ್ಯೆಯಂಥ ಆಜೂಬಾಜೂ ವಿಚಾರಗಳ ಬಗ್ಗೆಯೂ ಹಲವು ಹನ್ನೊಂದು ಬಗೆಯ ಪ್ರಚೋದನೀಯ ಮಾತುಗಳು ಕೇಳಿಬಂದಿವೆ.

ಹಿಂದೂಗಳು ನಾಲ್ಕು ಮಕ್ಖಳನ್ನು ಹುಟ್ಟಿಸ ಬೇಕು, ಹಿಂದೂಗಳ ಪ್ರತಿಮನೆಯಲ್ಲೂ ಶಸ್ತ್ರಾಸ್ತ್ರ ಇರಬೇಕು, ಮುಸ್ಲಿಮರಿಗೆ ಮದುವೆಯಾಗಲು ಯವತಿಯರಿಲ್ಲದಂತೆ ಮಾಡುತ್ತೇವೆ, ಸಂವಿಧಾನಕ್ಕೆ ತಿದ್ದುಪಡಿ ಇವೇ ಮೊದಲಾದ ಮಾತುಗಳೂ ಕೇಳಿ ಬಂದಿವೆ. ನಮಗೆ ರಾಮ ಮಾತ್ರ ಆದರ್ಶವಲ್ಲ ಕೃಷ್ಣನೂ ಆದರ್ಶ ಎನ್ನುವ ಮೂಲಕ ದ್ರೌಪದಿಗೆ ಅಕ್ಷಯಾಂಬರ ಕರುಣಿಸಿದ ಕೃಷ್ಣನನ್ನು ಸೀರೆಸೆಳೆಯುವ ಆದರ್ಶಣೀಯ ಸ್ತ್ರೀಲೋಲನಂತೆ ಬಿಂಬಿಸಿ ಮುಸ್ಲಿಂ ಸೋದರಿಯರನ್ನು ಬೆದರಿಸುವ ಉತ್ಸಾಹ ಮೆರೆಸಿದವರು ಇದ್ದಾರೆ. ಇಷ್ಟೆಲ್ಲ ಆಟಾಟೋಪಗಳು ಬೇಕಿತ್ತೇ?

ಧರ್ಮ ಸಂಸದ್‌ನಲ್ಲಿ ಈ ಆರ್ಭಟಗಳ ಮಧ್ಯೆ ಕೇಳಿಬಂದ ಏಕೈಕ ವಿವೇಕದ ದನಿಯೆಂದರೆ ಸುತ್ತೂರು ಮಠಾಧೀಶರದು. ‘‘ನಕಲಿ ಹಿಂದುತ್ವವಾದಿಗಳನ್ನು ಹತ್ತಿಕ್ಕಿ’’ ಎನ್ನುವ ಅವರ ಮಾತು ಅತ್ಯಂತ ಪ್ರಸ್ತುತವಾದುದು. ‘‘ಹಿಂದುತ್ವದ ಹೆಸರಿನಲ್ಲಿ ಹಿಂಸಾಚಾರ, ದಾಂಧಲೆ ನಡೆಸುತ್ತಿರುವ ಕೆಲವು ನಕಲಿ ಹಿಂದುತ್ವವಾದಿ ಗುಂಪುಗಳಿಂದ ಹಿಂದೂ ಧರ್ಮಕ್ಕೆ ಕಳಂಕ ಅಂಟುತ್ತಿದೆ. ಹಿಂದೂ ಧರ್ಮದ ಉಳಿವಿಗಾಗಿ ಇಂತಹ ಗುಂಪುಗಳನ್ನು ಹತ್ತಿಕ್ಕಬೇಕು’’ ಎಂದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಗ್ರಹಪೂರ್ವಕ ಮಾತುಗಳು ಸಮಯೋಚಿತವಾದವು. ಆದರೆ ಈ ಮಾತುಗಳಿಗೆ ವಿಶ್ವ ಹಿಂದೂ ಪರಿಷತ್ತಾಗಲೀ ಉಳಿದ ಸ್ವಾಮೀಜಿಗಳಾಗಲೀ ಕಿವಿಕೊಟ್ಟಂತೆ ಕಾಣುವುದಿಲ್ಲ.

ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮೋದಿಯವರು ‘‘ಸರಕಾರ ಮತ್ತು ನ್ಯಾಯಾಂಗ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ’’ ಎಂದಿದ್ದರೆ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ‘‘ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ನ್ಯಾಯಾಂಗ ಪ್ರಧಾನಿಯವರನ್ನು ನಂಬುತ್ತಿಲ್ಲ’’ ಎಂದು ನೇರ ಆರೋಪ ಮಾಡಿದ್ದಾರೆ. ನ್ಯಾಯಾಧೀಶರುಗಳ ನೇಮಕಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಭಿನ್ನಾಭಿಪ್ರಾಯಗಳು ಇರುವುದು ದಿಟವಾದರೂ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರ ಸಮ್ಮುಖದಲ್ಲೇ, ಅವರನ್ನುದ್ದೇಶಿಸಿಯೇ ಇಂಥ ಆರೋಪ ಮಾಡಿದ್ದು ವಿವೇಚನಾರಹಿತ ನಡೆ ಎಂದೇ ಹೇಳಬೇಕಾಗುತ್ತದೆ. ಇದರಿಂದಾಗಿ ಅದೇ ವೇದಿಕೆಯಿಂದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು, ಸಂವಿಧಾನ ರಚನಾ ಸಭೆ ಪ್ರಧಾನ ಮಂತ್ರಿಯವರಲ್ಲಿ ಯಾವ ನಂಬಿಕೆಯನ್ನಿಟ್ಟಿತ್ತೋ ಅದೇ ನಂಬಿಕೆಯುನ್ನು ನ್ಯಾಯಾಂಗವೂ ದೇಶದ ಪ್ರಧಾನ ಮಂತ್ರಿಯವರಲ್ಲಿ ಹೊಂದಿದೆ ಹಾಗೂ ನ್ಯಾಯಾಂಗ ಸಂವಿಧಾನ ಪ್ರಣೀತ ಮೂರು ಅಂಗಗಳ ಪ್ರತ್ಯೇಕ ಅಧಿಕಾರಗಳನ್ನು ಮಾನ್ಯಮಾಡುತ್ತದೆ, ಗೌರವಿಸುತ್ತದೆ ಎಂದು ಸಮರ್ಥಿಸಿಕೊಳ್ಳುವುದು ಅನಿವಾರ್ಯವಾಯಿತು.

ದೇಶದ ಈ ವಿದ್ಯಮಾನಗಳನ್ನು ಗಮನಿಸಿದಾಗ, ಸಭ್ಯ ನಡಾವಳಿ, ಭಾಷಾಮರ್ಯಾದೆ, ಸಭಾಮರ್ಯಾದೆಯಂಥ ಶೀಲಮೌಲ್ಯಗಳು ನಮ್ಮ ಸಾರ್ವಜನಿಕ ಜೀವನದಿಂದ ಕ್ರಮೇಣ ಕಣ್ಮರೆಯಾಗುತ್ತಿವೆಯೇನೋ ಎಂಬ ಆತಂಕ ಮೂಡುತ್ತದೆ. ಯಾವುದೇ ಸ್ಥಾನಮಾನ-ಆಧಿಕಾರಗಳಿಗೂ ಮೊದಲು ನಾವು ಪ್ರಜ್ಞಾವಂತ ಮಾನವರಾಗಿ ಒಂದು ಘನತೆಯನ್ನು ಜನ್ಮತಃ ಗಳಿಸಿದ್ದೇವೆ. ಖಾಸಗಿಯಾಗಿ ಹಾಗಿರಲಿ, ಸಾರ್ವಜನಿಕ ವೇದಿಕೆಗಳಿಂದಲೂ ಈ ಘನತೆಯನ್ನು ಮರೆತು ಮಾತನಾಡುವುದೆಂದರೆ? ಮಾನವ ಘನತೆ ಜೊತೆಗೆ ಸ್ಥಾನಮಾನದ ಘನತೆಯನ್ನೂ ಲಕ್ಷಿಸಬೇಕಾಗುತ್ತದೆ.ಆದರೆ ಈಚಿನ ದಿನಗಳಲ್ಲಿ ಈ ಶೀಲಮೌಲ್ಯಗಳಿಗೆ ಕವಡೆ ಕಿಮ್ಮತ್ತೂ ಕೊಡದಂಥ ಅಹಂ ಮನೋವ್ಯಾಪಾರವನ್ನು ನಾವು ಕಾಣುತ್ತಿದ್ದೇವೆ.

ಚಂದ್ರಶೇಖರ ಪಾಟೀಲರು ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅಡಿದರೆಂದು ವರದಿಯಾಗಿರುವ ಕೆಲವು ಮಾತುಗಳೂ ಆ ಸ್ಥಾನ ಹಾಗೂ ಅವರ ಘನತೆಗೆ ತಕ್ಕುದಾಗಿರಲಿಲ್ಲ. ಇದೇ ಮಾತು ಧರ್ಮ ಸಂಸದ್‌ನ ಸಾಧುಸಂತ ಗಣಕ್ಕೂ ಅನ್ವಯಿಸುತ್ತದೆ.ರಾಮ ಮಂದಿರ ನಿರ್ಮಾಣ, ಅಸ್ಪಶ್ಯತೆ, ಲವ್ ಜಿಹಾದ್, ಶಸ್ತ್ರಾಸ್ತ್ರ ಹೊಂದಿರುವಿಕೆ, ಸಂವಿಧಾನ, ಗೋಹತ್ಯೆ ನಿಷೇಧ-ವಿಷಯ ಯಾವುದೇ ಇರಲಿ ಸಾಧು ಸಂತರು ಮಾತನಾಡಿದ ಶೈಲಿ ಅಹಿಂಸಾತ್ಮಕವಾಗಿರಲಿಲ್ಲ, ಯುವಕರನ್ನು ಎತ್ತಿಕಟ್ಟುವ ರೀತಿಯಲ್ಲಿತ್ತು ಎನ್ನದೆ ವಿಧಿಯಿಲ್ಲ. ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಕೇಂದ್ರ ಕಾನೂನು ಸಚಿವರು ನ್ಯಾಯಾಂಗ ಮತ್ತು ಪ್ರಧಾನ ಮಂತ್ರಿ ನಡುವಣ ನಂಬಿಕೆ ವಿಶ್ವಾಸಾರ್ಹತೆಗಳನ್ನು ಕುರಿತು ಮಾತನಾಡಿದ್ದು ಸದ್ವಿವೇಕದ ನಡೆಯಲ್ಲ. ಅಂತೆಯೇ ಅವರು ನ್ಯಾಯಾಧೀಶರುಗಳ ನೇಮಕ/ಅರ್ಹತೆಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿರಬಹುದಾದ ಕೊರತೆ-ಅಸಮರ್ಪಕತೆಗಳನ್ನು ಎತ್ತಿ ತೋರಲು ಶಿಕ್ಷೆ ಅನುಭವಿಸುತ್ತಿರುವ ನ್ಯಾಯಾಧೀಶ ಕರ್ಣನ್ ಅವರ ಉದಾರಣೆಯನ್ನಿತ್ತಿದ್ದು ಸದಭಿರುಚಿಯದ್ದಾಗಿರಲಿಲ್ಲ.

ಇವೆಲ್ಲದಕ್ಕೂ ಬಾಧಿತರು ಹಾಗೂ ಸಾರ್ವಜನಿಕರು ತೋರಿರುವ ಪ್ರತಿಕ್ರಿಯೆಯೂ ಮಾನವ ಘನತೆಗೆ ತಕ್ಕಂತಿಲ್ಲ ಮತ್ತು ಅಹಿಂಸಾತ್ಮಕವಾಗಿಲ್ಲ. ಸಿನೆಮಾ ಶೈಲಿಯಲ್ಲಿ ಯಾರೂ ಲಾಂಗುಮಚ್ಚು ಹಿಡಿದು ಹಿಂಸಾಚಾರದಲ್ಲಿ ತೊಡಗಿಲ್ಲವಾದರೂ ಭಾವಚಿತ್ರಕ್ಕೆ ಚಪ್ಪಲಿ ಹಾರ, ಬೂಟಿನೇಟು, ಚೂರಿ ತಿವಿತ ಇವೆಲ್ಲವೂ ಹಿಂಸೆ ಕೊಡುವ ಅನಾಗರಿಕ ನಡೆಗಳೇ ಸರಿ. ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿನ ಕರ್ನಾಟಕದ ಸಚಿವರೊಬ್ಬರು ‘‘ಮೋದಿಯವರು ಮತ್ತೊಮ್ಮ ಗೆದ್ದು ಬಂದಲ್ಲಿ ಎಡಬಿಡಂಗಿಗಳೂ-ಚಪ್ರಾಸಿಗಳು ಇರುವುದಿಲ್ಲ’’ವೆಂದು ಅಪ್ಪಣೆ ಕೊಡಿಸಿರುವ ಬೆದರಿಕೆಯೂ ಮಾನವ ಘನತೆ ಮೀರಿದ ಅನಾಗರಿಕ ನುಡಿಗಳಷ್ಟೇ ಅಲ್ಲ ಅಧಿಕಾರ ಮದದ ಪರಮಾವಧಿಯೂ ಹೌದು. ಎಂಥ ಪತನ! ಖೇದವಾಗುತ್ತದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)